Wednesday, 14th May 2025

ಕಾರುಗಳು ಹಾರುವುದು ಯಾವಾಗ ?

ಹಾಹಾ ಕಾರ್‌

ಇಂದುಧರ ಹಳೆಯಂಗಡಿ

ಮನುಷ್ಯನ ಕನಸುಗಳಿಗೆ ಮಿತಿ ಇಲ್ಲ. ಆಗಸದಲ್ಲಿ ಹಾರಬೇಕೆಂಬ ಆಸೆಗೆ ಕೊನೆ ಇಲ್ಲ. ವೇಗವಾಗಿ ರಸ್ತೆಯ ಮೇಲೆ ಚಲಿಸುವ ಕಾರುಗಳು, ಆಗಸದಲ್ಲಿ ಹಾರು ವಂತಾದರೆ ಬೇಗನೆ ಗುರಿ ಮುಟ್ಟಬಹುದೆಂಬ ತವಕ. ಮುಂದಿನ ದಿನಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು, ಹಾರುವ ಕಾರುಗಳು ಜನಪ್ರಿಯ ಗೊಂಡರೆ ಅಚ್ಚರಿಯಿಲ್ಲ.

ಕ್ಲೈನ್ ವಿಷನ್ ಎಂಬ ಕಂಪನಿಯು ಒಂದು ಹಾರುವ ಕಾರನ್ನು ತಯಾರಿಸಿದ್ದು, ಇದೇ ಜೂನ್ 28 ರಂದು ಸ್ಲೊವಾಕಿಯಾದ ನೈಟ್ರಾ ಮತ್ತು ಬ್ರಾಟಿಸ್ಲಾವಾ ನಗರಗಳ ನಡುವೆ ಯಶಸ್ವಿ ಪರೀಕ್ಷಾ ಹಾರಾಟವನ್ನು ನಡೆಸಿದೆ. ಎರಡು ನಗರಗಳ ನಡುವೆ, ಈ ಹಾರುವ ಕಾರು ಸುಮಾರು 35 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಾಡಿದೆ ಎಂದು ಕ್ಲೈನ್ ವಿಷನ್ ಪ್ರಕಟಣೆಯಲ್ಲಿ ತಿಳಿಸಿದೆ. ರಸ್ತೆಯಲ್ಲಿ ತೆಗೆದುಕೊಳ್ಳುವ ಸಮಯಕ್ಕಿಂತಲೂ ವೇಗವಾಗಿ, ಹಾರುವ ಕಾರು ತನ್ನ ಪ್ರಯಾಣ ವನ್ನು ಪೂರ್ಣಗೊಳಿಸಿದೆ. ಈ ಹಿಂದೆಯೂ ಹಲವರು ಹಾರುವ ವಾಹನಗಳ ಯಶಸ್ವಿ ಪ್ರಯತ್ನ ನಡೆಸಿದರೂ, ಕೆಲವೊಂದು ಕಾರಣಗಳಿಂದ,
ಅದನ್ನು ವಾಣಿಜ್ಯಕ ಉತ್ಪಾದನೆ ಮಾಡಲು ವಿಫಲರಾಗಿದ್ದಾರೆ.

ಕರ್ಟಿಸ್ ಆಟೊಪ್ಲೇನ್
1903 ರಲ್ಲಿ ರೈಟ್ ಬ್ರದರ್ಸ್ ತಮ್ಮ ವಿಮಾನದ ಪ್ರಯೋಗಾರ್ಥ ಹಾರಾಟ ನಡೆಸಿದ ಒಂದೂವರೆ ದಶಕದ ನಂತರ, ಹಲವರು ಫ್ಲೈಯಿಂಗ್ ಕಾರಿನ ಕನಸನ್ನು ಬೆನ್ನಟ್ಟುತ್ತಾ ಹೋದರು. ಗ್ಲೆನ್ ಕರ್ಟಿಸ್ ಎಂಬವರು 1917 ರಲ್ಲಿ, ಅಂತಹ ಒಂದು ವಾಹನದ ಮೊದಲ ಪ್ರಯತ್ನವನ್ನು ಮಾಡಿದ್ದರು. ಅವರ ಅಲ್ಯೂಮಿನಿಯಂ ಆಟೊಪ್ಲೇನ್, 40 ಅಡಿ ಉದ್ದದ ಮೂರು ರೆಕ್ಕೆಗಳನ್ನು ಹೊಂದಿತ್ತು. ಕಾರಿನ ಹಿಂಭಾಗದಲ್ಲಿ ನಾಲ್ಕು ಬ್ಲೇಡಿನ ಪ್ರೊಪೆಲ್ಲರ್ ಅನ್ನು ಅಳವಡಿಸಲಾಗಿತ್ತು. ಈ ಆಟೊಪ್ಲೇನ್ ಕುಂಟುತ್ತಾ ಹೋಗುವಂತೆ, ಕೆಲವು ಜಿಗಿತಗಳನ್ನು ಮಾಡಿತ್ತು.

ಆರೋಬಿಲ್ 
1937 ರಲ್ಲಿ ವಾಲ್ಡೋ ವಾಟರ್ಮ್ಯಾನ್ ಅಭಿವೃದ್ಧಿಪಡಿಸಿದ ಆರೋಬಿಲ, ಸ್ಟೂಡ್ಬೇಕರ್-ವಿಮಾನ ಎರಡರ ಹೈಬ್ರಿಡ್ ಆಗಿತ್ತು. ಆಟೊಪ್ಲೇನಿನಂತೆ, ಇದರಲ್ಲೂ, ವಾಹನದ ಹಿಂಭಾಗಕ್ಕೆ ಪ್ರೊಪೆಲ್ಲರ್ ಅನ್ನು ಜೋಡಿಸಲಾಗಿತ್ತು. ಆದರೆ, ಹಣದ ಕೊರತೆಯಿಂದಾಗಿ ಈ ಯೋಜನೆ ಯಶಸ್ವಿಯಾಗಲಿಲ್ಲ.

ಏರ್ಫಿಬಿಯನ್
ಸ್ಟೀಮ್ ಎಂಜಿನ್ ಆವಿಷ್ಕಾರಕನ ದೂರದ ಸಂಬಂಧಿಯಾಗಿದ್ದ ರಾಬರ್ಟ್ ಫುಲ್ಟನ್ 1946 ರಲ್ಲಿ ಏರ್ಫಿಬಿಯಾನ್ ಅನ್ನು ಅಭಿವೃದ್ಧಿಪಡಿಸಿದರು. ಹಾರಾಡುವ ಕಾರಿನ ಬದಲಾಗಿ, ರಸ್ತೆಯಲ್ಲಿ ಸಂಚರಿಸುವ ವಿಮಾನದ ತಂತ್ರವನ್ನು ಫುಲ್ಟನ್ ಅಳವಡಿಸಿದರು. ರಸ್ತೆ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿಮಾನದ ರೆಕ್ಕೆಗಳು ಮತ್ತು ಬಾಲದ ಭಾಗವನ್ನು ತೆಗೆಯಬಹುದಿತ್ತು. ವಿಮಾನವನ್ನು ಕಾರಾಗಿ ಪರಿವರ್ತಿಸಲು ಕೇವಲ ಐದು ನಿಮಿಷಗಳನ್ನು ತೆಗೆದುಕೊಂಡಿತ್ತು. ಫೆಡರಲ್
ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಯ ಪೂರ್ವವರ್ತಿಯಾದ ಸಿವಿಲ್ ಏರೋನಾಟಿಕ್ಸ್ ಅಡ್ಮಿನಿಸ್ಟ್ರೇಷನ್ನಿಂದ ಪ್ರಮಾಣೀಕರಿಸಲ್ಪಟ್ಟ ಮೊದಲ ಹಾರುವ
ಕಾರು ಏರ್ಫಿಬಿಯನ್.

ಇದು 150 ಎಚ್‌ಪಿ, ಆರು ಸಿಲಿಂಡರ್ ಎಂಜಿನ್ ಹೊಂದಿದ್ದು, ಗಂಟೆಗೆ 120 ಮೈಲುಗಳಷ್ಟು ದೂರ ಹಾರುತ್ತಿತ್ತು ಮತ್ತು ಗಂಟೆಗೆ 50 ಮೀಟರ್ ವೇಗದಲ್ಲಿ ರಸ್ತೆಯಲ್ಲಿ ಚಲಿಸುತ್ತಿತು. ಯಶಸ್ಸಿನ ಹೊರತಾಗಿಯೂ, ಸೂಕ್ತ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಏರ್ಫಿಬಿಯನ್ ವಿಫಲವಾಯಿತು.

ಕೊನ್ವ್ ಏರ್ ಕಾರ್
1940 ರ ದಶಕದಲ್ಲಿ, ಎರಡು-ಬಾಗಿಲಿನ ವಿಮಾನವನ್ನು ಕನ್ಸಾಲಿಡೇಟೆಡ್-ವಲ್ಟಿ ಅಭಿವೃದ್ಧಿಪಡಿಸಿದ್ದರು. ಕೋನ್ವ್ ಏರ್ ಕಾರ್ 1947 ರಲ್ಲಿ ಸುಮಾರು ಒಂದು ಗಂಟೆಯ ಹಾರಾಟ ನಡೆಸಿತು. ಆದರೆ, ಮೂರನೇ ಹಾರಾಟದ ಸಂದರ್ಭದಲ್ಲಿ ಅಪಘಾತಕ್ಕೀಡಾದಾಗ ಏರ್‌ಕಾರನ್ನು ವಾಣಿಜ್ಯಕವಾಗಿ ಉತ್ಪಾದಿಸುವ ಯೋಜನೆ ಗಳು ಕೊನೆಗೊಂಡವು.

ಅವ್ರೋಕಾರ್
ಮಿಲಿಟರಿ ಬಳಕೆಗಾಗಿ ವಿನ್ಯಾಸಗೊಳಿಸಲಾದ ಮೊದಲ ಹಾರುವ ಕಾರು ಅರ‍್ವೊಕಾರ್. ಇದು ಕೆನಡಿಯನ್ ಮತ್ತು ಬ್ರಿಟಿಷ್ ಮಿಲಿಟರಿ ನಡುವಿನ ಜಂಟಿ ಪ್ರಯತ್ನ. 1959ರಲ್ಲಿ ಮೊದಲ ಹಾರಾಟ ನಡೆಸಿದ್ದ ಅವ್ರೋಕಾರ್, ಸೇನೆಯಲ್ಲೂ ಸೇರ್ಪಡೆಗೊಂಡಿತ್ತು. ಆದರೆ, 1961ರಲ್ಲಿ ಸೈನ್ಯದಿಂದ ನಿವೃತ್ತಿ ಪಡೆಯಿತು.

ಏರೋಕಾರ್
ಏರ್ಫಿಬಿಯನ್ ಮತ್ತು ರಾಬರ್ಟ್ ಫುಲ್ಟನ್ ಅವರಿಂದ ಪ್ರೇರಿತರಾದ ಮೌಲ್ಟನ್ ಮೋಲ್ಟ ಟೇಲರ್ ಬಹುಶಃ ಇದುವರೆಗಿನ ಅತ್ಯಂತ ಯಶಸ್ವಿ ಫ್ಲೈಯಿಂಗ್ ಕಾರನ್ನು ರಚಿಸಿದ್ದಾರೆ. 10-ಅಡಿ ಉದ್ದದ ಡ್ರೈವ್ ಶಾಫ್ಟ್, ಎಂಜಿನ್ಅನ್ನು ಪುಶರ್ ಪ್ರೊಪೆಲ್ಲರ್‌ಗೆ ಜೋಡಿಸಲಾಗಿತ್ತು. ಇದು ಗಾಳಿಯಲ್ಲಿ ಗಂಟೆಗೆ 120 ಮೈಲು (193 ಕಿ.ಮೀ) ವೇಗದಲ್ಲಿ ಪ್ರಯಾಣ ಮಾಡಿತ್ತು. ಇದು ಎಫ್ಎಎ ಅನುಮೋದನೆ ಪಡೆದ ಎರಡನೇ ಮತ್ತು ಕೊನೆಯ ರಸ್ತೆಯಲ್ಲಿ ಸಂಚರಿಸುವ ಫ್ಲೈಯಿಂಗ್ ಕಾರ್ ಎನಿಸಿದೆ. 1970 ರಲ್ಲಿ, ಫೋರ್ಡ್ ಕಂಪನಿಯು, ಈ ವಾಹನವನ್ನು ಮಾರಾಟ ಮಾಡುವುದಕ್ಕೆ ಮುಂದೆ ಬಂದರೂ, ತೈಲ ಬಿಕ್ಕಟ್ಟು ಅದಕ್ಕೆ ತಣ್ಣೀರೆರೆಯಿತು.

ಹಾರುವ ಸೈಕಲ್ 
ಪ್ಯಾರಾವೆಲೊ ಎಂಬ ಬ್ರಿಟಿಷ್ ಕಂಪನಿಯೊಂದು ನಿರ್ಮಿಸಿದ್ದ ಹೊಸ ವಿನ್ಯಾಸದ ಬೈಸಿಕಲ್ ಒಂದು, 2013ರಲ್ಲಿ ಹಾರಾಟ ನಡೆಸುವಲ್ಲಿ ಯಶಸ್ವಿಯಾಗಿತ್ತು. ಸುಮಾರು 4000 ಅಡಿ ಎತ್ತರಕ್ಕೆ ಹಾರಬಲ್ಲ ಶಕ್ತಿಯಿದ್ದ ಬೈಸಿಕಲ್ ಹಲವರ ಕನಸಿಗೆ ಆಶಾಕಿರಣ ಎನಿಸಿತ್ತು. ಆದರೆ, ಅದು ಇನ್ನೂ ಮಾರುಕಟ್ಟೆ ಪ್ರವೇಶಿಸಿಲ್ಲ. ಹೀಗಿರುವಾಗ, ಇತ್ತೀಚೆಗೆ ಯಶಸ್ವಿ ಪರೀಕ್ಷಾ ಹಾರಾಟವನ್ನು ನಡೆಸಿರುವ ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು ಯಾವಾಗ ಮಾರುಕಟ್ಟೆಗೆ ಬರಬಹುದು ಎಂದು ನಿಖರವಾಗಿ ಹೇಳುವುದು ಕಷ್ಟ. ಹಲವು ಸಾಂಸ್ಥಿಕ, ವಾಣಿಜ್ಯಕ ಸವಾಲುಗಳನ್ನೆದುರಿಸಿ ಒಂದಲ್ಲ ಒಂದು ದಿನ ಹಾರುವ ಕಾರು ಜನಸಾಮಾನ್ಯರ ಕೈಗೆ ಸಿಗುವುದಂತೂ ನಿಶ್ಚಿತ.

ಫ್ಲೈಯಿಂಗ್ ಮಾರುತಿ
ಭಾರತದ ಮೂಲದ ಲಂಡನ್ ನಿವಾಸಿ ಸಂಶೋಧಕ, ಎ.ಕೆ.ವಿಶ್ವನಾಥ್ ಅವರು, ಮಾರುತಿ ೮೦೦ ಕಾರಿನಿಂದ  ರುವ ಕಾರನ್ನು ತಯಾರಿಸಿದ್ದಾಗಿ 2011ರಲ್ಲಿ
ಹೇಳಿಕೊಂಡಿದ್ದರು. ಕಾರಿನ ಮೇಲ್ಛಾವಣಿಗೆ ರೋಟರ್ ಬ್ಲೇಡ್ ಅಂಟಿದ್ದು, ಕಾರಿನ ಚಕ್ರ ಕಮಾನುಗಳು ವಿಶೇಷ ವಿಸ್ತರಣಾ ವೈಶಿಷ್ಟ್ಯ ಹೊಂದಿದ್ದು, ಅವುಗಳನ್ನು
ನಿರ್ವಾತವನ್ನು (ವ್ಯಾಕ್ಯೂಂ) ರಚಿಸಲು ಬಳಸಲಾಗುತ್ತಿತ್ತು. 2011ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಈ ಕಾರನ್ನು ತೋರಿಸಲಾಗಿತ್ತು. ಅಲ್ಲಿ ಇದ್ದ ಹಲವು ಫೈಟರ್ ಜೆಟ್ ಗಳಿಗಿಂತಲೂ, ಇದು ಹೆಚ್ಚಿನ ಆಕರ್ಷಣೆಯನ್ನು ಪಡೆದಿತ್ತು! ಆದರೆ, ನಂತರದ ದಿನಗಳಲ್ಲಿ ಇದು ಎಲ್ಲಿ ಹಾರಿತು ಎಂದು ಗೊತ್ತಾಗಲೇ ಇಲ್ಲ.

Leave a Reply

Your email address will not be published. Required fields are marked *