Monday, 12th May 2025

ನಮ್ಮ ಶ್ರಮ ಅವನ ಒಲುಮೆ

ನಮ್ಮ ಪ್ರಯತ್ನ ಅಗತ್ಯ. ಜತೆಗೆ ಅದೊಂದು ಶಕ್ತಿಯ  ಕೃಪೆಯೂ ಬೇಕು ಎಂದಿದ್ದಾರೆ ಪ್ರಾಜ್ಞರು.

ನಾಗೇಶ್ ಜೆ. ನಾಯಕ ಉಡಿಕೇರಿ

ಸತತ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಬದುಕಿನ ಎಲ್ಲ ಸಾಧನೆಗಳಿಗೂ ಅಡಿಪಾಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ
ಕೆಲವೊಂದು ಸಲ ನಮ್ಮ ಪ್ರಯತ್ನದ ಜತೆ ದೈವದ ಅನುಗ್ರಹ ಇಲ್ಲದಿದ್ದರೆ ಪ್ರತಿಫಲ ದೊರೆಯದೆ ಹೋಗಬಹುದು.

ಅದೃಷ್ಟದ ಪಾಲು ಶೇಕಡಾ ಒಂದರಷ್ಟಾದರೂ ಅದರ ಹಾದಿಗೆ ಕಣ್ಣು ನೆಟ್ಟು ಕಾಯುವವರು ಬಹಳ ಜನ. ಬರೀ ನಮ್ಮೊಬ್ಬರ
ಒಟ್ಟು ಬಲದಿಂದಲೇ ಯಶಸ್ಸು ದಕ್ಕುತ್ತದೆ ಎನ್ನುವುದು ತೀರಾ ಮೂರ್ಖತನ. ಗಡಿಗೆ ಮಾಡಿದ ಕುಂಬಾರ, ತನ್ನಿಂದಲೇ ಒಂದೊಳ್ಳೆಯ ಮಡಿಕೆ ತಯಾರಾಯ್ತು ಎಂದು ಬೀಗುವುದು ಯಾವ ನ್ಯಾಯ? ಹದವಾದ ಮಣ್ಣು, ಮಡಿಕೆ ಗಟ್ಟಿ ಮಾಡುವ ಸುಡುಬಿಸಿಲು, ಬೆರೆತ ನೀರು, ದಣಿವರಿಯದೆ ತಿರುಗಿದ ಚಕ್ರ ಇವೆಲ್ಲದರ ಪಾಲು ಒಳ್ಳೆಯ ಮಡಿಕೆ ತಯಾರಾಗಲು ಕಾರಣ ಅಲ್ಲವೇ? ಅದಕ್ಕೆ ಡಿ.ವಿ.ಜಿ. ಅವರು ನಿನ್ನ ಪ್ರಯತ್ನದ ಜೊತೆಗೆ ದೈವದ ಬಲ ಇದ್ದರೆ ಮಾತ್ರ ಕಾರ್ಯ ಸಿದ್ಧಿಸಲು ಸಾಧ್ಯ ಎನ್ನುತ್ತಾರೆ.

ಬಿತ್ತ ಮಳೆಗಳವೊಲು ಯತ್ನ ದೈವಿಕ ನಮಗೆ

ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು

ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ

ಗೊತ್ತಿಲ್ಲ ಫಲದ ಬಗೆ ಮಂಕುತಿಮ್ಮ ॥

ಭೂಮಿಯನು ಹರಗಿ, ಬೀಜ ನೆಟ್ಟು ರೈತ ಸುಮ್ಮನೆ ಕುಳಿತರೆ ಸಾಕೇ? ಮಳೆ ಸುರಿಯಬೇಡವೇ? ಅದೇ ರೀತಿ ಬರೀ ಮಳೆ ಧರೆಗಿಳಿದರೆ ಸಾಕೇ? ಭೂಮಿಯನ್ನು ಹದಗೊಳಿಸಬೇಡವೇ? ಬೀಜವನ್ನು ಬಿತ್ತಿ, ಗೊಬ್ಬರವನ್ನು ಹಾಕಬೇಡವೇ? ಹಾಗಿದ್ದರೆ ನಮ್ಮ ಪ್ರಯತ್ನದ ಜೊತೆ ದೈವದ ಅನುಗ್ರಹ ಇಲ್ಲದಿದ್ದರೆ ಹಾನಿ ಸಂಭವಿಸುವುದು ಸತ್ಯ.

ದೇವರ ದಯೆಯಿರದಿರೆ ತಾಪ. ನಮ್ಮ ಪ್ರಯತ್ನ ನಿಂತರೂ ಹಾನಿ. ಆಮೇಲಿನ ಫಲ ಹೇಗಿರುತ್ತೆ ಎಂದು ಊಹಿಸಲು ಬಾರದು.
ನಿಮ್ಮ ದುಡಿಮೆಯ ಜೊತೆ ಭಗವಂತನ ಅನುಗ್ರಹವೂ ಇರಬೇಕು. ಆಗ ತೊಂದರೆ ಇರುವುದಿಲ್ಲ. ಫಲ ಕೂಡ ಕಟ್ಟಿಟ್ಟ ಬುತ್ತಿ.
ಮೇಲಿನವನ ಕೃಪೆಯಿದೆ ಎಂದು ಸುಮ್ಮನೆ ಕೂರುವುದು ಬೇಡ. ಅವನ ಕೆಲಸವನ್ನು ಅವನು ಮಾಡುತ್ತಾನೆ.

ನಮ್ಮ ಕೆಲಸವನ್ನು ನಾವು ಮಾಡೋಣ. ಸಮೃದ್ಧ ಫಲ ನಮ್ಮದಾಗುತ್ತೆ.

Leave a Reply

Your email address will not be published. Required fields are marked *