Wednesday, 14th May 2025

ಬುಕಾರೆಸ್ಟ್‌ನಿಂದ ಹಿಂಡನ್ ವಾಯುನೆಲೆಗೆ ಬಂದಿಳಿದ 200 ಭಾರತೀಯರು

ನವದೆಹಲಿ: ರೊಮೇನಿಯಾ ರಾಜಧಾನಿ ಬುಕಾರೆಸ್ಟ್‌ನಿಂದ 200 ಭಾರತೀಯರೊಂದಿಗೆ ಭಾರತೀಯ ವಾಯುಪಡೆಯ ಮೊದಲ ವಿಮಾನ ಗುರುವಾರ ಹಿಂಡನ್ ವಾಯುನೆಲೆಗೆ ಬಂದಿಳಿದಿದೆ.

ಉಕ್ರೇನ್‌ನಿಂದ 300 ಮಂದಿಯನ್ನು ಸ್ಥಳಾಂತರಿಸುವ ಮೂಲಕ ಭಾರತೀಯ ವಾಯುಪಡೆಯ ಮೂರು ಸಿ -17 ವಿಮಾನಗಳು ಗುರುವಾರ ಹಿಂಡನ್ ವಾಯುನೆಲೆಗೆ ಇಳಿಯಲಿವೆ ಎಂದು ಮೂಲಗಳು ತಿಳಿಸಿವೆ.

ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ ನಂತರ, ಸಂಘರ್ಷ ಪೀಡಿತ ಉಕ್ರೇನ್‌ನಿಂದ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತ ಸರ್ಕಾರವು ‘ಆಪರೇಷನ್ ಗಂಗಾ’ವನ್ನು ಪ್ರಾರಂಭಿಸಿದೆ.

ಪೋಲೆಂಡ್, ರೊಮೇನಿಯಾ, ಹಂಗೇರಿ ಮತ್ತು ಸ್ಲೋವಾಕಿಯಾ ಗಡಿ ದಾಟಿದ ಬಳಿಕ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಈ ನೆರೆಯ ದೇಶಗಳಿಂದಲೂ ಐಎಎಫ್ ವಿಮಾನಗಳು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.

‘ಆಪರೇಷನ್ ಗಂಗಾ’ ಮಿಷನ್‌ನ ಭಾಗವಾಗಿ ವಿಶೇಷ ವಿಮಾನಗಳ ಮೂಲಕ ಉಕ್ರೇನ್‌ನಲ್ಲಿ ಬಾಕಿಯಾಗಿರುವ ಭಾರತೀಯರನ್ನು ಉಚಿತವಾಗಿ, ಸರ್ಕಾರದ ವೆಚ್ಚದಲ್ಲಿ ವಾಪಾಸ್‌ ಕರೆತರಲಾಗು‌ತ್ತದೆ. ಉಕ್ರೇನ್‌ನಲ್ಲಿ ಸಿಲುಕಿದ್ದ 219 ಭಾರತೀಯ ಪ್ರಜೆಗಳನ್ನು ಹೊತ್ತು ಮೊದಲ ವಿಮಾನ ಫೆಬ್ರವರಿ 26 ರಂದು ಮುಂಬೈಗೆ ಬಂದಿಳಿಯಿತು.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಭಾರತೀಯ ವಾಯುಪಡೆ ಕೂಡಾ ಬೆಂಬಲ ನೀಡಿದೆ. ಭಾರತೀಯ ವಾಯುಪಡೆಯ ಸಿ-17 ವಿಮಾನವು ಬುಧವಾರ ಮುಂಜಾನೆ ರೊಮೇನಿಯಾಗೆ ಹೊರಟಿದ್ದು ಗುರುವಾರ ಭಾರತಕ್ಕೆ ಬಂದಿಳಿದಿದೆ.