ಮಹಾದೇವ ಬಸರಕೋಡ
ಬದುಕು ಯಾವಾಗಲೂ ನಮ್ಮ ನಿರೀಕ್ಷೆಯಂತೆಯೇ ಸಾಗಬೇಕು ಎಂದು ಮನಸ್ಸು ಬಯಸುತ್ತದೆ. ನಮ್ಮ ನಂಬಿಕೆಗಳಿಗೆ ಗಟ್ಟಿಯಾಗಿ ಅಂಟಿಕೊಂಡು ಬದುಕು ಮುನ್ನಡೆಯುತ್ತದೆ.
ಪರಿವರ್ತನೆ ಜಗದ ನಿಯಮ ಎಂಬ ಮಾತನ್ನು ನಮ್ಮ ಅಂತರಂಗ ಅರ್ಥೈಯಿಸಿಕೊಳ್ಳುವಲ್ಲಿ ಆಗಾಗ ಎಡುವುದು ಸಹಜವಾಗಿ, ಜಡತೆಯ ಸಂಕೋಲೆಯಲ್ಲಿ ನಾವು ಬಂಧಿತರಾಗುತ್ತೇವೆ. ಸಾಂದರ್ಭಿಕ ವಾಗಿ ನಮ್ಮ ಜಡ ನಂಬಿಕೆಗಳನ್ನು ನಾವು ಮತ್ತೆ ಚಲನ ಶೀಲಗೊಳಿಸುವಲ್ಲಿ ಅಸಮರ್ಥರಾದಾಗ ಅವುಗಳಿಗೆ ಧಕ್ಕೆಯುಂಟಾಗುತ್ತದೆ. ನಮ್ಮ ನಿರೀಕ್ಷೆ ಮತ್ತು ನೈಜ ಸಾಮರ್ಥ್ಯ ಇವುಗಳ ನಡುವಿನ ಅಸಮತೋಲನದಿಂದಾಗಿ ಒತ್ತಡ ಉಂಟಾಗುತ್ತದೆ. ನಮ್ಮ ಸುತ್ತಲಿನ ಸನ್ನಿವೇಶಗಳನ್ನು ಸರಿಯಾಗಿ ಅರಿಯದೆ ಅವು ಗಳಿಗೆ ನಾವು ತಪ್ಪಾಗಿ ಪ್ರತಿಕ್ರಿಯಿಸುವದರಿಂದ ಒತ್ತಡ ಇನ್ನಷ್ಟು ಹೆಚ್ಚಾಗಲು ಕಾರಣವಾಗುತ್ತದೆ.
ಒತ್ತಡ ನಮ್ಮನ್ನು ವಿವೇಕ ಶೂನ್ಯರನ್ನಾಗಿ ಮಾಡುತ್ತದೆ, ಅಲ್ಲದೆ ಶಕ್ತಿಹೀನರನ್ನಾಗಿಸುತ್ತದೆ. ಕಷ್ಟ, ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿಸಿಬಿಡುತ್ತದೆ. ಒತ್ತಡದಲ್ಲಿನ ಕೆಲಸಗಳೆಲ್ಲವೂ ಗೆಲುವಿನ ದಿಕ್ಕು ಬದಲಿಸುವುದೆಂಬುದರಲ್ಲಿ ಎರಡು ಮಾತಿಲ್ಲ. ಒತ್ತಡದ ವಿಚಾರವಾಗಿ ಒಂದು ಜೆನ್ ಕಥೆಯಿದೆ. ಒಬ್ಬ ರಾಜ ತನ್ನ ರಾಜ್ಯಕ್ಕೆ ಪ್ರತಿಭಾವಂತ ಮುಖ್ಯಮಂತ್ರಿಯೊಬ್ಬನ್ನು ಆಯ್ಕೆ ಮಾಡಲು ಇಚ್ಚಿಸಿದ. ಡಂಗುರ ಸಾರಿ, ಆಸಕ್ತರನ್ನು ಬರಮಾಡಿಕೊಂಡು ಅವರಿಗೆಲ್ಲ ವಿಭಿನ್ನ ಪರಿಕ್ಷೆಗಳನ್ನು ಮಾಡಿ, ಬುದ್ಧಿವಂತರೆನಿಸಿದ ನಾಲ್ಕು ಜನರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿ ಅವರಲ್ಲಿ ಒಬ್ಬರನ್ನು ಮಾತ್ರ ಮತ್ತೆ ಆಯ್ಕೆ ಮಾಡಲು ಬಯಸಿದ.
ಅವರನ್ನೆಲ್ಲ ತನ್ನ ಆಸ್ಥಾನಕ್ಕೆ ಕರೆದು ‘ನನ್ನ ಬಳಿ ಒಂದು ಬೀಗ ಇದೆ. ಅದು ಗಣಿತ ಲೆಕ್ಕಾಚಾರದ ಮೂಲಕ ಮಾತ್ರ ತೆರೆಯ ಬಲ್ಲದು. ಅದರಲ್ಲಿರುವ ಸಮಸ್ಯೆಗೆ ಪರಿಹಾರ ಕಂಡು ಹಿಡಿದರೆ ಮಾತ್ರ ಅದನ್ನು ತೆರೆಯಬಹುದಾಗಿದೆ. ಯಾರು ಅದನ್ನು ಕಡಿಮೆ ಸಮಯದಲ್ಲಿ ತೆರೆಯಬಲ್ಲರೋ ಅವರು ನನ್ನ ರಾಜ್ಯದ ಮುಖ್ಯಮಂತ್ರಿಯಾಗುವರು’ ಎಂದು ಹೇಳಿದ. ಮುಖ್ಯಮಂತ್ರಿಯಾಗಲೇ ಬೇಕು ಎಂಬ ಒತ್ತಡದಲ್ಲಿ, ಉತ್ಸಾಹದಲ್ಲಿ ಅವರಲ್ಲಿನ ಮೂರು ಜನ ಆ ಬೀಗದ ಬಗ್ಗೆ, ಅದನ್ನು ತರೆಯಬಹುದಾದ ಗಣಿತಶಾಸ್ರದ ಬಗ್ಗೆ ತುಂಬಾ ತಲೆ ಕೆಡಸಿಕೊಂಡರು.
ರಾತ್ರಿಯೆಲ್ಲ ಅದರ ಚಿಂತೆಯಲ್ಲಿ, ಲೆಕ್ಕಾಚಾರದಲ್ಲಿ ಕಾಲ ಕಳೆದರು. ಒಬ್ಬ ಮಾತ್ರ ಏನೋ ಸ್ವಲ್ಪ ಹೊತ್ತು ಯೊಚಿಸಿ ಬೇಗ ಮಲಗಿಬಿಟ್ಟ. ಮರುದಿನ ನಾಲ್ಕು ಜನರೂ ಆಸ್ಥಾನಕ್ಕೆ ಬಂದರು. ಗಣಿತದ ಲೆಕ್ಕಾಚಾರದಿಂದ ತೆರೆಯಬಹುದಾದ ಅತ್ಯಂತ ದೊಡ್ಡ ಬೀಗವನ್ನು ಸೇವಕರು ತಂದು ನಾಲ್ಕು ಜನರ ಮುಂದೆ ಇಟ್ಟರು. ಮತ್ತೆ ಎಲ್ಲರೂ ಲೆಕ್ಕಾಚಾರದಲ್ಲಿ ತೊಡಗಿದರು. ರಾಜ ಇದನೆಲ್ಲ ಗಮನಿಸುತ್ತಿದ್ದ. ಅದೇಷ್ಟೇ ಲೆಕ್ಕಾಚಾರ ಮಾಡಿದರೂ ಅದನ್ನು ಬಿಡಿಸುವುದು ಮೂರು ಜನರಿಂದ ಸಾಧ್ಯವಾಗಲೇ ಇಲ್ಲ.
ಅವರು ತಮ್ಮ ಸೊಲೊಪ್ಪಿಕೊಂಡರು.
ನಂತರ ಇನ್ನುಳಿದ ಒಬ್ಬ ಅದರ ಹತ್ತಿರಕ್ಕೆ ಹೋಗಿ ಶಾಂತವಾಗಿ ಪರೀಕ್ಷಿಸಿದ. ಅದಕ್ಕೆ ಬೀಗ ಹಾಕಿರಲೇ ಇಲ್ಲ. ಅದನ್ನು ಕ್ಷಣ ಮಾತ್ರದಲ್ಲಿ ಅವನು ತೆಗೆಯಲು ಸಮರ್ಥನಾಗಿದ್ದ. ಒತ್ತಡದಲ್ಲಿ, ಚಿಂತೆಯಲ್ಲಿ ಉಳಿದ ಮೂರು ಜನರು ಇದರ ಹತ್ತಿರವೇ ಸುಳಿದಿರಲಿಲ್ಲ. ಅದರ ಪರೀಕ್ಷೆ ಮಾಡಿರಲೇ ಇಲ್ಲ. ಅದನ್ನು ಹೇಗೆ ತೆಗೆಯಬೇಕೆಂಬ ಲೆಕ್ಕಾಚಾರದ ಒತ್ತಡದಲ್ಲಿ, ಅವರು ನಿದ್ದೆ ಮಾಡಿಲೇ ಇಲ್ಲ. ಆದರೆ ನಾಲ್ಕನೇ ವ್ಯಕ್ತಿ ಮಾತ್ರ ಒತ್ತಡಕ್ಕೆ ಒಳಗಾಗದೆ ಬಂದಿದ್ದ. ಗಣಿತದ ಸಹಾಯವಿಲ್ಲದೆಯೇ, ಸಾಮಾನ್ಯ ಜ್ಞಾನದ ಮೂಲಕ ಅದನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದ.
ಉಳಿದ ಮೂವರು ಒತ್ತಡಕ್ಕೆ ಒಳಗಾಗಿ, ಸರಳತೆಯನ್ನು ಮರೆತು ಮನಸ್ಸನ್ನು ಜಟಿಲಗೊಳಿಸಿಕೊಂಡು, ಸೋಲಿಗೆ ಶರಣಾಗಿದ್ದರು.
ನಾವು ಬದುಕಿನಲ್ಲಿ ಯಶಸ್ಸು ಪಡೆಯಲು ಒತ್ತಡದಿಂದ ಹೊರ ಬರಬೇಕಾದುದು ಅವಶ್ಯಕವಾಗಿದೆ. ಮಂಕುತಿಮ್ಮನ ಕಗ್ಗದ ಕವಿ ಡಿ.ವಿ. ಗುಂಡಪ್ಪ ಅವರ ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ
ಹಿತವಿರಲಿ ವಚನದಲಿ, ಋತುವ ಬಿಡದಿರಲಿ ॥
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ
ಅತಿ ಬೇಡವೆಲ್ಲಿಯುಂ ಮಂಕುತಿಮ್ಮ ॥
ಈ ಕವನ ಅರ್ಥಪೂರ್ಣ. ನಾವು ಬದುಕಿನಲ್ಲಿ ಬದಲಾವಣೆಗಳಿಗೆ, ಸವಾಲುಗಳಿಗೆ ಎದೆಗುಂದದೆ, ಒತ್ತಡಕ್ಕೆ ಒಳಗಾಗದೆ ಸಹಜ ವಾಗಿರಬೇಕು. ನಗುತಿರಬೇಕು ಅದು ಕೂಡ ಇತರರಿಗೆ ಮತ್ತು ನಿನಗೆ ಹಿತವಾಗಿರಲಿ. ಸಂತಸ ನೀಡಲಿ. ಮನಸಿನ ಉದ್ವೇಗ ಮತ್ತು ಭೋಗಾಕಾಂಕ್ಷೆಗಳಲ್ಲಿ ಸಂಯಮ ಮತ್ತು ಮಿತವಿರಲಿ. ಯಾವುದೂ ಅತಿಯಾಗಬಾರದು. ಒತ್ತಡ ಉಂಟುಮಾಡುವ ಆಲೋಚನೆಗಳಿಂದ ಮನಸ್ಸನ್ನು ಮುಕ್ತಗೊಳಿಸಬೇಕು.
ಎಲ್ಲವನ್ನು ಸಂಯಮದಿಂದ ಸ್ವೀಕರಿಸಬೇಕು. ಮನಸ್ಸು ಮತ್ತು ದೇಹಗಳ ನಡುವೆ ಸೌಹಾರ್ದತೆಯನ್ನು ಮೂಡಿಸಬೇಕು. ಬದುಕನ್ನು ಇದ್ದಂತೆ ಬರಮಾಡಿಕೊಳ್ಳಲು ಸಿದ್ಧರಾಗಬೇಕು. ಬದುಕನ್ನು ಸಮಯದೊಂದಿಗೆ ಸಮೀಕರಿಸಿ ಚಲನಶೀಲತೆಯನ್ನು ರೂಢಿಸಿಕೊಳ್ಳಬೇಕು. ಆಗ ಬದುಕು ನಾವಿನ್ಯತೆಯನ್ನು ಪಡೆದುಕೊಳ್ಳುತ್ತದೆ. ಯಶಸ್ಸಿನ ಎಲ್ಲ ಬಾಗಿಲುಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಮನಸ್ಸಿನ ಸ್ವಾಸ್ಥ್ಯ ಉಳಿಸಿಕೊಳ್ಳಲು ನಾವು ಒತ್ತಡದಿಂದ ಪಾರಾಗುವುದೇ ಏಕೈಕ ರಹದಾರಿಯಾಗಿದೆ.