ಟೆಕ್ ಮನಿ
ಇಂಧುದರ ಹಳೆಯಂಗಡಿ
ತಂತ್ರಜ್ಞಾನ ಮತ್ತು ಕಂಪ್ಯೂಟರ್ ಬಳಸಿ, ಡಿಜಿಟಲ್ ಹಣ ಎನಿಸಿರುವ ಬಿಟ್ ಕಾಯಿನ್ ಉತ್ಪಾದಿಸಬಹುದು. ಒಬ್ಬರಿಂದ ಇನ್ನೊಬ್ಬರಿಗೆ ಅನಾಮಧೇಯವಾಗಿ ವರ್ಗಾಯಿಸುವ ಅವಕಾಶ ಇರುವುದರಿಂದ ಕೆಲವರು ಬಿಟ್ಕಾಯಿನ್ ಇಷ್ಟಪಡುತ್ತಾರೆ. ಆದರೆ ಇದಕ್ಕೆ ಎಲ್ಲಾ ದೇಶಗಳಲ್ಲಿ ಕಾನೂನಿನ ಮಾನ್ಯತೆ ಇಲ್ಲ.
ಸಾಮಾನ್ಯವಾಗಿ ಕ್ರಿಪ್ಟೋ ಕರೆನ್ಸಿ ಎಂದು ಕರೆಯಲ್ಪಡುವ ಬಿಟ್ ಕಾಯಿನ್ ಅನ್ನು ವರ್ಚುವಲ್ ಕರೆನ್ಸಿ ಅಥವಾ ಡಿಜಿಟಲ್
ಕರೆನ್ಸಿ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ಹಣವಾಗಿದ್ದು, ಸಂಪೂರ್ಣವಾಗಿ ವರ್ಚುವಲ್ (ಡಿಜಿಟಲ್) ಆಗಿರುತ್ತದೆ. ಹಣದ ಆನ್ಲೈನ್ ರೂಪ ಇದಾಗಿದ್ದು, ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಲು ಇದನ್ನು ಬಳಸಬಹುದು.
ಆದರೆ ಕೆಲವು ದೇಶಗಳು ಇದನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಹೀಗಿದ್ದರೂ, ಸ್ಟಾರ್ ಬಕ್ಸ್, ಪೇ ಪಾಲ್, ಮೈಕ್ರೋಸಾಫ್ಟ್ ಸೇರಿದಂತೆ ಕೆಲವು ಕಂಪನಿಗಳು ಈಗಾಗಲೇ ಬಿಟ್ ಕಾಯಿನ್ ಮೂಲಕ ಪಾವತಿಯನ್ನು ಒಪ್ಪುತ್ತವೆ. ಬಿಟ್ ಕಾಯಿನ್ ಹೇಗೆ ಕೆಲಸ ಮಾಡುತ್ತದೆ? ಬಿಟ್ ಕಾಯಿನ್ ಮೂಲತಃ ಒಂದು ಕಂಪ್ಯೂಟರ್ ಫೈಲ್ ಆಗಿದ್ದು, ಅದನ್ನು ಸ್ಮಾರ್ಟ್ಫೋನ್ ಅಥವಾ ಕಂಪ್ಯೂ ಟರ್ ನಲ್ಲಿ ‘ಡಿಜಿಟಲ್ ವ್ಯಾಲೆಟ್’ ಅಪ್ಲಿಕೇಶನ್ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಅಪ್ಲಿಕೇಷನ್ ಇತರರಿಗೆ ಬಿಟ್ ಕಾಯಿನ್ ಕಳುಹಿಸಬಹುದು. ಪ್ರತಿಯೊಂದು ವಹಿವಾಟನ್ನು ಬ್ಲಾಕ್ ಚೈನ್ ಎಂಬ ಸಾರ್ವಜನಿಕ ಪಟ್ಟಿಯಲ್ಲಿ ದಾಖಲಿಸ ಲಾಗುತ್ತದೆ.
ಬಿಟ್ ಕಾಯಿನ್ ಪಡೆಯಲು ಮೂರು ಮಾರ್ಗಗಳಿವೆ
1. ನೈಜ ಹಣವನ್ನು ಬಳಸಿಕೊಂಡು ಬಿಟ್ ಕಾಯಿನ್ ಖರೀದಿಸಬಹುದು.
2.ಯಾವುದೇ ವಸ್ತುಗಳನ್ನು ಮಾರಾಟ ಮಾಡಿ, ಬಿಟ್ ಕಾಯಿನ್ ಮೂಲಕ ಪಾವತಿಸಲು ಅವಕಾಶ ನೀಡಬಹುದು.
3. ಬಿಟ್ ಕಾಯಿನ್ನ್ನು ಕಂಪ್ಯೂಟರ್ ಮೂಲಕ ಸೃಷ್ಟಿಸಬಹುದು.
ಮೈನಿಂಗ್
ಮೈನಿಂಗ್ ಎಂಬ ಸ್ಪರ್ಧಾತ್ಮಕ ಮತ್ತು ವಿಕೇಂದ್ರೀಕೃತ ಪ್ರಕ್ರಿಯೆಯಿಂದ ಹೊಸ ಬಿಟ್ ಕಾಯಿನ್ ಉತ್ಪಾದಿಸಲಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಯಾವುದೇ ವ್ಯಕ್ತಿಯು ತಾವು ಮಾಡುವ ಸೇವೆಗಳಿಗೆ ನೆಟ್ವರ್ಕ್ಗಳಿಂದ ಬಹುಮಾನದ ರೂಪವಾಗಿ ಬಿಟ್ ಕಾಯಿನ್ ಪಡೆಯುತ್ತಾರೆ. ಬಿಟ್ ಕಾಯಿನ್ ವಿಶೇಷ ಯಂತ್ರಾಂಶವನ್ನು ಬಳಸಿಕೊಂಡು ತಮ್ಮ ನೆಟ್ವರ್ಕ್ ಅನ್ನು ಸುರಕ್ಷಿತ ವಾಗಿಡುತ್ತಾರೆ.
ಹೊಸ ಬಿಟ್ ಕಾಯಿನ್ ರಚಿಸಲು ಬಿಟ್ ಕಾಯಿನ್ ಪ್ರೋಟೋಕಾಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಬಿಟ್ ಕಾಯಿನ್ ಮೈನಿಂಗ್ ಅನ್ನು ಸ್ಪರ್ಧಾತ್ಮಕ ವ್ಯವಹಾರವನ್ನಾಗಿ ಮಾಡುತ್ತದೆ. ಹೆಚ್ಚೆಚ್ಚು ಮೈನರ್ಸ್ ನೆಟ್ವರ್ಕ್ಗೆ ಸೇರಿದಾಗ, ಲಾಭ ಗಳಿಸುವುದು ಹೆಚ್ಚು ಕಷ್ಟ. ಯಾವುದೇ ಡೆವಲಪರ್ಗೆ ತಮ್ಮ ಲಾಭವನ್ನು ಹೆಚ್ಚಿಸಲು ಅಥವಾ ವ್ಯವಸ್ಥೆಯನ್ನು ನಿಯಂತ್ರಿಸಲು ಯಾವುದೇ ಅಧಿಕಾರವಿರುವುದಿಲ್ಲ.
ಜನರು ಬಿಟ್ ಕಾಯಿನ್ ಏಕೆ ಬಯಸುತ್ತಾರೆ?
ಬಿಟ್ ಕಾಯಿನ್ ಅನ್ನು ಸರ್ಕಾರ ಅಥವಾ ಯಾವುದೇ ಬ್ಯಾಂಕುಗಳು ನಿಯಂತ್ರಿಸುವುದಿಲ್ಲ ಎಂಬ ಕಾರಣದಿಂದಾಗಿ ಹಲವರು ಇದನ್ನು ಇಷ್ಟಪಡುತ್ತಾರೆ. ಅದಲ್ಲದೆ, ಅನಾಮಧೇಯರಾಗಿ ಬಿಟ್ ಕಾಯಿನ್ ಬಳಸಬಹುದಾಗಿದೆ. ಎಲ್ಲಾ ವಹಿವಾಟುಗಳು ದಾಖಲಾಗುತ್ತಿದ್ದರೂ, ಯಾವ ‘ಖಾತೆ ಸಂಖ್ಯೆ’ ಎಂದು ಯಾರಿಗೂ ತಿಳಿದಿರುವುದಿಲ್ಲ.
ಭಾರತದಲ್ಲಿ ಬಿಟ್ ಕಾಯಿನ್
ಬಿಟ್ ಕಾಯಿನ್ ಸೇರಿದಂತೆ ಯಾವುದೇ ಕ್ರಿಪ್ಟೋಕರೆನ್ಸಿಗೆ ಭಾರತದಲ್ಲಿ ಕಾನೂನಿನ ಬೆಂಬಲವಿಲ್ಲ. ಆದರೂ ಇಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ. ‘ವರ್ಚುವಲ್ ಕರೆನ್ಸಿಯೊಂದಿಗೆ ವ್ಯವಹರಿಸಬೇಡಿ. ಹಾಗೆಯೇ, ಯಾವುದೇ ಕಂಪನಿಗಳನ್ನು ವಿನಿಮಯದ ರೂಪದಲ್ಲಿ ಬಿಟ್ ಕಾಯಿನ್ ಸ್ವೀಕರಿಸಬಾರದು’ ಎಂದು 2018ರಲ್ಲಿ ಆರ್ಬಿಐ ಸುತ್ತೋಲೆಯನ್ನು ಹೊರಡಿಸಿತ್ತು.
ಹೀಗಿದ್ದರೂ, 2020ರ ಮಾರ್ಚ್ 4ರಂದು ಭಾರತದ ಸುಪ್ರೀಂ ಕೋರ್ಟ್ ಆರ್ಬಿ ಐ ಸುತ್ತೋಲೆಯನ್ನು ಬದಿಗಿರಿಸಿತು. ಅಂದಿನಿಂದ ಕ್ರಿಪ್ಟೋ ಕರೆನ್ಸಿಬಳಕೆ-ಹೂಡಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಕೇಂದ್ರ ಸರ್ಕಾರ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸುವ ಆತಂಕ ಇದ್ದೇ ಇದೆ. 2021ರ ಬಜೆಟ್ನಲ್ಲಿ ಈ ಕುರಿತು ಉಲ್ಲೇಖಿಸಬಹುದು ಎಂದು ಹಲವರು ಅಂದುಕೊಂಡಿದ್ದರು.
ಈ ವರ್ಷ ಫೆಬ್ರವರಿಯಲ್ಲಿ ರಾಜ್ಯಸಭೆಯಲ್ಲಿ ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್, ‘ಸರ್ಕಾರವು ಟೆಂಡರ್ ಸಂದರ್ಭ ಕ್ರಿಪ್ಟೋ ಕರೆನ್ಸಿಗಳನ್ನು ಹಣವೆಂದು ಪರಿಗಣಿಸುವುದಿಲ್ಲ. ಹಾಗೆಯೇ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆ ಯಾಗುತ್ತಿರುವುದು ಗಮನಕ್ಕೆ ಬಂದರೆ, ಅದನ್ನು ತೆಗೆದುಹಾಕಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ’ ಎಂದಿದ್ದರು.
ಭಾರತದಲ್ಲಿ ಬಿಟ್ ಕಾಯಿನ್ ನಿಷೇಧ ಇಲ್ಲದಿದ್ದರೂ, ಅದಕ್ಕೆ ಕಾನೂನಿನ ಬೆಂಬಲ ಇಲ್ಲದಿರುವುದು ಹೂಡಿಕೆದಾರರಲ್ಲಿ ನಿರಾಸಕ್ತಿ ಯನ್ನು ಹುಟ್ಟುಹಾಕಿದೆ. ಸುಪ್ರೀಂ ಕೋರ್ಟ್ ತೀರ್ಪು ಧೈರ್ಯ ತುಂಬುತ್ತಾಾದರೂ, ಕೇಂದ್ರ ಸರ್ಕಾರದ ನಿಲುವು ಇನ್ನೂ ಅಸ್ಪಷ್ಟ.
ಬಿಟ್ ಕಾಯಿನ್ ಸುರಕ್ಷಿತವೇ?
ಬಿಟ್ ಕಾಯಿನ್ ನಕಲಿಸುವುದು, ನಕಲಿ ಮಾಡುವುದು ಅಥವಾ ಹೊಂದಿರದ ಹಣವನ್ನು ಖರ್ಚು ಮಾಡುವುದು ತುಂಬಾ ಕಷ್ಟ.
ಆದರೆ ಬಿಟ್ ಕಾಯಿನ್ ವ್ಯಾಲೆಟ್ ಅನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಬಿಟ್ ಕಾಯಿನ್ ಸಂಗ್ರಹಿಸಲು ಅನುಮತಿಸುವ
ವೆಬ್ಸೈಟ್ಗಳಿಂದಲೂ ಕಳ್ಳತನಗಳು ನಡೆದ ಉದಾಹರಣೆಗಳು ಇವೆ. ಅದಲ್ಲದೆ, ಬಿಟ್ ಕಾಯಿನ್ ಮೌಲ್ಯವು ಏರಿಳಿತ ಕಾಣುವುದು ಸಹಜ. ಈ ಕಾರಣದಿಂದಾಗಿ, ನಮ್ಮ ಹಣವನ್ನು ಬಿಟ್ ಕಾಯಿನ್ ಪರಿವರ್ತಿಸುವುದು ಸುರಕ್ಷಿತವಲ್ಲ ಎಂದು ಕೆಲವರು ಭಾವಿಸು ತ್ತಾರೆ.
ಎಷ್ಟು ಬಿಟ್ ಕಾಯಿನ್ ಇವೆ?
ಪ್ರಸ್ತುತ ಒಟ್ಟು 21 ಮಿಲಿಯನ್ ಬಿಟ್ ಕಾಯಿನ್ ಅಸ್ತಿತ್ವದಲ್ಲಿದೆ. ಈಗ ಮೈನಿಂಗ್ ಮೂಲಕ (ಕಂಪ್ಯೂಟರ್ ಬಳಸಿ) ಬಿಟ್ ಕಾಯಿನ್ ರಚಿಸಲು ಮುಂದಾದರೆ, ಒಂದು ಬಿಟ್ ಕಾಯಿನ್ ಪಡೆಯಲು, ವರ್ಷಗಳೇ ಬೇಕಾಗಬಹುದು. ಅದಕ್ಕೆ ಅಪಾರ ವಿದ್ಯುಚ್ಚಕ್ತಿಯೂ
ಅಗತ್ಯ. ಸರಕು ಮತ್ತು ಸೇವೆಗಳಿಗೆ ಬಿಟ್ ಕಾಯಿನ್ನ್ನು ವಿನಿಮಯ ಮಾಡಿಕೊಳ್ಳಲು ಜನರು ಸಿದ್ಧರಿರುವುದರಿಂದಾಗಿ, ಅದಕ್ಕೆ ಮೌಲ್ಯ ಬಂದಿದೆ. ಚಿನ್ನ ಮತ್ತು ವಜ್ರಗಳು ಸೇರಿದಂತೆ, ಹಣಕ್ಕಿಂತ ಹೆಚ್ಚಿನ ಮೌಲ್ಯವುಳ್ಳ ಬಹಳಷ್ಟು ವಿಷಯಗಳು ಇವೆ.