Thursday, 15th May 2025

23 ಕೆ.ಜಿ. ಕಳ್ಳಸಾಗಾಣಿಕೆ ಚಿನ್ನ ವಶ

ಕೋಝಿಕ್ಕೋಡ್: ಕರಿಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಪ್ರಿವೆಂಟಿವ್ ಇಲಾಖೆ ಅಧಿಕಾರಿಗಳು 23 ಕೆ.ಜಿ. ಕಳ್ಳಸಾಗಾಣಿಕೆ ಚಿನ್ನ ವಶಪಡಿಸಿಕೊಂಡಿದ್ದಾರೆ.

ಇದು ಇತ್ತೀಚಿನ ದಿನಗಳಲ್ಲಿ ಒಂದೇ ದಿನ ವಶಪಡಿಸಿಕೊಳ್ಳಲಾದ ದೊಡ್ಡ ಪ್ರಮಾಣದ ಹಳದಿ ಲೋಹ ವಾಗಿದೆ.

ಡೆಸರ್ಟ್ ಸ್ಟಾರ್ಮ್ ಹೆಸರಿನ ಕಾರ್ಯಾಚರಣೆಯಲ್ಲಿ ಲೋಹವನ್ನು ವಶಪಡಿಸಿಕೊಳ್ಳಲಾಗಿದೆ. ಸುಳಿವಿನ ಮೇರೆಗೆ ದಿನವಿಡೀ ನಡೆದ ಕಾರ್ಯಾಚರಣೆ ಯಲ್ಲಿ ಏಳು ವಿಮಾನಗಳ ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸಿ 23 ಮಂದಿಯನ್ನು ಬಂಧಿಸಲಾಯಿತು.

ಗಲ್ಫ್ ದೇಶಗಳಿಂದ ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸಿದ್ದರು ಎಂದು ತಿಳಿದುಬಂದಿದೆ. ಚಿನ್ನವನ್ನು ಪಡೆದುಕೊಳ್ಳಲು ಬಂದ ವರನ್ನೂ ಬಂಧಿಸಲಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಕಸ್ಟಮ್ಸ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತು.

ಕೇರಳದ ವಿವಿಧೆಡೆ ಅಧಿಕಾರಿಗಳು ಚಿನ್ನ ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಕಣ್ಣೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ತಪಾಸಣೆ ನಡೆಸಿದಾಗ ಎರಡು ಪದರದ ಜೀನ್ಸ್‌ನೊಳಗೆ ಹುದುಗಿಸಿಟ್ಟಿದ್ದ 14 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದರು.

2020ರಲ್ಲಿ ಕೋಝಿಕ್ಕೋಡ್‌ನಲ್ಲಿ ಮಾಸ್ಕ್‌ನಲ್ಲಿ ಚಿನ್ನ ಹುದುಗಿಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಚಿನ್ನ ವಶಪಡಿಸಿಕೊಳ್ಳಲಾಗಿತ್ತು.