Wednesday, 14th May 2025

ಹಂದಿಯ ಕಿಡ್ನಿ ಕಸಿ

ಟೆಕ್ ಸೈನ್ಸ್

ಎಲ್.ಪಿ.ಕುಲಕರ್ಣಿ

ದೇಹದ ಯಾವುದೇ ಭಾಗಕ್ಕೆ ತೊಂದರೆಯಾದರೆ, ಔಷಧಿಗಳಿಂದ ಗುಣಪಡಿಸಲು ಪ್ರಯತ್ನಿಸುತ್ತೇವೆ. ಮುಂದಿನ ಹೆಜ್ಜೆಯಾಗಿ ಶಸ್ತ್ರ ಚಿಕಿತ್ಸೆ ಮೊರೆಹೋಗುತ್ತೇವೆ. ಇವರೆ ಡೂ ಯಶಸ್ವಿಯಾಗಲಿಲ್ಲವೆಂದರೆ ಹೊಸದೊಂದು ಅಂಗವನ್ನೇ ಅಲ್ಲಿ ಪ್ರತಿಷ್ಠಾಪಿಸ ಬೇಕಾಗುತ್ತದೆ. ಅಂದರೆ ‘ಆರ್ಗನ್ ಟ್ರಾನ್ಸ್‌ಪ್ಲಾಂಟೇಷನ್’ ಅಥವಾ ಅಂಗಾಂಗ ಕಸಿ..

ಇದು ಕ್ಲಿಷ್ಟ ಕೆಲಸ. ಇತ್ತೀಚೆಗೆ ಕಿಡ್ನಿ ತೊಂದರೆಯು ಸಾಕಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ವಿವಿಧ ರೀತಿಯ ಮಾತ್ರೆಗಳನ್ನು ಸೇವಿಸುವುದು, ಆಹಾರದ ಜತೆ ರಾಸಾಯನಕ ಪದಾರ್ಥಗಳು ನಮ್ಮ ದೇಹವನ್ನು ಸೇರುವುದರಿಂದ ಈ ಸಮಸ್ಯೆ ಹೆಚ್ಚಳಗೊಂಡಿದೆ ಎನ್ನುತ್ತವೆ ಅಧ್ಯಯನಗಳು. ಒಂದು ಸರ್ವೇ ಪ್ರಕಾರ ಅಮೆರಿಕಾ ಒಂದರ ಒಂದು ಲಕ್ಷಕ್ಕೂ ಹೆಚ್ಚು ಜನರು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಅಲ್ಲದೇ ಪ್ರತಿ ದಿನ 17 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಅಂಗವನ್ನು ಬೇರೊಬ್ಬರಿಂದ ಪಡೆದು ರೋಗಿಯ ದೇಹದಲ್ಲಿ ಜೋಡಿಸಲು ವಿಜ್ಞಾನಿಗಳು ಮಾನವ ದಾನಿಗಳ ಹೊರತಾಗಿ ಮತ್ತೇನಾದರೂ ಆಯ್ಕೆಗಳಿವೆಯೇ ಎಂದು ಹುಡುಕುತ್ತಿದ್ದಾಗ ಸಿಕ್ಕ ಪರಿಹಾರವೇ ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಜೋಡಿಸಿದರೆ ಹೇಗೆ ಎಂಬ ಆಲೋಚನೆ. ಇದೀಗ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡವನ್ನು ವ್ಯಕ್ತಿಯೊಬ್ಬನಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಇತ್ತೀಚೆಗೆ ನ್ಯೂಯಾರ್ಕ್ ನಗರದ ಎನ್.ವಾಯ.ಯು. ಲ್ಯಾಂಗೋನ್ ಹೆಲ್ತ್ ಸೆಂಟರ್‌ನಲ್ಲಿ ಹಂದಿಯ ಕಿಡ್ನಿಯನ್ನು ಮನುಷ್ಯನ ದೇಹಕ್ಕೆ ಅಳವಡಿಸಲಾಯಿತು. ಇದರ ನೇತೃತ್ವ ವನ್ನು ಶಸ್ತ್ರಚಿಕಿತ್ಸಕ ರಾಬರ್ಟ್ ಮಾಂಟ್ಗೊಮೆರಿ ವಹಿಸಿದ್ದರು. ಹಂದಿಗಳಿಂದ ಅಂಗಗಳು ಮಾನವರಿಗೆ ಸಂಭಾವ್ಯವಾಗಿ ಸೂಕ್ತವೆಂದು ದೀರ್ಘ ಕಾಲದಿಂದ ಪರಿಗಣಿಸಲಾಗಿದೆ. ಆದರೆ ಹಂದಿ ಜೀವಕೋಶಗಳು ಆಲ್ಫಾ-ಗಾಲ್ ಎಂಬ ಸಕ್ಕರೆಯನ್ನು ಒಳಗೊಂಡಿರುತ್ತವೆ. ಇದು ಮಾನವ ದೇಹದಿಂದ ತಕ್ಷಣದ ನಿರಾಕರಣೆಯನ್ನು ಪ್ರಚೋದಿಸುತ್ತದೆ. ಈ ಸಂದರ್ಭದಲ್ಲಿ, ಆಲ್ಫಾ ಗಾಲ್ ಅನ್ನು ಉತ್ಪಾದಿಸದಂತೆ ಹಂದಿಯನ್ನು ತಳೀಯವಾಗಿ ವಿನ್ಯಾಸಗೊಳಿಸಲಾಗಿದೆ.

ಹಂದಿಯ ಮೂತ್ರಪಿಂಡವನ್ನು ರೋಗಿಯ ದೇಹದ ಹೊರಗೆ ಇರಿಸಿದಾಗ, ಕಾರ್ಯಾಚರಣೆಯ ಸಮಯದಲ್ಲಿ ಅದು ತನ್ನ ಕೆಲಸ ವನ್ನು ಸಮರ್ಪಕವಾಗಿ ಮಾಡುವುದನ್ನು ಗಮನಿಸಲಾಯಿತು: ಅಂದರೆ, ರಕ್ತದಿಂದ ತ್ಯಾಜ್ಯ ಉತ್ಪನ್ನಗಳನ್ನು ಫಿಲ್ಟರ್ ಮಾಡು ವುದು ಮತ್ತು ಮೂತ್ರವನ್ನು ಉತ್ಪಾದಿಸುವ ಪ್ರಕ್ರಿಯೆಯನ್ನು ತಕ್ಕ ಮಟ್ಟಿಗೆ ಅದು ನಿರ್ವಹಿಸಿತು. ನಾವು ಈಗಾಗಲೇ ಮಾನವರಲ್ಲಿ ಸುಟ್ಟಗಾಯಗಳಿಗೆ ಮತ್ತು ಹೃದಯ ಕವಾಟಗಳಿಗೆ ಹಂದಿಯ ಚರ್ಮದ ಕಸಿಯನ್ನು ಅಳವಡಿಸಿದ್ದೇವೆ ಮತ್ತು ಈಗಾಗಲೇ ಬಬೂನ್‌ ಗಳಲ್ಲಿ ಹಂದಿಗಳ ಹೃದಯಗಳನ್ನು ಅಳವಡಿಸಿ, ಪ್ರಯೋಗ ಗಳನ್ನು ನಡೆಸಲಾಗಿದೆ.

ಆದ್ದರಿಂದ ಇದೊಂದು ಪೂರ್ವ ನಿದರ್ಶನವಾಗಿದೆ. ಮುಂಬರುವ ವರ್ಷಗಳಲ್ಲಿ ಮಾನವನಿಗೆ ಹಂದಿಯ ಅಂಗಗಳನ್ನು ಬಳಸುವ ಸಾಧ್ಯತೆಯ ಬಗ್ಗೆ ಹೆಚ್ಚಿನದನ್ನು ತಿಳಿಯಲು ನಿರೀಕ್ಷಿಸಬಹುದು. ಹಂದಿಯನ್ನು ತಳೀಯವಾಗಿ ವಿನ್ಯಾಸಗೊಳಿಸಿ, ಅಳವಡಿಸಿದ ಈಗಿನ ಪ್ರಯೋಗವು ಸದ್ಯಕ್ಕೆ ಯಶಸ್ವಿಯಾಗಿದ್ದು, ಒಂದು ಪ್ರಮುಖ ಸಾಧನೆ ಎನಿಸಿದೆ. ಈ ಬೆಳವಣಿಗೆಯು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೊಸ ಆಶಾಕಿರಣವಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *