Thursday, 15th May 2025

ವೈದ್ಯನಾಗಿ ವಿವೇಕ ಸಂಪನ್ನ, ಸೇವಾ ಮೂರ್ತಿಯಾಗಿ ಪ್ರಸನ್ನ

ವಾರದ ತಾರೆ: ಡಾ.ವಿವೇಕ್ ಮೂರ್ತಿ

ವಿಶೇಷ ಲೇಖನ: ವಿರಾಜ್ ಕೆ.ಅಣಜಿ

Medicines only cure diseases, but doctors cure patients ಎಂಬ ಮಾತಿದೆ. ಔಷಧ ಎಷ್ಟೇ ಪರಿಣಾಮಕಾರಿ ಇದ್ದರೂ, ವೈದ್ಯರ ಸ್ಪರ್ಷ, ಹುಷಾರಾಗುತ್ತೀರಿ, ನಿಶ್ಚಿಂತೆಯಿಂದಿರಿ, ನಿಮಗೆ ನಾವಿದ್ದೇವೆ ಎಂಬ ವಿಶ್ವಾಸದ ಒಂದು ಮಾತು ಎಂಥವರನ್ನೂ ಜೀವ ಗಟ್ಟಿ ಹಿಡಿದುಕೊಳ್ಳುವಂತೆ ಮಾಡಬಲ್ಲದು!

ಜೀವ ರಾಶಿಗಳನ್ನು ಶುಶ್ರೂಷೆ ಮಾಡುವ ವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಎಂದು ನಿತ್ಯಪೂಜಿತ ಹರಿಗೆ ಹೋಲಿಸು ತ್ತೇವೆ. ಅಂತಹದ್ದೇ ದೊಡ್ಡ ಸ್ಥಾನಮಾನ ಹೊಂದಿದ, ಕನ್ನಡದ ಮಣ್ಣಿನ ಮೂಲದ, ನಿನ್ನೆಯಷ್ಟೇ ಅಮೆರಿಕದ ಸರ್ಜನ್ ಜನರಲ್ ಆಗಿ ಎರಡನೇ ಬಾರಿ ನೇಮಕವಾದ ಡಾ.ವಿವೇಕ್ ಮೂರ್ತಿ ನಮ್ಮ ಈ ವಾರದ ತಾರೆ.

ವಿವೇಕ ಮತ್ತು ಜ್ಞಾನ ಹೊಂದಿದ ಯಾರಿಗೇ ಆದರೂ ವಿಶ್ವದೆಲ್ಲೆಡೆ ಮಾನ್ಯತೆಯಿದೆ ಎಂಬುದಕ್ಕೆ ಉದಾಹರಣೆ ಡಾ.ವಿವೇಕ್ ಮೂರ್ತಿ. ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದಾಗ ಒಬಾಮಾ ಕೇರ್ ಎಂಬ ಯೋಜನೆ ಯಶಸ್ಸಿನ ಹಿಂದೆ ನಿಂತದ್ದೇ
ಇವರು. ಅಮೆರಿಕದಲ್ಲಿ ಸರ್ಜನ್ ಜನರಲ್ ಹುದ್ದೆಯೇ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಟಾಪ್ ಹುದ್ದೆ. ಅಲ್ಲಿ ಕುಳಿತವರ
ನಿರ್ಧಾರಗಳೇ ಅಮೆರಿಕದ ‘ಆರೋಗ್ಯ’ ಕಾಪಾಡುವಷ್ಟು ಮಟ್ಟಿಗೆ ಪ್ರಭಾವಶಾಲಿ ಮತ್ತು ಮುಖ್ಯ ಆಗಿರುತ್ತದೆ.

ಆದ್ದರಿಂದಲೇ ವಿವೇಕ್‌ರನ್ನು ಸರ್ಜನ್ ಜನರಲ್ ಮಾಡಲು ಒಬಾಮಾ ಆಸ್ಥೆ ತೋರಿದ್ದರು. ಆದ್ದರಿಂದಲೇ 2014ರಿಂದ 17ರವರೆಗೆ ಅಮೆರಿಕದ ಅತಿ ಕಿರಿಯ (43 ವರ್ಷ) ಸರ್ಜನ್ ಜನರಲ್ ಆಗಿ ವಿವೇಕ್ ಕಾರ್ಯ ನಿರ್ವಹಿಸಿದ್ದರು. ಟ್ರಂಪ್ ಅಧ್ಯಕ್ಷರಾದ ನಂತರ ಸ್ಥಾನದಿಂದ ಇಳಿದು ತಮ್ಮ ಸಂಶೋಧನೆಗಳ ಜಾಡು ಹಿಡಿದು ಹೊರಟಿದ್ದರು.

ಆದರೆ, ಕಳೆದ ನವೆಂಬರ್‌ನಲ್ಲಿ ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗುವುದು ಪಕ್ಕಾ ಆಗುತ್ತಿದ್ದಂತೇ ವಿವೇಕ್ ಮತ್ತೆ ಸರ್ಜನ್ ಜನರಲ್ ಆಗುವುದೂ ಖಚಿತ ಎಂಬಷ್ಟರ ಮಟ್ಟಿಗೆ ತಮ್ಮ ಮೇಲಿನ ವಿಶ್ವಾಸ ಉಳಿಸಿಕೊಂಡಿದ್ದರು. ಹಾಗೆ ನೋಡಿದರೆ, ಜನರಲ್ ಹುದ್ದೆ ಬಿಟ್ಟಿಯಾಗಿ ವಿವೇಕ್‌ರನ್ನು ಹುಡುಕಿ ಬಂದಿದ್ದಲ್ಲ. ಮೂಲತಃ ಬ್ರಿಟನ್‌ನಲ್ಲಿ ಹುಟ್ಟಿದ್ದ ವಿವೇಕ್, ಪ್ರತಿಷ್ಠಿತ ಹಾರ್ವರ್ಡ್ ವಿವಿಯಲ್ಲಿ ಎಂಬಿಬಿಎಸ್ ಪದವಿ ಪಡೆದವರು. ನಂತರ ಯಾಲೆ ವಿವಿಯಿಂದ ಎಂಡಿ ಮತ್ತು ಎಂಬಿಎ ಪದವಿಗಳನ್ನು ಪಡೆದರು. ಇದರಿಂದಾಗಿ ವೈದ್ಯ ಸೇವೆ ಮಾಡುವ ಜತೆಗೆ ಅದನ್ನು ಪರಿಣಾಮಕಾರಿಯಾಗಿ ಹೇಗೆ ಎಲ್ಲ ವರ್ಗಕ್ಕೂ ತಲುಪಿಸಬಹುದು ಎಂಬು ದನ್ನು ವಿವೇಕ್ ಅರ್ಥ ಮಾಡಿಕೊಂಡಿದ್ದರು.

ಬೋಸ್ಟನ್‌ನಲ್ಲಿ ವೈದ್ಯ ವೃತ್ತಿ ಆರಂಭಿಸಿ, ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಉಪನ್ಯಾಸಕರೂ ಆಗಿದ್ದರು. 2009ರ ಸುಮಾರಿ ನಲ್ಲಿ Doctors for America ಎಂಬ ಎನ್‌ಜಿಒ ಆರಂಭಿಸಿ, ತಜ್ಞ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ
ತಂದು, ಬಡವರ್ಗದವರಿಗೂ ಉನ್ನತ ವೈದ್ಯ ಸೇವೆಯನ್ನು ನೀಡಿದರು. ಅವರ ಈ ಪ್ರಯತ್ನ ಭಾರಿ ಮನ್ನಣೆ ಮತ್ತು ಮೆಚ್ಚುಗೆಗೆ
ಪಾತ್ರವಾಯಿತು. ವೈದ್ಯರೆಂದರೆ ಬರೀ ಹಣ ಕೀಳುವವರು ಎಂಬ ಅಪವಾದದಿಂದ ಹೊರಬರಲು ಅದು ಮೊದಲ ಹೆಜ್ಜೆಯಾಗಿತ್ತು.

ಅಮೆರಿಕದ ಜನರ ಸಾಧನೆಗೆ ಅವರ ಆರೋಗ್ಯವೂ ಕೂಡ ಒಂದು ಕಾರಣ. ಆದ್ದರಿಂದಲೇ ಫಿಟ್ನೆಸ್, ಮಾನಸಿಕ ಆರೋಗ್ಯದ ಬಗ್ಗೆ
ವಿವೇಕ್ ಸದಾ ಪ್ರಾಮುಖ್ಯ ಕೊಡುತ್ತಾರೆ. ಎಚ್‌ಐವಿ ಏಡ್ಸ್, ಡ್ರಗ್ಸ್‌, ಸಿಗರೇಟ್, ಇ-ಸಿಗರೇಟ್ ಬಗ್ಗೆ ಯುವಜನರು ದಾರಿ ತಪ್ಪದಂತೆ
ಹಲವು ಯೋಜನೆಗಳನ್ನು ರೂಪಿಸಲುವಲ್ಲಿ ಡಾ.ವಿವೇಕ್ ಅವರದ್ದೇ ಮಾಸ್ಟರ್ ಮೈಂಡ್. ಕಳೆದ ವರ್ಷ ಕರೋನಾ ವಿಶ್ವವನ್ನು ಕಾಡಿದಾಗ ಅಮೆರಿಕ ತತ್ತರಿಸಿದ್ದು ಗೊತ್ತಿರುವ ವಿಚಾರ. ಅದೇ ಸಂದರ್ಭದಲ್ಲೇ ಅಮೆರಿಕಕ್ಕೆ ಅಧ್ಯಕ್ಷರಾಗಿ ಬೈಡನ್ ಆಯ್ಕೆಯಾ ದರು. ಆಗ, ಕರೋನಾ ಕಟ್ಟಿಹಾಕಲು ಬೈಡನ್ ಮೊದಲು ನೆನಪಿಸಿಕೊಂಡಿದ್ದೇ ಡಾ.ವಿವೇಕ್ ಮೂರ್ತಿ ಅವರನ್ನು.

ಎರಡೂವರೆ ಲಕ್ಷ ಜನರನ್ನು ಬಲಿ ತಗೆದುಕೊಂಡಿದ್ದ ಕರೋನಾಕ್ಕೆ ಕಡಿವಾಣ ಹಾಕುವ ಆಯುಧ ಹಿಡಿದು ನಿಂತವರೇ
ವಿವೇಕ್. ಡಾ.ಮೂರ್ತಿ ಅವರ ಪತ್ನಿ ಆಲಿಸ್ ಚೆನ್ ಕೂಡ ವೈದ್ಯೆ, ದಂಪತಿಗೆ ಇಬ್ಬರು ಮಕ್ಕಳ ಸುಂದರ ಸಂಸಾರವಿದೆ. ಪತಿಯ
ಎಲ್ಲ ಮಾನವೀಯ ಪ್ರಯತ್ನ ಗಳಿಗೆ ಚೆನ್ ಬೆನ್ನೆಲುಬಾಗಿದ್ದಾರೆ,

ವೈದ್ಯ ಕೆಲಸವನ್ನು ಸೇವೆಯಂತೆ ಇಬ್ಬರೂ ಮಾಡುತ್ತಿದ್ದಾರೆ. ಇಂದು ನಾನು ತಲುಪಿರುವ ಹಂತ ಮತ್ತು ನನ್ನ ಜೀವನ ಇಲ್ಲಿಯ ವರೆಗೂ ಹೇಗೆ ಸಾಗಿ ಬಂತು ಎಂದು ನಂಬಲು ನನಗೆ ಈಗಲೂ ಸಾಧ್ಯವಾಗಿಲ್ಲ. ಏಕೆಂದರೆ, ನನ್ನಜ್ಜನಂತೆ ನಾನೂ ಕೂಡ
ದಕ್ಷಿಣ ಭಾರತದಲ್ಲಿ ಅಕ್ಕಿ, ತೆಂಗು, ಹುಣಸೆ ಹಣ್ಣು ಬೆಳೆದುಕೊಂಡು ಇರಬೇಕಿತ್ತೇನೋ. ಆದರೆ, 40 ವರ್ಷಗಳ ಹಿಂದೆ ನನ್ನ ತಂದೆ-ತಾಯಿ ಹೇಗೂ ಗಟ್ಟಿ ಧೈರ್ಯ ಮಾಡಿ, ಭಾರತದಿಂದ ಇಷ್ಟು ದೂರವಿರುವ ಅಮೆರಿಕಕ್ಕೆ ಬಂದರು. ನನ್ನನ್ನು ಮತ್ತು ಸಹೋದರಿ ಯನ್ನು ಚೆನ್ನಾಗಿ ಬೆಳೆಸಿದರು.

ಎಲ್ಲದಕ್ಕಿಂತ ಮುಖ್ಯವಾಗಿ, ಅಮೆರಿಕದಲ್ಲಿ ನೀವು ಹೇಗಿದ್ದೀರಿ, ಮೈ ಬಣ್ಣ ಕಪ್ಪೋ, ಬಿಳುಪು ಎಂಬುದನ್ನು ಪರಿಗಣಿಸುವುದಿಲ್ಲ. ನೀವು ಯಾರ ಮಗ, ಎಷ್ಟು ಹಣವಂತರು ಎಂಬುದನ್ನು ಲೆಕ್ಕ ಹಾಕಿ ಬಹುಪರಾಕ್ ಹೇಳುವುದಿಲ್ಲ. ಇಲ್ಲಿ ಬರೀ ನಿಮ್ಮ ಜ್ಞಾನ
ಮತ್ತು ಸಾಧನೆಗೆ ಮಾತ್ರ ಬೆಲೆ. ನೀವದನ್ನು ಎಲ್ಲಿಯವರೆಗೂ ವಿಸ್ತರಿಸಿಕೊಳ್ಳುತ್ತೀರೋ ಅಲ್ಲಿಯವರೆಗೂ ಸಾಧನೆಯ ಹಾದಿ
ನಿಮ್ಮದಾಗುತ್ತದೆ ಎಂಬುದನ್ನು ನನ್ನ ಪೋಷಕರು ಚೆನ್ನಾಗಿ ಅರ್ಥ ಮಾಡಿಸಿದರು. ಅದನ್ನು ನಾವು ನಂಬಿದ್ದರಿಂದಲೇ ಇಲ್ಲಿಯ ವರೆಗೂ ಬಂದಿದ್ದೇವೆ.

ಇಷ್ಟೆಲ್ಲ ಅವಕಾಶ ನೀಡಿದ ಅಮೆರಿಕಕ್ಕೆ ನಾವು ಋಣಿ ಎಂದು ನ್ಯೂಯಾರ್ಕ್‌ನ ಇಚನ್ ಸ್ಕೂಲ್ ಆಫ್ ಮೆಡಿ ಸಿನ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿವೇಕ್ ಮೂರ್ತಿ ಹೇಳಿದ್ದರು. ಅದನ್ನು ಕೇಳಿದಾಗ Brain Drain ನಿಂದಾಗಿ ಭಾರತಕ್ಕಾದ ಒಂದು ನಷ್ಟ ನೆನೆದು ಸಂಕಟ ಎನಿಸಿದೇ ಇರಲಾರದು. ಆದರೆ, ಇಂದಿಗೂ ವಿವೇಕ್ ಮೂರ್ತಿಯವರನ್ನು ಇಂಡೋ-ಅಮೆರಿಕನ್ ಒರಿಜಿನ್ ಎಂದೇ ಗೌರವದಿಂದ ಗುರುತಿಸಲಾಗುತ್ತದೆ. ಇದನ್ನು ವಿವೇಕ್ ಕೂಡ ಇಷ್ಟ ಪಡುತ್ತಾರೆ. ಮಾನವ ಸೇವೆ ಮಾಡುತ್ತಿರುವ ಮೂರ್ತಿಗೆ ಇನ್ನಷ್ಟು ಕೀರ್ತಿ, ಗೌರವ, ಬಿರುದುಗಳ ಅಲಂಕಾರವಾಗಲಿ.

Leave a Reply

Your email address will not be published. Required fields are marked *