Wednesday, 14th May 2025

ಬಿಬಿಎಂಪಿ ಚುನಾವಣೆಗೆ ಸಾಮೂಹಿಕ ನಾಯಕತ್ವ

ಮಾರ್ಚ್‌ನೊಳಗೆ ಚುನಾವಣೆ ಸಿದ್ಧತೆಗೆ ಸೂಚನೆ

ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು

ವಿಧಾನಸಭೆ ಚುನಾವಣೆಗೆ ಮೊದಲು ರಾಜಧಾನಿ ಅಧಿಕಾರದ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಬಿಬಿಎಂಪಿ ಚುನಾವಣೆ ಸಂಬಂಧ ಸಿದ್ಧತೆಗಳನ್ನು ಆರಂಭಿಸಿದ್ದು ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗಲು ಮುಂದಾಗಿದೆ.

ಮೂರು ದಿನಗಳ ಹಿಂದೆ ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನೇತೃತ್ವದಲ್ಲಿ ಬಿಬಿಎಂಪಿ ಚುನಾವಣೆ ಸಿದ್ಧತೆ ಸಂಬಂಧ ಸುದೀರ್ಘ ಸಭೆ ನಡೆದಿತ್ತು. ಸಭೆಯಲ್ಲಿ ಚುನಾವಣೆ ನಾಯಕತ್ವ ಸಂಬಂಧ ಚರ್ಚೆ ನಡೆದಿತ್ತು. ನಾಯಕತ್ವಕ್ಕೆ ಪೈಪೋಟಿ ಹೆಚ್ಚಾದ ಕಾರಣ ದಿಂದ ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಣೆ ಹೊತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಡಿಯಲ್ಲಿ, ನಗರದ ಎಲ್ಲ ಸಚಿವರ ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಪಕ್ಷದ ಮುಖಂಡರು ಬಂದಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಬಿಎಂಪಿ ಸದಸ್ಯರ ಅಧಿಕಾರವಧಿ ಮುಗಿದು ಈಗಾಗಲೇ ಒಂದು ವರ್ಷಕ್ಕೂ ಅಧಿಕ ಸಮಯವಾಗಿದೆ. ಈವರೆಗೆ ಚುನಾವಣೆ ನಡೆಯದಿರುವುದು ಸ್ಥಳೀಯ ಕಾರ್ಯಕರ್ತರು ಮತ್ತು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅವರೆಲ್ಲರೂ ಆರ್ ಎಸ್‌ಎಸ್ ಮೂಲಕ ಹೈಕಮಾಂಡ್ ಮೇಲೆ ಒತ್ತಡ ತಂದಿ ದ್ದಾರೆ. ಸ್ವತಃ ಗೃಹ ಸಚಿವ ಅಮಿತ್ ಶಾ ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಸಭೆ ನಡೆಸುವಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ಗೆ ಸೂಚನೆ ನೀಡಿದ್ದರು.

ಜತೆಗೆ ಸುಪ್ರಿಂ ಕೋರ್ಟ್‌ನಲ್ಲಿ ಮುಂದಿನ ವಾರದಲ್ಲಿ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆಯಿದೆ. ಹೀಗಾಗಿ, ಸಭೆ ನಡೆಸಿದ ನಾಯಕರು ಚುನಾವಣೆ ಸಂಬಂಧ ಅನೇಕ ವಿಷಯಗಳನ್ನು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಚುನಾವಣೆಗೆ ನಾಯಕತ್ವ ವಹಿಸು ವುದು, ಉಸ್ತುವಾರಿಗಳ ಆಯ್ಕೆ, ಅಭ್ಯರ್ಥಿ ಗಳ ಆಯ್ಕೆಗೆ ಸಮಿತಿ ರಚನೆ, ಶಾಸಕರಿಗೆ ಹೊಣೆಗಾರಿಕೆ, ಬಿಬಿಎಂಪಿ ಕಾಯಿದೆಗೆ ಕೆಲವು ತಿದ್ದುಪಡಿ, ಸ್ಥಳೀಯ ಮಟ್ಟದಲ್ಲಿ ನಾಯಕತ್ವ ಬಲವರ್ದನೆ, 243 ವಾರ್ಡ್ಗಳಿಗೆ ಚುನಾ ವಣೆ ನಡೆಸಬೇಕೋ ಅಥವಾ ಸುಪ್ರೀಂ ಕೋರ್ಟ್ ಆದೇಶ ಬೇಗನೆ ಬಂದರೆ 198 ವಾರ್ಡ್‌ಗೆ ಚುನಾವಣೆ ನಡೆಸಬೇಕೋ ಎಂಬ ಚರ್ಚೆ, 243 ವಾರ್ಡ್‌ಗೆ ಚುನಾವಣೆ ನಡೆಸುವುದಾದರೆ ವಾರ್ಡ್ ವಿಂಗಡಣೆ ಪ್ರಕ್ರಿಯೆಯ ಪ್ರಗತಿ, ಮೀಸಲು ಪಟ್ಟಿಯ ಪ್ರಕಟಣೆ, ಮತದಾರರ ಗುರುತಿನ ಪತ್ರದ ಗೊಂದಲಗಳ ಬಗ್ಗೆ ಮಾಹಿತಿ ಸೇರಿದಂತೆ ಇನ್ನೂ ಅನೇಕ ವಿಚಾರ ಗಳನ್ನು ಚರ್ಚಿಸಲಾಗಿದೆ.

ಅಭ್ಯರ್ಥಿ ಆಯ್ಕೆಗೆ ರಾಜ್ಯಮಟ್ಟದ ಸಮಿತಿ
ಸಾಮಾನ್ಯವಾಗಿ ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಸ್ಥಳೀಯ ಶಾಸಕರೇ ಅಂತಿಮ ತೀರ್ಮಾನ ಕೈಗೊಳ್ಳು ತ್ತಿದ್ದರು. ಆದರೆ, ಈ ಬಾರಿ ಬಿಜೆಪಿ, ಇಂತಹ ಸಂಪ್ರದಾಯವನ್ನು ಬದಿಗೊತ್ತಿ ಅಭ್ಯರ್ಥಿಗಳ ಆಯ್ಕೆಯನ್ನು ರಾಜ್ಯ ಮಟ್ಟದ ಸಮಿತಿ ಯಿಂದಲೇ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯಮಟ್ಟದ ಸಮಿತಿ ಶಾಸಕರ ಅಭಿಪ್ರಾಯ, ಕ್ಷೇತ್ರದ ಬಿಜೆಪಿ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಮತ್ತು ಸ್ಥಳಿಯ ಹಿರಿಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗೆ ಮಣೆ ಹಾಕಲು ತೀರ್ಮಾನಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಕೆಲ ಶಾಸಕರ ಪ್ರತಿಷ್ಠೆಯಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಿದ ಪರಿಣಾಮ ಕೂದಲೆಳೆ ಅಂತರದಲ್ಲಿ ಅಧಿಕಾರದಿಂದ ದೂರ ಉಳಿಯಬೇಕಾಯಿತು ಎಂಬುದರಿಂದ ಪಾಠ ಕಲಿತಿರುವ ಬಿಜೆಪಿ ಈ ಬಾರಿ ಇಂತಹದ್ದಕ್ಕೆಲ್ಲ ಅವಕಾಶ ನೀಡದೆ ನೇರವಾಗಿ ಅಭ್ಯರ್ಥಿಗಳ ಆಯ್ಕೆ ಮಾಡಲು ತೀರ್ಮಾನಿಸಿದೆ.

ಎರಡು ಪ್ರತ್ಯೇಕ ಸಭೆ
ಬಿಬಿಎಂಪಿ ಚುನಾವಣೆ ಸಿದ್ಧತೆ ಸಂಬಂಧ ಎರಡು ಪ್ರತ್ಯೇಕ ಸಭೆಗಳು ನಡೆದಿದ್ದು, ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬಿ.ಎಲ್ ಸಂತೋಷ್, ಉಸ್ತುವಾರಿ ಅರುಣ್ ಸಿಂಗ್, ಬೆಂಗಳೂರು ನಗರದ ಸಚಿವರು, ಶಾಸಕರನ್ನು ಒಳಗೊಂಡ ಒಂದು ಸಭೆ ನಡೆದರೆ, ಬೆಂಗಳೂರು ನಗರದ ಜಿಲ್ಲೆಗಳ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು, ಕ್ಷೇತ್ರವಾರು ಅಧ್ಯಕ್ಷರ ಜತೆಗೆ ಮತ್ತೊಂದು ಸಭೆ
ನಡೆಸಲಾಯಿತು. ಸಭೆಯಲ್ಲಿ ಚುನಾವಣೆ ಸಂಬಂಧ ಎಲ್ಲರಿಂದಲೂ ಮಾಹಿತಿ ಪಡೆದುಕೊಳ್ಳಲಾಯಿತು. ಜತೆಗೆ, ಚುನಾವಣೆಗೆ
ಸಂಬಂಧಿಸಿದಂತೆ ಆಂತರಿಕ ಸಮೀಕ್ಷೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಶೀಘ್ರವೇ ಚುನಾವಣೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *