Monday, 12th May 2025

ಆಸ್ಪತ್ರೆ ನಿರ್ಮಾಣಕ್ಕೆ ಸ್ವಂತ ಜಮೀನು ಮಾರಿದ ನಟಿ ಎಂ.ಲೀಲಾವತಿ

ನೆಲಮಂಗಲ: ಗಡಿ ಭಾಗದ ಹಳ್ಳಿಗಳಿಗೆ ಅನುಕೂಲವಾಗಲಿ ಎಂದು ಕನ್ನಡ ಚಿತ್ರರಂಗದ ಹಿರಿಯ ನಟಿ ಎಂ.ಲೀಲಾವತಿ ಅವರು ತಮ್ಮ ಸ್ವಂತ ಜಮೀನು ಮಾರಾಟ ಮಾಡಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ 50 ಲಕ್ಷ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ.

ಅಂದಹಾಗೆ ಈ ಹಿಂದೆ ಇದೇ ಸೋಲದೇವನಹಳ್ಳಿ ಗ್ರಾಮದಲ್ಲಿ 10 ವರ್ಷಗಳ ಹಿಂದೆ ಲೀಲಾವತಿಯವರು ಸಣ್ಣದೊಂದು ಆಸ್ಪತ್ರೆ ನಿರ್ಮಾಣ ಮಾಡಿದ್ದರು.

ಇದೀಗ ಮತ್ತೊಂದು ಪ್ರಾಥಮಿಕ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ದ್ದಾರೆ. ಡಾ.ಲೀಲಾವತಿಯವರ ಅನುಪಸ್ಥಿತಿಯಲ್ಲಿ, ಮಗ ನಟ ವಿನೋದ್ ರಾಜ್ ಭೂಮಿ ಪೂಜೆ ನೆರವೇರಿಸಿದ್ದಾರೆ. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ ಭಾಗಿಯಾಗಿದ್ದರು.

ಅಲ್ಲದೇ, ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಹಾಗೂ ಅವರ ಹೆಸರಿನ ಆಸ್ಪತ್ರೆಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನ ಒದಗಿಸುವ ಭರವಸೆ ನೀಡಿದರು.