Sunday, 18th May 2025

ಬೆರಗಿನ ಬೆಳಕಿಗೆ ಭಾಷ್ಯ ಬರೆದ ವಿಜ್ಞಾನಿಗೊಂದು ಸಲಾಂ

ತನ್ನಿಮಿತ್ತ

ಅನೀಶ್ ಬಿ.ಕೊಪ್ಪ

ಇಂದು ಸರ್ ಸಿ.ವಿ ರಾಮನ್ ಜನ್ಮದಿನ. ವಿಜ್ಞಾನದಂಬರದಲ್ಲಿ ಎಂದೆಂದಿಗೂ ಬೆಳಗುವ ಆ ನಕ್ಷತ್ರದಡಿ ಒಂದಷ್ಟು ಯುವ ಮನಸು ಗಳು ಪ್ರತಿಫಲಿಸುವ ಚಂದಿರನಾಗಲು ಯತ್ನಿಸಿದರೂ ಸಾಕು ಭಾರತೀಯ ವಿಜ್ಞಾನವೆಂಬ ನಭೋ ಮಂಡಲ ಬೆಂಳದಿಂಗಳಿಂದ ಕಂಗೊಳಿಸುತ್ತದೆ.

ಜಗದ ಹಲವು ಕೌತುಕಗಳಲ್ಲಿ ಮುಂಜಾನೆಯ ಸೂರ್ಯ ಕಿರಣಗಳೂ ಕೂಡ ವಿಭಿನ್ನ ಬಣ್ಣಗಳ ಚಿತ್ತಾರದಲ್ಲಿ ನಮ್ಮನ್ನು ನಿಬ್ಬೆರ ಗಾಗಿಸುತ್ತವೆ. ಶುಭ್ರವಾದ ಶಾಂತ ನೀಲಾಗಸ ಕೂಡ ಹಲವು ಕೌತುಕಗಳ ಆಗರ. ಅಂತೆಯೇ ನಾವು ಕಡಲಿನ ತೀರದಲ್ಲಿ ನಿಂತು ನೀಲಿ ಶರಧಿಯನ್ನು ನೋಡುತ್ತಾ ನಿಂತುಬಿಡುತ್ತೇವೆ. ಆಗೆಲ್ಲಾ ಈ ಬಣ್ಣಗಳಿಗೆ ಕಾರಣ ಏನೆಂಬ ಯೋಚನೆ ನಮಗೂ ನಿಮಗೂ ಬಂದಿರಬಹು ದಲ್ಲವೇ? ನಾವು ನೀವೆಲ್ಲರೂ ಈ ವಿಸ್ಮಯಗಳಿಗೆ ಆಶ್ಚರ್ಯಚಕಿತರಾಗುವಂತೆಯೇ, ವಿಜ್ಞಾನ ಕ್ಷೇತ್ರದ ಮೇಧಾವಿ ಯೋರ್ವರು ಈ ವಿಸ್ಮಯಗಳನ್ನು ನೋಡುತ್ತಾ ಮೈಮರೆ ಯದೆ, ಅವುಗಳ ಬಗೆಗಿನ ಕಾರಣಗಳನ್ನು ಹುಡುಕುತ್ತಾ ಹೊರಟರು.

ಸದಾ ಪ್ರಶ್ನಿಸುವ ಮನವನ್ನು ಹೊಂದಿದ್ದ ಈ ಮೇಧಾವಿಯು ನೀಲಾಗಸದ ಬಣ್ಣವನ್ನು ಕಂಡು ಸ್ತಬ್ಧರಾಗಿದ್ದರು. ರಾತ್ರಿ ಕಪ್ಪಾಗಿ ರುವ ಮುಗಿಲು, ಮುಂಜಾನೆಯಾಗುತ್ತಿದ್ದಂತೆಯೇ ನೀಲಿ ಬಣ್ಣಕ್ಕೆ ತಿರುಗಲು ಕಾರಣವೇನು? ಸೂರ್ಯೋದಯ ಹಾಗೂ ಸೂರ್ಯಾಸ್ತ ಸಮಯದಲ್ಲಿ ಆಕಾಶದಲ್ಲಿ ಕೆಂಪು ವರ್ಣ ಮೂಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಆ ವಿಜ್ಞಾನಿಯನ್ನು ಮೊದಲಿ ನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತಾ ಅವರು ಬಹಳ ಹೊತ್ತನ್ನು ಕಳೆದರು.

ಹಾಗೆಯೇ ಒಂದೊಮ್ಮೆ ಹಡಗಿನಲ್ಲಿ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣ ತಿಳಿಯಲು ಪ್ರಯೋಗ ಮಾಡುತ್ತಾ ಹಡಗಿನ ತುಂಬೆಲ್ಲಾ ಅಲೆದಾಡುತ್ತಿದ್ದರು. ಕೊನೆಗೂ ಯಾರೂ ಭೇದಿಸಲಾಗದ ರಹಸ್ಯವನ್ನು ತಿಳಿಯುವಲ್ಲಿ ಯಶಸ್ವಿ ಯಾದರಿವರು. ಆ ರಹಸ್ಯವನ್ನು ತಿಳಿದ ವ್ಯಕ್ತಿ ಇನ್ನಾರೂ ಅಲ್ಲ, ಅವರೇ ಸರ್ .ಸಿ.ವಿ ರಾಮನ್.

ತಂದೆ ಚಂದ್ರಶೇಖರ್ ಮತ್ತು ತಾಯಿ ಪಾರ್ವತಿ ಅಮ್ಮಾಳ್‌ರ ದ್ವಿತೀಯ ಪುತ್ರನಾಗಿ 1888 ರ ನವೆಂಬರ್ 7 ರಂದು ತಮಿಳು ನಾಡಿನ ತಿರುಚಿನಾಪಳ್ಳಿಯ ತಿರುವನೈಕ್ಕಾವಲ್‌ನಲ್ಲಿ ಜನಿಸಿದ ಕುವರನಿಗಿಟ್ಟ ಹೆಸರು ಚಂದ್ರಶೇಖರ ವೆಂಕಟರಾಮನ್. 1928 ರಿಂದ ನಮ್ಮ ಕರುನಾಡಿನಲ್ಲಿ ನೆಲೆಸಿದ್ದ ಚಂದ್ರಶೇಖರ ವೆಂಕಟರಾಮನ್, ಕರ್ನಾಟಕವನ್ನು ಜಗದ ವಿಜ್ಞಾನರಂಗದಲ್ಲಿ ತಾರೆ ಯಾಗಿ ಮಿನುಗು ವಂತೆ ಮಾಡಿದ ಭೌತವಿಜ್ಞಾನಿ, ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕೃತ, ಬೆಳಕು, ಶಬ್ದ, ಸ್ವರ, ನಾದಗಳಿಗೆ ಕಾರಣವನ್ನು ಹುಡುತ್ತಾ, ವರ್ಣಮಯ ಬೆಳಕು ಚೆಲ್ಲಿದ ಮಹಾನ್ ಸಂಶೋಧಕ. ಇವರ ಸಂಶೋಧನೆಯ ಫಲಶೃತಿಯೇ ರಾಮನ್ ಎಫೆಕ್ಟ್ ಸಿದ್ಧಾಂತ.

ಕೋಲ್ಕತ್ತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನಲ್ಲಿ ಸಿ.ವಿ ರಾಮನ್ ರವರು ತಮ್ಮ ಸಹೋ ದ್ಯೋಗಿಗಳೊಡನೆ ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್ ಪರಿಣಾಮದ ಶೋಧ. ಇದೇ ಸಾಧನೆಗಾಗಿ ಅವರಿಗೆ 1930ನೇ ಇಸವಿಯಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್ ಪುರಸ್ಕಾರವೂ ಕೂಡ ಹೌದು. ರಾಮನ್‌ ರವರು ವಿಜ್ಞಾನ ರಂಗದಲ್ಲಿ ಮಾಡುತ್ತಿದ್ದ ಪ್ರಶಂಸನೀಯ ಸೇವೆಯನ್ನು ಗುರುತಿಸಿ, ಬ್ರಿಟಿಷ್ ಸರಕಾರವು ಅವರಿಗೆ ಸರ್ ಎಂಬ ಬಿರುದನ್ನು ನೀಡಿ ಗೌರವಿಸಿತು.

ಇವರ ಸಂಶೋಧನೆಗೆ ಇಡೀ ವಿಶ್ವವೇ ಬೆರಗಾದದ್ದು ದಿಟವಾಗಿಯೂ ಒಂದು ಇತಿಹಾಸವೇ ಸರಿ. ಆಕಾಶದ ನೀಲಿ ಬಣ್ಣ ರಾಮನ್‌ರ ಕುತೂಹಲ ಕೆರಳಿಸಿ, ಪ್ರಯೋಗಕ್ಕೆ ತೊಡಗಿಸಿತು. ಹಾಗೆಯೇ ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಅಚ್ಚರಿಗೊಳ್ಳು ತ್ತಿದ್ದರು. ವಾತಾವರಣದಲ್ಲಿನ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲಾ
ಬಣ್ಣಗಳೂ ಕೂಡ ಚದುರುವುವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿ ಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು ಎಂಬ ಸತ್ಯವನ್ನು ಇಡೀ ಜಗದಗಲಕೆ ಮೊದಲ ಬಾರಿಗೆ ಪಸರಿಸಿ ದವರು ಸರ್ ಸಿ.ವಿ ರಾಮನ್.

ಪ್ರಶ್ನೆಗಳನ್ನು ಕೆರಳಿಸುವ ಯೋಚನೆಗಳು, ಕುತೂಹಲಗಳೇ ರಾಮನ್ ಪರಿಣಾಮ ಎಂಬ ಮಹಾನ್ ವೈಜ್ಞಾನಿಕ ಕ್ಷೇತ್ರದ ದಿಟ್ಟ ಹೆಜ್ಜೆಗೆ ನಾಂದಿಯಾಯಿತು. 1928ರ ಫೆಬ್ರವರಿ 28ರಲ್ಲಿ ಕೆ.ಎಸ್ ಕೃಷ್ಣನ್ ರವರ ಜತೆ ಆವಿಷ್ಕಾರವಾದ ಸಂಗತಿಯನ್ನು,  ಮಾರ್ಚ್ 16ರಂದು ದಕ್ಷಿಣ ಭಾರತ ವಿಜ್ಞಾನ ವೇದಿಕೆ ಹಾಗೂ ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿಜ್ಞಾನ ವೇದಿಕೆಯಲ್ಲಿ ಹಂಚಿಕೊಂಡಾಗ ಅಲ್ಲಿದ್ದ ಸದಸ್ಯರಿಗೆ, ‘ಇವರು ಬೆಳಕಿನ ಅಧ್ಯಯನಗಳಲ್ಲಿ ಹೊಸ ಪರಂಪರೆಯನ್ನೇ ಸೃಷ್ಟಿಸಿ ಬಿಡುತ್ತಾರೆ’ ಎಂದೆನ್ನಿಸುವಂತಹ ರೋಮಾಂಚಕಾರಿ ಅನುಭವ.

ಇಡೀ ಜಗತ್ತಿಗೆಯೇ ತಿಳಿಯದ ಹೊಸ ವಿಷಯವನ್ನು ಸಂಶೋಧಕರ ಬಾಯಿಂದಲೇ ಕೇಳಿ ತಿಳಿಯುವ ಅವಿಸ್ಮರಣೀಯ ಸದವ ಕಾಶ ಅಲ್ಲಿ ನೆರೆದವರಿಗೆ ಸಿಕ್ಕಿತ್ತು. ಆ ಇಡೀ ಉಪನ್ಯಾಸದ ಸಾರಾಂಶವನ್ನು ದಿ ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್ ಪ್ರಕಟಿಸಿತು. ಇದರ ಬೆನ್ನಲ್ಲೇ ಕೋಲ್ಕತ್ತಾಗೆ ಹಿಂದಿರುಗಿದ ರಾಮನ್, ತಮ್ಮ ಸಂಶೋಧನೆಯ ಪೂರ್ಣ ಪ್ರಬಂಧವನ್ನು ರಚಿಸಿದರಷ್ಟೇ ಯಲ್ಲದೇ ಅದು ಆ ವರ್ಷದ ನೇಚರ್ ಪತ್ರಿಕೆಯ ಏಪ್ರಿಲ್ 20 ರ ಸಂಚಿಕೆಯಲ್ಲಿ ಪ್ರಕಟವಾಯಿತು.

ವಿಜ್ಞಾನದಂಬರದಲ್ಲಿ ರಾಮನ್ ಎಂಬ ಬೆಳಕು, ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಕಾಶಿಸುತ್ತಿರಲು ಕಾರಣವಾಯಿತು.
ಪಾರದರ್ಶಕವಾದ ಯಾವುದೇ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣ ಗಳು ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳಿರುವುದನ್ನು ನಾವು ನೋಡಬಹುದು. ಹೀಗೆ ಚದುರಿದ ಬಹು ಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾಂತರ ಮೂಲ ಕ್ಕಿಂತ ಬದಲಾಗಿರುತ್ತದೆ.

ಇದುವೇ ರಾಮನ್ ಪರಿಣಾಮ. ತರಂಗಾಂತರದಲ್ಲಿನ ಈ ಬದಲಾವಣೆಗೂ ಹಾಗೂ ಪಾರದರ್ಶಕ ವಸ್ತುವಿನ ರಚನೆಗೂ ಸಂಬಂಧ ವಿರುವ ಕಾರಣದಿಂದಾಗಿ ಈ ವಿದ್ಯಮಾನದ ಬಗೆಗೆ ಅಧ್ಯಯನ ಮಾಡುವುದರ ಮುಖಾಂತರ ಪಾರದರ್ಶಕ ವಸ್ತುವಿನ ರಚನೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಂದು ರಾಮನ್ ರವರೇ ತಮ್ಮ ಸಂಶೋಧನೆಯ ತಾತ್ಪರ್ತದ ಕುರಿತು, ‘ನಾನು ವಿಸ್ಮಯ ಪ್ರಪಂಚದ ಅಂಚನ್ನು ಮುಟ್ಟಿದ್ದೇನೆ.ಇದು ವಿಕಿರಣ,ಬೆಳಕಿನಲೆಯ ಸಿದ್ಧಾಂತ, ಕ್ಷ-ಕಿರಣ ದೃಗ್ವಿಜ್ಞಾನ (X-Ray Optics), ಅಣು-
ಪರಮಾಣುಗಳ ರೋಹಿತ ಪಟಲಗಳ ಸೂಚಿಗಳು, ಪ್ರತಿದೀಪ್ತಿ(Fluorescence) ಉಷ್ಣಬಲ ವಿಜ್ಞಾನ(Thermodynamics) ರಸಾಯನಶಾಸ್ತ್ರ ಮತ್ತು ಮುಂತಾದ ವಿಜ್ಞಾನ ಪ್ರಕಾರಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು
ನಿರೀಕ್ಷಿಸಬಹುದು’ ಎಂದು ಹೇಳಿದ್ದರಂತೆ. ಅವರ ನುಡಿಗಳಂತೆ, ರಾಮನ್ ಪರಿಣಾಮವು ವಿಶ್ವದ ವಿಜ್ಞಾನಿಗಳಿಗೆ ವಿಶ್ವಾಸನೀಯ ಕೊಡುಗೆಯಾಗಿ ಕಂಡಿತು.

ಲಭ್ಯ ಕೆಲ ಮಾಹಿತಿಗಳನ್ವಯ, ರಾಮನ್ ಪರಿಣಾಮದ ಕುರಿತು ವಿವರ ಗಳು ಪ್ರಕಟವಾದ ಕೇವಲ ಹನ್ನೆರಡು ವರ್ಷಗಳ ಅವಧಿ ಯಲ್ಲಿಯೇ ಆ ವಿದ್ಯಮಾನವನ್ನು ಕುರಿತು ಬೇರೆಬೇರೆ ದೇಶದ ವಿವಿಧ ವಿಜ್ಞಾನಿಗಳು ಬರೆದ ಸುಮಾರು 1800 ಪ್ರೌಢ ಪ್ರಬಂಧ ಗಳು ಪ್ರಕಟವಾದವು. ಅವಷ್ಟೇಯಲ್ಲದೆಯೇ, ರಾಮನ್‌ರ ಅಧ್ಯಯನಗಳ ಫಲವೆಂಬಂತೆ, ಅದೇ ಅವಧಿಯಲ್ಲಿ ಸಾವಿರಾರು ರಾಸಾಯ ನಿಕ ಸಂಯುಕ್ತಗಳ ರಚನೆಗಳ ಬಗೆಗೆ ಅಧ್ಯಯಿಸಲು ಸಾಧ್ಯವಾಯಿತು.

ರಾಮನ್‌ರವರು 1928 ರ ಫೆಬ್ರವರಿ 28 ರಂದು ರಾಮನ್ ಎಫೆಕ್ಟ್ ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು  ಜಗತ್ತಿಗೆ ತಿಳಿಸಿದ್ದರು. ಅವರ ಈ ಅಪೂರ್ವ ಸಾಧನೆಯ ನೆನಪಿಗಾಗಿ ಪ್ರತಿವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನ ವನ್ನು ಆಚರಿಸಲಾಗುತ್ತದೆ. ರಾಮನ್‌ರ ಗೌರವಾರ್ಥವಾಗಿ ಅಂಚೆ ಚೀಟಿಯನ್ನೂ ಕೂಡ 1971 ಮತ್ತು 2009 ರಲ್ಲಿ ಭಾರತೀಯ ಅಂಚೆ ಇಲಾಖೆಯಿಂದ ಹೊರತರಲಾಗಿದೆ.

ಛತ್ತೀಸ್‌ಘಡ, ಬಿಹಾರ ಹಾಗೂ ಮಧ್ಯಪ್ರದೇಶದ ಖಾಂಡ್ವಾದಲ್ಲಿ ಸಿ.ವಿ ರಾಮನ್ ರವರ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳನ್ನು
ಸ್ಥಾಪಿಸಿರುವುದು ಅವರ ಸಾಧನೆಗೆ ಸಂದ ಗೌರವಗಳಲ್ಲಿ ಪ್ರಮುಖವಾದದ್ದಾಗಿದೆ. ಇಂತಹ ಮಹಾನ್ ಭೌತಶಾಸ್ತ್ರಜ್ಞ 1970 ರ ನವೆಂಬರ್ 21 ರಂದು ತಾಯಿ ಭುವನೇಶ್ವರಿಯ ಮಡಿಲಾದ ಬೆಂಗಳೂರಿನಲ್ಲಿ ಅಸ್ತಂಗತರಾದರು. ಬೆರಗಿನ ವಿಜ್ಞಾನದ ದೀವಿಗೆ ಯನ್ನು ಜನಮಾನಸದಲ್ಲಿ ಬೆಳಗಿ ಮರೆಯಾದರು.

ಕೌತುಕದ ಪ್ರಶ್ನೆಗಳಿಗೆ ಅನ್ವೇಷಣೆ, ಸಂಶೋಧನೆ, ಪ್ರಯೋಗಶೀಲತೆಯ ಮೂಲಕ ಉತ್ತರ ಕಂಡುಕೊಳ್ಳಲು ಹಿರಿಯರು ಇಂಬು ತುಂಬಬೇಕಾಗುತ್ತದೆ. ಶಾಲಾ ಕಾಲೇಜು ಗಳಲ್ಲಿ, ಮನೆಯ ಪರಿಸರದಲ್ಲಿ ಪ್ರಯೋಗಶೀಲ ಮತ್ತು ಸೃಜನಶೀಲ ಬದುಕನ್ನು ಕಟ್ಟಿ ಕೊಡಲು ಭೂಮಿಕೆ ಯನ್ನು ನಿರ್ಮಿಸಿ ಕೊಟ್ಟಾಗ ಭವಿಷ್ಯದ ಭಾರತದಲ್ಲಿ ಸಿ.ವಿ ರಾಮನ್ ರಂತಹ ಮಹಾನ್ ವಿಜ್ಞಾನಿಗಳು ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ. ಭರವಸೆಯ ಬೆಳಕನ್ನು ಚೆಲ್ಲುವ ಯುವವಿಜ್ಞಾನಿಗಳಾಗಲು ಇಂದೇ ದೀಕ್ಷೆ ತೊಡೋಣ.

Leave a Reply

Your email address will not be published. Required fields are marked *