Monday, 12th May 2025

ವಿಜಯನಗರ ಸಾಮ್ರಾಜ್ಯದ ರಾಜಗುರು ಶ್ರೀ ವ್ಯಾಸರಾಜರು

ಮನೋಹರ ಜೋಶಿ

ಬಹುಮುಖ ವ್ಯಕ್ತಿತ್ವದ ವಿಭೂತಿಪುರುಷರಾದ ವ್ಯಾಸರಾಜರು ವಿಜಯನಗರದ ಅರಸರಿಗೆ ರಾಜ ಗುರುಗಳಾಗಿ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶನ ನೀಡಿದವರು. ಕನ್ನಡ ಮತ್ತು ಸಂಸ್ಕೃತದಲ್ಲಿ ವಿದ್ವಾಂಸರಾಗಿದ್ದು, ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚಿಸಿದವರು. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕಗಳಲ್ಲಿ 700 ಕ್ಕಿಂತಲೂ ಹೆಚ್ಚು ಪ್ರಾಣದೇವರ ವಿಗ್ರಹಗಳನ್ನು ಸ್ಥಾಪಿಸಿ ಸಮಾಜದಲ್ಲಿ ಸಾಮರಸ್ಯವನ್ನು ಬಿತ್ತಿದ ಸಮಾಜೋದ್ಧಾರಕರು. ಜನರ ಕಲ್ಯಾಣಕ್ಕಾಗಿ ಹಲವು ಪ್ರದೇಶಗಳಲ್ಲಿ ಕೆರೆಗಳನ್ನು ಕಟ್ಟಿಸಿದರು. ಸಮಾಜದ ಎಲ್ಲರನ್ನೂ ಭಕ್ತಿ ಮಾರ್ಗದತ್ತ ಕೊಂಡೊಯ್ದ ಮಹಾನುಭಾವರು. ಹಂಪೆಯಲ್ಲಿ ಲೋಕಪಾವನ ಮಠ, ವಿಶ್ವವಿದ್ಯಾಲಯ ಸ್ಥಾಪಿಸಿದರು. ಕನಕದಾಸರು ಮತ್ತು ಪುರಂದರರಿಗೆ ದಾಸ ದೀಕ್ಷೆಯಿತ್ತು ಹರಿದಾಸ ಸಾಹಿತ್ಯ ವೃದ್ಧಿಸಲು ಪ್ರೋತ್ಸಾಹ ನೀಡಿದರು ಮತ್ತು ಸಾಮರಸ್ಯ ಸಾರಿದವರು. ಇಂದು ಪ್ರಖ್ಯಾತ ವೆನಿಸಿರುವ ಕರ್ನಾಟಕ ಸಂಗೀತ ಬೆಳೆಯಲು ಶ್ರಮಿಸಿದವರು. ಇಪ್ಪತ್ತನಾಲ್ಕು ಅತಿರಥ ಯತಿಗಳಿಗೆ ವಿದ್ಯಾಗುರುಗಳಾಗಿದ್ದರು. ಅಂತಹ ಪ್ರತಿಭಾನ್ವಿತರ ವಾರ್ಷಿಕ ಆರಾಧನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ವಿಶೇಷ ಲೇಖನ, ವಿಶ್ವವಾಣಿಯ ಓದುಗರಿಗಾಗಿ.

ಕೃಷ್ಣ ನೀ ಬೇಗನೇ ಬಾರೋ ||ಪ||
ಬೇಗನೆ ಬಾರೋ ನೀ ಮುಖವನ್ನು ತೋರೋ ||ಅ.ಪ||
ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ
ನೀಲವರ್ಣನೆ ನಾಟ್ಯವಾಡುತ ಬಾರೋ ||1||
ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ವೈಜಯಂತಿಮಾಲೆ ||2||
ಕಾಶೀ ಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳು ಘಮಘಮ ||3||
ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ ||4||
(ವ್ಯಾಸರಾಜರು ರಚಿಸಿದ ಗೀತೆ)

ವ್ಯಾಸ ಸಾಹಿತ್ಯದಿಂದ ಸಂಸ್ಕೃತವನ್ನು ಮತ್ತು ದಾಸ ಸಾಹಿತ್ಯದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ ಮಹಾನುಭಾವ ರಾದ ವ್ಯಾಸರಾಜ ತೀರ್ಥರು, ಕರ್ನಾಟಕ ಸಾಮ್ರಾಜ್ಯ (ವಿಜಯನಗರ ಸಾಮ್ರಾಜ್ಯ) ನಿರ್ಮಾಣದಲ್ಲಿ ಬಹು ಪ್ರಮುಖ ಪಾತ್ರ ವಹಿಸಿದ ರಾಜ ಗುರುಗಳು.

ಕರ್ನಾಟಕ ಸಂಗೀತಕ್ಕೂ ಪ್ರಮುಖ ಕೊಡುಗೆ ನೀಡಿದ ರಾಜಗುರು ಇವರು. ಸುಮಾರು 800 ವರ್ಷಗಳ ಹಿಂದೆ ಜಗತ್ತಿಗೆ ತತ್ವಜ್ಞಾನ ವೆಂಬ ಬೆಳಕನ್ನು ಹರಿಸಲು ವಾಯುದೇವರ ತ್ರಿತೀಯಾವತಾರವೆಂದೇ ಪ್ರಸಿದ್ಧರಾದ ಮಧ್ವಾ ಚಾರ್ಯರು ಪ್ರತಿಷ್ಠಾಪಿಸಿದ ತತ್ವಜ್ಞಾನ ಎಂಬ ಫಲಭರಿತವೃಕ್ಷವು ಅವರ ನಂತರದಲ್ಲಿ ಅತ್ಯಂತ ವಿಶಿಷ್ಟರೀತಿಯಲ್ಲಿ ಪ್ರಸಾರ ಮಾಡಿದವರಲ್ಲಿ ವ್ಯಾಸ ರಾಜರ ತೀರ್ಥರ ಪಾತ್ರವು ಪ್ರಮುಖ ವಾದುದ್ದು.

ನಿತ್ಯಾನುಷ್ಠಾನದ ಜೊತೆಗೆ ಜಪ-ತಪ ಪಾಠ – ಪ್ರವಚನ ಶಿಕ್ಷಣ ಮತ್ತು ಲೋಕ ಸಂಚಾರ ಮುಂತಾದ ಬಹುಮುಖ ಪ್ರತಿಭೆಯ ವಿಶಿಷ್ಟವಕ್ತಿತ್ವ ವ್ಯಾಸರಾಜರದು. ಆಗಿನ ಕಾಲದಯೇ ರಾಜಕೀಯವಾಗಿ ಪ್ರಭಾವಬೀರಿದ ಮಠಾಧೀಶರಾಗಿದ್ದವರು. ಹಂಪೆಯ ವಿಜಯನಗರ ಸಾಮ್ರಾಜ್ಯದ ರಾಜರಿಗೆ ರಾಜಗುರುಗಳಾಗಿ ಉತ್ತಮ ಮಾರ್ಗದಲ್ಲಿ ರಾಜ್ಯಭಾರ ಮಾಡುವಂತೆ ಪ್ರೇರೇಪಿಸಿ ವಿಜಯ ನಗರ ಸಾಮ್ರಾಜ್ಯವನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ವ್ಯಾಸರಾಜರದು.

ವ್ಯಾಸರಾಜರು ಪ್ರಕಾಂಡ ಪಂಡಿತರು ಮತ್ತು ಧಾರ್ಮಿಕ ವಿಧಿ ವಿಧಾನಗಳಲ್ಲಿ ಅಪಾರ ತಿಳುವಳಿಕೆ ಹೊಂದಿದ್ದವರು. ಕೆಲವು ಬಿಕ್ಕಟ್ಟಿನ ಸನ್ನಿವೇಶಗಳನ್ನು ಸೂಕ್ತವಾಗಿ ನಿಭಾಯಿಸುವ ಸಾಮರ್ಥ್ಯ ಅವರಲ್ಲಿತ್ತು. ಕಾರಣಾಂತರಗಳಿಂದ ಪ್ರಸಿದ್ಧ ತಿರುಪತಿ ಕ್ಷೇತ್ರದಲ್ಲಿ ನಿಂತುಹೋಗಿದ್ದ ಪೂಜಾ ಕಾರ್ಯಗಳನ್ನು ಪುನರ್ ಪ್ರಾರಂಭಿಸಿ ಹನ್ನೆರಡು ವರ್ಷಗಳ ಕಾಲ ಶ್ರೀನಿವಾಸನಿಗೆ ತಂತ್ರ ಸಾರೋಕ್ತವಾಗಿ ಅರ್ಚಿಸಿದರು.

ವಿಜಯನಗರ ಅರಸಸರ ಕಾಲದಲ್ಲಿ ರಾಜಗುರುಗಳಾಗಿ ನಾಡಿನ ಭವ್ಯ ಸಂಸ್ಕೃತಿ ಯನ್ನು ರಕ್ಷಿಸಿದವರು, ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಮಾರ್ಗದರ್ಶನ ನೀಡಿದವರು. ಅಸಾಧಾರಣ ವ್ಯಕ್ತಿತ್ವದ ವ್ಯಾಸಗುರುಗಳು ಹಂಪೆ- ಆನೆಗುಂದಿ ಸಂಸ್ಥಾನದ ಮಧ್ಯ ಇರುವ, ತುಂಗಭದ್ರಾ ನದಿಯಿಂದ ಸುತ್ತುವರೆದ ನವ ವೃಂದಾವನವೆಂಬ ಪುಣ್ಯಕ್ಷೇತ್ರದಲ್ಲಿ ಪವಿತ್ರ ಪದ್ಮನಾಭತೀರ್ಥರ ಸನ್ನಿಧಾನ ದಲ್ಲಿ 480 ವರುಷಗಳ ಕೆಳಗೆ ವೃಂದಾವನ ಪ್ರವೇಶಿಸಿದರು. ಆ ಸಂದರ್ಭವನ್ನು ನೆನಪಿಸಿಕೊಂಡು, ಈ ವಾರ ಅವರ ಆರಾಧನೆ ಯನ್ನು ಆಚರಿಸಲಾಗುತ್ತಿದೆ. ಈ ನವವೃಂದಾವನವು ಹರಿಯ ಪುರವಿದ್ದಂತೆ. ಹರಿಯ ಹಾಗು ಅವತಾರತ್ರೇಯ ಪ್ರಾಣದೇವರ ಸನ್ನಿಧಾನದಿಂದ ಕೂಡಿದ ಈ ಸ್ಥಳ, ಮಧ್ವಾಚಾರ್ಯರ ಪರಂಪರೆಯ ಒಂಬತ್ತು ಶಿಷ್ಯರು ವೃಂದಾವನ ಪ್ರವೇಶಗೈದ ಪರಮ ಪವಿತ್ರ ತಾಣ.

ವ್ಯಾಸರಾಜರ ಬಾಲ್ಯ
ಮೈಸೂರು ಪ್ರಾಂತ್ಯ, ಚನ್ನಪಟ್ಟಣಬಳಿ ಬನ್ನೂರು ಎಂಬ ಪುಟ್ಟ ಗ್ರಾಮ ವ್ಯಾಸರಾಜರ ಜನ್ಮಸ್ಥಳ. ರಾಮಾಚಾರ್ಯ ಮತ್ತು ಲಕ್ಷ್ಮೀದೇವಮ್ಮ ಎಂಬ ದಂಪತಿಯಲ್ಲಿ ವ್ಯಾಸರಾಜರ ಜನನವಾಯಿತು. ಇವರ ಜನನವು ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿ ನಡೆಯಿತು ಎಂದು ಗುರುತಿಸಲಾಗಿದೆ.

ದೇವರ ಸಂಕಲ್ಪ ಮತ್ತು ಬ್ರಹ್ಮಣ್ಯತೀರ್ಥರ ಆದೇಶದಂತೆ ಆ ದಂಪತಿಗಳು ಮುಂದೊಂದು ದಿನ ತಮ್ಮ ಮಗವನನ್ನು ಸ್ಥಳೀಯ ಗುರುಗಳಾದ ಬ್ರಹ್ಮಣ್ಯತೀರ್ಥರಿಗೆ ಒಪ್ಪಿಸಿದರು. ಬಾಲಕನ 11ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಕೊಟ್ಟು ವ್ಯಾಸ ತೀರ್ಥ ಎಂದು ಆಶ್ರಮ ನಾಮಕರಣ ಮಾಡಲಾಯಿತು.

ವಿದ್ಯಾಭ್ಯಾಸ

ಪ್ರಾರಂಭಿಕ ವಿದ್ಯೆಯು ಬನ್ನೂರಿನಲ್ಲಿ, ಬ್ರಹ್ಮಣ್ಯತೀರ್ಥರ ಆರಂಭಿಸಿ, ಬ್ರಹ್ಮಣ್ಯ ಮುನಿಗಳ ಆಶಯದಂತೆ ಹೆಚ್ಚಿನ ವಿದ್ಯಾಪ್ರಾಪ್ತಿ ಗಾಗಿ ಅಂದು ಪ್ರಸಿದ್ಧ ವಾಗಿದ್ದ ಮುಳುಬಾಗಿಲಿನ ಶ್ರೀಪಾದರಾಜರ ಬಳಿ ಕಳಿಸಿದರು. ವ್ಯಾಸರಾಜರಿಗೆ ಪಾಂಡಿತ್ಯದ ಸಮುದ್ರದಂತೆ ಇರುವ ಗುರುಗಳು ಸಿಕ್ಕರೆ, ಶ್ರೀಪಾದರಾಜರಿಗೆ ಯೋಗ್ಯ ಶಿಷ್ಯ ದೊರೆತ ಸಂತೃಪ್ತಿ. ಪಾದರಾಜರ ಮಾರ್ಗದರ್ಶನದಲ್ಲಿ ತರ್ಕ, ವ್ಯಾಕರಣ, ಛಂದಸ್ಸು, ಮೀಮಾಂಸಾದಿಗಳಲ್ಲಿ ತಲಸ್ಪರ್ಶಿ ಪಾಂಡಿತ್ಯ ಗಳಿಸಿದ್ದು ವ್ಯಾಸರಾಜರ ಶೃಧ್ಧೆಗೆ ಹಿಡಿದ ಕನ್ನಡಿಯಂತಿತ್ತು.

ವಿದ್ಯಾಭ್ಯಾಸದ ನಂತರ eನಪ್ರಸಾರಕ್ಕಾಗಿ ದೇಶಾದ್ಯಂತ ಸಂಚಾರ ಮಾಡಿದರು. ಹಲವು ಕಡೆ ವಿವಿಧ ಪಂಥಗಳ ವಿದ್ವಾಂಸರ ಜತೆ ತರ್ಕ, ವಾದ ನಡೆಸಿ ಜಯ ಗಳಿಸಿ, ತಮ್ಮ ಪಾಂಡಿತ್ಯವನ್ನು ತೋರಿದರು.

ತಿರುಪತಿಯಲ್ಲಿ ವ್ಯಾಸರಾಜರು
ತಿರುಪತಿಯಲ್ಲಿ ಹಿಂದೊಮ್ಮೆ ಶ್ರೀನಿವಾಸನ ಅರ್ಚಕ ಮಂಡಳಿಯು ದುರಹಂಕಾರದಿಂದ ತಮಗೆ ಒದಗಿ ಬಂದ ನಿವಾಸ ದೇವರ ಪೂಜಾ ಕೈಂಕರ್ಯವೆಂಬ ಪುಣ್ಯಕರವಾದ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತಿದ್ದರು, ದೇವರಿಗೆ ಮೀಸಲಾಗಿದ್ದ ಆಭರಣಗಳನ್ನು ಉಪಯೋಗಿಸುತ್ತಿದ್ದರು. ಇದನ್ನು ಕಂಡು ಚಂದ್ರಗಿರಿಯ (ತಿರುಪತಿ ಬೆಟ್ಟದ ಬುಡ) ಮಹಾರಾಜ ಸಾಳ್ವ ನರಸಿಂಹನು ಸಿಟ್ಟಿನಿಂದ ಎಲ್ಲರನ್ನು ಏಕಕಾಲದಲ್ಲಿ ನೇಣಿಗೇರಿಸಿ ಬ್ರಹ್ಮಹತ್ಯೆಗೆ ಗುರಿಯಾದ. ಈ ಘಟನೆಯಿಂದ ಅರ್ಚಕರಿಲ್ಲದೆ ಶ್ರೀನಿವಾಸನ ಪೂಜಾ ಕೈಂಕರ್ಯ ನಿಂತು ಹೋಗುವ ಮಟ್ಟಕ್ಕೆ ಬಂದು ಮುಟ್ಟಿತು.

ಇದರ ಪರಿಹಾರಕ್ಕಾಗಿ ಮುಳಬಾಗಿಲಿನಲ್ಲಿರುವ ಪಾದರಾಜರ ಸನ್ನಿಧಿಗೆ ಬಂದು ನಡೆದ ಘಟನೆಗಳೆಲ್ಲ ವಿವರಿಸಿ, ಭಕ್ತಿಯಿಂದ
ಈ ವಿಷಮ ಸನ್ನಿವೇಶವನ್ನು ಪರಿಹರಿಸಬೇಕೆಂದು ಬೇಡಿಕೊಂಡ. ಕರುಣಾಳುಗಳಾದ ಪಾದರಾಜರು ನಿಂತುಹೋಗುವ ಪರಿಸ್ಥಿತಿಗೆ ತಲುಪಿದ ತಿರುಪತಿಯ ನಿತ್ಯ ಪೂಜೆಗಾಗಿ ತಮ್ಮ ಪ್ರೀತಿಯ ಶಿಷ್ಯ ವ್ಯಾಸರಾಜರನ್ನು ಕಳುಹಿಸಿದರು. ಅಂದು ತಿರುಪತಿಯಲ್ಲಿ ಪೂಜೆ ಆರಂಭಿಸಿದ ಇವರು 12 ವರುಷಗಳ ಕಾಲ ಅಲ್ಲೇ ಇದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರು.

ವ್ಯಾಸರಾಜರು ತಮ್ಮ ತಿರುಪತಿ ವಾಸದ ಸಮಯದಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ಈಗಿನ ಸ್ವಾಮಿ ಪುಷ್ಕರಣಿ ತೀರದಲ್ಲಿರುವ ಮಂಟಪದಲ್ಲಿ ವ್ಯಾಸರಾಜರು ವಾಸಿಸುತ್ತಾ, ಅದೇ ಪುಸ್ಕರಣಿಯಲ್ಲಿ ಮಿಂದು ನಿತ್ಯಜಪ- ಅನುಷ್ಠಾನಕ್ಕೆ ಕುಳಿತಿರು ತ್ತಿದ್ದರು. ಆದ್ದರಿಂದ ಆ ಮಂಟಪ ಅದನ್ನು ವ್ಯಾಸರಾಜರ ಮಂಟಪವೆಂದೇ ಕರೆಯುತ್ತಾರೆ. ಅದು ಇಂದಿಗೂ ನೋಡಲು ಸಿಗುತ್ತದೆ. ಹೀಗೆ ವ್ಯಾಸರಾಜರು ತಮ್ಮ ವಿದ್ಯಾಗುರುಗಳ ಆದೇಶದಂತೆ 12 ವರುಷಗಳ ಕಾಲ ತಿರುಪತಿ ತಿಮ್ಮಪ್ಪನನ್ನು ಪೂಜಿಸಿ, ನಂತರ ಇತರ ಅರ್ಚಕರಿಗೆ ಪೂಜಾ ಕಾರ್ಯಕ್ಕೆ ಅನುವು ಮಾಡಿಕೊಟ್ಟರು.

ವಿಜಯನಗರದ ರಾಜಗುರುಗಳು ತಿರುಪತಿ ಮತ್ತು ಚಂದ್ರಗಿರಿ ಕೋಟೆಯು ಅಂದು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ವ್ಯಾಪ್ತಿಗೆ ಒಳಪಟ್ಟಿತ್ತು. ವ್ಯಾಸರಾಜರು ತಿರುಪತಿಯಿಂದ ವಿಜಯ ನಗರದ ನರಸ ಭೂಪಾಲನ ಪ್ರಾರ್ಥನೆ  ಮೇರೆಗೆ ತುಂಗಭದ್ರಾ ನದಿತೀರದ ಹಂಪೆ ಕ್ಷೇತ್ರಕ್ಕೆ ಆಗಮಿಸಿದರು. ಹಂಪೆಯು ಸುಗ್ರೀವ ಮತ್ತಿತರ ವಾನರ ವಾಸಸ್ಥಳ, ರಾಮ ಹನುಮಂತರ ಪ್ರಥಮ ಸಮಾಗಮ ಮತ್ತು ವಿರೂಪಾಕ್ಷನ ಸನ್ನಿಧಾನದಿಂದ ಪ್ರಕಾಶಮಾನವಾದ ದಿವ್ಯಕ್ಷೇತ್ರ. ನರಸ ಭೂಪಾಲನ ಆಶಯದಂತೆ ವಿಜಯ ನಗರ ಸಾಮ್ರಾಜ್ಯದ ಕುಲಗುರುಗಳಾದರು.

ಕರ್ನಾಟಕ ಸಾಮ್ರಾಜ್ಯವೆಂದೇ ಹೆಸರಾಗಿದ್ದ ಹಂಪೆಯ ವಿಜಯನಗರ ಸಾಮ್ರಾಜ್ಯವು ವ್ಯಾಸರಾಜರ ಮಾರ್ಗದರ್ಶನದಲ್ಲಿ
ಉತ್ತುಂಗಕ್ಕೆ ಏರಿತು. ವ್ಯಾಸರಾಜರ ನೇತೃತ್ವದಲ್ಲಿ ತುಳುವ ಅರಸ ಕೃಷ್ಣ ದೇವರಾಯನು ಪಟ್ಟಕ್ಕೆ ಬಂದ ಮೇಲೆ ನಡದಿದ್ದೆಲ್ಲ ಒಂದು ರೋಚಕ ಇತಿಹಾಸ. ತಮ್ಮ ಕುಲಗುರುಗಳಾದ ವ್ಯಾಸರಾಜರನ್ನು ಕೃಷ್ಣದೇವರಾಯ ಕುಲದೇವತೆಯಂತೆ ಆರಾಧಿಸಿ, ಅವರು ನೀಡುತ್ತಿದ್ದ ಸಲಹೆ ಸೂಚನೆಗಳಂತೆ ಅವರ ಮಾರ್ಗದರ್ಶನದಲ್ಲಿ ರಾಜ್ಯಭಾರ ಮಾಡಿದ. ಕೋಟೆಗಳನ್ನು ಕಟ್ಟಿಸಿದ, ದೇಗುಲಗಳನ್ನು ಕಟ್ಟಿಸಿದ.

ಅಂದು ಕೃಷ್ಣದೇವರಾಯನ ಕಾಲದಲ್ಲಿ ಮತ್ತು ಅದಕ್ಕೂ ಮುಂಚೆ ಹಂಪೆಯಲ್ಲಿ ನಿರ್ಮಾಣಗೊಂಡ ಅಪೂರ್ವ ವಾಸ್ತುರತ್ನಗಳು ಮತ್ತು ದೇಗುಲಗಳ ವೈಶಿಷ್ಟ್ಯ ಮೆರೆಯಲು ವ್ಯಾಸರಾಜರ ಕೊಡುಗೆ ಇದೆ. ಅಂತೆಯೇ ಆ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಕೀರ್ತಿ ದಶದಿಕ್ಕುಗಳಿಗೆ ಹಬ್ಬಿತು. ವ್ಯಾಸರಾಜರು ರಾಜಗುರುಗಳಾಗಿದ್ದ ಕಾಲವು, ವಿಜಯನಗರ ಸಾಮ್ರಾಜ್ಯದ ಸುವರ್ಣ
ಯುಗವೆಂದೇ ಹೇಳಬಹುದು.

ವ್ಯಾಸರಾಜರ ಶಿಷ್ಯವೃಂದ
ವ್ಯಾಸರಾಜರ ಶಿಷ್ಯ ಸಂಪತ್ತು ಅಪಾರ. ಅದು ಅಪ್ರತಿಮ ಸಾಧಕರ ಶಿಷ್ಯವೃಂದವಾಗಿತ್ತು. ಬ್ರಹ್ಮಚಾರಿಗಳು, ಗೃಹಸ್ಥರನ್ನು ಒಳಗೊಂಡ ಶಿಷ್ಯರ ಜತೆ ಹರಿದಾಸರ ಸಂಗಮವೇ ಅಲ್ಲಿ ಮೇಳೈಸಿತ್ತು. 24 ಶಿಷ್ಯರಿಗೆ ಯತಿದೀಕ್ಷೆ ನೀಡಿ ಭಕ್ತಿಧರ್ಮ ಪ್ರಚಾರಕ್ಕಾಗಿ ಅಣಿಗೊಳಿಸಿದರು. ಅವರ ನೇರ ಶಿಷ್ಯರಲ್ಲಿ ಕುಂಬಕೋಣದ ವಿಜಯೇಂದ್ರರು, ಸೋದೆಯ ವಾದಿರಾಜರು ಮತ್ತು ನವವೃಂದಾ ವನದ ಗೋವಿಂದ ಒಡೆಯರು ಪ್ರಮುಖರು. ಈ ಎಲ್ಲಾ ಅಪ್ರತಿಮ ಪಾಂಡಿತ್ಯದ ಸನ್ಯಾಸ ಶಿಷ್ಯರು ಮಧ್ವಮತಕ್ಕೆ ಸಲ್ಲಿಸಿದ ಸೇವೆ ಅನುಪಮವಾದುದ್ದು. ಕರ್ನಾಟಕದ ಸಂಗೀತ ಪಿತಾಮಹರೆಂದೇ ಖ್ಯಾತರಾದ, ಪುರಂದರದಾಸರಿಗೆ (ಸಾ.ಶ. 1484-1565) ಹರಿದಾಸ ದೀಕ್ಷೆ ಕೊಡಿಸಿದವರು ವ್ಯಾಸರಾಜರು.

ಸಮನ್ವಯದ ಗುರುಗಳು
ಹದಿನಾರನೆಯ ಶತಮಾನದ ಸಾಮಾಜಿಕ ಸನ್ನಿವೇಶವನ್ನು ಗಮನಿಸಿದರೆ, ವ್ಯಾಸರಾಜರು ಸಮನ್ವಯ ಸಾಧಿಸಿದ ಶ್ರೇಷ್ಟರು. ಅವರು ಜಾತಿ ಮತ ಭೇದವನ್ನು ಒಂದು ಮಟ್ಟದ ತನಕ ನಿರ್ಲಕ್ಷಿಸಿದ್ದರು ಮತ್ತು ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಅಂದಿನ ಮಹಾ ಕೀರ್ತನಕಾರ ಕನಕದಾಸರಿಗೆ (ಸಾ.ಶ.1509-1609) ದಾಸ ದೀಕ್ಷೆ ಕೊಟ್ಟು ಅವರಿಂದ ಕನ್ನಡದ ಹರಿದಾಸ ಸಾಹಿತ್ಯ ಪ್ರಚುರಪಡಿಸುವ ಮಹತ್ಕಾರ್ಯಮಾಡಿಸಿದರು.

ವ್ಯಾಸರಾಜರು ಭಕ್ತಿಧರ್ಮ ಪ್ರಚಾರಕ್ಕಾಗಿ ನಾಡಿನಾದ್ಯಂತ ಸಂಚರಿಸಿ, ತಮ್ಮ ಸಂಚಾರದ ಕಾಲದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ 732 ಕ್ಕೂ ಹೆಚ್ಚು ಸ್ಥಳಗಳಲ್ಲಿಆಂಜನೇಯನ ಮೂರುತಿ ಪ್ರತಿಷ್ಠಾಪಿಸುವದರ ಮೂಲಕ ಭಕ್ತಿಪಂಥ ಬಲಪಡಿಸಿದರು. ಮುಖ್ಯವಾಗಿ ಬೆಂಗಳೂರು, ಮೈಸೂರು ಮತ್ತು ದಕ್ಷಿಣದ ಪ್ರದೇಶಗಳಲ್ಲಿ ವಾಯುದೇವರ ಪ್ರತಿಷ್ಠಾಪನೆ ಆ ಸಮಯದಲ್ಲಿ ನಡೆಯಿತು.

ವ್ಯಾಸರಾಜರ ಗ್ರಂಥ ವೈಭವ

ವ್ಯಾಸರಾಜರ ಗ್ರಂಥರಚನಾ ಕೌಶಲ್ಯ ಅದ್ಭುತವಾದದ್ದು. ವ್ಯಾಸತ್ರಯಗಳಂದು ಪ್ರಸಿದ್ಧವಾಗಿರುವ ನ್ಯಾಯಮೃತ, ತಾತ್ಪರ್ಯ ಚಂದ್ರಿಕಾ ಮತ್ತು ತರ್ಕ ತಾಂಡವ – ಈ ಮೂರೂ ವೇದಾಂತದ ಸಾಮ್ರಾಜ್ಯದ ಅಪೂರ್ವ ಗ್ರಂಥಗಳು ಅವರಿಂದ ರಚನೆಗೊಂಡ ಪ್ರಮುಖ ಕೃತಿಗಳು. ಇವುಗಳ ಜತೆ ಇನ್ನೂ ಹಲವಾರು ಕೃತಿಗಳನ್ನು ಅವರು ರಚಿಸಿದರು. ಸಂಸ್ಕೃತ ಮತ್ತು ಕನ್ನಡದಲ್ಲಿ ಗ್ರಂಥ ರಚನೆ ಮಾಡಬಲ್ಲ ಶ್ರೇಷ್ಠ ವಿದ್ವಾಂಸರಾಗಿದ್ದರು ವ್ಯಾಸರಾಜರು.

ತಮ್ಮ ರಚನಾ ಕೌಶಲದಿಂದ ಅನೇಕ ಗ್ರಂಥ, ಸ್ತೋತ್ರಗಳನ್ನು ರಚಿಸಿ ಕನ್ನಡ ಭಾಷೆಯ ಸಾಮರ್ಥ್ಯವನ್ನು ಆ ದಿನಗಳ ಬಲ ಪಡಿಸಿದರು. ಕನ್ನಡ ಹರಿದಾಸ ಸಾಹಿತ್ಯವು ನರಹರಿತೀರ್ಥರಿಂದ ಪ್ರಾರಂಭಗೊಂಡು ಪಾದರಾಜರಿಂದ ಹೊಸಚೈತನ್ಯ ಪಡೆದು ವ್ಯಾಸರಾಜರಿಂದ ಹೆಮ್ಮರವಾಗಿ ಬೆಳೆಯಿತು.

ಬೃಂದಾವನ ಸೇರಿದ ವ್ಯಾಸರಾಜರು
ವ್ಯಾಸರಾಜರು ವಿಜಯನಗರ ಸಾಮ್ರಾಜ್ಯದ ರಾಜ ಗುರುವಾಗಿ ಸಾಮ್ರಾಜ್ಯ ಕಟ್ಟಲು ಸಮರ್ಥ ಮಾರ್ಗದರ್ಶನ ನೀಡಿ, ಇಹಲೋಕ ತ್ಯಜಿಸಿದರು. ಅವರ ಒಟ್ಟು ಜೀವಿತಾವಧಿ 92 ವರುಷ. ಶಾಲಿವಾಹನ ಶಕೆ 1461ನೆಯ ವಿಲಂಭಿ ನಾಮಸಂವತ್ಸರದ -ಲ್ಗುಣ ಕೃಷ್ಣ ಚತುರ್ಥಿಯಂದು (ಸಾ. ಶ.1539-ಮಾರ್ಚ್ ತಿಂಗಳು) ಅವರು ಇಹಲೋಕ ತ್ಯಜಿಸಿದರು.

ಮಧ್ವಾಚಾರ್ಯರ ಪ್ರಥಮ ನೇರ ಶಿಷ್ಯರಾದ ಪದ್ಮನಾಭತೀರ್ಥರ ಮೂಲ ವೃಂದಾವನ ಸನ್ನಿಧಾನ (ಆನೆಗುಂದಿ) ಹತ್ತಿರದಲ್ಲಿ, ತುಂಗಭದ್ರಾ ನದಿಯಿಂದ ಸುತ್ತುವರಿದಿರುವ ನವವೃಂದಾವನ ನಡುಗಡ್ಡೆಯಲ್ಲಿ ತಮ್ಮ ಯೋಗ ಶಕ್ತಿಯಿಂದ ದೇಹತ್ಯಾಗ ಮಾಡಿ ವೃಂದಾವನಸ್ಥರಾದರು. ವೈಷ್ಣವ ಮುನಿತ್ರಯರಲ್ಲಿ ಖ್ಯಾತರಾದ ವ್ಯಾಸರಾಜರ ದಿವ್ಯ ಜೀವನ ಅಲ್ಲಿಗೆ ಕೊನೆಗೊಂಡಿತು.

ನೀರಾವರಿ ಗುರು
ಕೃಷ್ಣದೇವರಾಯನು ವ್ಯಾಸತೀರ್ಥರಿಗೆ ಬೆಟ್ಟಕೊಂಡ ಎಂಬ ಪ್ರದೇಶವನ್ನು ದತ್ತಿಯಾಗಿ ನೀಡಿದರು. ಆ ಪ್ರದೇಶವು ಒಣಪ್ರದೇಶ ವಾಗಿದ್ದುದನ್ನು ಗಮನಿಸಿದ ವ್ಯಾಸರಾಜರು, ಅಲ್ಲಿ ಕೆರೆಯನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟರು. ಇದರಿಂದಾಗಿ ಸ್ಥಳೀಯ ರೈತರಿಗೆ ಬೆಳೆ ಬೆಳೆಯಲು ಅನುಕೂಲವಾಗಿದ್ದರ ಜತೆ, ಅಂತಹ ಇತರ ಕೆರೆಗಳನ್ನು ನಿರ್ಮಿಸಲು ಸೂರ್ತಿ ದೊರೆತಂತಾಯಿತು. ಬೆಟ್ಟಕೊಂಡದ ಸನಿಹದಲ್ಲಿರುವ ಆ ಕೆರೆಯನ್ನು ವ್ಯಾಸಸಮುದ್ರ ಎಂದು ಕರೆಯಲಾಗಿದೆ.

ಸಿಂಹಾಸನವೇರಿದ ರಾಜಗುರು
ವಿಜಯನಗರ ಸಾಮ್ರಾಜ್ಯಾಧಿಪತಿ ಕೃಷ್ಣದೇವರಾಯನಿಗೆ ಕುಹುಯೋಗವೆಂಬ ಕೆಟ್ಟ ಯೋಗ ರಾಯನನ್ನು, ರಾಜ್ಯವನ್ನು ಕಾಡಲಿದೆಯೆಂದು ಇತರ ಜ್ಯೋತಿಷ್ಯಪಂಡಿತರು ಭವಿಷ್ಯ ನುಡಿದಿದ್ದರು.ಆ ಸಮಯದಲ್ಲಿ ಯಾರು ಸಿಂಹಾಸನದಲ್ಲಿರುವರೋ ಅವರು ಮರಣ ಹೊಂದುವರೆಂಬ ಭವಿಷ್ಯ ನುಡಿದಿದ್ದರು. ಇದರಿಂದ ಕೇಳಿ ಗಾಬರಿಗೊಂಡ ರಾಯನು ಓಡಿ ಬಂದಿದ್ದು ಲೋಕ ಪಾವನ ಮಠಕ್ಕೆ.

ಗುರುಗಳಾದ ವ್ಯಾಸರಾಜರ ಬಳಿ ತನ್ನ ತಳಮಳಗಳೆ ಅರುಹಿದನು. ನಾಡು ಮತ್ತು ಪ್ರಜೆಗಳನ್ನುರಕ್ಷಿಸಲು ಪ್ರಾರ್ಥಿಸಿದನು. ಸಮರ್ಥ ರಾಗಿದ್ದ ವ್ಯಾಸರಾಜರು ಭಗವಂತನ ಅನುಗ್ರಹದಿಂದ ಆ ಸಮಯದಲ್ಲಿ ವಿಜಯನಗರ ಮಹಾಸಾಮ್ರಾಜ್ಯದ ಸಿಂಹಾಸನ ದಲ್ಲಿ ಖುದ್ದಾಗಿ ತಾವೇ ವಿರಾಜಮಾನರಾದರು. ರಾಜನನ್ನು ಅಂತಹದೊಂದು ಕಂಟಕದಿಂದ ರಕ್ಷಿಸಲು, ಮಾನಸಿಕ ವಾಗಿ ಕೃಷ್ಣದೇವರಾಯನಿಗೆ ಸಮಾಧಾನ ನೀಡಲು, ಆತನ ಮನಶ್ಶಕ್ತಿಯನ್ನು ಉತ್ತಮಪಡಿಸಲು, ಆತನು ತಿಳಿದಿದ್ದ ಆ ಕೆಟ್ಟ ಗಳಿಗೆಯಲ್ಲಿ ವ್ಯಾಸರಾಜರು ಚಕ್ರವರ್ತಿಯಾಗಿ ಕಾರ್ಯನಿರ್ವಹಿಸಿದರು.

ಇದರ ಮೂಲಕ ಎಲ್ಲರೂ ತಿಳಿದಿದ್ದ ಕುಹುಯೋಗವೆಂಬ ದುಷ್ಟಶಕ್ತಿಯ ಪ್ರಭಾವವನ್ನು ತನ್ನ ಮೇಲೆ ಆಹ್ವಾನಿಸಿಕೊಂಡು, ರಾಜ
ಮತ್ತು ಸಾಮ್ರಾಜ್ಯಕ್ಕೆ ಬಂದಿದ್ದ ಆಪತ್ತು ನಿವಾರಿಸಿದರು. ಕುಹುಯೋಗದ ಪರಿಹಾರದನಂತರ ಪುನಃ ಕೃಷ್ಣದೇವರಾಯನನ್ನು ಪಟ್ಟಕ್ಕೆ ಕುಳ್ಳಿರಿಸಿದರು. ಇದು ಜ್ಞಾನಿಗಳಾದ ವ್ಯಾಸರಾಜರ ಅಪೂರ್ವ ವೈರಾಗ್ಯ ಲಕ್ಷಣ.

ಕೃಷ್ಣಾ ನೀ ಬೇಗನೆ ಬಾರೊ
ಕರ್ನಾಟಕ ಸಂಗೀತಕ್ಕೆ ವ್ಯಾಸರಾಜರ ಕೊಡುಗೆ ಅನುಪಮ. ‘ಕೃಷ್ಣಾ ನೀ ಬೇಗನೆ ಬಾರೊ’ ಕೃತಿಯನ್ನು ವ್ಯಾಸರಾಜರು ರಚಿಸಿದದು, ಇದು ಯಮುನಕಲ್ಯಾಣಿ ರಾಗದಲ್ಲಿ ಮತ್ತು ಮಿಶ್ರ ಚಾಪ ತಾಳದಲ್ಲಿದೆ. ಕರ್ನಾಟಕ ಸಂಗೀತ ಪಿತಾಮಹರೆನಿಸಿದ ಪುರಂದರ ದಾಸರಿಗೆ ದೀಕ್ಷೆ ನೀಡಿದವರು ಸಹ ವ್ಯಾಸರಾಜರು.

ಅರಸರ ಗುರು ಇವರು
ವಿಜಯನಗರ ಸಾಮ್ರಾಜ್ಯದ ಹಲವು ಅರಸರಿಗೆ ವ್ಯಾಸರಾಜರು ಮಾರ್ಗದರ್ಶನ ನೀಡಿದ್ದು, ಸಾಮ್ರಾಜ್ಯದಲ್ಲಿ ಸಾಮರಸ್ಯ, ಶಾಂತಿ ನೆಲೆಸಲು ತಮ್ಮದೇ ಕೊಡುಗೆ ನೀಡಿದ್ದಾರೆ. ವ್ಯಾಸರಾಜರಿಂದ ಮಾರ್ಗದರ್ಶನ ಪಡೆದ ಪ್ರಮುಖ ರಾಜರುಗಳು: 1. ಸಾಳುವ ನರಸಿಂಹ (ಚಂದ್ರಗಿರಿ) 2. ನರಸಿಂಹ ರಾಯ (ದ್ವಿತೀಯ) 3. ತುಳುವ ನರಸ ನಾಯಕ 4. ವೀರ ನರಸಿಂಹ ರಾಯ
5. ಕೃಷ್ಣ ದೇವರಾಯ 6. ಅಚ್ಯುತರಾಯ.

Leave a Reply

Your email address will not be published. Required fields are marked *