ತನ್ನಿಮಿತ್ತ
ಹಿರೇಮಗಳೂರು ಕಣ್ಣನ್
ನಮಸ್ಕಾರ ಕನ್ನಡಿಗರೆ, ಪ್ರಸ್ತುತ ಕರ್ನಾಟಕದಲ್ಲಿ ಕವಿದಿರುವ ಎಲ್ಲ ಜನರ ಹೃದಯದ ಆ ಶೋಕತೆಯಲ್ಲಿ ಕವಿನುಡಿಯ ಶ್ಲೋಕ ಎಂದರೆ ‘ಕಾಲಪುರುಷಂಗೆ ಗುಣಮಿಲ್ಲಂಗಡಾ’ ಎಂದು ನಮ್ಮ ಕವಿ ರನ್ನ ಗುಡುಗುತ್ತಾನೆ. ಅವನು ಹಾಗೆಯೇ!
ಕರೆಯದಿದ್ದರೂ ನಾಚಿಕೆಯಿಲ್ಲದೆ ಬರುವ ಅತಿಥಿ ಅವನು. ಬಂದು ಇರುವವರಿಗೆ ತಿಥಿ ಮಾಡಿ ಹೋಗುವವನು! ಅಂಥವನಿಗೆ ಕಾಲದ ಪರಿವೆಯೇ ಇಲ್ಲ. ಸದಾಕಾಲವೂ ಭಕ್ಷಿಸು ವುದೇ ಅವನ ಲಕ್ಷಣ. ಅವನಿಂದ ರಕ್ಷಿಸಿಕೊ ಳ್ಳುವುದಕ್ಕೆ ಯಾರಿಂದಲೂ ಸಾಧ್ಯ ವಿಲ್ಲ. ವೈದ್ಯರಿಂದಲೂ ಸಾಧ್ಯವಿಲ್ಲ, ವೇದ ಪುರುಷರಿಂದಲೂ ಸಾಧ್ಯವಿಲ್ಲ, ಆಚಾರವಂತ ರಿಂದಲೂ ಸಾಧ್ಯವಿಲ್ಲ, ವಿಚಾರವಂತ ರಿಂದಲೂ ಸಾಧ್ಯವಿಲ್ಲ, ಧೂತನಿಂದಲೂ ಸಾಧ್ಯವಿಲ್ಲ, ಅವಧೂತನಿಂದಲೂ ಸಾಧ್ಯವಿಲ್ಲ ಅವತಾರವೆತ್ತಿದ ದೇವರಿಂದಲೂ ಸಾಧ್ಯವಿಲ್ಲ.
‘ಕಾಲಪುರುಷಂಗೆ ಗುಣಮಿಲ್ಲಂಗಡಾ’, ‘ಕರೆ ಬರಲ್ ತೆರಳ್’ ಎಂಬ ಕವಿಗಳ ಮಾತು ಗಳನ್ನು ನಾವು ಈಗ ನೆನಪು ಮಾಡಿ ಕೊಳ್ಳುತ್ತಿದ್ದೇವೆ. ಆದರೂ ಕೂಡ ಎಂದಿನಂತೆಯೇ ಈ ಜೀವನದ ನಮ್ಮ ಯಾತ್ರೆಯನ್ನು ಪೂರೈಸುವವರೆಗೂ ಚಲಿಸಲೇಬೇಕಲ್ಲ. ಆದ್ದರಿಂದ ನಾವು ಈ ಮೌನ ಮುಖ ಮುದ್ರೆ ಹೊತ್ತು ಕುಳಿತಿರುವುದಕ್ಕೆ ಸಾಧ್ಯವಿಲ್ಲ. ಮೌನ ವನ್ನು ಭೇದಿಸಿ ಮತ್ತೆ ಮಾತಿನ ಜಾಲಕ್ಕೆ ಬರಲೇಬೇಕು. ಏಕೆಂದರೆ, ನಮ್ಮ ಜತೆಯಲ್ಲಿ ಇರುವವ ರಿಗೂ ಸಮಾಧಾನ ವನ್ನು, ಚೈತನ್ಯವನ್ನು ನೀಡಬೇಕಲ್ಲವೇ? ಆದ್ದರಿಂದ ಅಂತಹ ಜೀವ ಚೈತನ್ಯವನ್ನು ನೀಡುವಂತಹವನು ಸಾಹಿತ್ಯದ, ಸರಸ್ವತಿಯ ಆರಾಧಕ ಆ ಸಾಹಿತಿ, ಆ ಕವಿ.
ಪ್ರಸ್ತುತ ಕನ್ನಡದ ಮೇರುನಟನ ಅಗಲಿಕೆಯಿಂದ ಈ ನಾಡಿಗೆ ಆವರಿಸಿರುವ ಶೋಕಕ್ಕೆ ಕಾಲನನ್ನೇ ಕುರಿತು ಕವಿ ಹೀಗೆ ಹೇಳುತ್ತಾನೆ. ‘ಕಾಲ ಆರದ ಹಣತೆ’. ಅದು ಯಾವಾಗಲೂ ನಿರಂತರವಾದ ಜ್ಯೋತಿ, ತಾನು ಬೆಳಕನ್ನು ಸೂಸುತ್ತಲೇ ಮತ್ತೊಬ್ಬರಿಗೆ ಕತ್ತಲೆ ಯನ್ನು ತರುವಂತಹ ಮಹಾನುಭಾವ ಅವನು. ಅವನು ಯಮನ ರೂಪದಲ್ಲಿ ಜೀವಗಳನ್ನೇ ತನ್ನ ಖಾತೆಗೆ ಜಮಾ ಮಾಡಿ ಕೊಳ್ಳುವವನು, ಅದು ಅವನ ಕ್ರಮ. ಅದಕ್ಕಾಗಿ ಮುದ್ದುರಾಮನ ಕವಿ ಕೆ.ಸಿ.ಶಿವಪ್ಪನವರು ನಮ್ಮ ಸಮಾಧಾನಕ್ಕಾಗಿ, ಎಂದಿನ ನಿತ್ಯ ಚಟುವಟಿಕೆಗಾಗಿ, ಹೀಗೆ ಎಚ್ಚರಿಸುತ್ತಾರೆ.
ಲೋಕವನೆ ಜಾಲಾಡಿ ಅರೆದು ಕುಡಿವುದು ಕಾಲ ಕಾಲ ಕೊನೆಗಾಣಿಸುವುದು ಎಲ್ಲರನು ಕಡೆಗೆ. ತೂಕಡಿಸುತಿರೆ ಮಂದಿ ಎಚ್ಚರಿಸುವುದು ಕಾಲ. ಕಾಲ ಈ ಜಗದೊಡೆಯ-ಮುದ್ದುರಾಮ. ಈ ಪದ್ಯದ ಮೊದಲ ಸಾಲನ್ನೇ ಗಮನಿಸಿದರೆ ಸಾಕು, ಅವರ ಮನೆ, ಇವರ ಮನೆ, ಪಕ್ಕದ ಮನೆ ಮುಂಭಾಗದ ಮನೆ, ಬಡಾವಣೆಯ ಮನೆ, ನಗರದ ಮನೆ, ಹಳ್ಳಿಯ ಮನೆ ಯಾವುದೂ ಆತನಿಗೆ ತಾರತಮ್ಯವಿಲ್ಲ. ಆ ರೀತಿಯಲ್ಲಿ ಕಾಲ ಜಾತ್ಯತೀತ ಮನೋಭೂಮಿಕೆಯ ಪ್ರಾಕ್ಟಿಕಲ್ ವ್ಯಕ್ತಿ. ಅವನಿಗೆ ಕರುಣೆ ಎನ್ನುವಂಥದ್ದು ಇಲ್ಲ. ಅವನಿಗೆ ಕತ್ತಲೆಯೇ ಇಲ್ಲ. ಆದ್ದರಿಂದ ಅವನು ಅರೆದು ಕುಡಿಯುವುದರಲ್ಲಿ ನಿಸ್ಸೀಮ. ನಮಗಷ್ಟೇ ತೂಕಡಿಕೆ, ಆಕಳಿಕೆ, ಬೇಸರಿಕೆ ಎಲ್ಲ ಇದೆ. ಆದರೆ ಕಾಲನಿಗೆ ಇವು ಯಾವುವೂ ಇಲ್ಲ.
ಬತ್ತಿ ತೈಲಗಳೆರಡು ಇರುವನಕ ದೀಪದಲೆ, ಆರದಿರುವುದೇ ಸೊಡರು ಇದರ ಕೊರತೆಯಲಿ ನಮ್ಮ ಜೀವಿತ ಎಂತು ಹಣತೆಯಂತಿ ಹುದಲ್ತೆ ಕಾಲ ಶಿಖೆ ಪ್ರಜ್ವಲಿತ- ಮುದ್ದುರಾಮ. ಕವಿ ಹೇಳಿದಂತೆ ಕಾಲ ಎಂದೂ ಆರದ ಹಣತೆ. ಮೇಲಿನ ಸಾಲುಗಳನ್ನು ಅರ್ಥೈಸಿ ಕೊಂಡರೆ ಅಸಮಾಧಾನದ ಮನಸ್ಸಿಗೆ ಕೊಂಚ ಸಮಾಧಾನವಾದೀತು. ಕವಿ ಹೇಳುವ ಈ ಮಾತಿನಂತೆ ಕನ್ನಡ ಚಿತ್ರರಂಗದ ಮೂಲಕ ನಮ್ಮ ನಾಡಿನಲ್ಲಿ ಸಾಂಸ್ಕೃತಿಕ ವಾಗಿಯೂ ಕೊಡುಗೆಯನ್ನು ನೀಡಿದಂತಹ ಧೀಮಂತನಟನಾದ ರಾಜಕುಮಾರನ ಸುಪುತ್ರ ಪುನೀತ್ ರಾಜಕುಮಾರ್ ಝಮ್ ಎಂದು ಇದ್ದ ವ್ಯಕ್ತಿ.
ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಂತೆ ಆತನ ಹೃದಯದ ಲಬ್ ಡಬ್ ಎನ್ನುವ ಶಬ್ದ ಆಘಾತದ ಮೂಲಕ ನಮ್ಮ ಮನಸ್ಸನ್ನು
ಡಮಾರ್ ಎನಿಸಿಬಿಟ್ಟಿದೆ! ಈ ವಿಷಯ ನಮ್ಮೆಲ್ಲರ ಮನಸ್ಸಿಗೆ ಬಿಸಿ ಏರಿಸಿ ಮೌನವಾಗಿ ಕುಳಿತುಕೊಳ್ಳುವಂತೆ ಮಾಡಿದೆ. ಅದಕ್ಕೇ ಕವಿ ಹೇಳುತ್ತಾನೆ: ಸಾವು ಯಾರಿಗೆ ಹೇಗೆ ಕುಣಿಕೆ ಎಸೆವುದೊ ಕಾಣೆ ಅರೆ ನಿಮಿಷದ ವರುಷಗಟ್ಟಲೆಯೊ; ಮರಣ ಹೀಗೇ ಎಂದು ಘಟಿಸಬೇಕೇನಿಲ್ಲ ಕಾಲಲೀಲೆ ವಿಚಿತ್ರ- ಮುದ್ದುರಾಮ. ಎಂಥ ಚಿಕಿತ್ಸಕ ಸೌಲಭ್ಯಗಳಿದ್ದರೂ ಕೂಡ, ಆರ್ಥಿಕ ಸಂಪನ್ಮೂಲತೆಯ ಅನುಕೂಲಗಳಿದ್ದರೂ ಕೂಡ, ಕೈಗೆಟಕು ವ ಯಾವುದೇ ಸೌಲಭ್ಯಗಳಿದ್ದರೂ ಕೂಡ ಕಾಲನ ಕರೆಗೆ ನಾವು ಓಗೊಡಲೇಬೇಕು.
ಕೊಡದಿದ್ದರೂ ಕೂಡ ಅವನು ನಮ್ಮನ್ನು ಬಿಡುವುದಿಲ್ಲ. ಈಗ ಆಗಿರುವುದೂ ಹೀಗೆಯೇ. ಕೆಲವರಿಗೆ ಮಧ್ಯವಯಸ್ಸಿಗೆ! ಕೆಲವರಿಗೆ ನೂರು ವರ್ಷವೂ ಬಿಟ್ಟಿರುತ್ತಾನೆ. ಒಬ್ಬೊಬ್ಬರಿಗೆ ಒಂದೊಂದು ವಯಸ್ಸಿಗೆ ಕರೆದೊಯ್ಯುತ್ತಾನೆ. ಇಂತಹ ಸಂದರ್ಭದಲ್ಲಿ ನಾವು
ಯೋಚಿಸುವಾಗ ನಮ್ಮ ಹಳ್ಳಿಯ ಜನ ಹೇಳಿಕೊಳ್ಳುತ್ತಿದ್ದಂತಹ ಮಾತು ನೆನಪಿಗೆ ಬರುತ್ತದೆ. ‘ಹತ್ತು ವರ್ಷಕ್ಕೆ ಚೇಷ್ಟೆ, ಇಪ್ಪತ್ತು ವರ್ಷಕ್ಕೆ ತೀಟೆ, ಮೂವತ್ತು ವರ್ಷಕ್ಕೆ ಮದುವೆ, ನಲವತ್ತು ವರ್ಷಕ್ಕೆ ಮಕ್ಕಳು-ಮರಿ, ಐವತ್ತು ವರ್ಷಕ್ಕೆ ಚಾಳೀಸು, ಅರವತ್ತಕ್ಕೆ ಅರಳು ಮರಳು, ಎಪ್ಪತ್ತು ವರ್ಷಕ್ಕೆ ಅರಚಾಟ ಕಿರುಚಾಟ, ಎಂಭತ್ತಕ್ಕೆ ಪುಸಲಾಟ, ತೊಂಭತ್ತಕ್ಕೆ ಮಂಕಳಾಟ, ನೂರಕ್ಕೆ ಚಟ್ಟದ ಮೇಲೆ ಒಯ್ಯಾಟ.
ಅಷ್ಟೇ ಕಣ್ ಸ್ವಾಮಿ, ಆ ಯಪ್ಪ ಹತ್ತು ಅವತಾರ ಎತ್ತಿದಂತೆ ನಮ್ಮ ಅವತಾರವೂ ಮುಗಿದು ಹೋಗುತ್ತದೆ’ ಎನ್ನುತ್ತಾರೆ. ಈ ರೀತಿಯ ನಂಬಿಕೆಯನ್ನು ಹೊಂದಿದ್ದಂತಹ ನಮ್ಮ ಪೂರ್ವಜರು ಗಾದೆಗಳನ್ನು ಬಾದೆ ಎಂದು ಭಾವಿಸದೆ, ಇದು ನಮಗೆ ಬಾಲ ಭೋದೆ ಎಂದು ತಿಳಿದು ಎಚ್ಚರಿಕೆಯ ಮಾತುಗಳನ್ನು ನುಡಿಯಲ್ಲಿ ಹೇಳಿ, ನಡೆದು ತೋರಿಸಿದ್ದಾರೆ. ‘ಜಾತಸ್ಯ ಮರಣಂ ಧ್ರುವಂ’ ಎಂಬ ಸಂಸ್ಕೃತ ಶ್ಲೋಕದಂತೆ ‘ರೆಪ್ಪೆ ತೆರೆದರೆ ಜನನ, ರೆಪ್ಪೆ ಬಿಚ್ಚಿದರೆ ಮರಣ, ಮಿಸುಕಾಟವೇ ಜೀವನ’ ಎಂಬಂತೆ ಪರಿಮಳರಾವ್ ಅವರು ಬರೆದ ಚುಟುಕವನ್ನು ಓದಿದರೆ ನಮಗೆ ತಳಮಳವೇ ಇರುವುದಿಲ್ಲ.
ಹೀಗಿರುವಾಗ ಮತ್ತೆ ಮುದ್ದುರಾಮನ ಸಾಲುಗಳು ನೆನಪಾಗುತ್ತವೆ. ಯಾವ ಸುಂದರ ಹೂವು ಬಾಡಿ ಕೆಳ ಬೀಳದಿದೆ ಯಾವ ದೊರೆ ಮಣಿಮಕುಟ ಧರೆಯನಪ್ಪದಿದೆ. ಯಾವ ಸೌಂದರ್ಯ ಮುಖ ತುಸು ಸುಕ್ಕುಗಟ್ಟದಿದೆ? ಅಳಿಯದೆಯೆ ಯಾವುದಿದೆ? – ಮುದ್ದುರಾಮ. ಈ ಮೇಲಿನ ಸಾಲಿನಂತೆ ಇಲ್ಲಿ ಉಳಿಯುವುದು ಏನೂ ಇಲ್ಲ. ಉಳಿಯಲ್ಲಿ ಪೆಟ್ಟು ತಿಂದಂತೆ ಅಳಿಯುವುದೇ ಈ ಬದುಕಿನ ನಿಯಮ. ಯಾರೂ ಇಲ್ಲಿ ಶಾಶ್ವತವಲ್ಲ, ನಶ್ವರತೆ ಈ ಜಗದ ನಿಯಮ ಎಂಬ ನೀತಿಯನ್ನು ಕವಿ ಇಲ್ಲಿ ನೆನಪು ಮಾಡಿಕೊಡುತ್ತಾನೆ.
ಹೀಗೆ ಎಚ್ಚರಿಸುವ ಮೂಲಕ ನಮ್ಮ ಜೀವನವನ್ನು ಸಮಾಧಾನದ ಹಾದಿಯಲ್ಲಿ ಇರುವಷ್ಟು ದಿನ, ಇರುವಷ್ಟು ಹೊತ್ತು ಸಾಗಿಸಲೇ ಬೇಕು ಎಂಬ ಕಿವಿಮಾತನ್ನು ಆತ ಚಿತ್ತದ ನುಡಿಯ ಮೂಲಕ ಹೇಳುತ್ತಾನೆ. ನಮ್ಮ ಬಾಳು ಓಡುವ ಗಾಡಿ, ಅದರಿಂದಾಗಿ ಇದು ನಿಲ್ಲುವ ಬಾಡಿಯಲ್ಲ. ಇದನ್ನು ಅರ್ಥ ಮಾಡಿಕೊಂಡು ತಿಳಿದು ಬದುಕಬೇಕು ಎನ್ನುವುದನ್ನು ಕವಿಯ ಸಾಲುಗಳು ಎಚ್ಚರಿಸುತ್ತವೆ.
ಇತ್ತ ಬಂದವರೆಲ್ಲ ತೆರಳದಿರೆ ಎಂತು, ಮುಂದೆಂದೊ ಒಂದು ದಿನ ಸಾವು ಸನ್ನಿಹಿತ; ಈ ಭಾವ ಆಗಾಗ ಸುಳಿದರದು ಅತಿ ಕ್ಷೇಮ
ಮರಣ ನಂಟಿದೆ ಬಾಳ್ಗೆ -ಮುದ್ದುರಾಮ. ನಾವು ಏನೆಲ್ಲ ಸಂಪಾದಿಸಿದರೂ ಕೂಡ ಎಲ್ಲವನ್ನೂ ಇ ಬಿಟ್ಟು ಹೋಗಬೇಕು ಅಲ್ಲವೇ? ಅವರಿಗೆ ಇಂತಹ ಸಾವು ಬರಬಾರದಿತ್ತು ಎಂದು ಸಾಮಾನ್ಯವಾಗಿ ನಾವು ಹೇಳುತ್ತೇವೆ, ಆದರೆ ನಮಗೆ ಎಂಥ ಸಾವು ಬರುತ್ತದೆಯೋ ಯಾರಿಗೆ ಗೊತ್ತು? ಒಟ್ಟಾರೆ ಎಲ್ಲರ ಬದುಕಿನ ನೋವು ನಲಿವಿನ ನಡುವೆ ಎಚ್ಚರಿಕೆಯ ಕಾವು ಎಂದರೆ ಸಾವು.
ಅದಕ್ಕೆ ನಾವು, ನೀವು, ಅವರು ಇವರು ಎಂಬ ಯಾವುದೇ ತಾರತಮ್ಯ ಇಲ್ಲವೇ ಇಲ್ಲ. ಸಾವಿನ ಜತೆಗೆ ಈ ರೀತಿಯ ನಂಟು ನಮ್ಮ ಬಾಳಿಗೆ ಇದೆ ಎಂಬುದನ್ನು ಕವಿ ಸೂಚ್ಯವಾಗಿ ಹೇಳುತ್ತಾರೆ. ತರುಣ ಮುನಿಸಾಗರ್ ಸಂತರು ಒಂದು ಮಾತು ಹೇಳುತ್ತಾರೆ. ನಮ್ಮ ಬಟ್ಟೆಗೆ ಮ್ಯಾಚಿಂಗ್ ನೋಡುತ್ತೇವೆ, ನಮ್ಮ ಬದುಕಿಗೂ ಮ್ಯಾಚಿಂಗ್ ಇದೆ. ಆ ಮ್ಯಾಚಿಂಗ್ ಹುಟ್ಟು-ಸಾವು. ಮೊದಲು ತೊಟ್ಟಿಲಿಗೆ, ಆನಂತರ ನಮ್ಮ ಬದುಕು ಅಂತ್ಯವಾಗುವುದು ಮೆಟ್ಟಿಲಿಗೆ ಅಷ್ಟೇ.
ಆದ್ದರಿಂದ ನಾವು ಇರುವಷ್ಟು ದಿವಸ ಎಲ್ಲಾ ಹೇಗೇ ಬದುಕಿದರೂ ಮಣ್ಣಾಗಲೇಬೇಕು, ಕಣ್ಣಾಗಿಯೇ ಇರಲು ಸಾಧ್ಯವಿಲ್ಲ. ಕಣ್ಬೆಳಕಿನಿಂದ ಈ ಜಗತ್ತನ್ನು ನೋಡಿದವರು ಕಣ್ ಮುಚ್ಚಲೇಬೇಕು. ಇನ್ನು ಈ ಬಾಳಿನ ಸತ್ಯವನ್ನು ತಿಳಿಯಬೇಕಾದರೆ ಈ ಪದ್ಯವನ್ನು ಓದಲೇಬೇಕು. ಎಲ್ಲರೂ ಮಣ್ಣಲ್ಲಿ ಮಣ್ಣಾಗಲೇಬೇಕು ಬಡವ-ಬಲ್ಲಿದ ಇರಲಿ, ಸಂತ ಮುನಿ ಇರಲಿ, ಮಸಣದೆಡೆ ಹೆಜ್ಜೆ ಗತಿ ತುಸು ಹಿಂದು ಮುಂದಷ್ಟೆ, ಸಾವಂತು ನಿಶ್ಚಿತವೋ- ಮುದ್ದುರಾಮ.
ಏನೇ ಆದರೂ ನಮ್ಮ ನಾಡಿನ ಯುವೋತ್ಸಾಹತೆಯಲ್ಲಿ ಎಲ್ಲರಿಗೂ ಕಣ್ಣಾಗಿದ್ದು, ತನ್ಮೂಲಕ ತನ್ನ ನಟನೆಯಿಂದ ಎಲ್ಲರ ಮನಸ್ಸನ್ನು ಪುನೀತವಾಗಿಸುತ್ತಿದ್ದ ಎಲ್ಲರ ನೆಚ್ಚಿನ ನಟ ಪುನೀತ್ ರಾಜಕುಮಾರ್ ಇಂದು ನಭವೇರಿದ್ದಾರೆ. ನಷ್ಟವೆಂಬುದು ನಿಜ, ಇದನ್ನು ಸಹಿಸಿಕೊಳ್ಳುವುದು, ಸಾಂತ್ವನ ಗಳಿಸಿಕೊಳ್ಳುವುದು, ಸುಧಾರಿಸಿಕೊಳ್ಳುವುದು ಕಷ್ಟ. ಆದರೂ ಕೂಡ ಬದುಕು ಎನ್ನುವುದು ಮತ್ತೊಬ್ಬರಿಗೆ ಹೊರೆಯಾಗದಂತೆ ಇರುವವರ ಜತೆ ಹೆಜ್ಜೆ ಇಡಲೇಬೇಕಲ್ಲವೇ? ಹಾಗಾಗಿ ಇಂತಹ ನಷ್ಟ ಕಷ್ಟದ
ನಡುವೆಯೂ ಜೀವನದ ಅರ್ಥವನ್ನು ಸ್ಪಷ್ಟವಾಗಿ ತಿಳಿದು ಆ ಚೇತನಕ್ಕೆ ಶ್ರದ್ಧಾಂಜಲಿಯನ್ನು ಸಮರ್ಪಿಸೋಣ.
ಆ ಶ್ರದ್ಧಾಂಜಲಿಯೂ ಕೂಡ ಹೇಗೆ ಭಾವಪೂರಿತವಾಗಿ ಇರಬೇಕು ಎಂಬುದಕ್ಕೆ ಈ ಲೇಖನದ ಮೂಲಕ ಸಾಂದರ್ಭಿಕವಾಗಿ ಪು.ತಿ.ನ. ಅವರು ಬರೆದಿರುವ ಈ ಕವನವನ್ನು ನೆನಪಿಸಿಕೊಳ್ಳಬಹುದು. ಈ ಮೂಲಕ ಶ್ರದ್ಧಾಪೂರ್ವಕವಾಗಿ ನಟಸಾರ್ವಭೌಮ ರಾಜಕುಮಾರನ ಸುಪುತ್ರ ಪುನೀತ್ ರಾಜಕುಮಾರನ ಜೀವನಯಾತ್ರೆಗೆ ನಮ್ಮ ನುಡಿ ಪುಷ್ಪಾಂಜಲಿಯನ್ನು ಸಮರ್ಪಿಸೋಣ.
ಶತಕೋಟಿ ಜೀವಿಗಳ ಕಣ್ಣೀರ ಧಾರೆಯೊಳು ನನ್ನೊಂದು ಹನಿ ನಿನಗೆ ಪುನೀತ ಪುರುಷ |
ನೊಂದೆದೆಯ ಗರ್ಭದೊಳು ಬಿಸಿಯುಸಿರು ಮಿಡುಕವೊಲು,
ಕಣ್ತುಂಬಿ ಸೂಸುತಿದೆ ಪುನೀತ ಪುರುಷ|
ಕೋಟಿ ಮನಗಳ ಬೆಳಗಿ ಶತಕೋಟಿ ಹೃದಯದಲಿ
ಹಣತೆಯೊಳು ಚಾಚಿರುವ ಅಮರ ಜ್ಯೋತಿ|
ಕಣ್ಣೀರ ನೇಹದಲಿ ಹಚ್ಚಿ ಸಾಸಿರ ದೀಪ
ಬೆಳಗುತಿಹದವನಾತ್ಮ ದಿವ್ಯಜ್ಯೋತಿ
ಗಾಳಿಗೊಡ್ಡಿದ ಸೊಡರು ಮನೆಯ ಬೆಳಕನ್ನೊಮ್ಮೆ
ಕತ್ತಲೆಗೆ ಕೈಮಾಡಿ ನಿಲ್ಲಬಹುದೇ?
ವಿಶ್ವಕ್ಕೊಡ್ಡಿದ ಸೊಡರು ನಂದಿzಹೇನೊಮ್ಮೆ ಆವ ಗಾಳಿಯ ಹೊಡೆತ ಗೆಲ್ಲಬಹುದೇ? ಮನೆಯ ಬೆಳಗುವ ದೀಪ ಒಂದಾರೆ ಆರಿದರೆ
ಹೃದಯ ಬೆಳಗುವ ದೀಪ ಆರಬಹುದೇ? ಬಾಳ ಹಣತೆಯನೊಡೆದು ಬಾಳ ಕೈಬೀಸಿದರೆ ವಿಶ್ವ ಬಾಳಿನ ದೀಪ ನಂದಬಹುದೇ ||
ಶತಕೋಟಿ ಜೀವಿಗಳ ಕಣ್ಣೀರ ಧಾರೆಯೊಳು ನನ್ನೊಂದು ಹನಿ ನಿನಗೆ ಪುನೀತ ಪುರುಷ ||
(ನಿರೂಪಣೆ : ಪ್ರಶಾಂತ್ ಹೊಳೆಹೊನ್ನೂರು)