ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲರೂ ಪಟಾಕಿ ಸಿಡಿಸಿ ವಿಜ್ರುಂಭಣೆಯಿಂದ ಆಚರಣೆ ಮಾಡುತ್ತಾರೆ, ಆದರೆ, ಹಬ್ಬ ಆಚರಣೆಯ ನಡುವೆ ಕೋವಿಡ್ ರೂಪಾಂತರಿ ಸೋಂಕನ್ನು ಮರೆಯುವಂತಿಲ್ಲ. ಏಕೆಂದರೆ, ಈಗಲೂ ನಮ್ಮ ಮಧ್ಯೆ ಕೋವಿಡ್ ಜೀವಂತವಾಗಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಸದ್ದು, ಅದರ ಹೊಗೆಯ ಪರಿಣಾಮ ಮಾಲಿನ್ಯ ಉಂಟಾಗುತ್ತದೆ. ಈಗಾಗಲೇ ಅಸ್ತಮಾ, ಶ್ವಾಸಕೋಶ ಸಮಸ್ಯೆ, ಕೆಮ್ಮು ಇರುವವರಿಗೆ ಪಟಾಕಿ ಹೊಗೆ ಇನ್ನಷ್ಟು ಮಾರಕವಾಗುವ ಜೊತೆಗೆ ಕೋವಿಡ್ ಹರಡುವಿಕೆಗೆ ಇನ್ನಷ್ಟು ಪೂರಕವಾಗಲಿದೆ. ಹೀಗಾಗಿ ಕೋವಿಡ್ ಸೋಂಕು ಹರಡದಂತೆ ದೀಪಾವಳಿ ಹಬ್ಬ ಆಚರಣೆಗೆ ಇಲ್ಲಿವೆ ಕೆಲವು ಟಿಪ್ಸ್
ರಾಸಾಯನಿಕಯುಕ್ತ ಪಟಾಕಿಯಿಂದ ದೂರವಿರಿ: ಇದು ಹಿಂದೂ ಹಬ್ಬವಾಗಿರುವುದರಿಂದ ಪಟಾಕಿ ಸಿಡಿಸುವುದು ಹಿಂದೂ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಆದರೆ, ಹಬ್ಬದ ಹೆಸರಿನಲ್ಲಿ ರಾಸಾಯನಿಕಯುಕ್ತ ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯವಾಗುವ ಜೊತೆಗೆ ಪ್ರತಿಯೊಬ್ಬರಿಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ ಇಂಥ ಪಟಾಕಿ ಕೊಂಡುಕೊಳ್ಳದೇ ಹಸಿರು ಪಟಾಕಿ ಬಳಸುವುದು ಹೆಚ್ಚು ಉಪಯುಕ್ತ. ಇದರಿಂದ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಾಡಿದಂತಾಗಲಿದೆ.
ಮಾಸ್ಕ್ ಧರಿಸಿ: ದೀಪಾವಳಿ ಹಬ್ಬ ಮುಗಿಯುವವರೆಗೂ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹೆಚ್ಚು ಉಪಯುಕ್ತ. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟುವುದು ಅಷ್ಟೆ ಅಲ್ಲ, ಶ್ವಾಸಕೋಶದ ಸಮಸ್ಯೆಗೆ ಹಾನಿಯಾಗುವುದನ್ನು ತಪ್ಪಿಸಬಹುದು ಎಂದು ಫೋರ್ಟಿಸ್ ಆಸ್ಪತ್ರೆಯ ಪಲ್ಮನರಿ ಡಿಸೀಸ್ ನಿರ್ದೇಶಕರಾದ ಡಾ. ವಿವೇಕ್ ಆನಂದ್ ಪಡೆಗಲ್ ಹೇಳಿದ್ದಾರೆ.
ಸ್ಯಾನಿಟೈಸರ್ ಬಳಸಬೇಡಿ: ಪಟಾಕಿ ಸಿಡಿಸುವುದು ಅಥವಾ ಆ ಸುತ್ತಲಿನ ವಾತಾವರಣದಲ್ಲಿ ಪಟಾಕಿ ಸಿಡುಸುತ್ತಿದ್ದರೆ ಕೈ ಸ್ವಚ್ಛತೆಗಾಗಿ ಸ್ಯಾನಿಟೈಜರ್ ಬಳಕೆ ಅತ್ಯಂತ ಅಪಾಯಕಾರಿ. ಸ್ಯಾನಿಟೈಜರ್‌ನಲ್ಲಿ ಹಾಲ್ಕೋಹಾಲ್ ಮಿಶ್ರಣವಿರಲಿದೆ. ಇದಕ್ಕೆ ಕಿಡಿ ಹೊತ್ತಿಕೊಂಡರೆ ಬೆಂಕಿ ಹೊತ್ತಿಕೊಂಡು ಕೈ ಸುಡಬಹುದು. ಹೀಗಾಗಿ ಕೈಗಳನ್ನು ಸಾಬೂನಿನನ್ನು ತೊಳೆಯುವುದು ಉತ್ತಮ.
ಊದುಬತ್ತಿ ಹೊಗೆಯಿಂದಲೂ ಶ್ವಾಸಕೋಶಕ್ಕೆ ಸಮಸ್ಯೆ ಆಗಬಹುದು: ಬಹುತೇಕರು ಕೇವಲ ಪಟಾಕಿ ಸಿಡಿಸುವುದರಿಂದ ಮಾತ್ರ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಭಾವಿಸಿರುತ್ತಾರೆ. ಆದರೆ, ಊದುಬತ್ತಿಯಿಂದ ಹೊರಸೂಸುವ ಹೊಗೆಯೂ ಸಹ ನೇರವಾಗಿ ಶ್ವಾಸಕೋಶಕ್ಕೆ ಸೇರಲಿದ್ದು, ಇದರಿಂದಲೂ ಸಹ ಹೆಚ್ಚು ಸಮಸ್ಯೆ ಆಗಬಹುದು.