Tuesday, 13th May 2025

ಭಯದ ತಡೆಗೋಡೆಗಳನ್ನು ತೆರವುಗೊಳಿಸೋಣ

ಬಿ.ಪ್ರಕಾಶ್ ವಜ್ಜಲ್ ಮಾರಲಭಾವಿ

ನಮ್ಮಿಂದ ಈ ಕೆಲಸ ಆಗುವುದಿಲ್ಲ ಎಂದು ಮನಸ್ಸು ನಿಶ್ಚಯಿಸಿದರೆ, ನಿಜಕ್ಕೂ ಆಗುವುದೇ ಇಲ್ಲ. ಇಂತಹದೊಂದು ಕೆಲಸ ಮಾಡಿ ಮುಗಿಸಲು ಸಾಧ್ಯ ಎಂದು ಛಲದಿಂದ ಮುನ್ನುಗ್ಗಿದಾಗಲೇ ನಮ್ಮಿಂದ ಹೊಸ ಹೊಸ ದಾಖಲೆ ಬರೆಯಲು ಸಾಧ್ಯ.

ಆತನಿಗೆ ಒಂದು ಕನಸು. ಒಂದು ಮೈಲಿ ಓಟವನ್ನು ನಾಲ್ಕು ನಿಮಿಷಗಳ ಒಳಗೆ ಓಡಿ ದಾಖಲೆ ಮಾಡಬೇಕೆನ್ನುವ ಕನಸು. ಸ್ವೀಡನ್ ದೇಶದ ಗುಂಡರ್ ಹೇಗ್ ಎಂಬವರು ಈ ನಿಟ್ಟಿನಲ್ಲಿ ಪ್ರಯತ್ನಿಸಿ ಒಂದು ಮೈಲಿ ಓಟವನ್ನು 1945 ರಲ್ಲಿ ನಾಲ್ಕು ನಿಮಿಷ 1.4 ಸೆಕೆಂಡುಗಳಿಗೆ ಗುರಿಯನ್ನು ತಲುಪಿರುವುದೇ ಅಂತಿಮವಾಗಿತ್ತು.

ಅದಕ್ಕಾಗಿ ಎಷ್ಟೋ ಜನ ಅನುಭವಿ ಓಟಗಾರರು ಪ್ರಯತ್ನಿಸಿ, ವಿಫಲರಾಗಿ ನಮ್ಮಿಂದ ಆಗದ ಕೆಲಸ ಎಂದು ಸುಮ್ಮನಾಗಿದ್ದರು.
ನಾಲ್ಕು ನಿಮಿಷದ ಒಳಗಡೆ ಓಡುವುದು ಅಸಾಧ್ಯದ ಮಾತು, ಒಂದು ವೇಳೆ ಓಡಿದರೂ ಆ ವ್ಯಕ್ತಿ ತನ್ನ ದೇಹಕ್ಕೆ ವಿಪರೀತ ಹಾನಿ
ಮಾಡಿಕೊಂಡು, ಜೀವದ ಹಂಗು ತೊರೆದು ಓಡಬೇಕಾಗುತ್ತದೆ.

ಇಷ್ಟಾದರೂ ಅಲ್ಲಿ ಒಂದು ಪವಾಡವೆ ನಡೆಯಬೇಕು ಎಂದು ವೈದ್ಯರು, ಕ್ರೀಡಾತಜ್ಞರು, ಕ್ರೀಡಾಪಟುಗಳು ಭಾವಿಸಿದ್ದರು. ಈತ ಸುಮ್ಮನೆ ಕೂಡಲಿಲ್ಲ ಯಾರೇ ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳದೆ ಒಂದು ಮೈಲಿ ಓಟವನ್ನು ನಾಲ್ಕು ನಿಮಿಷಗಳ ಒಳಗೆ ಓಡಿ ತಲುಪಲೇಬೇಕೆಂದು ನಿರ್ಧರಿಸಿಯಾಗಿತ್ತು. ನಿಯಮಿತ ಅಭ್ಯಾಸ ಆರಂಭಿಸಿದ. ಕೆಲವು ಸಾರಿ ಬಿದ್ದು ತನ್ನ ಮೊಳಕಾಲಿಗೆ ಗಾಯ ಮಾಡಿಕೊಂಡ. ವೈದ್ಯರು ಸುಮಾರು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಿದರು.

ಗುಣಮುಖನಾದ ಕೂಡಲೇ ಪುನಃ ಅಭ್ಯಾಸ ಆರಂಭಿಸಿದ. ಇವನ ಕನಸನ್ನು ಕಂಡು ಸಹ ಓಟಗಾರರು ಗೇಲಿ ಮಾಡಿದರು. ಒಂದು ದಿನ ಆ ಕನಸನ್ನು ನನಸು ಮಾಡಿಕೊಳ್ಳುವ ದಿನ ಬಂದೇ ಬಿಟ್ಟಿತೆಂದು ತಿಳಿದ. ಅಂದು ಧೈರ್ಯದಿಂದ ಹೋಗಿ ಓಡಲು ನಿಂತುಕೊಂಡ. ಇನ್ನೇನು ಕೆಲವೇ ಸೆಕೆಂಡುಗಳಲ್ಲಿ ಓಡಬೆನ್ನುವಷ್ಟರಲ್ಲಿ ಒಮ್ಮಿಂದೊಮ್ಮಲೆ ತಲೆಸುತ್ತು ಬಂದು
ಕೆಳಗೆ ಬಿದ್ದ. ವೈದ್ಯರು ಪರೀಕ್ಷೆ ಮಾಡಿ ನೋಡಿ ಇವನಿಗೆ ಓಡಲಾಗುವುದಿಲ್ಲ ವಿಶ್ರಾಂತಿಯ ಅಗತ್ಯವಿದೆ ಎಂದರು.

ಮತ್ತೆ ವೈಫಲ್ಯ. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು ಪುನಃ ಅಭ್ಯಾಸ ಆರಂಭಿಸಿದ. ಈ ಬಾರಿ ಓಟದ ಯುದ್ಧಕ್ಕೆ ಸಿದ್ಧನಾಗಿದ್ದ. 1954 ರ ಮೇ ಆರರಂದು ಲಂಡನ್ನಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಓಡಿ ಒಂದು ಮೈಲಿ ಗುರಿಯನ್ನು 3:59.4 ಸೆಕೆಂಡಿಗೆ ತಲುಪಿದ. ನೋಡುತ್ತಿದ್ದವರೆಲ್ಲ ಮೂಗಿನ ಮೇಲೆ ಬೆರಳು ಇಟ್ಟುಕೊಂಡರು. ಆಗ ವಿಶ್ವವೇ ಇವನತ್ತ ಮುಖಮಾಡಿ ನಿಂತಿತು. ಆ ಓಟಗಾರರ ಹೆಸರು ಡಾ.ರೋಜರ್ ಬ್ಯಾರಸ್ಟರ್.

ಇವರ ದಾಖಲೆ 46 ದಿನ ಮಾತ್ರ ಇತ್ತು. ಅದು ಬೇರೆ ವಿಷಯ. ಇದರ ಜತೆ, ಇವರು ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ ಮಾಡಿ, ನರರೋಗ ತಜ್ಞರಾಗಿ, ಹಲವು ಸಂಶೋಧನೆಗಳನ್ನು ಸಹ ನಡೆಸಿದರು. ಇವರೇನಾದರು ಬೇರೆಯವರ ಮಾತಿಗೆ ಕಿವಿಕೊಟ್ಟು ನನ್ನ
ಕೈಯಲ್ಲಿ ಆಗದು ಎಂದು ಕಾರ್ಯ ನಿಲ್ಲಿಸಿದ್ದರೆ ವಿಶ್ವದಾಖಲೆಯನ್ನು ಮಾಡಲಾಗುತ್ತಿರಲಿಲ್ಲ. ಗಣಿತ ವಿಷಯದಲ್ಲಿ ಫೈಲಾದೆ ನೆಂದು ಕೊರಗುತ್ತ ಕುಳಿತ್ತಿದ್ದರೆ ಸಚಿನ್ ತೆಂಡೂಲ್ಕರ್ ಇಂದು ‘ಕ್ರಿಕೆಟ್ ದೇವರು’ ‘ಕ್ರಿಕೆಟ್ ದಂತಕಥೆ’ಯಾಗುತ್ತಿರಲಿಲ್ಲ.

ಪೋಲಿಯೋ ಪೀಡಿತನಾಗಿದ್ದೇನೆ ಎಂದು ಬಿ. ಎಸ್ ಚಂದ್ರಶೇಖರ್ ತನ್ನ ಅಂಗವೈಕಲ್ಯದ ಕುರಿತು ಹತಾಶರಾಗಿದ್ದರೆ, ಅದೇ ಪೋಲಿಯೋ ಕೈಯನ್ನು ಬಳಸಿಕೊಂಡು ವಿಪರೀತ ಎನಿಸುವ ಗೂಗ್ಲಿಗಳನ್ನು ಎಸೆದು ಹಲವಾರು ಟೆಸ್ಟ್ ಪಂದ್ಯಗಳ ವಿಜಯಕ್ಕೆ ತನ್ನ ಕೊಡುಗೆ ನೀಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ವಿಶ್ವದ ಸರ್ವಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗುತ್ತಿರಲಿಲ್ಲ. ಒಬ್ಬ ಕನ್ನಡಕ ಹಾಕಿದ ಇಂಜಿನಿಯರ್ ಹೇಗೆ ಕ್ರಿಕೆಟರ್ ಆಗೋಕೆ ಸಾಧ್ಯ ಅನ್ನುವವರ ಎದುರಿಗೆನೇ ಪಂದ್ಯವೊಂದರ ಇನ್ನಿಂಗ್‌ನಲ್ಲಿ ನಾಲ್ಕಕ್ಕಿಂತ ಅಧಿಕ ವಿಕೆಟ್‌ಗಳನ್ನು 66 ಬಾರಿ ತೆಗೆದದ್ದು, ಫಿರೋಜ್ ಶಾ ಕೋಟ್ಲ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಎಲ್ಲ ಹತ್ತು ವಿಕೆಟ್
ಕಬಳಿಸಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಬೇರಾವ ಬೌಲರ್ ಮಾಡಿರದ 619 ವಿಕೆಟ್ ಗಳ ಸಾಧನೆ ಮಾಡಿ ಅವಮಾನ ಮಾಡಿದ ವರಿಗೆ ಸಾಧನೆ ಮೂಲಕ ಉತ್ತರ ನೀಡಿದ ಅನಿಲ್ ಕುಂಬ್ಳೆಯ ಛಲ ಸಾಮಾನ್ಯವೆ?

ವ್ಯವಹಾರ ಕ್ಷೇತ್ರದ ಯಶಸ್ಸು
ವ್ಯವಹಾರ ಕ್ಷೇತ್ರದಲ್ಲಿ ಇವರ ಸಾಧನೆ ಅಪ್ರತಿಮ. ಅದೊಂದು ದಿನ ಹತ್ತನೆಯ ತರಗತಿ ಪಾಸಾಗಲು ಹೆಣಗಾಡುತ್ತಿದ್ದ ಧೀರು
ಬಾಯಿ ಅಂಬಾನಿ ಇಂದು ಭಾರತದ ಪ್ರಮುಖ ವ್ಯವಹಾರಸ್ಥರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಇದೆಲ್ಲ ಹೇಗೆ ಸಾಧ್ಯ
ಎಂದರೆ ಅವರು ನಿರಂತರ ಹಾಕಿರುವ ಶ್ರಮ. ಮನಸ್ಸಿನಲ್ಲಿ ಸಾಧಿಸಲು ಅಡಚಣೆಯಾಗಿರುವ ತಡೆಗೋಡೆಗಳನ್ನು ಒಡೆದು
ಹಾಕಿ, ಅವರಲ್ಲಿರುವ ದೋಷಗಳನ್ನು ಸರಿಪಡಿಸಿಕೊಂಡು ಪುನಃ ಪುನಃ ಪ್ರಯತ್ನ ಮಾಡಿದರ ಪ್ರತಿಫಲವೇ ಇಂದಿನ ಸಾಧನೆ. ನಾವು ಬೇರೆಯವರ ಮಾತಿಗೆ ಕಿವಿಗೊಡದೆ ನಮ್ಮ ಮೇಲೆ ನಮಗೆ ನಂಬಿಕೆ ಕಳೆದುಕೊಳ್ಳದೆ ಸತತ ಪ್ರಯತ್ನ ಮಾಡಿದರೆ ಯಾವುದು ಅಸಾಧ್ಯವೂ ಅಲ್ಲ, ಹಾಗೆಯೇ ಪ್ರಯತ್ನ ಪಡದಿದ್ದರೆ ಅತಿ ಸರಳವೂ ಅಲ್ಲ. ಮೊದಲು ನಮ್ಮ ಮನಸ್ಸಿಗೆ ಅಡ್ಡವಾಗಿರುವ ಗೋಡೆಗಳನ್ನು, ಧನಾತ್ಮಕ ಯೋಚನೆ ಮಾಡಿ ಒಡೆಯೋಣ.

ಮುಖ್ಯವಾಗಿ ನಮ್ಮ ಯೋಚನಾ ಲಹರಿಯನ್ನು ಬದಲಾಯಿಸಬೇಕು. ನಾವು ಹೇಗೆ ಇರಲಿ, ಯಾರೇ ಇರಲಿ, ಎಲ್ಲಿಯಾದರೂ ಇರಲಿ ನಮ್ಮ ಮನಸ್ಸಿನ ಒಳಗೆ ನಕಾರಾತ್ಮಕ ವಿಷಯಗಳಿಗೆ ಪ್ರವೇಶ ನೀಡಬಾರದು. ನಕಾರಾತ್ಮಕ ಮನಸ್ಥಿತಿ ಇದ್ದರೆ ಭಯದ ಉತ್ಪಾದನೆ ಯಾಗುತ್ತದೆ. ಭಯವು ಮನುಷ್ಯ ನಿಗೆ ಯಾವುದೇ ಕಾರ್ಯ ನಿರ್ವಹಿಸಲು ಆಸ್ಪದ ನೀಡುವುದಿಲ್ಲ.

ರಾಬಿನ್ ಶರ್ಮಾ ಹೇಳುವಂತೆ ಆ ಪುಟ್ಟ ಅದೃಶ್ಯ ಬೇಲಿ ನಮ್ಮ ಕಣ್ಣನ್ನು ಚುಚ್ಚುತ್ತವೆ. ಇವು ಮನದ ಅರಮನೆಯಲ್ಲಿ ಆಳ್ವಿಕೆ
ನಡೆಸಲು ಆರಂಭಿಸಿದರೆ, ಮಾನವನು ಅವನತಿಯ ಹಾದಿ ಹಿಡಿದಂತೆ. ಭಯವನ್ನು ತೆಗೆದುಹಾಕಿದರೆ ಮಾತ್ರ ಜಯ ಕಟ್ಟಿಟ್ಟ ಬುತ್ತಿ. ಏನೇ ಆಗಲಿ ಧೈರ್ಯ ನಮ್ಮ ಜೊತೆಗಿರಲಿ.

ಯಾವಾಗಲೂ ಸಕಾರಾತ್ಮಕ ಭಾವವೊಂದಿದ್ದರೆ ನಮಗೆ ತಿಳಿಯದೆಯೆ ಪುನಃ ಪ್ರಯತ್ನ ಗುರಿಯತ್ತ ಸಾಗಿರುತ್ತದೆ. ನಾವು ಕೆಳಗೆ ಬಿದ್ದ ಕೂಡಲೇ ಎದ್ದೇಳುವ ಕುಸ್ತಿಪಟುವಿನ ಹಾಗೆ ಯೋಚನೆ ಮಾಡಬೇಕು. ಒಮ್ಮೆ ಕೆಳಗೆ ಬಿದ್ದ ಕುಸ್ತಿಪಟುವು ಹತ್ತು ಸೆಕೆಂಡು ಗಳಲ್ಲಿ ಮೇಲೆಳಲೇಬೇಕು. ಮೇಲೆಳಲು ಒಂದೇ ಸೆಕೆಂಡು ತಡವಾದರೂ ಕೂಡ ಅವನು ಸೋತಂತೆ. ಹಾಗೆಯೇ ನಾವು ಬಿದ್ದೇ ವೆಂದು ಚಿಂತಿಸಿ ಕುಳಿತುಕೊಳ್ಳುವುದರೊಳಗೆ ಕಾಲ ಕಳೆದು ಹೋಗಿರುತ್ತದೆ.

ಬಿದ್ದ ಕೂಡಲೇ ಮೇಲೆದ್ದು ಯುದ್ಧಕ್ಕೆ ಎದೆಕೊಟ್ಟು ನಿಂತರೆ ಗೆದ್ದೇ ಗೆಲ್ಲುವೆವು ಒಂದಲ್ಲ ಒಂದು ದಿನ. ಕೆಳಗೆ ಬಿದ್ದವನು, ಬೇಸರಗೊಳ್ಳದೆ ಎದ್ದು ನಿಂತು ಮತ್ತೆ ಕೆಲಸ ಆರಂಭಿಸಿದಾಗ ಯಶಸ್ಸು ಸಾಧ್ಯ.

Leave a Reply

Your email address will not be published. Required fields are marked *