Friday, 16th May 2025

ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲಾತಿ ಮಾನದಂಡ, ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು

ನವದೆಹಲಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಬಡ್ತಿ ನೀಡುವಾಗ ಮೀಸಲಾತಿ ನಿರ್ಧರಿಸಲು ಯಾವುದೇ ಮಾನದಂಡ ರೂಪಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟ ಪಡಿಸಿದೆ.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್‌, ಸಂಜೀವ್‌ ಖನ್ನಾ ಹಾಗೂ ಬಿ.ಆರ್‌.ಗವಾಯಿ ಅವರಿರುವ ನ್ಯಾಯ ಪೀಠವು ಎಸ್‌ಸಿ/ಎಸ್‌ಟಿ ಬಡ್ತಿ ಮೀಸಲಾತಿ ಕುರಿತು ತೀರ್ಪು ಪ್ರಕಟಿಸಿತು.

ಬಡ್ತಿಯಲ್ಲಿ ಮೀಸಲಾತಿ ಜಾರಿಗೊಳಿಸುವಾಗ ಎಸ್‌ಸಿ/ಎಸ್‌ಟಿ ಜನರ ಪ್ರಾತಿನಿಧ್ಯವನ್ನು ನಿರ್ಧರಿಸುವ ಕೇಂದ್ರ ಮತ್ತು ರಾಜ್ಯಗಳಿಂದ ಪ್ರಮಾಣೀಕರಿಸಬಹುದಾದ ದತ್ತಾಂಶ ಸಂಗ್ರಹಿಸುವ ಅಗತ್ಯವನ್ನು ತೆಗೆದುಹಾಕುವ ಕೇಂದ್ರದ ಮನವಿಯನ್ನು ಸುಪ್ರೀಂ ತಿರಸ್ಕರಿಸಿದೆ. ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಪ್ರಮಾಣೀಕರಿಸಬಹುದಾದ ಡೇಟಾವನ್ನು ಸಂಗ್ರಹಿಸುವುದು ಸಂಬಂಧಪಟ್ಟ ರಾಜ್ಯಗಳ ಹೊಣೆಗಾರಿಕೆ. ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯದ ಅಸಮರ್ಪಕತೆಯನ್ನು ನಿರ್ಧರಿಸುವುದಕ್ಕಾಗಿ ಮಾನದಂಡ ನಿರ್ಣಯಿಸಲು ಆಯಾ ರಾಜ್ಯಗಳ ವಿವೇಚನೆ ಗೆ ಬಿಟ್ಟಿದ್ದೇವೆ ಎಂದು ನ್ಯಾಯಾಲಯ ತಿಳಿಸಿದೆ.

ಈ ಮೂಲಕ ಎಂ.ನಾಗರಾಜ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದ 2006ರ ತೀರ್ಪಿ ನ ಅನ್ವಯ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯದ ಕುರಿತು ನಿರ್ಧರಣಾತ್ಮಕ ದತ್ತಾಂಶ ಸಂಗ್ರಹಿಸುವುದು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಹೊಣೆ ಗಾರಿಕೆ ಎಂದು ಪೀಠ ಒತ್ತಿ ಹೇಳಿದೆ.

ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳ ಬಡ್ತಿ ಮೀಸಲಾತಿ ಷರತ್ತುಗಳನ್ನು ದುರ್ಬಲಗೊಳಿಸಬೇಡಿ. ಮೀಸಲಾತಿ ನೀಡುವ ಮುನ್ನ ಉನ್ನತ ಹುದ್ದೆಗಳ ಪ್ರಾತಿನಿಧ್ಯದ ಮಾಹಿತಿ ಸಂಗ್ರಹ ಅಗತ್ಯ. ಪ್ರಾತಿನಿಧ್ಯವನ್ನು ನಿಗದಿತ ಅವಧಿಯಲ್ಲಿ ಮೌಲ್ಯಮಾಪನ ಮಾಡಬೇಕು. ಅವಧಿ ಎಷ್ಟು ಎಂಬುದನ್ನು ಕೇಂದ್ರ ಸರ್ಕಾರವೇ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.