ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರಿಮಿಯರ್ ಲೀಗ್ ನ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 2 ವಿಕೆಟ್’ಗಳಿಂದ ಮಣಿಸಿ, ಶುಭಾರಂಭ ಮಾಡಿದೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ಮುಂಬೈ ಪರ ಕ್ರಿಸ್ ಲಿನ್ (49), ಸೂರ್ಯಕುಮಾರ್ ಯಾದವ್ (31), ಇಶಾನ್ ಕಿಶನ್ (29) ಉತ್ತಮ ಮೊತ್ತ ಕಲೆ ಹಾಕಿದ್ದರು. ಆರ್’ಸಿಬಿ ಪರ ಹರ್ಷಲ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದರೆ ವಾಷಿಂಗ್ಟನ್ ಸುಂದರ್, ಕೈಲ್ ತಲಾ ಒಂದು ವಿಕೆಟ್ ಪಡೆದರು.
160 ರನ್ ಗುರಿ ಪಡೆದ ಬೆಂಗಳೂರು ಪರ ಮ್ಯಾಕ್ಸ್ ವೆಲ್ (39), ಎಬಿಡಿ (43), ನಾಯಕ ಕೊಹ್ಲಿ (33) ಉತ್ತಮ ಪ್ರದರ್ಶನ ತೋರಿದರು. ಕೊನೆಯಲ್ಲಿ ಆಲ್ರೌಂಡರ್ ಹರ್ಷಲ್ ಪಟೇಲ್ ಅವರ ಜಾಣ್ಮೆಯ ಆಟದಿಂದ ಬೆಂಗಳೂರು ನಿಗದಿತ ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಮುಂಬೈ ಪರ ಜಸ್ ಪ್ರೀತ್ ಬುಮ್ರಾ, ಜನ್ಸೆನ್ ತಲಾ ಎರಡು ವಿಕೆಟ್, ಬೋಲ್ಟ್, ಕುನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.
ಐಪಿಎಲ್ ನಾಳಿನ ಪಂದ್ಯದಲ್ಲಿ ಚೆನ್ನೈ ಸೂಪ ಕಿಂಗ್ಸ್ ಹಾಗೂ ಡೆಲ್ಲಿ ಮುಖಾಮುಖಿಯಾಗಲಿದೆ.
ಪಂದ್ಯದ ವಿಶೇಷತೆಗಳು
1)ಐಪಿಎಲ್ ಸರಣಿ ಆರಂಭವಾದಾಗಿನಿಂದ ಆರ್’ಸಿಬಿ ತಂಡವು ಮೊದಲ ಬಾರಿ ಉದ್ಘಾಟನಾ ಪಂದ್ಯದಲ್ಲಿ ಗೆಲುವು ಸಾಧಿಸಿತು.
2008, 2017 ಹಾಗೂ 2019 ರಲ್ಲಿ ಸೋಲು ಕಂಡಿತ್ತು.
೨) ಕೊನೆಯ ಓವರಿನ ಕೊನೆಯ ಎಸೆತದಲ್ಲಿ ಆರ್’ಸಿಬಿ ತಂಡವು 2012 ರಲ್ಲಿ ಪುಣೆ ವಾರಿಯರ್ಸ್ ವಿರುದ್ದ ಹಾಗೂ 2021(ಪ್ರಸಕ್ತ ಸಾಲಿನ)ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಗೆಲುವು ಸಾಧಿಸಿತು.