ಶಾರದಾ ಕೌದಿ
ಹನ್ನೆರಡನೇ ಶತಮಾನದಲ್ಲಿ ಹೊಸ ಸಮಾಜವನ್ನು ಸರ್ವೋದಯ ತತ್ವದ ತಳಹದಿಯಲ್ಲಿ ನಿರ್ಮಾಣ ಮಾಡುವ ಪಣ ತೊಟ್ಟಿದ್ದ ಶರಣರು, ಸ್ವಾಭಿಮಾನದ ಬದುಕಿಗೆ ಆತ್ಮವಿಶ್ವಾಸ, ಸಮಾನತೆಗಳನ್ನು ಅಳವಡಿಸಿಕೊಂಡರು. ಆ ಮೂಲಕ
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಪಾದಿಸಿದರು.
ಸ್ವತಂತ್ರ ಭಾರತದ ಪ್ರಜಾರಾಜ್ಯ ವ್ಯವಸ್ಥೆಯ ಸಂವಿಧಾನದಲ್ಲಿ ಪ್ರಸ್ತಾಪಿಸಲಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳಂತಹ
ಒಳ್ಳೆಯ ತತ್ವಗಳನ್ನು ಬಸವಣ್ಣನವರು 12 ನೇ ಶತಮಾನದಲ್ಲೇ ರೂಢಿಗೊಳಿಸಿದ್ದು ವಿಶೇಷ. ಬಸವಾದಿ ಶರಣರು ತಮ್ಮ ವಚನಗಳಲ್ಲಿ ಅಡಕವಾದ ಪ್ರಜಾಪ್ರಭುತ್ವದ ತತ್ವಗಳ ಅನುಷ್ಠಾನಕ್ಕಾಗಿ ಪ್ರಜೆಗಳ ಕಲ್ಯಾಣ ಬಯಸಿ ಹಗಲಿರುಳು ಶ್ರಮಿಸಿದರು.
ಅನುಭವ ಮಂಟಪವೆಂಬ ಸಂಸತ್ತಿನಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಿ ಸಮಾಜೋಧಾರ್ಮಿಕ ಕೆಲಸ ಕೈಗೊಂಡರು.
ಅಲ್ಲಮಪ್ರಭು, ಸಿದ್ಧರಾಮ, ಚೆನ್ನಬಸವಣ್ಣ, ಮಾದಾರ ಚೆನ್ನಯ್ಯ, ಸತ್ಯಕ್ಕ, ಅಕ್ಕಮಹಾದೇವಿ, ಲಕ್ಕಮ್ಮ, ನಾಗಲಾಂಬಿಕೆ, ಅಕ್ಕನಾಗಮ್ಮ ಮೋಳಿಗೆ ಮಹಾದೇವಿ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಮುಂತಾದ ಶರಣರು ಬಸವಣ್ಣನವರ ಜಾತ್ಯತೀತ ಪ್ರಜ್ಞೆಯ ಚೇತನಗಳಾಗಿ ಹೊರಹೊಮ್ಮಿದರು. ಅಂದಿನ ಅವರ ಆಶಯಗಳು ಭಾರತೀಯ ಸಂವಿಧಾನದ ನಿಜ ಆಶಯಗಳಿಗೆ ಹೊಂದುತ್ತವೆ.
ಬಸವಣ್ಣನವರು ಕಂಡ ಕನಸು, ಅವರ ವಿಚಾರಧಾರೆಗಳನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಡಾ.ಅಂಬೇಡ್ಕರ್ ಆ
ತತ್ವಗಳನ್ನು ದೇಶದುದ್ದಕ್ಕೂ ಸಾಕಾರಗೊಳಿಸಿದ್ದಾರೆ. ಬಸವಾದಿ ಶರಣರು ವಚನಗಳ ರೂಪದಲ್ಲಿ ನಮ್ಮೊಂದಿಗಿದ್ದಾರೆ. ಬಸವಣ್ಣ ನವರು ಗ್ರಾಮಗಳ ಭೇಟಿ, ವಾಸ್ತವ್ಯ,ಅಸ್ಪೃಶ್ಯರ ಮನೆಯಲ್ಲಿ ಪ್ರಸಾದ ಸ್ವೀಕಾರ, ಕಾಯಕದ ಮಹತ್ವ, ವೃತ್ತಿ ಗೌರವ, ಎಲ್ಲರಿಗೂ ಸಮಾನ ಸಾಮಾಜಿಕ ಹಕ್ಕು, ಶೈಕ್ಷಣಿಕ ಹಕ್ಕು, ವಾಕ್ ಸ್ವಾತಂತ್ರ್ಯ ಜಾತಿ ನಿರ್ಮೂಲನೆ ಮುಂತಾದ ಪ್ರಜಾಪ್ರಭುತ್ವದ ತತ್ವಗಳನ್ನು ನೈತಿಕ ತಳಹದಿಯ ಮೇಲೆ ಮಾನವೀಯ ಮೌಲ್ಯಗಳಾದ ದಯೆ, ಕರುಣೆ, ಪ್ರೀತಿಯಿಂದ ಜಾರಿಗೊಳಿಸಿದ್ದು ವಿಶೇಷ. ಶರಣರು ಸಾರಿದ ನೈತಿಕ ಮೌಲ್ಯಗಳು ವಚನಸಾಹಿತ್ಯದ ಮೂಲಕ ಇಡೀ ಜಗತ್ತಿಗೆ ದಾರಿದೀಪ.
ಕಾಯಕ ಸಿದ್ಧಾಂತ ಅನುಕರಿಸಿ ಪ್ರಜಾಪ್ರಭುತ್ವದೆಡೆ ಸಾಗಿದ ಶರಣರು ಕಾಯಕಕ್ಕೆ ಸತ್ಯ ಶುದ್ಧತೆ ನೀಡಿ ಕಾಯಕದ ಘನತೆ ಹೆಚ್ಚಿಸಿದರು. ಕಾಯಕದ ತಾಣವೆ ಸ್ವರ್ಗ. ‘ಅಯ್ಯಾ ಎಂದರೆ ಸ್ವರ್ಗ ಎಲವೋ ಅಂದರೆ ನರಕ’ ಎಂದ ಶರಣರು ‘ನಂಬಿ ಕರೆದರೆ ಓ ಎಂಬನೆ ಶಿವನು‘ ಎಂದೆನ್ನುತ್ತಾ ‘ದೇಹವೇ ದೇವಾಲಯ’ ಎಂದರು. ಈ ರೀತಿ ದೇವರನ್ನು ಕಾಣುವ ಸರಳ ಮಾರ್ಗ ತೋರಿ ದೇವಾಲಯದ ಪ್ರವೇಶ ಇಲ್ಲದ ಜನಾಂಗಕ್ಕೆ ಮಾನವೀಯತೆ ಮೆರೆದರು ಶರಣರು.
ದುರ್ಬಲರು ಅಳುಕಿನಿಂದ ಜೀವಿಸುವದನ್ನು ಖಂಡಿಸಿ ಕಾಯಕದ ಮೇಲೆ ಆತನ ಜಾತಿ ಇದೆ ಎನ್ನುವಲ್ಲಿ ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ ಎಂದು ಸಮಾಜಕ್ಕೆ ತಿಳಿಹೇಳಿ ‘ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಲಯಕ್ಕೆ, ಕುಲವೊಂದೆ ತನ್ನ ತಾ ಅರಿದವಂಗೆ’ ಎಂಬ ಮಾನವೀಯ ಮೌಲ್ಯ ಎತ್ತಿ ಹಿಡಿದರು.
ದುಡಿಯುವವರಿಗೆ ತಕ್ಕ ಪ್ರತಿಫಲ ದೊರೆಯಬೇಕೆಂದರು. ಅಸಂಗ್ರಹದ ಕುರಿತು ಆಯ್ದಕ್ಕಿ ಲಕ್ಕಮ್ಮ ಹೇಳತಾಳೆ ‘ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯ? ಈಸಕ್ಕಿ ಆಸೆ ನಮಗ್ಯಾಕೆ’ ಎಂದು ಗಂಡನಿಗೇ ಬುದ್ಧಿ ಹೇಳುವ ಪರಿ ಅದ್ಭುತ. ಭ್ರಷ್ಟಾಚಾರ ನಿರ್ಮೂಲನೆಯ, ಅಸಂಗ್ರಹದ ಕುರಿತಾದ ಬಸವಣ್ಣನವರ ವಚನ – ಹೊನ್ನಿನೊಳಗೊಂದೆಳೆಯ, ಸಿರಿಯೋಳ ಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಭ್ರಷ್ಟಾಚಾರ ನಿರ್ಮೂಲನೆಗೆ ಹೇಳಿದಂತಿರುವ ಕಸಗುಡಿಸುವ ಸತ್ಯಕ್ಕನ ವಚನ – ‘ಲಂಚ ವಂಚನಕ್ಕೆ ಕೈಯ್ಯಾನದ ಭಾಷೆ, ಬಟ್ಟೆ ಯಲ್ಲಿ ಹೊನ್ನು ವಸ ಬಿದ್ದಿದ್ದಡೆ, ಕೈಮುಟ್ಟಿ ಎತ್ತಿದೆ ನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಶಂಭುಜಕ್ಕೇಶ್ವರ.
ದಾಸೋಹಕ್ಕೆ ಮಹತ್ವ
ದಾಸೋಹ ತತ್ವಕ್ಕೆ ಮಹತ್ವ ನೀಡಿದ ಶರಣರು ಹಂಚಿಕೊಂಡು ತಿನ್ನುವ ಮಾನವೀಯ ಮೌಲ್ಯ ಪ್ರತಿಪಾದಿಸಿದರು. ಕಾಗೆ ಒಂದಗುಳ ಕಂಡರೆ ಕರೆಯದೆ ತನ್ನ ಬಳಗವನೆಲ್ಲ, ಕೋಳಿ ಒಂದು ಗುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವನೆಲ್ಲ 12 ನೇ ಶತಮಾನದ ನೈಜ ಜನತಂತ್ರದ ಮೌಲ್ಯಗಳನ್ನು ಎತ್ತಿ ಹಿಡಿದ ಶರಣರು ಸಮಾಜದ ಚಿಕಿತ್ಸಕರಾಗಿ ರೂಪಗೊಂಡವರು.
ಇಡೀ ವಿಶ್ವವೇ ಅನುಸರಿಸಬಹುದಾದ, ನಮ್ಮ ಸಂವಿಧಾನದ ಸಾರದಂತಿರುವ ‘ಕಳಬೇಡ, ಕೋಲಬೇಡ, ಹುಸಿಯ ನುಡಿಯಬೇಡ ..’ ಎಂಬ ಬಸವಣ್ಣನವರ ಸಪ್ತ ಸೂತ್ರಗಳ ವಚನವೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಾರಿಯಾಗಿದೆ. ಬಸವಾದಿ ಶರಣರ ವಚನಗಳು ಹಸಿದವರಿಗೆ ಅನ್ನ ನೀಡುವ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮಾನವೀಯ ಧರ್ಮ. ಜಿಡ್ಡು ಗಟ್ಟಿದ ಆ ಕಾಲದಲ್ಲಿ
ನವಸಮಾಜ ಕಟ್ಟಿದರು. 12 ನೇ ಶತಮಾನದ ತಮ್ಮ ಕಾಲ ಮೀರಿ 21 ನೇ ಶತಮಾನದ ವಿಚಾರಗಳನ್ನು ಹೊಂದಿದ್ದ ಅವರ ದೂರ ದೃಷ್ಟಿ ಸಾಕ್ಷಿಯಾಗಿದೆ. ಪ್ರಗತಿಪರ ವಿಚಾರ ಬಿತ್ತಿ ಬೆಳೆಸುವಲ್ಲಿ ಅವರ ಮಾನವೀಯತೆ ಕಾಣಬಹುದು.
ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ, ಅಯ್ಯಾ ಎಂದರೆ ಸ್ವರ್ಗ, ಎಲವೊ ಅಂದರೆ ನರಕ, ಇವನಾರನ ಇವನಾರವ ಎಂದೆನಿಸದಿರಯ್ಯಾ ಎನ್ನುವ ಮೂಲಕ ಮಾನವತಾವಾದಕ್ಕೆ ಕಾಯಕಲ್ಪ ನೀಡಿದರು.
ಮಹಿಳಾ ಸಮಾನತೆ
ಬಸವಣ್ಣನವರು ಲೋಕಹಿತ ಕಾರ್ಯಗಳಲ್ಲಿ ಮಹಿಳೆಗೆ ಸಮಾನ ಅವಕಾಶ ಕಲ್ಪಿಸಿದರು. ಕೆಳವರ್ಗದ ಮಹಿಳೆಯರು ಕೂಡ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಉನ್ನತ ಸ್ಥಾನ ಗಳಿಸಿದರು. ಅನೇಕ ಮಹಿಳೆಯರು ವಚನ ಕಾರ್ತಿಯರಾಗಿ, ಅನುಭಾವಿಗಳಾಗಿ ಹೊರಹೊಮ್ಮಿದರು. ಅಸ್ಪೃಶ್ಯರನ್ನು ಅಪ್ಪಿಕೊಂಡರು, ಒಪ್ಪಿಕೊಂಡರು. ಶರಣ ಸಂಸ್ಕೃತಿ ಯಲ್ಲಿ ಹೆಣ್ಣುಮಗಳು ಮದುವೆ ಯಾಗದೇ ವೈರಾಗ್ಯ ಜೀವನ ನಡೆಸಬಹುದೆಂದರು.
ಯಾವುದೋ ಒಂದು ಪರಸ್ಥಿತಿ ಯ ಒತ್ತಡಕ್ಕೆ ಸಿಲುಕಿ ದೇಹ ಮಾರಾಟ ಮಾಡುವ ಮಹಿಳೆಯರಿಗೂ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟು ಮಾನವೀಯ ಮೌಲ್ಯ ತೋರಿದರು. ಬಸವಣ್ಣನವರು ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆಯಿಂದ ವರ್ತಿಸಬೇಕೆಂಬ ವಿಚಾರವನ್ನು ‘ಆನು ಒಲಿದಂತೆ ಹಾಡುವೆನು ಕೂಡಲ ಸಂಗಮದೇವ ನಿಮಗೆ ಕೇಡಿಲ್ಲವಾಗಿ’ ಎಂಬ ವಚನದ ಮೂಲಕ ತಿಳಿಪಡಿಸುತ್ತಾ ನಮಗಿರುವ ಸ್ವಾತಂತ್ರ್ಯವನ್ನು ಅನುಭವಿಸುವ ಸಂದರ್ಭದಲ್ಲಿ ಇತರರಿಗೆ ತೊಂದರೆಯಾಗದಂತೆ, ಕೇಡಾಗದಂತೆ ಎಚ್ಚರವಹಿಸುವ ಹೊಣೆಗಾರಿಕೆ ಕುರಿತಾಗಿಯೂ ಹೇಳಿದ್ದಾರೆ.
‘ದಯವಿಲ್ಲದ ಧರ್ಮವಾವುದಯ್ಯ?’ಎಂದು ಹೇಳಿದ ಶರಣ ಧರ್ಮ ಮಾನವೀಯ ಧರ್ಮ. ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗನ ಶರಣರೆ ಕುಲಜರು ಎನ್ನುವಲ್ಲಿ ಮಾನವೀಯ, ಪ್ರೀತಿಯ ಮೌಲ್ಯ ಬಿತ್ತಿದ್ದಾರೆ. ಬಸವಾದಿ ಶರಣರು ವಿಶ್ಲೇಷಿಸದೇ ಇರುವ ವಿಷಯಗಳೇ ಇಲ್ಲ.
12ನೇ ಶತಮಾನದಲ್ಲಿ ಶರಣರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ಪೂರ್ಣವಾಗಿ ಅಳವಡಿಸಿಕೊಂಡಿದ್ದರೆ ಇಂದು ಇಹಲೋಕ ಸ್ವರ್ಗವಾಗಿರುತ್ತಿತ್ತು. ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಾಗಿ ಶರಣ ಸಂಸ್ಕೃತಿಯ ನೆಲಗಟ್ಟಿನ ಮೇಲೆ ನಾವು ಕಳೆದು ಕೊಂಡಿರುವುದೇನು? ನಮಗೀಗ ತುಂಬಾ ತುರ್ತಾಗಿ ಬೇಕಿರುವುದೇನು? ಎಂಬ ಚಿಂತನೆಯ ಅವಶ್ಯಕತೆ ಇದೆ.
ನಮ್ಮ ಸಂಸ್ಕೃತಿಗೆ ನಮ್ಮ ಕೊಡುಗೆ ಏನು? ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಾನವೀಯ ಮೌಲ್ಯಗಳ ಸ್ಥಾಪನೆಗೆ ಬಸವಾದಿ ಶರಣರು ನಮಗೆ ನೀಡಿದ ಚಿಂತನೆಯ ಸಾರವನ್ನು ಮತ್ತೆ ಮನನ ಮಾಡಿಕೊಳ್ಳಬೇಕಿದೆ.