Wednesday, 14th May 2025

ಜೆಎನ್‌ಯು ಕುಲಪತಿಯಾಗಿ ಶಾಂತಿಶ್ರೀ ಧುಲಿಪುಡಿ ಪಂಡಿತ್‌ ನೇಮಕ

ನವದೆಹಲಿ: ಶಾಂತಿ ಶ್ರೀ ಧುಲಿಪುಡಿ ಪಂಡಿತ್‌ (59) ರನ್ನು ನವದೆಹಲಿಯ ಜವಾಹರ್‌ಲಾಲ್‌ ನೆಹರೂ ವಿವಿಯ ಕುಲಪತಿಯಾಗಿ ನೇಮಿಸಲಾಗಿದೆ.

ಸದ್ಯ ಮಹಾರಾಷ್ಟ್ರದ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೆಎನ್‌ಯು ಸ್ಥಾಪನೆ(1969)ಯಾದ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಕುಲಪತಿ ನೇಮಕ ಮಾಡಿ, ಕೇಂದ್ರ ಶಿಕ್ಷಣ ಸಚಿವಾಲಯ ಸೋಮವಾರ ಆದೇಶ ಹೊರಡಿಸಿದೆ. ಅವರ ಅಧಿಕಾರದ ಅವಧಿ ಐದು ವರ್ಷ ಗಳಾಗಿರುತ್ತವೆ.

ಜೆಎನ್‌ಯುನ ಹಳೆ ವಿದ್ಯಾರ್ಥಿಯಾಗಿರುವ ಅವರು, ಇಂಟರ್‌ನ್ಯಾಷನಲ್‌ ರಿಲೇಷನ್ಸ್‌ ವಿಚಾರದಲ್ಲಿ ಎಂ.ಫಿಲ್‌ ಮತ್ತು ಪಿಎಚ್‌.ಡಿ ಪದವಿ ಪಡೆದಿದ್ದಾರೆ.

ಗೋವಾ ವಿವಿಯಲ್ಲಿ 1988ರಿಂದ ಅವರು ತಮ್ಮ ಪ್ರಾಧ್ಯಾಪಕ ವೃತ್ತಿ ಆರಂಭಿಸಿದ್ದರು. 1993ರಲ್ಲಿ ಅವರು ಪುಣೆ ವಿವಿಗೆ ನೇಮಕಗೊಂಡರು. ಯುಜಿಸಿಯ ಸದಸ್ಯ ರಾಗಿಯೂ ಕಾರ್ಯನಿರ್ವಹಿಸಿದ್ದರು.

ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನದ ಅವಧಿಯಲ್ಲಿ 29 ಮಂದಿಗೆ ಪಿಎಚ್‌.ಡಿ ಅಧ್ಯಯನಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.