Sunday, 11th May 2025

ಏ.14 ರಿಂದ ಮಹಾರಾಷ್ಟ್ರದಲ್ಲಿ ಸೆಕ್ಷನ್ 144 ಜಾರಿ, ಆದರೆ ಲಾಕ್ ಡೌನ್ ಅಲ್ಲ!

ಮುಂಬೈ: ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಾದ್ಯಂತ ಬುಧವಾರ ರಾತ್ರಿ 8 ಗಂಟೆಯಿಂದ 15 ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ರಾಜ್ಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗುತ್ತಿದೆ. ಇದನ್ನು ಲಾಕ್ ಡೌನ್ ಎಂದು ಕರೆಯುವುದಿಲ್ಲ ಎಂದು ರಾಜ್ಯವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಉದ್ದವ್ ಠಾಕ್ರೆ ತಿಳಿಸಿದರು. ಸ್ಥಳೀಯ ರೈಲು ಸೇವೆ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಯನ್ನು ಸ್ಥಗಿತ ಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಾರ್ವಜನಿಕ ಸ್ಥಳಗಳು, ಎಲ್ಲಾ ಸಂಸ್ಥೆಗಳು ಮುಂದಿನ 15 ದಿನಗಳ ಕಾಲ ಮುಚ್ಚಲಿವೆ. ರಸ್ತೆ ಬದಿ ವ್ಯಾಪಾರಿಗಳು ಮತ್ತು ಆಹಾರ ಮಾರಾಟಗಾರರಿಗೆ ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೂ, ಆಹಾರ ವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಬೇಕು, ಅಲ್ಲಿಯೇ ಕುಳಿತ ಊಟ ಮಾಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಮೆಡಿಕಲ್ ಆಕ್ಸಿಜನ್ ಮತ್ತು ಹಾಸಿಗೆಗಳ ಕೊರತೆಯಿದ್ದು, ಮಹಾರಾಷ್ಟ್ರಕ್ಕೆ ರೆಮಿಡಿಸಿವಿರ್ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ವಾಯುಪಡೆ ವಿಮಾನಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಕರೋನಾ ವೈರಸ್ ರೋಗಿಗಳಿಗೆ ಕೇಂದ್ರ ಸರ್ಕಾರ ಆಕ್ಸಿಜನ್ ಪೂರೈಸಲು ನೆರವಾಗಬೇಕು.

ಕರೋನಾ ವೈರಸ್ ನಿರ್ಬಂಧವಿರುವ ಪ್ರದೇಶಗಳಲ್ಲಿನ ಎಲ್ಲಾ ಬಡವರು ಹಾಗೂ ಅಗತ್ಯವಿರುವವರಿಗೆ ಮುಂದಿನ ತಿಂಗಳಿನಿಂದ ಮೂರು ಕೆಜಿ ಗೋಧಿ ಮತ್ತು ಎರಡು ಕೆಜಿ ಅಕ್ಕಿಯನ್ನು ಸರ್ಕಾರ ವಿತರಿಸಲಿದೆ ಎಂದು ಉದ್ದವ್ ಠಾಕ್ರೆ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಮಂಗಳವಾರ 60, 212 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 35, 19, 208ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 58,526ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *