ಹನುಮಂತ.ಮ.ದೇಶಕುಲಕರ್ಣಿ
ಅಹಂಕಾರವು ತಲೆಗೆ ಏರಿದರೆ, ಮನಸ್ಸು ಮರ್ಕಟ ಬುದ್ಧಿಯನ್ನು ತೋರುತ್ತದೆ, ತನಗಿಂತ ಎಲ್ಲರೂ ಕೀಳು ಎಂಬ ಭಾವನೆ ಬರುತ್ತದೆ. ಅಂತಹ ಅಹಂಕಾರದಿಂದ ವರ್ತಿಸಿದ ವಿಶ್ವಾಮಿತ್ರನನ್ನು ಒಂದು ಹಸು ಸೋಲಿಸಿದ ಕಥೆ ಕುತೂಹಲಕಾರಿ.
ವಸಿಷ್ಠರ ತಪೋಮಹಿಮೆ ಅಪಾರ. ಅವರು ಶಾಂತಮೂರ್ತಿಗಳು. ಕಾಮಕ್ರೋಧಗಳನ್ನು ಜಯಿಸಿದ್ದರು. ವಸಿಷ್ಠಮುನಿಗಳ ತಪೋ
ನಿಷ್ಠೆ, ಉದಾರಗುಣ ಮೆಚ್ಚಿ ದೇವೇಂದ್ರನು ಒಂದು ದಿವ್ಯವಾದ ಹಸುವನ್ನು ಅವರಿಗೆ ಒದಗಿಸಿದ್ದನು. ಅದರ ಹೆಸರು ನಂದಿನಿ. ಕಾಮಧೇನುವಿನ ಮಗಳು. ಅದು ದಿವ್ಯಧೇನು. ದಿವ್ಯಶಕ್ತಿ ಅದಕ್ಕಿತ್ತು. ಬೇಕಾದಷ್ಟು ಹಾಲು, ತುಪ್ಪ ನಂದಿನಿಯಿಂದ ದೊರೆಯು
ತ್ತಿತ್ತು. ಅದರ ಮೈಮೇಲೆ ಚಂದ್ರಾಕಾರದ ಚುಕ್ಕೆಗಳಿದ್ದುದರಿಂದ ಶಬಲೆಯೆಂದು ಅದನ್ನು ಕರೆಯುತ್ತಿದ್ದರು. ಶಬಲೆಯೆಂದರೆ ಅನೇಕ ಬಣ್ಣವುಳ್ಳವಳು ಎಂದರ್ಥ. ವಸಿಷ್ಠರಿಗೂ ಅರುಂಧತಿ ಗೂ ಅದರ ಮೇಲೆ ಬಹಳ ಪ್ರೀತಿ.
ವಸಿಷ್ಠ ಮುನಿಗಳ ತಪಸ್ಸು, ತಾಳ್ಮೆ, ಬ್ರಹ್ಮತೇಜಸ್ಸು ಎಷ್ಟಿತ್ತೆಂದರೆ, ಅವರ ಪ್ರಭಾವದಿಂದ ವಿಶ್ವಾಮಿತ್ರನು ತನ್ನ ರಾಜ್ಯವನ್ನು ತೊರೆದು ವಸಿಷ್ಠರಂತೆ ಋಷಿಯಾದನು. ವಿಶ್ವಾವಿುತ್ರ ಒಬ್ಬ ರಾಜ. ಆತನು ಬೇಟೆಯಾಡುವುದಕ್ಕಾಗಿ ಒಂದು ಸಲ ಕಾಡಿಗೆ ಹೋದನು. ಅಲ್ಲಿ ಬೇಟೆಯಾಡಿ ಬಳಲಿ ತನ್ನ ಪರಿವಾರ ದೊಡನೆ ಹೋಗುತ್ತಿರುವಾಗ, ವಸಿಷ್ಠ ಮುನಿಗಳ ಆಶ್ರಮ ಕಾಣಿಸಿತು.
ವಿಶ್ವಾಮಿತ್ರರಾಜನು ವಸಿಷ್ಠರ ದರ್ಶನಕ್ಕಾಗಿ ಆಶ್ರಮಕ್ಕೆ ಹೋದನು. ವಸಿಷ್ಠರನ್ನು ಕಂಡು ವಿನಯದಿಂದ ನಮಸ್ಕರಿಸಿದನು. ರಾಜನನ್ನು ಕಂಡು ಮುನಿಗಳಿಗೆ ಸಂತೋಷವಾಯಿತು. ಅವರು ಹಣ್ಣುಹಂಪಲುಗಳನ್ನು ತಂದಿತ್ತು ಉಪರಿಸಿದರು. ಅವನೊಡನೆ ಬಹು ವಿಶ್ವಾಸದಿಂದ ಮಾತನಾಡಿದರು. ವಿಶ್ವಾಮಿತ್ರನು ತನ್ನ ರಾಜಧಾನಿಗೆ ಹಿಂದಿರುಗಲು ಸಿದ್ಧನಾದನು.
ಆಗ ವಸಿಷ್ಠರು, ‘ವಿಶ್ವಾಮಿತ್ರ, ನಮ್ಮ ಆಶ್ರಮಕ್ಕೆ ಅತಿಥಿಯಾಗಿ ಬಂದಿದ್ದೀಯೆ. ನೀನೂ ನಿನ್ನ ಪರಿವಾರದವರೂ ಇಲ್ಲಿ ಭೋಜನ ಮಾಡಿ ವಿಶ್ರಮಿಸಿಕೊಂಡು ಹೋಗಿರಿ’ ಎಂದರು. ವಿಶ್ವಾಮಿತ್ರನು ಮನಸ್ಸಿನಲ್ಲಿ, ‘ನನ್ನ ಸೇನೆ ದೊಡ್ಡದಾಗಿದೆ. ನಾವೆಲ್ಲರೂ ಊಟಕ್ಕೆ ನಿಂತರೆ, ಈ ಋಷಿಗಳಿಗೆ ತೊಂದರೆಯಾಗುವುದು’ ಎಂದುಕೊಂಡನು. ಆತನು, ‘ಮಹಾತ್ಮರೆ, ನಿಮ್ಮ ಒಳ್ಳೆಯ ಮಾತಿನಿಂದಲೇ ನಮಗೆ ಸತ್ಕಾರವು ನಡೆದಷ್ಟು ಸಂತೋಷವಾಯಿತು.
ಮುಖ್ಯವಾಗಿ ನಿಮ್ಮ ದರ್ಶನವಾದದ್ದು ನನ್ನ ಭಾಗ್ಯ. ನಿಮಗೆ ಅನಂತ ವಂದನೆ ಗಳು. ಹೋಗಿ ಬರುತ್ತೇನೆ. ಪ್ರೀತಿ ಇರಲಿ’ ಎಂದನು. ಊಟ ನೀಡಿದ ಹಸು ವಸಿಷ್ಠರು ‘ರಾಜ, ಸಂಕೋಚ ಬೇಡ, ನೀನು ಹಾಗೆಯೇ ಹಿಂದಿರುಗುವುದು ನನಗೆ ಹಿತವೆನಿಸದು. ಎಲ್ಲರೂ ಉಳಿಯಿರಿ’ ಎಂದು ಒತ್ತಾಯ ಮಾಡಲು ವಿಶ್ವಾ ಮಿತ್ರನು ಒಪ್ಪಿದನು. ನಂದಿನಿಯ ಮಹಿಮೆಯಿಂದ ಬಗೆಬಗೆಯ ಭಕ್ಷ್ಯ ಭೋಜ್ಯಗಳ ರಾಶಿಯೇ ಏರ್ಪಟ್ಟಿತ್ತು. ವಿಶ್ವಾಮಿತ್ರನೂ ಅವನ ಪರಿವಾರ ದವರೂ ಉಂಡು ತೇಗಿದರು. ಊಟದ ರುಚಿಯನ್ನು ಕಂಡು ವಿಶ್ವಾಮಿತ್ರನು ಅಚ್ಚರಿಗೊಂಡನು.
ಅಂತಹ ರುಚಿಕರ ಭೋಜನ ಒದಗಿಸಿದ್ದು ನಂದಿನಿ ಎಂಬ ಹಸು ಎಂದು ತಿಳಿದು ಅವನಿಗೆ ದುರ್ಬುದ್ಧಿ ಹುಟ್ಟಿತು. ಇಂತಹ ಉನ್ನತ ತಳಿಯ ಹಸು ರಾಜನಲ್ಲಿರ ಬೇಕಲ್ಲದೇ, ಕಾಡಿನಲ್ಲಿರುವ ಋಷಿಯ ಬಳಿ ಏಕಿರಬೇಕು ಎಂದು ಆತನ ಮನ ತರ್ಕಿಸಿತು. ಆ ಹಸುವನ್ನು ತನ್ನ ರಾಜ್ಯಕ್ಕೆ ತೆಗೆದುಕೊಂಡು ಹೋಗಬೇಕೆಂದು ದುರಾಸೆ ಅವನಲ್ಲಿ ಹುಟ್ಟಿತು. ವಸಿಷ್ಠರ ಬಳಿಗೆ ಹೋಗಿ ತನ್ನ ಅಪೇಕ್ಷೆಯನ್ನು ತಿಳಿಸಿದನು. ಆಗ ವಸಿಷ್ಠರು, ‘ರಾಜ, ಈ ಹಸುವನ್ನು ಇಂದ್ರನು ನನಗೆ ಕೊಟ್ಟಿದ್ದಾನೆ. ಆಶ್ರಮದಲ್ಲಿರುವ ಸಾವಿರಾರು ವಿದ್ಯಾರ್ಥಿ ಗಳಿಗೂ, ಅತಿಥಿಗಳಿಗೂ ಇದರ ನೆರವಿನಿಂದಲೇ ದಿನವೂ ಭೋಜನ ನಡೆಯುತ್ತಿದೆ.
ಹೋಮಕಾರ್ಯಗಳಿಗೆ ಬೇಕಾದ ಹಾಲು, ಮೊಸರು, ತುಪ್ಪಗಳೆಲ್ಲವೂ ನಂದಿನಿಯಿಂದಲೇ ಆಗಬೇಕು. ಇಂಥ ಹಸುವನ್ನು ನೀನು ಕೇಳಬಹುದೇ? ಸಲ್ಲದು’ ಎಂದರು. ‘ಋಷಿಗಳೇ, ಇದಕ್ಕೆ ಪ್ರತಿಯಾಗಿ ಒಂದು ಲಕ್ಷ ಅಲಂಕೃತ ಗೋವುಗಳನ್ನು ಕೊಡುತ್ತೇನೆ. ನಿಮಗೆ ಹಾಲು, ತುಪ್ಪಗಳ ಕೊರತೆಯೇನೂ ಆಗುವುದಿಲ್ಲ.’ ಎಂದ ವಿಶ್ವಾಮಿತ್ರ. ಆದರೆ ವಸಿಷ್ಠ ಋಷಿಗಳು ಒಪ್ಪಲಿಲ್ಲ. ಅದು ಪವಿತ್ರ ಹಸು, ಇಲ್ಲೇ ಇರಲಿ ಎಂದರು. ರಾಜ ಮತ್ತು ಋಷಿಗಳ ನಡುವೆ ವಾದ ಬೆಳೆಯಿತು. ವಸಿಷ್ಠರು ಕೊಡುವುದಿಲ್ಲ – ವಿಶ್ವಾಮಿತ್ರನು
ಬಿಡುವುದಿಲ್ಲ.
ನಾನೇ ಮಹಾರಾಜ ವಿಶ್ವಾಮಿತ್ರನು ಸಿಟ್ಟಿನಿಂದ ಬೆಂಕಿಯಾದನು. ‘ನಾನು ಮಹಾರಾಜ. ಜಗತ್ತಿನಲ್ಲಿರುವ ಉತ್ತಮ ವಸ್ತುಗಳೆಲ್ಲವೂ
ನನಗೆ ಸೇರಬೇಕು! ಈ ಬಡಮುನಿಯೊಬ್ಬನು ನನ್ನನ್ನು ಧಿಕ್ಕರಿಸಿ ಉತ್ತರ ಕೊಡುವನಲ್ಲ!’ ಎಂದು ಫೂತ್ಕರಿಸಿದನು. ‘ವಸಿಷ್ಠರೆ, ನೀವು ನಂದಿನಿಯನ್ನು ಕೊಡದಿದ್ದರೆ ಬಲಾತ್ಕಾರದಿಂದ ಒಯ್ಯುತ್ತೇನೆ!’ ಎಂದನು. ವಸಿಷ್ಠರು ಶಾಂತರಾಗಿಯೇ ಇದ್ದರು. ಯಾವ ಉತ್ತರವನ್ನೂ ಕೊಡಲಿಲ್ಲ. ವಿಶ್ವಾಮಿತ್ರನು ತನ್ನ ಸೈನಿಕರನ್ನು ಕರೆದು, ‘ಸೈನಿಕರೆ, ಆ ಹಸುವನ್ನು ಹಗ್ಗದಿಂದ ಬಿಗಿದು
ಬಲಾತ್ಕಾರವಾಗಿ ಎಳೆದು ತನ್ನಿರಿ’ ಎಂದು ಆಜ್ಞಾಪಿಸಿದನು.
ಸೈನಿಕರು ನಂದಿನಿಯನ್ನು ಮುತ್ತಿದರು. ಆಗ ನಂದಿನಿಯು ಸೈನಿಕರಿಂದ ತಪ್ಪಿಸಿಕೊಂಡು ವಸಿಷ್ಠರ ಬಳಿಗೆ ಓಡುತ್ತಾ ಬಂದಿತು. ವಸಿಷ್ಠರನ್ನು ಕುರಿತು, ‘ಮಹರ್ಷಿಗಳೆ, ಈ ರಾಜಭಟರು ನನ್ನನ್ನು ಎಳದೊಯ್ಯಲು ಹವಣಿಸುತ್ತಿದ್ದಾರೆ. ನನ್ನನ್ನು ತ್ಯಜಿಸಿಬಿಟ್ಟಿರಾ? ನಾನೇನು ತಪ್ಪು ಮಾಡಿದೆ?’ ಎಂದು ಕೇಳಿತು. ಅದಕ್ಕೆ ವಸಿಷ್ಠ ಮುನಿಗಳು, ‘ಶಬಲೆ, ನೀನು ಯಾವ ತಪ್ಪನ್ನೂ ಮಾಡಿಲ್ಲ. ನಾನು ನಿನ್ನನ್ನು ತ್ಯಜಿಸಿಲ್ಲ.
ವಿಶ್ವಾಮಿತ್ರನು ಬಲಾತ್ಕಾರದಿಂದ ನಿನ್ನನ್ನು ಒಯ್ಯುತ್ತಿದ್ದಾನೆ. ಅವನಲ್ಲಿ ಸೇನಾಬಲವಿದೆ. ಅಲ್ಲದೆ ನಮಗೆ ಅತಿಥಿಯಾಗಿ ಬಂದಿ ದ್ದಾನೆ. ಅವನನ್ನು ಹೇಗೆ ತಡೆಯಲಿ?’’ ಎಂದರು. ಆಗ ನಂದಿನಿ, ‘ನನಗೆ ಅನುಜ್ಞೆಯನ್ನು ಕೊಡಿ. ನಾನೇ ಇವನ ದರ್ಪವನ್ನು ಅಡಗಿಸುತ್ತೇನೆ’ ಎಂದಿತು. ವಸಿಷ್ಠರು ಒಪ್ಪಿದರು.
ಒಡನೆಯೇ ನಂದಿನಿಯು ವಿಶ್ವಾಮಿತ್ರನ ಸೇನೆಯ ಎದುರು ನಿಂತು ‘ಅಂಬಾ’ ಎಂದು ಕೂಗಿತು. ಅದರ ದಿವ್ಯಶಕ್ತಿಯಿಂದ ಲಕ್ಷಾಂತರ ಮಂದಿ ಮಾಯಾವಿ ಸೈನಿಕರು ಹುಟ್ಟಿ ವಿಶ್ವಾಮಿತ್ರನ ಸೈನಿಕರನ್ನೆದುರಿಸಿದರು. ದೊಡ್ಡ ಯುದ್ಧ ನಡೆಯಿತು. ವಿಶ್ವಾ ಮಿತ್ರನೂ ಅವನ ಸೈನಿಕರೂ ಸೋತುಹೋದರು.
ವಿಶ್ವಾಮಿತ್ರನಿಗೆ ತನ್ನ ತಪ್ಪಿನ ಅರಿವಾಯಿತು. ವಸಿಷ್ಠರ ಕಾಲಿಗೆರಗಿ ತನ್ನ ತಪ್ಪನ್ನು ಅರುಹಿದನು. ಋಷಿಗಳ ತಪೋಶಕ್ತಿ ಮತ್ತು ಲೋಕಕಲ್ಯಾಣ ಕೈಂಕರ್ಯವನ್ನು ಮನನ ಮಾಡಿಕೊಂಡು, ಮುಂದೆ ಆತನೂ ತನ್ನ ಋಷಿಯಾದನು. ಮಾತ್ರವಲ್ಲ, ಸಪ್ತರ್ಷಿ ಎನಿಸಿ, ವಸಿಷ್ಠರ ಜತೆ ವಿಶ್ವಾಮಿತ್ರನೂ ಅಜರಾಮರ ಎನಿಸಿದನು.