ಶಶಾಂಕ್ ಮುದೂರಿ
ಕೋವಿಡ್ ವಿಧಿಸಿದ ಲಾಕ್ ಡೌನ್ ಮತ್ತು ಮನೆಯಿಂದ ಕೆಲಸದಿಂದಾಗಿ, ನಮ್ಮ ಸಮಾಜವು ಕೆಲವು ಉತ್ತಮ ಹವ್ಯಾಸಗಳನ್ನು, ಪದ್ಧತಿ ಗಳನ್ನು ಬೆಳೆಸಿಕೊಂಡಿದೆ. ಅದನ್ನು ಮುಂದೆಯೂ ಮುಂದುವರಿಸಿಕೊಂಡುವುದು ಹೋಗುವುದು ನಿಜಕ್ಕೂ ಒಳ್ಳೆಯದು.
ಲಾಕ್‌ಡೌನ್ ಬಹುಪಾಲು ಮುಗಿದಿದೆ, ವರ್ಕ್ ಫ್ರಂ ಹೋಮ್ ಸಹ ಕಡಿಮೆಯಾಗುತ್ತಿದೆ, ಹೆಚ್ಚಿನ ಜನರು ಹಿಂದಿನಂತೆ ತಮ್ಮ ದಿನಚರಿ ಆರಂಭಿಸಿದ್ದಾರೆ. ಕಚೇರಿಗೆ ಹೋಗುವವರು ಬೆಳಗೆದ್ದು ತರಾತುರಿಯಲ್ಲಿ ಹೊರಡಲು ಆರಂಭಿಸಿದ್ದಾರೆ, ಅಂಗಡಿಯವರು ಎಂದಿನಂತೆ ಬಾಗಿಲು ತೆರೆದು ತಡರಾತ್ರಿಯ ತನಕ ವ್ಯವ ಹಾರ ನಡೆಸುತ್ತಿದ್ದಾರೆ. ಹೊರಗೆ ಸಿಕ್ಕ ಸಿಕ್ಕದ್ದನ್ನು ತಿನ್ನುವ ಅಭ್ಯಾಸವೂ ನಿಧಾನವಾಗಿ ಮರುಕಳಿಸುತ್ತಿದೆ.
ಆದರೆ ಇಷ್ಟು ದಿನ ಮನೆಯಲ್ಲಿ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸೇವಿಸಿ ಆರೋಗ್ಯವನ್ನು ಉತ್ತಮ ಪಡಿಸಿಕೊಂಡವರು, ಅದೇ ಅಭ್ಯಾಸವನ್ನು ಯಾಕೆ ಮುಂದುವರಿಸಬಾರದು? ಅವರೆಲ್ಲರೂ ಈಗ ಒಮ್ಮೆಗೇ ತಮ್ಮ ಉತ್ತಮ ಅಭ್ಯಾಸಗಳನ್ನು ಬಿಟ್ಟುಕೊಟ್ಟು, ಕೆಲಸ ಮಾಡಬೇಕೆ? ಅಥವಾ ಲಾಕ್‌ಡೌನ್ ಅವಧಿಯಲ್ಲಿ, ವರ್ಕ್ ಫ್ರಂ ಹೋಮ್ ಅವಧಿಯಲ್ಲಿ ಕಲಿತ ಉತ್ತಮ ಅಭ್ಯಾಸಗಳನ್ನು ಮುಂದುವರಿಸಬೇಕೆ? ನಿಸ್ಸಂಶಯ ವಾಗಿ, ಉತ್ತಮ ಅಭ್ಯಾಸಗಳನ್ನು ಮುಂದುವರಿಸುವುದು ಒಳ್ಳೆಯದು.
ಹಾಗಾದರೆ ಯಾವ ಹೊಸ ಅಭ್ಯಾಸಗಳನ್ನು ನಾವು ಈ ಒಂದೂವರೆ ವರ್ಷದಲ್ಲಿ ಕಲಿತಿದ್ದೇವೆ? ನಮ್ಮ ಜೀವನ, ದಿನಚರಿ ಸುಖವಾಗಿರಿಸುವಲ್ಲಿ ಅವುಗಳ ಪ್ರಾಮುಖ್ಯತೆಯೇನು?
ಹಿತಕರ ಆಹಾರ
ಹೊರಗೆ ‘ಹಾಳು ಮೂಳು’ ತಿನ್ನುವ ಅಭ್ಯಾಸಕ್ಕೆ ಕಳೆದ ಒಂದೂವರೆ ವರ್ಷದಲ್ಲಿ ಸಾಕಷ್ಟು ಕಡಿವಾಣ ಬಿದ್ದಿದೆ – ಕೆಲವು ಬಾರಿ ಅನಿವಾರ್ಯವಾಗಿ, ಕೆಲವು ಬಾರಿ ಆರೋಗ್ಯದ ದೃಷ್ಟಿಯಿಂದ. ಬೀದಿಬದಿಯಲ್ಲಿ ತಿನ್ನುವ ಪಾನಿಪೂರಿ, ಬೋಂಡ, ಗೋಬಿ, ಜಗಮಗಿಸುವ ಹೊಟೇಲ್‌ಗಳಲ್ಲಿ ಕುಡಿಯುವ ಕೋಕ್ ಪೇಯ, ಜಂಕ್ ಫುಡ್ ಎಲ್ಲವೂ ನಮ್ಮ ಆರೋಗ್ಯ ಕೆಡಿಸುತ್ತವೆ ಎಂದು ಗೊತ್ತಿದ್ದರೂ ಹಿಂದೆ ಅವನ್ನು ಸೇವಿಸುತ್ತಿದ್ದೆವು.
ಅಂತಹ ಜಂಕ್ ಫುಡ್ ಇಲ್ಲದೆಯೂ ಬದುಕು ಸಾಗಬಲ್ಲದು ಎಂದು ಕೋವಿಡ್ ಬೆದರಿಕೆಯ ದಿನಗಳು ತೋರಿಸಿ ಕೊಟ್ಟಿವೆ. ಮನೆಯಲ್ಲೇ ತಯಾರಿಸಿದ ಆಹಾರ ಹೆಚ್ಚು ಹೆಚ್ಚು ಸೇವಿಸೋಣ, ಹೆಚ್ಚು ತರಕಾರಿ, ಹಣ್ಣುಗಳನ್ನು ತಿನ್ನೋಣ, ಕೊಬ್ಬು ಜಾಸ್ತಿ ಇರುವ ಆಹಾರವನ್ನು, ಮುಖ್ಯವಾಗಿ ಮಾಂಸಾ ಹಾರವನ್ನು ಕಡಿಮೆ ಮಾಡೋಣ, ಇದರಿಂದ ಬೊಜ್ಜು ಬೆಳೆಯುವುದು ಕಡಿಮೆಯಾಗುತ್ತದೆ!
ನಡಿಗೆ ಅತ್ಯುತ್ತಮ
ವಿಶ್ವದಾದ್ಯಂತ ಕೋವಿಡ್ ಬೆದರಿಕೆಯ ಸಮಯದಲ್ಲಿ ಹೊರಗೆ ಹೋಗದೇ ಇರುವವರು ಕಂಡುಕೊಂಡ ಬಹು ಮುಖ್ಯ ಸಂಗತಿ ಎಂದರೆ ನಡಿಗೆ ತರುವ ಲಾಭ. ನಡಿಗೆಯ ಅಭ್ಯಾಸವು ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದು. ದಿನಕ್ಕೆ ಅರ್ಧಗಂಟೆಯಿಂದ ಒಂದು ಗಂಟೆಯ ನಡಿಗೆಯಿಂದಾಗಿ ದೇಹದ ತೂಕ ಹಿತವಾಗಿರುತ್ತದೆ ಮತ್ತು ಹೃದಯಕ್ಕೂ ಒಳ್ಳೆಯದು. ಈಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಮಂದಿ ಸ್ಮಾರ್ಟ್‌ವಾಚ್ ಖರೀದಿಸಿ, ತಮ್ಮ ಪ್ರತಿ ದಿನದ ನಡಿಗೆಯ ಪ್ರಮಾಣ ಮತ್ತು ಕ್ಯಾಲೊರಿ ಬರ್ನಿಂಗ್ ಲೆಕ್ಕಹಾಕುತ್ತಿರುವುದು ಒಂದು ಉತ್ತಮ ಅಭ್ಯಾಸವಾಗಿ ರೂಪುಗೊಂಡಿದೆ.
ಆನ್‌ಲೈನ್ ಯೋಗ
ಆನ್‌ಲೈನ್ ಮೂಲಕ ಯೋಗಾಭ್ಯಾಸ, ವಿವಿಧ ವ್ಯಾಯಾಮಗಳನ್ನು ಮಾಡುವ ಹವ್ಯಾಸವು ಕಳೆದ ಒಂದು ವರ್ಷದಲ್ಲಿ ಜಾಸ್ತಿಯಾಗಿದೆ. ಆ ರೀತಿ ನೀವು ಯಾವುದಾದರೂ ಆನ್‌ಲೈನ್ ಯೋಗಾಭ್ಯಾಸ ಅಥವಾ ವ್ಯಾಯಾಮದ ತರಗತಿಗೆ ಸೇರಿದ್ದರೆ, ಈಗ ಅದನ್ನು ನಿಲ್ಲಿಸದೇ, ಮುಂದುವರಿಸಿ. ಸಮಯ
ಹೊಂದಿಸಿಕೊಂಡು ಅಂತಹ ಉತ್ತಮ ಅಭ್ಯಾಸವನ್ನು ಮುಂದುವರಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ನೀವು ಕೊಡುವ ಅತ್ಯುತ್ತಮ ಕೊಡುಗೆ ಎನಿಸ ಬಲ್ಲದು.
ಗಂಭೀರ ಹವ್ಯಾಸ
ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಕಂಡುಬಂದ ಮತ್ತೊಂದು ಉತ್ತಮ ಬೆಳವಣಿಗೆ ಎಂದರೆ, ಹಲವರು ಹೊಸ ಹೊಸ ಹವ್ಯಾಸಗಳನ್ನು ರೂಢಿಸಿ ಕೊಂಡರು. ಜತೆಯಲ್ಲೇ ಮುಂಚೆ ಆಸಕ್ತಿ ಇದ್ದ, ನಡುವೆ ಕಾರಣಾಂತರದಿಂದ ಬಿಟ್ಟುಹೋಗಿದ್ದ ತಮ್ಮ ಹವ್ಯಾಸ ಮತ್ತು ಅಭಿರುಚಿಯನ್ನು ಮತ್ತೆ ಚಿಗುರಿಸಿ ಕೊಂಡರು. ಚಿತ್ರ ಬರೆಯುವುದು, ಸಂಗೀತ, ಬರವಣಿಗೆ, ಓದು, ಚೆಸ್ ಮೊದಲಾದ ಹವ್ಯಾಸಗಳು ಮತ್ತೆ ಜನಪ್ರಿಯತೆ ಗಳಿಸಿವೆ.
ಉತ್ತಮ ಹವ್ಯಾಸಗಳು ಒತ್ತಡವನ್ನು ಕಡಿಮೆ ಮಾಡಬಲ್ಲದು ಎಂದು ಅಧ್ಯಯನಗಳು ತಿಳಿಸಿವೆ. ಅಂತಹ ಹವ್ಯಾಸ ನಿಮ್ಮಲ್ಲಿದ್ದರೆ, ಅದನ್ನು ಮುಂದುವ ರಿಸಿಕೊಂಡು ಹೋಗಿ, ಬಿಡಬೇಡಿ.
ಗೆಳೆತನ
ಹಲವು ಸ್ನೇಹಿತರು ಪರಸ್ಪರ ಸಂಪರ್ಕ ಹೆಚ್ಚಿಸಿಕೊಂಡಿದ್ದು ಲಾಕ್ ಡೌನ್ ದಿನಗಳಲ್ಲಿ ಕಂಡು ಬಂತು. ಸಂದೇಶ ಕಳಿಸುವ ಮೂಲಕ, ಫೋನ್ ಮಾಡುವ ಮೂಲಕ, ವಿಡಿಯೋ ಕಾಲ್ ಮಾಡುವ ಮೂಲಕ ಹಳೆಯ ಗೆಳೆಯರು ಒಂದಾದರು, ಮುಂಚೆ ಇದ್ದ ಗೆಳೆತನ ಇನ್ನಷ್ಟು ಗಟ್ಟಿಯಾಯಿತು. ಅದು ಮುಂದು ವರಿಯಲಿ. ಸ್ನೇಹವು ಒಂದು ಅಮೂಲ್ಯ ಆಸ್ತಿ.
ಕೈ ತೊಳೆಯುವುದು
ಇದನ್ನು ಹೇಳಿದರೆ ಸಿಲ್ಲಿ ಎನಿಸಬಹುದು. ಆದರೆ ಜಗತ್ತಿನಾದ್ಯಂತ, ಈ ಒಂದು ವರ್ಷದಲ್ಲಿ ಜನರು ಹೆಚ್ಚು ಹೆಚ್ಚು ಶುಚಿಯಾಗಿದ್ದಾರಂತೆ! ಆಗಾಗ ಕೈ ತೊಳೆಯುವುದು, ಸ್ನಾನ ಮಾಡುವುದು, ಬಟ್ಟೆಯನ್ನು ಬೇಗನೆ ಶುಚಿಗೊಳಿಸುವುದು ಮೊದಲಾದ ಅಭ್ಯಾಸಗಳು ಈಚಿನ ದಿನಗಳಲ್ಲಿ ಹೆಚ್ಚಾಗಿವೆ. ಕೋವಿಡ್‌ರ-೧೯ ಸೋಂಕಿನ ಭಯ ಇರಲಿ, ಬಿಡಲಿ, ಆಗಾಗ ಸೋಪು ಹಾಕಿ ಕೈತೊಳೆಯುವುದರಿಂದ ನೆಗಡಿ,- ಮೊದಲಾದ ಸೋಂಕಿಗೆ ಒಳಗಾಗುವ ಸಂಭವ ತೀರ ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ. ಆದ್ದರಿಂದ ಈ ಅಭ್ಯಾಸ ನಿಮ್ಮ ದಿನಚರಿಯ ಭಾಗವಾಗಿ ಮುಂದುವರಿಯಲಿ!