Wednesday, 14th May 2025

ಮಂಗಳನ ಮೇಲೆ ಚೀನಾ

ಶಶಾಂಕ್ ಮುದೂರಿ

ಮಂಗಳ ಗ್ರಹ ಎಂದರೆ ಮೊದಲಿನಿಂದಲೂ ಮನುಜನಿಗೆ ಬಹು ಆಸಕ್ತಿ. ಭೂಮಿಯ ಹತ್ತಿರ ಇರುವ, ಭೂಮಿಯನ್ನೇ ಹೋಲುವ ಮೇಲ್ಮೈ ಹೊಂದಿರುವು ದರಿಂದಲೋ ಏನೋ, ಈಚಿನ ವರ್ಷಗಳಲ್ಲಿ ಮಂಗಳನ ಮೇಲೆ ಹಲವು ಸಾಹಸಗಳನ್ನು ಮಾನವ ನಡೆಸುತ್ತಿದ್ದಾನೆ.

ಅಮೆರಿಕದ ನಾಸಾ ಸಂಸ್ಥೆಯು ಈಗಾಗಲೇ ಮಂಗಳನ ಅಂಗಳದಲ್ಲಿ ರೋವರ್ ಇಳಿಸಿ, ಚಿತ್ರಗಳನ್ನು, ವಿಡಿಯೋಗಳನ್ನು ಚಿತ್ರಿಸಿ, ಭೂಮಿಗೆ ತರಿಸಿಕೊಂಡಿದೆ. ಮಾತ್ರವಲ್ಲ, ಆಯ್ದ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಸಾರ್ವಜನಿಕರ ಮತ್ತು ಖಗೋಳ ಆಸಕ್ತರ ಅವಗಾಹನೆಗೆ ಬಿಡುಗಡೆ ಮಾಡಿದೆ. ಈಗ ಅಂತಹದೇ ಸಾಹಸ ಕಾರ್ಯ ನಡೆಸಿ, ಮಂಗಳನಿಂದ ವಿಡಿಯೋಗಳನ್ನು ತರಿಸಿದ ಎರಡನೆಯ ದೇಶವಾಗಿ ಹೊರಹೊಮ್ಮಿದೆ ಚೀನಾ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು
ಮುಂದಿರುವ ಚೀನಾ ದೇಶವು, ಸಮಾನಾಂತರವಾಗಿ ಬಾಹ್ಯಾಕಾಶ ಯಾನ ಮತ್ತು ಸಂಶೋಧನೆಯಲ್ಲೂ ದಾಪುಗಾಲು ಹಾಕುತ್ತಿರುವುದು ಒಂದು ವಾಸ್ತವ.

ಇದನ್ನು ಬೆರಗುಗಣ್ಣಿನಿಂದ ವಿಶ್ವದ ಜನರು ನೊಡುತ್ತಿದ್ದರೆ, ಅಮೆರಿಕ ಮತ್ತು ಯುರೋಪಿನ ದೇಶಗಳು ಚೀನಾದ ಬಾಹ್ಯಾಕಾಶ ಸಾಹಸಗಳನ್ನು ತುಸು ಎಚ್ಚರಿಕೆ ಯಿಂದಲೇ ನೋಡುತ್ತಿವೆ. ಏಕೆಂದರೆ ಚೀನಾ ಹೊಂದಿರುವ ಮಹತ್ವಾಕಾಂಕ್ಷೆ ಜಗಜ್ಜಾಹೀರಾಗಿದ್ದು, ವಿಶ್ವದ ನಂಬರ್ ಒನ್ ದೇಶವಾಗಲು ಅದು ಪ್ರಯತ್ನಿ
ಸುತ್ತಿರುವುದೂ ಗುಟ್ಟಾಗಿ ಉಳಿದಿಲ್ಲ. ಆದ್ದರಿಂದ, ಚೀನಾವು ಆಗಸದಲ್ಲಿ ಏನೇ ನಡೆಸಿದರೂ ಅದು ಕೌತುಕ ಮತ್ತು ಎಚ್ಚರಿಕೆಯನ್ನು ಒಮ್ಮೆಗೇ ಹುಟ್ಟಿಸಬಲ್ಲದು!
ಚೀನಾವು ಮಂಗಳನ ಮೇಲೆ ತನ್ನ ರೋವರ್‌ನ್ನು ಸುರಕ್ಷಿತವಾಗಿ ಇಳಿಸಿದ್ದು ಮಾತ್ರವಲ್ಲ, ಈಗ ಅಲ್ಲಿಂದ ವಿಡಿಯೋ ಮತ್ತು ಆಡಿಯೋವನ್ನು ಭೂಮಿಗೆ ತರಿಸಿ ಕೊಂಡಿದೆ.

ಅಲ್ಲಿರುವ ಝುರೋಂಗ್ ರೋವರ್ ವಾಹನವು, ವಿಡಿಯೋ ಮತ್ತು ಆಡಿಯೋವನ್ನು ಸ್ಪಷ್ಟವಾಗಿ ದಾಖಲಿಸಿದ್ದು, ಅದನ್ನು ಚೀನಾವು ತನ್ನ ಸಂಶೋಧನಾ ಭಾಗವಾಗಿ ಸಂಗ್ರಹಿಸುತ್ತಿದೆ. ಜತೆಯಲ್ಲೇ, ಅಂತಹ ವಿಡಿಯೋದ ಆಯ್ದ ಭಾಗಗಳನ್ನು ಬಿಡುಗಡೆ ಮಾಡಿದೆ. ಮಂಗಳನ ಅಂಗಳದಲ್ಲಿ ಕೆಳಗಿಳಿದ ಝುರೋಂಗ್, ಸುಮಾರು ೭೭೪ ಅಡಿಗಳಷ್ಟು ಪಯಣವನ್ನು ಮಾಡಿದ್ದು, ವಿವಿಧ ಕೋನಗಳಲ್ಲಿ ವಿಡಿಯೋ ಮಾಡಿ ಭೂಮಿಗೆ ರವಾನಿಸಿದೆ.

ಚೀನಾ ಬಿಡುಗಡೆ ಮಾಡಿದ ವಿಡಿಯೋ ಮಂಗಳನ ವಿಶಾಲ ಮರುಭೂಮಿಯಂತಹ ವಾತಾವರಣವನ್ನು ತೋರಿಸುತ್ತಿದೆ. ಆಡಿಯೋದಲ್ಲಿ ಅಷ್ಟೇನೂ ವಿಶೇಷವಿಲ್ಲ; ರೋವರ್ ವಾಹನವು ಚಲಿಸುವ ಸದ್ದು, ಚಕ್ರಗಳ ಕಿರ್ ಕಿರ್ ಸದ್ದು ಪ್ರಧಾನವಾಗಿದೆ. ಸಂಶೋಧನೆ ಮತ್ತು ತಂತ್ರಜ್ಞಾನದ ಬಳಕೆಯಲ್ಲಿ ಮಂಗಳನ ನೆಲ ಈಗ ಹೊಸ ಆಡೊಂಬೊಲವಾಗಿದೆ. ಮಂಗಳನ ಮೇಲ್ಮೈಯ ಸ್ಥಿರ ಚಿತ್ರಗಳು ಎಷ್ಟೇ ಕೌತುಕ ಹುಟ್ಟಿಸಿದರೂ, ಅವೆಲ್ಲಾ ಈಗ ಹಳೆಯ ಸುದ್ದಿ. ಇನ್ನೇನಿದ್ದರೂ ಮಂಗಳನ
ಮೇಲ್ಮೈಯ ವಿಡಿಯೋಗಳೇ ಪ್ರಧಾನ ಆಕರ್ಷಣೆ, ಮನುಷ್ಯನ ನವನವೋನ್ಮೇಷ ಸಾಹಸಗಳ ಫಲಗಳು.

Leave a Reply

Your email address will not be published. Required fields are marked *