ಮುಂಬೈ: ಮಾಲ್‍ನಲ್ಲಿದ್ದ ಆಸ್ಪತ್ರೆಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಇಬ್ಬರು ಕೊರೊನಾ ಸೋಂಕಿತರು ಮೃತ ಪಟ್ಟು ಹಲವಾರು ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಭಂದೂಪ್ ಪ್ರದೇಶದಲ್ಲಿರುವ ಡ್ರೀಮ್ಸ್ ಮಾಲ್ ಸನರೈಸ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ.
ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ 70 ರೋಗಿಗಳನ್ನು ರಕ್ಷಿಸಿ ಬೇರೊಂದು ಆಸ್ಪತ್ರೆಗೆ ರವಾನಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಆದರೆ, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
20 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಹಾಗೂ 15 ನೀರಿನ ಟ್ಯಾಂಕರ್‍ಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.
ಮಾಲ್‌ನಲ್ಲಿ ಆಸ್ಪತ್ರೆ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಂಬೈ ಮೇಯರ್ ಕಿಶೋರಿ ಪಡ್ನೆಕರ್ ಮಾಲ್‍ನಲ್ಲಿ ಆಸ್ಪತ್ರೆ ಇರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೆ ಮೊದಲು ಮಾಲ್‍ನಲ್ಲಿ ಆಸ್ಪತ್ರೆ ಇರುವುದನ್ನು ನೋಡುತ್ತಿರುವುದು ಆಸ್ಪತ್ರೆ ನಡೆಸಲು ಅನುಮತಿ ನೀಡಿರುವ ಅಧಿಕಾರಿಗಳು ಮತ್ತು ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ