Tuesday, 13th May 2025

ಅಯ್ಯರ್‌, ಸಿದ್ದಾರ್ಥ್ ಆಟ, ಮುಂಬೈ ಇಂಡಿಯನ್ಸ್’ಗೆ ಆಘಾತ

ದುಬಾೖ: ತನ್ನ ಎರಡನೇ ಐಪಿಎಲ್ ಪಂದ್ಯವನ್ನಾಡುತ್ತಿರುವ ವೆಂಕಟೇಶ್ ಅಯ್ಯರ‍್ ಅವರ ಬಿರುಸಿನ ಬ್ಯಾಟಿಂಗ್‌, ಕೋಲ್ಕತಾ ತಂಡಕ್ಕೆ ಏಳು ವಿಕೆಟ್‌ ಗೆಲುವು ತಂದಿತು. ಈ ಮೂಲಕ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಅಂಕಪಟ್ಟಿಯಲ್ಲಿ ಟಾಪ್ ನಾಲ್ಕ ರಿಂದ ಕೆಳಗಿಳಿದಿದೆ.

ಟಾಸ್‌ ಸೋತು ಬಾಟಿಂಗಿಗೆ ಇಳಿಸಲ್ಪಟ್ಟ ಮುಂಬೈ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 155 ರನ್‌ ಗಳಿಸಿದರೆ. ಕೋಲ್ಕತಾ 15.1 ಓವರ್‌ಗಳಲ್ಲಿ 3 ವಿಕೆಟಿಗೆ 159 ರನ್‌ ಬಾರಿಸಿತು. ಚೇಸಿಂಗ್‌ ವೇಳೆ ಯುವ ಆಟಗಾರ ವೆಂಕಟೇಶ್‌ ಅಯ್ಯರ್‌ 53 , ರಾಹುಲ್‌ ತ್ರಿಪಾಠಿ ಅಜೇಯ 74 ರನ್‌ ಪೇರಿಸಿ ಅರ್ಧಶತಕ ಪೂರ್ತಿ ಗೊಳಿಸಿದರು. ಶುಭಮನ್‌ ಗಿಲ್‌ (13), ನಾಯಕ ಮಾರ್ಗನ್‌ (7) ಅಗ್ಗಕ್ಕೆ ಔಟಾದರು. ಜಸ್‌ ಪ್ರೀತ್‌ ಬುಮ್ರಾ ಮೂರು ವಿಕೆಟ್‌ ಕಿತ್ತು ಮಿಂಚಿದರು.

ಕ್ವಿಂಟನ್‌ ಡಿ ಕಾಕ್‌ ಅವರ ಅರ್ಧ ಶತಕ, ಅವರು ತಂಡಕ್ಕೆ ಮರಳಿದ ನಾಯಕ ರೋಹಿತ್‌ ಶರ್ಮ ಅವರೊಂದಿಗೆ ಮೊದಲ ವಿಕೆಟಿಗೆ ದಾಖಲಿಸಿದ 78 ರನ್‌ ಜತೆಯಾಟ ಮುಂಬೈ ಸರದಿಯ ಆಕರ್ಷಣೆಯಾಗಿತ್ತು.

ರೋಹಿತ್‌-ಡಿ ಕಾಕ್‌ 10ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ಕೆಕೆಆರ್‌ಗೆ ಸವಾಲಾದರು. ಆದರೆ ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ಕೈರನ್‌ ಪೊಲಾರ್ಡ್‌ ಅವರಂಥ ಬಿಗ್‌ ಹಿಟ್ಟರ್‌ಗಳಿದ್ದರೂ ದ್ವಿತೀಯಾರ್ಧದಲ್ಲಿ ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್‌ ನಿರೀಕ್ಷಿತ ಬಿರುಸು ಪಡೆಯಲಿಲ್ಲ. ಕೊನೆಯ 5 ಓವರ್‌ ಗಳಲ್ಲಿ 49 ರನ್‌ ಗಳಿಸಿದ್ದರಿಂದ ತಂಡದ ಮೊತ್ತ ನೂರೈವತ್ತರ ಗಡಿ ದಾಟಿತು.

ಕ್ವಿಂಟನ್‌ ಡಿ ಕಾಕ್‌ 42 ಎಸೆತಗಳಿಂದ 55 ರನ್‌ ಹೊಡೆದರು. 4 ಫೋರ್‌, 3 ಸಿಕ್ಸರ್‌ ಸಿಡಿಸಿ ಅಬ್ಬರಿಸಿದರು. ಇದು ಐಪಿಎಲ್‌ನಲ್ಲಿ ಡಿ ಕಾಕ್‌ ಬಾರಿಸಿದ 16ನೇ ಅರ್ಧ ಶತಕ. ರೋಹಿತ್‌ ಶರ್ಮ ಗಳಿಕೆ 30 ಎಸೆತಗಳಿಂದ 33 ರನ್‌ (4 ಬೌಂಡರಿ). ಮುಂಬೈ ಕಪ್ತಾನನನ್ನು ಔಟ್‌ ಮಾಡಿದ ಸುನೀಲ್‌ ಕೋಲ್ಕತಾಕ್ಕೆ ಮೊದಲ ಯಶಸ್ಸು ತಂದಿತ್ತರು.

ಸೂರ್ಯಕುಮಾರ್‌ ಯಾದವ್‌ ರನ್ನಿಗಾಗಿ ಪರದಾಡಿದರು. 10 ಎಸೆತಗಳಿಂದ 5 ರನ್‌ ಮಾಡಿ ಪ್ರಸಿದ್ಧ್ ಕೃಷ್ಣ ಅವರಿಗೆ ವಿಕೆಟ್‌ ಒಪ್ಪಿಸಿದರು. ಇಶಾನ್‌ ಕಿಶನ್‌ ಗಳಿಕೆ 13 ಎಸೆತಗಳಿಂದ 14 ರನ್‌ (1 ಸಿಕ್ಸರ್‌). ಪೊಲಾರ್ಡ್‌ ಅಬ್ಬರಿಸುವ ಸೂಚನೆ ನೀಡಿದರೂ ಆಗಲೇ ಮುಂಬೈ ಇನ್ನಿಂಗ್ಸ್‌ ಅಂತಿಮ ಹಂತಕ್ಕೆ ಬಂದಿತ್ತು. 15 ಎಸೆತ ಗಳಿಂದ 21 ರನ್‌ ಮಾಡಿದ ಪೊಲಾರ್ಡ್‌ ಕೊನೆಯ ಓವರ್‌ನಲ್ಲಿ ರನೌಟಾದರು. ಕೃಣಾಲ್‌ ಪಾಂಡ್ಯ (12) ವಿಕೆಟ್‌ ಕೂಡ ಅಂತಿಮ ಓವರ್‌ನಲ್ಲಿ ಉರುಳಿತು. ಕೋಲ್ಕತಾ ಪರ ಫರ್ಗ್ಯುಸನ್‌ ಮತ್ತು ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್‌ ಉರುಳಿಸಿದರು.

ಕೆಕೆಆರ್‌ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮ ವಿಶಿಷ್ಟ ದಾಖಲೆ ಸ್ಥಾಪಿಸಿದರು. ಅವರು ಒಂದೇ ಐಪಿಎಲ್‌ ತಂಡದ ವಿರುದ್ಧ ಸಾವಿರ ರನ್‌ ಪೂರೈಸಿದ ಮೊದಲ ಬ್ಯಾಟ್ಸ್‌ ಮನ್‌ ಎನಿಸಿದರು.

ಈ ಮೈಲುಗಲ್ಲು ನೆಡಲು ರೋಹಿತ್‌ 18 ರನ್‌ ಗಳಿಸಬೇಕಿತ್ತು. ಪಂದ್ಯದ ಪ್ರಥಮ ಎಸೆತದಲ್ಲೇ ಬೌಂಡರಿ ಸಿಡಿಸುವ ಮೂಲಕ ರೋಹಿತ್‌ ಅಬ್ಬರಿಸತೊಡಗಿದರು. 18 ರನ್‌ ಗಳಿಸುವಷ್ಟರಲ್ಲಿ 4 ಸಲ ಚೆಂಡನ್ನು ಬೌಂಡರಿಗೆ ಬಡಿದಟ್ಟಿದರು. ಕೆಕೆಆರ್‌ ವಿರುದ್ಧ ರೋಹಿತ್‌ ಈ ವರೆಗೆ ಒಂದು ಶತಕ ಹಾಗೂ 6 ಅರ್ಧ ಶತಕ ಬಾರಿಸಿದ್ದಾರೆ.

ರೋಹಿತ್‌ ಹೊರತುಪಡಿಸಿದರೆ ವಾರ್ನರ್‌ ಪಂಜಾಬ್‌ ವಿರುದ್ಧ 943, ಕೆಕೆಆರ್‌ ವಿರುದ್ಧ 915; ಕೊಹ್ಲಿ ಡೆಲ್ಲಿ ವಿರುದ್ಧ 909, ಚೆನ್ನೈ ವಿರುದ್ಧ 895; ಧವನ್‌ ಪಂಜಾಬ್‌ ವಿರುದ್ಧ 894 ರನ್‌ ಬಾರಿಸಿದ್ದಾರೆ.

Leave a Reply

Your email address will not be published. Required fields are marked *