Wednesday, 14th May 2025

ಯುವಜನರ ಸ್ಫೂರ್ತಿ ಈ ಗಾಯಕಿ

ರಂಗನಾಥ ಎನ್ ವಾಲ್ಮೀಕಿ

ಜನಪದ ಶೈಲಿಯಲ್ಲಿ ಹಾಡುವುದನ್ನು ಕರಗತ ಮಾಡಿಕೊಂಡಿರುವ ಈ ಗಾಯಕಿಯ ಹಾಡುಗಳನ್ನು ಕೇಳಿ ಎಲ್ಲಾ ಭಾಷೆಯ ರಸಿಕರು ಮನಸೋತಿದ್ದಾರೆ.

ಇವರ ಗಾಯನದಲ್ಲಿ ನಾದವಿದೆ, ಮಾಧುರ್ಯವಿದೆ, ಆಪ್ತತೆ ಇದೆ ಆಕರ್ಷಣೀಯ ಶಕ್ತಿಯಿದೆ, ತಾಳ ಲಯವಿದೆ. ಇವರ ಗಾಯನಕ್ಕೆ ಮನಸೋಲದವರು ಯಾರಿಲ್ಲ! ಅವರು ಬೇರೆ ಯಾರೂ ಅಲ್ಲ. ತೆಲುಗಿನ ‘‘ರಾಬರ್ಟ್’’ ಚಿತ್ರದ ‘‘ಕಣ್ಣೆ ಅದಿರಿಂದಿ’’ ಗಾಯನದ
ಮೂಲಕ ಮೋಡಿ ಮಾಡಿ ಕನ್ನಡಿಗ ಸಂಗೀತ ರಸಿಕರನ್ನು ಆಕರ್ಷಿಸಿದ ಗಾಯಕಿ ಮಂಗ್ಲಿ.

ಮಂಗ್ಲಿ ಹಾಡಿದ ಕಣ್ಣೆ ‘‘ಅದಿರಿಂದಿ’’ ರಾಬರ್ಟ್ ಚಿತ್ರದ ಗೀತೆಯನ್ನು ಯೂಟ್ಯೂಬ್ ನಲ್ಲಿ ಈಗಾಗಲೇ ಕೋಟಿ ಕೋಟಿ ಜನರು ವೀಕ್ಷಿಸಿದ್ದಾರೆ. ಈ ಹಾಡಿನಿಂದ ಮಂಗ್ಲಿ ಅಭಿಮಾನಗಳ, ಫಾಲೋವರ್ಸ್ ಸಂಖ್ಯೆಯಲ್ಲಿ ದಿಢೀರ ಹೆಚ್ಚಳವಾಗಿದೆ. ಇದು ತೆಲುಗು ಹಾಡಾದರೂ, ಮಂಗ್ಲಿ ಹಾಡಿನ ರಿದಂ, ಜೋಶ್ ಕಂಡು ಭಾಷಾ ಭೇದವಿಲ್ಲದೆ, ಕನ್ನಡಿಗರೂ ಮನಸೋತಿದ್ದಾರೆ.

ಬಂಜಾರ ಸಮುದಾಯದ ಮಂಗ್ಲಿ, ಸಾಕಷ್ಟು ಕಷ್ಟಗಳನ್ನು ಎದುರಿಸಿ, ತಮ್ಮ ಮನದಾಳದ ಆಸೆ ಎನಿಸಿದ ಸಂಗೀತವನ್ನು ಕಲಿತರು. ಶಾಸ್ತ್ರೀಯ ಸಂಗೀತದ ಪರಿಶ್ರಮವೂ ಇರುವ ಇವರಿಗೆ ವಿಶೇಷವಾಗಿ ಜಾನಪದ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ. ಇವರ ತಂದೆಯು ಇವರನ್ನು ಕರ್ನಾಟಕ ಸಂಗೀತ ಕಲಿಯಲು ಸಾಕಷ್ಟು ಪ್ರೋತ್ಸಾಹಿಸಿದರು. ಈಗಾಗಲೇ ಸಾಕಷ್ಟು ಜಾನಪದ ಹಾಡು ಗಳನ್ನು ಹಾಡಿ ತೆಲುಗು ಜಾನಪದ ವಲಯದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಚಿತ್ರ ಗೀತೆ ಹಾಡುವ ಅವಕಾಶ ಲಭ್ಯವಾ ದಾಗ, ಅದನ್ನು ಸಮರ್ಥವಾಗಿ ಬಳಸಿಕೊಂಡು ತೆಲುಗು ಗಾಯನ ರಸಿಕರ ಫೇವರೇಟ್ ಆದರು ಈ ಮಂಗ್ಲಿ.

ತೆಲುಗಿನ ಹಲವು ಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದು, ಇತರ ಹಲವು ಗೀತೆಗಳನ್ನು ಸಹ ಅವರು ಹಾಡಿದ್ದಾರೆ. ಮತ್ತು ಆ ಹಾಡು ಗಳು ಸಾಕಷ್ಟು ಜನಮೆಚ್ಚುಗೆ ಗಳಿಸಿವೆ. ಇವರು ತೆಲುಗಿನ ಬಿಗ್‌ಬಾಸ್ ಸರಣಿಯಲ್ಲೂ ಭಾಗವಹಿಸಿದ್ದು, ಯುವಜನರ ವಿಶ್ವಾಸ ಗಳಿಸಿದ್ದಾರೆ. ಹಾಡುವಾಗ ಅವರ ಮುಗುಳ ನಗೆ, ಹಾಡಿನಲ್ಲಿನ ತನ್ಮಯತೆ, ಶುದ್ಧತೆ, ತೊಡಗಿಸಿಕೊಳ್ಳುವಿಕೆ, ಅಭ್ಯಾಸ, ಶ್ರದ್ಧೆ ಇತ್ಯಾದಿ ಕಾರಣಗಳಿಂದ ಮಂಗ್ಲಿ ವಿಶೇಷ ಗಾಯಕಿ ಎನಿಸುವರು.

ಒಳ್ಳೆಯ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ಕನ್ನಡಿಗರಿಗೆ ರಕ್ತಗತವಾಗಿದೆ. ಹೀಗಾಗಿ ಮಂಗ್ಲಿ ತೆಲುಗು ಭಾಷೆಯ ಗಾಯಕಿ ಆದರೂ ಅವರ ಹಾಡಿನ ಮೋಡಿ ಕೇಳಿ ಕನ್ನಡಿಗರು ಪ್ರೋತ್ಸಾಹ ನೀಡುತ್ತಿದ್ದಾರೆ. ಟಿ.ವಿ ಚಾನಲ್ ಒಂದರಲ್ಲಿ ನಿರೂಪಕ ರಾಗಿಯೂ ಕೆಲಸ ಮಾಡುವ ಇವರು, ಜಾನಪದ ಗೀತೆ, ಇತರ ಚಲನ ಚಿತ್ರಗೀತೆಗಳನ್ನು ಹಾಡುವುದರಲ್ಲಿ ಈಗ ತೊಡಗಿಕೊಂಡಿ ದ್ದಾರೆ.

ಕಷ್ಟಗಳಿದ್ದರೂ, ಸಾಧನೆ ಮಾಡಿದರೆ, ಶ್ರದ್ಧೆಯಿಂದ ವಿದ್ಯೆಯನ್ನು ಕಲಿತರೆ, ಬದುಕಿನಲ್ಲಿ ಮುಂದುವರಿಯಲು ಸಾಧ್ಯ ಎಂಬುದಕ್ಕೆ ಮಂಗ್ಲಿಯವರು ಉತ್ತಮ ಉದಾಹರಣೆ. ಸಂಗೀತವಾಗಲೀ ಬೇರಾವುದೇ ಕ್ಷೇತ್ರವಾಗಲಿ, ಮನಸ್ಸನ್ನು ತೊಡಗಿಸಿಕೊಂಡು ಪರಿಶ್ರಮ ಹಾಕಲು ಇಂದಿನ ಯುವ ಜನರಿಗೆ ಸ್ಫೂರ್ತಿಯಾಗಿದ್ದಾರೆ ತೆಲುಗಿನ ಗಾಯಕಿ ಮಂಗ್ಲಿ.

Leave a Reply

Your email address will not be published. Required fields are marked *