ಸುರೇಶ ಗುದಗನವರ
ತಂಗಿಯ ನೆನಪಿನಲ್ಲಿ ಈ ಮಹಾಶಯರು ಒಂದು ಬೆಕ್ಕಿನ ಮನೆಯನ್ನು ನಿರ್ಮಿಸಿದ್ದಾರೆ. ಇಲ್ಲಿರುವ ನೂರಾರು ಬೆಕ್ಕುಗಳಿಗೆ ಮನೆ ಮಂದಿ ಎಲ್ಲರಿಂದಲೂ ಪ್ರೀತಿಯ ಸೇಚನ.
ಇಂದಿನ ಜೀವನ ಶೈಲಿಯಲ್ಲಿ ಸಾಕು ಪ್ರಾಣಿಗಳ ಬಗ್ಗೆ ಜನರ ಆಸಕ್ತಿ ಹೆಚ್ಚುತ್ತಿದೆ. ಮನೆಯಲ್ಲೊಂದು ಮುದ್ದಾದ ನಾಯಿಯೋ, ಬೆಕ್ಕೋ, ಮೊಲವೋ, ಗಿಳಿಯೋ ಇರಲಿ ಎಂದು ಹಲವರು ಬಯಸುತ್ತಾರೆ. ಹಳ್ಳಿಗಳಲ್ಲಿ ಮನೆಗೆ ಒಂದು ಬೆಕ್ಕು ಸಾಕುವ ಸಂಪ್ರದಾಯ ಇತ್ತು. ಆದರೆ ಈಗ ಅದೂ ಕೂಡ ಕಡಿಮೆಯಾಗುತ್ತಿದೆ. ನಗರ ಪ್ರದೇಶಗಳಲ್ಲಿ ನಾಯಿಗಳನ್ನು ಮನೆಗಳಲ್ಲಿ ಸಾಕುವವರೇ ಹೆಚ್ಚು. ವಿವಿಧ ತಳಿಗಳ ನಾಯಿಗಳು ಮನೆಯಲ್ಲಿರು ವದು ಈಗಿನ ಪ್ಯಾಷನ್.
ವಿವಿಧ ನಾಯಿಗಳನ್ನು ಮನೆಗಳಲ್ಲಿ ಸಾಕೋದೇನು ಈ ಕಾಲದಲ್ಲಿ ವಿಭಿನ್ನ ಅಂತ ಅನ್ನಿಸೋದಿಲ್ಲ. ಆದರೆ ಗುಜರಾತ ಕಛ್ನ ಗಾಂಧಿಧಾಮ್ ನಗರದಲ್ಲೊಂದು ಮನೆಯಿದೆ. ಈ ಮನೆಯ ತುಂಬ ನೂರಾರು ಬೆಕ್ಕುಗಳು ಸರಾಗವಾಗಿ ಓಡಾಡಿಕೊಂಡಿರುತ್ತವೆ. ಮನೆಯ ತುಂಬ ಬೆಕ್ಕುಗಳದ್ದೇ ಕಲರವ. ಬೆಕ್ಕನ್ನು ಕಂಡರೆ ಓಡಿಸುವವರ ಹಾಗೂ ಅದನ್ನು ಕೆಟ್ಟಶಕುನವೆಂದು ಪ್ರತಿಪಾದಿಸುವವರ ಮಧ್ಯೆ ವ್ಯಕ್ತಿಯೊಬ್ಬರು ವಿಭಿನ್ನ ವ್ಯಕ್ತಿತ್ವವಾಗಿ ನಿಲ್ಲು ತ್ತಾರೆ. ಅವರೇ ಉಪೇಂದ್ರ ಗೋಸ್ವಾಮಿಯವರು.
ಗುಜರಾತ್ ಕಛ್ನ ಗಾಂಧಿಧಾಮ್ ನಗರದಲ್ಲಿ ವಾಸಿಸುತ್ತಿರುವ ಉಪೇಂದ್ರ ಗೋಸ್ವಾಮಿಯವರು ಖಾಸಗಿ ಹಡಗು ಕಂಪನಿಯಲ್ಲಿ ಕಾರ್ಯನಿರ್ವಹಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಪೂಜಾ ಗೋಸ್ವಾಮಿ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ್ದಾರೆ. 19990 ರಲ್ಲಿ ನಿಧನರಾದ ದಿವಂಗತ ಸಹೋದರಿ ಮೀನಾ ಅವರ ನೆನಪಿನಲ್ಲಿ ಉಪೇಂದ್ರ ಗೋಸ್ವಾಮಿಯವರು 500 ಚದರ ಅಡಿಗಳಷ್ಟು ಪ್ರದೇಶಗಳಲ್ಲಿ ನಾಲ್ಕು ಎಸಿ ಕೊಠಡಿಗಳನ್ನು ಹೊಂದಿದ 12 ಹಾಸಿಗೆಗಳ ಜೊತೆಗೆ 16 ಕುಟೀರಗಳನ್ನು, 50 ಕುಳಿತುಕೊಳ್ಳುವ ಸ್ಟ್ಯಾಂಡು ಗಳು, ಹೆರಿಗೆ ಸೌಲಭ್ಯದ ಜೊತೆಗೆ ಸ್ಟಿಂಗ್ಗಳನ್ನು ಹೊಂದಿದ ಬೆಕ್ಕಿನ ಮನೆಯನ್ನು ೨೦೧೭ರಲ್ಲಿ ಸ್ಥಾಪಿಸಿರುವದು. ಬೆಕ್ಕಿನ ಮನೆಯಲ್ಲಿ ಬೆಳೆದ ಬೆಕ್ಕುಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಾಯಂಕಾಲ ಬೆಕ್ಕುಗಳು ಪ್ರಾಣಿಗಳ ಸಂಬಂಧಪಟ್ಟ ಪ್ರದರ್ಶನಗಳನ್ನು ವೀಕ್ಷಿಸಲು ಮಿನಿ ಥಿಯೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಕ್ಕುಗಳಿಗೆ ಆಹಾರವನ್ನು ದಿನಕ್ಕೆ ಮೂರು ಬಾರಿ ನೀಡಲಾಗುತ್ತಿದೆ. ಅಲ್ಲದೇ ಬೆಕ್ಕುಗಳಿಗೆ ನಿಯಮಿತವಾಗಿ ಪಶುವೈದ್ಯರಿಂದ ತಪಾಸಣೆ ಮಾಡಲಾಗುತ್ತದೆ. ಸಧ್ಯ 200ಕ್ಕೂ ಹೆಚ್ಚು ಬೆಕ್ಕುಗಳು ವಾಸಿಸುತ್ತಿವೆ. ಬೆಕ್ಕಿನ ಮನೆಯ ನಿರ್ವಹಣೆಗಾಗಿ ತಿಂಗಳಿಗೆ ಅಗತ್ಯವಿರುವ 1.5 ಲಕ್ಷ ರೂಪಾಯಿಗಳ ಪ್ರತಿಶತ 90ರಷ್ಟು ವೆಚ್ಚ ವನ್ನು ದಂಪತಿಗಳೇ ಭರಿಸುತ್ತಾರೆ. ಸ್ವಲ್ಪಭಾಗವನ್ನು ಕೆಲವರು ಕೊಡುಗೆಯಾಗಿ ನೀಡುತ್ತಾರೆ. ‘ನಾವು ಪ್ರತಿವರ್ಷ ದಿವಂಗತ ತಂಗಿಯ ಹುಟ್ಟುಹಬ್ಬವನ್ನು
ಆಚರಿಸುತ್ತೇವೆ. ಹೀಗೆ ಆಚರಿಸುವಾಗ ಒಮ್ಮೆ ಬೆಕ್ಕು ಮನೆಗೆ ಪ್ರವೇಶಿಸಿ, ಹುಟ್ಟು ಹಬ್ಬದ ಕೇಕನ್ನು ತಿಂದಿತು. ಅಂದಿನಿಂದ ಆ ಬೆಕ್ಕು ನಮ್ಮೊಂದಿಗೆ ಉಳಿದಿದೆ. ಅದನ್ನು ನಮ್ಮ ಸಹೋದರಿ ಎಂದು ನಂಬಿದ್ದೇವೆ’ ಎಂದು ಉಪೇಂದ್ರ ಗೋಸ್ವಾಮಿ ಹೇಳುತ್ತಾರೆ. ಅಂದಿನಿಂದ ಅವರು ಬೆಕ್ಕುಗಳನ್ನು ಸಾಕುವ ಹವ್ಯಾಸದಲ್ಲಿ ತೊಡಗಿಕೊಂಡರು. ಅದು ಈಗ ಕ್ಯಾಟ್ ಗಾರ್ಡನ್ ಆಗಿ ಪ್ರಸಿದ್ಧಿ ಪಡೆದಿದೆ.
ಪ್ರವಾಸಿ ತಾಣ
ಕ್ಯಾಟ್ ಗಾರ್ಡನ್ ಕನಿಷ್ಠ ಪ್ರವೇಶ ಶುಲ್ಕದೊಂದಿಗೆ ಪ್ರತಿ ಭಾನುವಾರ ನಾಲ್ಕು ಗಂಟೆಗಳ ಕಾಲ ಸಂದರ್ಶಕರಿಗೆ ತೆರೆದಿರುತ್ತದೆ. ಬ್ರೌನ್, ಗ್ರೇ, ಬ್ಲಾಕ್, ವೈಟ್ ಸೇರಿದಂತೆ ದೇಶಿಯ ತಳಿಯ ಬೆಕ್ಕುಗಳಿಂದ ಹಿಡಿದು ವಿದೇಶಿ ತಳಿಯ ಬೆಕ್ಕುಗಳೂ ಇವೆ. ದಂಪತಿಗಳು ಬೆಕ್ಕುಗಳನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಾರೆ.
ಉಪೇಂದ್ರ ಗೋಸ್ವಾಮಿ ಮಾತ್ರವಲ್ಲದೇ ಅವರ ಪತ್ನಿ, ಕುಟುಂಬದವರು ಕೂಡಾ ಈ ಬೆಕ್ಕಿನ ಪ್ರೇಮದಲ್ಲಿ ಕೈ ಜೋಡಿಸಿದ್ದಾರೆ. ಪ್ರಾಣಿಗಳ ಮೇಲಿನ ವಿಶೇಷ ಪ್ರೀತಿ, ಪ್ರೇಮ, ಸಂಬಂಧಗಳನ್ನು ನೋಡಲು ಗೋಸ್ವಾಮಿ ಅವರ ಬೆಕ್ಕಿನ ಮನೆಗೆ ಭೇಟಿ ನೀಡಬಹುದು!