Wednesday, 14th May 2025

ರೈತನ ಮಗಳ ಕ್ರೀಡಾ ಸಾಧನೆ

ಗುರುಪ್ರಸಾದ್‌ ಹಳ್ಳಿಕಾರ್‌

ಭಾರತೀಯ ಪರಂಪರೆಯಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿಯೂ ಮಹತ್ವವಾದ ಸಾಧನೆಗೈದಿದ್ದಾರೆ. ಪಿ.ವಿ ಸಿಂಧು,
ಪಿ.ಟಿ.ಉಷಾ ಹೀಗೆ ಇನ್ನು ಹಲವಾರು ನಾರಿಯರು ಕ್ರೀಡಾಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಂತಹವರ ಸಾಲಿನಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಆರ್. ಅಂಬಿಕಾ ನಮಗೆ ಮಾದರಿಯಾಗಿದ್ದಾರೆ.

ಪ್ರಸ್ತುತ ಸ್ಪರ್ಧಾ ಜಗತ್ತಿನಲ್ಲಿ ಹಿಂದೆ ಉಳಿಯಬಾರದು ಎಂಬ ಉದ್ದೇಶದಿಂದ ಸತತ ಪ್ರಯತ್ನ ಪರಿಶ್ರಮ ಹಾಕಿ ತಮ್ಮ ಕಾರ್ಯ ವನ್ನು ಬಹಳ ಶ್ರದ್ಧೆಯಿಂದ ನಿರ್ವಹಿಸುವವರನ್ನು ನಾವು ನಮ್ಮ ಸುತ್ತಮುತ್ತ ಕಾಣಬಹುದು. ಹಾಗೆಯೇ ಯಾವ ವ್ಯಕ್ತಿಯ ಮೇಲೆ ನೋವು, ಅವಮಾನ, ಬಡತನ ಈ ಮೂರು ಆಯುಧಗಳು ತೀವ್ರ ಬಲ ಪ್ರಯೋಗವಾಗುತ್ತವೆ.

ಅಲ್ಲಿ ಒಬ್ಬ ನಿಜವಾದ ಬಲಿಷ್ಠ ಸಾಧಕ ಹುಟ್ಟಿಕೊಳ್ಳುತ್ತಾನೆ ಎಂಬ ಮಾತಿನಂತೆ ಕ್ರೀಡಾಲೋಕದ ಯುವ ಸಾಧಕಿ ಆರ್. ಅಂಬಿಕಾ ಅವರು ನಮಗೆ ಕಾಣುತ್ತಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಿದರಕೆರೆ ಗ್ರಾಮದ ರೈತ ರಾಜಣ್ಣ ಮತ್ತು ಸವಿತಾ ಅವರ ಮಗಳಾದ ಇವರು ಪ್ರತಿಭಾವಂತ ಬಡ ವಿದ್ಯಾರ್ಥಿನಿ. ಆರ್ಥಿಕ ಮುಗ್ಗಟ್ಟು, ಸಹಕಾರದ ಕೊರತೆಯಿಂದ ಇವರ ಕುಟುಂಬ ಹತ್ತಾರು ಸಮಸ್ಯೆಯನ್ನು ಎದುರಿಸುತ್ತಿದ್ದರೂ ಕೂಡ ತನ್ನ ಪ್ರತಿಭೆಯಿಂದ ಕ್ರೀಡಾಲೋಕದಲ್ಲಿ ಮಿಂಚುತ್ತಿದ್ದಾರೆ.

ಸಾಧಿಸಬೇಕೆಂಬ ಛಲ, ಹೃದಯದಲ್ಲಿನ ಉತ್ಸಾಹದಿಂದ ಕ್ರೀಡಾಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅಂಬಿಕ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಈವರೆಗೆ ಏಳು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಒಂದು ಬಾರಿ ಅಂತಾರಾಷ್ಟ್ರೀಯ
ಮಟ್ಟದಲ್ಲಿ ಭಾಗವಹಿಸಿದ್ದಾರೆ. ಈ ಪೈಕಿ ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ನಡೆದ ರಾಷ್ಟ್ರೀಯ ಬಾಲ್  ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ಒಂದು ಬಾರಿ ಹಾಸನದಲ್ಲಿ ನಡೆದ ಅಂತರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಭಾಗವಹಿಸಿದ್ದಾರೆ.
ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ ನಾಲ್ಕು ಬಾರಿ ಪ್ರಥಮ (ಚಾಂಪಿಯನ್) ಹಾಗೂ ತೆಲಂಗಾಣದಲ್ಲಿ ನಡೆದ ಸ್ಪರ್ಧೆಯಲ್ಲಿ ಒಮ್ಮೆ ದ್ವಿತೀಯ (ರನ್ನರ್ ಅಪ್) ಸ್ಥಾನ ಗಳಿಸಿದ್ದಾರೆ.

ಉಳಿದಂತೆ ಬಿಹಾರ, ಪಾಟ್ನಾ, ಮಣಿಪುರದಲ್ಲಿ ನಡೆದ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಜತೆಗೆ ದಸರಾ ಕ್ರೀಡಾಕೂಟದಲ್ಲಿ ಐದು ಬಾರಿ ಭಾಗವಹಿಸಿರುವುದು ಅಂಬಿಕಾ ಅವರ ಸಾಧನೆಯ ಗರಿಮೆಗೆ ಇನ್ನಷ್ಟು ಗೌರವವನ್ನು  ತಂದು ಕೊಟ್ಟಿದೆ. ಹಾಸನದಲ್ಲಿ ನಡೆದ ಅಂತರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 19 ವರ್ಷದೊಳಗಿನ ಭಾರತ ಜೂನಿಯರ್ ತಂಡದ ಪ್ರತಿನಿಧಿಯಾಗಿ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ 19 ವರ್ಷದ ಒಳಗಿನ ಜೂನಿಯರ್ ತಂಡದಿಂದ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ.

ಇಲ್ಲಿ ವಿಶೇಷ ಎನಿಸುವುದು ಈ ಗ್ರಾಮೀಣ ಪ್ರತಿಭೆಯ ಛಲ, ಗುರಿ. ಒಂದು ಸಾಮಾನ್ಯ ಹಳ್ಳಿಯಲ್ಲಿದ್ದುಕೊಂಡು ಕ್ರೀಡಾಲೋಕ ದಲ್ಲಿ ಅಂತರಾಷ್ಟ್ರೀಯ ಮಟ್ಟದವರೆಗೂ ಸಾಧನೆಗೈದ ಆರ್.ಅಂಬಿಕಾ ಅವರು ಇಂದಿನ ಯುವಪೀಳಿಗೆಗೆ ಮಾದರಿ ಯಾಗಿದ್ದಾರೆ. ಗ್ರಾಾಮೀಣ ಹಿನ್ನೆಲೆಯು ಇವರ ಸಾಧನೆಗೆ ತೊಡಕಾಗಲಿಲ್ಲ ಎಂಬುದೇ ವಿಶೇಷ.

Leave a Reply

Your email address will not be published. Required fields are marked *