Sunday, 11th May 2025

ಸಾಹಿತಿಗಳ ಕಡೆಗಣಿಸಿದ ಸುದ್ದಿ ವಾಹಿನಿಗಳು

ಪ್ರತಿಕ್ರಿಯೆ

ಸತ್ಯಕಾಮ ಶರ್ಮಾ ಕಾಸರಗೋಡು

ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚರ್ಯರು ಚಿರನಿದ್ರೆಗೆ ಜಾರಿದಾಗಲೇ ನಾವು ನೀವು ಎಚ್ಚೆತ್ತುಕೊಳ್ಳಬೇಕಿತ್ತು. ಅರ್ಥಾತ್, ಅವರ ನಿಧನ ವಾರ್ತೆ ಏಕೆ ಮುದ್ರಣ ಮಾಧ್ಯಮಕ್ಕೆ ಮಾತ್ರ ಸೀಮಿತವಾಯಿತು? ಎಂದು ಕನ್ನಡ ಸಾರಸ್ವತ ಲೋಕ ಪ್ರಶ್ನಿಸ ಬೇಕಿತ್ತು. ನಾವ್ಯಾರೂ ಸೂಕ್ತ ವೇದಿಕೆಯಲ್ಲಿ ಈ ಪ್ರಶ್ನೆ ಎತ್ತದೇ ಇದ್ದುದರ ಪರಿಣಾಮ ಈ ಪರಿಸ್ಥಿತಿಯನ್ನು ಲಕ್ಷ್ಮೀ ನಾರಾಯಣ ಭಟ್ಟರ ಅಕ್ಷಮ್ಯ ಅವಗಣನೆಯ ಹಂತದವರೆಗೆ ತಂದು ನಿಲ್ಲಿಸಿತು.

ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳು ನಿಧನರಾದಾಗ, ಟಿವಿ ಚಾನಲ್‌ಗಳಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಎಲ್ಲಿ ಮತ್ತು ಎಷ್ಟು ಅವಧಿಯವರೆಗೆ ಇರಿಸಲಾಗುತ್ತದೆ, ಅಂತ್ಯಕ್ರಿಯೆ ಎಲ್ಲಿ ಇತ್ಯಾದಿ ವಿವರಗಳನ್ನು
ಪ್ರಸಾರ ಮಾಡುವ ರೂಢಿ ಇದೆ. ಮರಣ ವಾರ್ತೆಯೇ ಪ್ರಸಾರವಾಗದಿರುವಾಗ ಈ ಮಾಹಿತಿಯ ಪ್ರಸಾರವನ್ನು ನಿರೀಕ್ಷಿಸುವುದು ಹೇಗೆ? ಎಸ್ ಎಲ್‌ಎನ್ ಅವರ ಅಂತ್ಯಕ್ರಿಯೆ ಯಲ್ಲಿ ಹೆಚ್ಚಿನ ಸಂಖ್ಯೆೆಯಲ್ಲಿ ಜನರು ಪಾಲ್ಗೊಳ್ಳದಿರಲು ಇದೂ ಒಂದು ಕಾರಣ. ಹಾಗೆ ನೋಡಿದರೆ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ನಾರಾಯಣ ಭಟ್ಟರು ಏಕೆ ಅನರ್ಹರಾದರು? ಎಂಬ ಪ್ರಶ್ನೆೆಯೂ ಇಂದು ಹೆಚ್ಚು ಪ್ರಸ್ತುತ ಅನಿಸುತ್ತದೆ -ಅದು ಬೇರೆ ಮಾತು.

ಕನ್ನಡ ಸುದ್ದಿ ವಾಹಿನಿಗಳ ಆಯಕಟ್ಟಿನ ಹುದ್ದೆಗಳಲ್ಲಿ ಇರುವ ಕೆಲವರು ಪತ್ರಿಕಾ ರಂಗದಿಂದ ವಲಸೆ ಹೋದವರೇ. ಹೀಗಿದ್ದರೂ, ಈ ಇಬ್ಬರು ಸಂಸ್ಕೃತಿ – ಸಾಹಿತ್ಯ ಉಪಾಸಕರು, ಕರ್ನಾಟಕ ಕಂಡ ಪ್ರತಿಭಾ ರತ್ನಗಳ ಕಣ್ಮರೆಯ ವಾರ್ತೆ, ದೃಶ್ಯ ಮಾಧ್ಯಮದ ಅವಕೃಪೆಗೆ ಈ ಪರಿ ತುತ್ತಾದುದು ಹೇಗೆ ಎಂಬುದು ಚಿದಂಬರ ರಹಸ್ಯವೇ ಸರಿ! ಅಚ್ಚರಿಯ ಸಂಗತಿ ಏನೆಂದರೆ ಕನ್ನಡ ಪರ ಕಾಳಜಿ ಎಂಬ ವಿಷಯದಲ್ಲಿ ಈ ಚಾನೆಲ್‌ಗಳ ನಡುವೆ ಭಾರೀ ಪೈಪೋಟಿಯಿದೆ. ಅದು ಹೆಚ್ಚಾಗಿ ಚಿತ್ರರಂಗಕ್ಕೆ ಮೀಸಲಾಗಿರುತ್ತದೆ.

ಉಳಿದಂತೆ, ಹಿಂದಿ ಹೇರಿಕೆ ಇತ್ಯಾದಿ ವಿವಾದಗಳ ಸಂದರ್ಭಗಳಲ್ಲಿ ಮಾತ್ರ ಇವರಿಗೆ ಕನ್ನಡಾಭಿಮಾನ ಕೆರಳುವುದು. ಈ ಹಿಂದೆ ವಿಶ್ವೇಶ್ವರ ಭಟ್ಟರು ತಮ್ಮ ಅಂಕಣವೊಂದರಲ್ಲಿ ಟಿ.ವಿ. ಚಾನಲ್ ಒಂದರ ಮುಖ್ಯಸ್ಥರಾಗಿ ತಮ್ಮ ಅನುಭವವನ್ನು ಓದುಗ ರೊಂದಿಗೆ ಹಂಚಿಕೊಂಡದ್ದನ್ನು ಇಲ್ಲಿ ನೆನೆಯಬಹುದು.

ಇತ್ತೀಚೆಗೆ ಸಿರಿಯಲ್‌ಗಳು ಪ್ರಾರಂಭವಾಗುವ ಮುನ್ನ ಮೂಡುವ ಪ್ರಕಟಣೆಯಲ್ಲಿ ನುಸುಳುವ ವಾಕ್ಯ ಈ ಕಾರ್ಯಕ್ರಮದ ಉದ್ದೇಶ ಕೇವಲ ಮನರಂಜನೆ ಮಾತ್ರ ಅನ್ನುವ ಹಾಗೆ – ಸುದ್ದಿ ವಾಹಿನಿಗಳ ಸುದ್ದಿಯ ಸಂದರ್ಭದಲ್ಲಿ – ಈ ಸುದ್ದಿಗಳ ಉದ್ದೇಶ ಕೇವಲ  ವೀಕ್ಷಕರ ಭಾವನೆಗಳನ್ನು ಕೆರಳಿಸುವುದು, ಮನಃಕ್ಷೋಭೆ ಉಂಟು ಮಾಡುವುದು, (ಸುದ್ದಿಯನ್ನು ಪ್ರಚಾರ ಸಾಮಗ್ರಿ ಮಾಡುವುದು) ಆ ಮೂಲಕ ಟಿ ಆರ್‌ಪಿ ಲೆಕ್ಕಾಚಾರದಲ್ಲಿ ಮುಳುಗುವುದು ಎಂದು ವಿಸ್ತರಿಸಿ ಓದುವುದು ಸರಿಯೇನೋ!

Leave a Reply

Your email address will not be published. Required fields are marked *