Wednesday, 14th May 2025

ತಂತ್ರಜ್ಞಾನ ದೈತ್ಯನಿಗೆ ಆದಾಯ ಮೂಲ ಯಾವುದು ?

ಟೆಕ್‌ ಬಿಸಿನೆಸ್‌

ಇಂದುಧರ ಹಳೆಯಂಗಡಿ

ಇಂದು ಹೆಚ್ಚಿನವರ ಮೊದಲ ಕೆಲಸ ವಾಟ್ಸಾಪಾಯನಮಃ. ಸಂಜೆ ಮಲಗುವ ಮೊದಲು ಸಹ ಓಂ ನಮೋ ವಾಟ್ಸಾಪ್! ಎಲ್ಲರಿಗೂ ಉಚಿತ ಸೇವೆ ನೀಡುವ ಮೂಲಕ ಮನೆ ಮನಗಳಲ್ಲಿ ನೆಲೆಸಿರುವ ವಾಟ್ಸಾಪ್‌ನ ಆದಾಯ ಮೂಲ ಯಾವುದು?

ಬೆಳಿಗ್ಗೆೆ ಎದ್ದ ಕೂಡಲೆ ಹಾಗೂ ರಾತ್ರಿ ಮಲಗುವ ಮುಂಚೆ ಒಂದು ಕ್ಷಣ ವಾಟ್ಸಾಪ್ ನೋಡದಿದ್ದರೆ ದಿನವೆಲ್ಲಾ ಹಾಳು ಎಂಬಂತಹ
ಮನೋಭಾವ. ಇಂದು ಗಾಳಿ, ನೀರು, ಅನ್ನದೊಂದಿಗೆ ವಾಟ್ಸಾಪ್ ಸಹ ಒಂದು ಅವಿಭಾಜ್ಯ ಅಂಗ. ಯಾವುದೂ ಉಚಿತವಾಗಿ ಸಿಗದ ಈ ಕಾಲದಲ್ಲಿ, ಪ್ರತಿನಿತ್ಯ ಸಹಸ್ರಾರು ಸಂದೇಶಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಉಚಿತವಾಗಿ ಕಳುಹಿಸುವ ನಾವುಗಳು, ಅದಕ್ಕಾಗಿ ಪ್ರತ್ಯೇಕವಾಗಿ ಏನನ್ನೂ ಖರ್ಚು ಮಾಡುವುದಿಲ್ಲ.

ಯಾವ ಇಂಟರ್ನೆಟ್ ಮೂಲಕ ಮಿಂಚಂಚೆ ಕಳುಹಿಸುತ್ತೇವೋ, ಹೇಗೆ ಗೂಗಲ್ ನಲ್ಲಿ ಹುಡುಕಾಡುತ್ತೇವೋ, ಅದೇ ಇಂಟರ್ನೆಟ್ ಬಳಸಿ ವಾಟ್ಸಾಪ್ ಅನ್ನೂ ಬಳಸುತ್ತೇವೆ. ಆದರೆ ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿ ರುವ ವಾಟ್ಸಾಪ್, ಯಾವುದೇ ಜಾಹೀರಾತನ್ನು ಪ್ರಕಟಿಸುತ್ತಿಲ್ಲ. ಎಲ್ಲಾ ಮಾಧ್ಯಮಗಳಿಗೆ ಬಹುತೇಕ ಜಾಹಿರಾತುಗಳೇ ಆದಾಯದ ಮೂಲವಾಗಿರುವ ಈ ಕಾಲದಲ್ಲಿ, ವಾಟ್ಸಾಪ್ ಸಂಸ್ಥೆಯ ಆದಾಯದ ಮೂಲ ಯಾವುದು? 2014 ರಲ್ಲಿ 19 ಬಿಲಿಯನ್ ನೀಡಿ ವಾಟ್ಸಾಪ್ ಅನ್ನು ಫೇಸ್‌ಬುಕ್ ಸಂಸ್ಥೆ ಖರೀದಿಸಿತ್ತು.

ಇಷ್ಟೊಂದು ಮೌಲ್ಯ ಬರಲು ಏನು ಕಾರಣ? ವಾಟ್ಸಾಪ್‌ಗೆ ಎಲ್ಲಿಂದ ಸಿಗುತ್ತೆ ಹಣ? 2009ರಲ್ಲಿ ಒಂದು ಸಂದೇಶ ಕಳುಹಿಸುವ ಆ್ಯಪ್ ಆಗಿ ಆರಂಭಗೊಂಡ ವಾಟ್ಸಾಪ್ ಇಂದು ಜಗತ್ತಿನ ದೊಡ್ಡ ಬಹು ರಾಷ್ಟ್ರೀಯ ಕಂಪನಿಗಳ ಪೈಕಿ ಒಂದು. ಪ್ರಸ್ತುತ 180 ದೇಶಗಳ 2 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಇದರ ಸ್ಥಾಪಕ ಜಾನ್ ಕೋಮ್ ಹೇಳುವಂತೆ, ನಮಗೆ ಜಾಹೀರಾತುಗಳನ್ನು ಕಂಡರೆ ಆಗುವುದಿಲ್ಲ. ಹಾಗೆಯೇ ಯಾರೂ ಕೂಡ ಬೆಳಿಗ್ಗೆ ಎದ್ದ ಕೂಡಲೆ ಜಾಹೀರಾತನ್ನು ನೋಡಲೂ ಬಯಸುವುದಿಲ್ಲ. ಹಾಗಾಗಿ ಯಾವುದೇ ಜಾಹೀರಾತುಗಳ ಅಡೆತಡೆಯಿಲ್ಲದೆ ನೇರ ಸಂದೇಶಗಳನ್ನು ಕಳುಹಿಸಲು ಅನುವಾಗಬಲ್ಲ ಒಂದು ಆ್ಯಪ್ ಆಗಿ ಇದನ್ನು ಅಭಿವೃದ್ಧಿಪಡಿಸಿದ್ದೇವೆ ಎಂದಿದ್ದರು.

2014ರಲ್ಲಿ ಸಾಮಾಜಿಕ ಮಾಧ್ಯಮದ ದೈತ್ಯ ಫೇಸ್‌ಬುಕ್ ಸಂಸ್ಥೆ ವಾಟ್ಸಾಪ್ ಸಂಸ್ಥೆಯನ್ನು ಖರೀದಿಸಿದ್ದರೂ, ಇಂದಿಗೂ ವಾಟ್ಸಾಪ್ ಜಾಹೀರಾತು ಮುಕ್ತವಾಗಿದೆ. ಸರಿಯಾಗಿ ಗಮನಿಸಿದರೆ, ವಾಟ್ಸಾಪ್‌ಗೆ ಕೆಲವು ಮೂಲಗಳು ಆದಾಯ ತಂದುಕೊಡುವ  ಸಾಮರ್ಥ್ಯ ವನ್ನು ಹೊಂದಿದೆ.

ವಾಟ್ಸಾಪ್ ಬಿಝ್‌ನೆಸ್ ಆ್ಯಪ್
ವಾಟ್ಸಾಪ್ ಅಪ್ಲಿಕೇಶನ್ ಸಂಪೂರ್ಣವಾಗಿ ಉಚಿತವಾಗಿರುವಂತೆ, ವಾಟ್ಸಾಪ್ ಬಿಜ್‌ನೆಸ್ ಆ್ಯಪ್ ಸಹ ಕೆಲವೊಂದಿಷ್ಟು ಫೀಚರ್ ‌ಗಳನ್ನು ಉಚಿತವಾಗಿ ನೀಡುತ್ತವೆ. ಸಣ್ಣಪುಟ್ಟ ವ್ಯಾಪಾರ ವಹಿವಾಟುಗಳಿಗೆ ಅವು ಸಾಲುತ್ತದಾದರೂ, ದೊಡ್ಡ ದೊಡ್ಡ ಕಂಪೆನಿ ಗಳು ಪ್ರೀಮಿಯಂ ಫೀಚರ್‌ಗಳನ್ನು  ಬಳಸುತ್ತವೆ. ಅದಕ್ಕಾಗಿ ಪಾವತಿಸುವ ಮೊತ್ತವು ವಾಟ್ಸಾಪ್ ಕಂಪನಿಯ ಆದಾಯ ದಲ್ಲಿ ಒಂದು ಮೂಲವಾಗಿರುತ್ತದೆ.

ಡೇಟಾ(ದತ್ತಾಂಶ) ಮ್ಯಾನೇಜ್ಮೆಂಟ್ ಸಿಸ್ಟಮ್

ಡೇಟಾಬೇಸ್ ನಿರ್ವಹಣೆಯ ಮೂಲಕ ವಾಟ್ಸಾಪ್ ಬಹುತೇಕ ಆದಾಯವನ್ನು ಪಡೆಯುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯ ಪಡುತ್ತಾರೆ. ಪ್ರತಿಯೊಬ್ಬರ ಸಂದೇಶವೂ ವಾಟ್ಸಾಪ್ ಸರ್ವರ್‌ಗಳಲ್ಲಿ ಬ್ಯಾಕಪ್ ಆಗುತ್ತಿರುತ್ತದೆ. ನಾವು ನಡೆಸುವ ಸಂಭಾಷಣೆಯ ಮೂಲಕ, ನಮ್ಮ ಆಸಕ್ತಿ, ಇಷ್ಟ-ಕಷ್ಟಗಳು ಮತ್ತು ಇತರ ಆದ್ಯತೆಯ ವಿಷಯಗಳು ಪ್ರತಿಬಿಂಬವಾಗುತ್ತದೆ.

ಅದಲ್ಲದೆ, ಗೂಗಲ್ ಪ್ಲೇಸ್ಟೋರ್  ಮೂಲಕ ನಾವು ಆ್ಯಪ್ ಡೌನ್‌ಲೋಡ್ ಮಾಡುವುದರಿಂದ, ನಮ್ಮ ಈಮೇಲ್ ಮಾಹಿತಿ ಸಹ ಅವರಿಗೆ ಲಭ್ಯವಾಗುತ್ತದೆ. ಈ ಮಾಹಿತಿಗಳಿಂದ ವಾಟ್ಸಾಪ್ ಸಂಸ್ಥೆಗೆ ನೇರವಾಗಿ ಏನೂ ಪ್ರಯೋಜನ ಇಲ್ಲದಿದ್ದರೂ, ಇತರ ಬಹುರಾಷ್ಟ್ರೀಯ ಕಂಪನಿಗಳಿಗೆ, ಜಾಹೀರಾತು ಸಂಸ್ಥೆಗಳಿಗೆ ಇದು ಬಹಳ ಸಹಕಾರಿಯಾಗುತ್ತದೆ. ಇದಕ್ಕಾಗಿ ಕೋಟ್ಯಾನುಗಟ್ಟಲೆ ಹಣ ಸುರಿಸಲು ಸಹ ಸಂಸ್ಥೆಗಳು ತಯಾರಾಗಿರುತ್ತದೆ.

ಉದಾಹರಣೆಗೆ, ನೀವು ವಾಟ್ಸಾಪ್ ಸಂದೇಶದ ಮೂಲಕ, ಒಬ್ಬರೊಂದಿಗೆ ಏನೋ ಆಸಕ್ತಿಯ ವಿಷಯ ಹೇಳಿಕೊಳ್ಳುತ್ತಿದ್ದೀರಿ ಎಂದು ಭಾವಿಸೋಣ. ಕೆಲ ಘಂಟೆಗಳ ಬಳಿಕ ನೀವು ಏನಾದರೂ ಗೂಗಲ್‌ನಲ್ಲಿ ಹುಡುಕಾಡುತ್ತಿದ್ದಾಗ, ನೀವು ಚರ್ಚಿಸಿದಂತ ವಿಷಯ ಅಥವಾ ಅದಕ್ಕೆ ಸಂಬಂಧಿಸಿದ ಯಾವುದಾದರೂ ಜಾಹೀರಾತು ನಿಮ್ಮ ಮೊಬೈಲ್‌ನಲ್ಲಿ ಪ್ರಸಾರ ಗೊಂಡಿರಬಹುದು. ಅಲ್ವಾ? ಅದು ಹೇಗೆ ಸಾಧ್ಯ? ಅಥವಾ ನೀವು ಒಂದು ಮಾಲ್‌ಗೆ ಹೋಗುತ್ತೀರಿ. ಅಲ್ಲಿ ಸಹಸ್ರಾರು ಜನರು ನಿಮ್ಮ ಸುತ್ತಲು ಓಡಾಡುತ್ತಿರುತ್ತಾರೆ.

ಯಾರಾದರೂ ನಿಮ್ಮೊಂದಿಗೆ ಮಾತನಾಡಲೂಬಹುದು. ಕೆಲ ಸಮಯದ ಬಳಿಕ, ಫೇಸ್‌ಬುಕ್ ಅಥವಾ ಇನ್ಸ್ಟ್ಟಾಗ್ರಾಂನಲ್ಲಿ ಕೆಲವು ವ್ಯಕ್ತಿಗಳ ಪ್ರೊಫೈಲ್‌ಗಳು ಸಜೆಷನ್ ಎಂದು ಬರುತ್ತವೆ. ಅದರಲ್ಲಿ ಕೆಲವರನ್ನು ಎಲ್ಲೋ ನೋಡಿದಂತೆ ನಿಮಗೆ ಭಾಸವಾಗುತ್ತದೆ. ಅದ್ಯಾರು ಎಂದರೆ, ನೀವು ಸುತ್ತಾಡಿದ ಮಾಲ್‌ನಲ್ಲೇ ಇದ್ದ ಇನ್ನೊಬ್ಬ ಅಪರಿಚಿತ ವ್ಯಕ್ತಿಯೇ ಆಗಿರಬಹುದು. ಇಬ್ಬರ ಲೊಕೇಶನ್ ಒಂದೇ ಪ್ರದೇಶ ಆಗಿರುವುದರಿಂದ ಹಾಗೂ ಇಬ್ಬರ ನಡುವೆ ಕೆಲ ಮ್ಯೂಚುವಲ್ ಫ್ರೆಂಡ್ಸ್‌ ಇರುವ ಕಾರಣ ಸಾಮಾಜಿಕ
ಮಾಧ್ಯಮಗಳು ಇದನ್ನು ಅರಿತುಕೊಳ್ಳುತ್ತದೆ. ಹೀಗೆ ದತ್ತಾಂಶಗಳು ಎಲ್ಲಿಂದೆಲ್ಲಿಗೆ ಹೋಗುವ ಸಾಧ್ಯತೆ ಇರುತ್ತದೆ.

ಈ ರೀತಿಯ ಡೇಟಾ ನಿರ್ವಹಣೆ ಯೋಜನೆ ಕೇವಲ ನಮ್ಮ ಊಹೆ ಮತ್ತು ತರ್ಕವಾಗಿದೆ. ನಮಗೆಲ್ಲಾ ತಿಳಿದಿರುವಂತೆ
ವಾಟ್ಸಾಪ್ ಇಂದಿಗೂ ಯಾವುದೇ ಜಾಹಿರಾತುಗಳನ್ನು ಪ್ರಕಟಿಸುತ್ತಿಲ್ಲ. ಇಂಟರ್ನೆಟ್ ಮೂಲಕ ತ್ವರಿತವಾಗಿ ಸಂದೇಶ ರವಾನಿಸಲು ಸಹಕಾರಿಯಾಗುವುದೇ ಇದರ ಮುಖ್ಯ ಉದ್ದೇಶ ಎಂಬುವುದೂ ಸ್ಪಷ್ಟ. ಆದರೆ, ನಮ್ಮ ಡೇಟಾ ನಿರ್ವಹಣೆಯೇ ಅವರಿಗೆ ಆದಾಯ ತಂದುಕೊಡುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ, ಇತರ ಯಾವುದೇ ಆದಾಯದ ಮೂಲ ಕಾಣಸಿಗುವುದಿಲ್ಲ.

ಮುಂದಿನ ದಿನಗಳಲ್ಲಿ ಇಂತಹ ಮಾಹಿತಿಯನ್ನು ಉಪಯೋಗಿಸಿ, ವಾಟ್ಸಾಪ್ ಆದಾಯವನ್ನು ಗಳಿಸಬಲ್ಲದು. ಕಳೆದ ಜನವರಿ ಯಲ್ಲಿ ನಮ್ಮ ಗೌಪ್ಯತಾ ನೀತಿಯನ್ನು ಬದಲಿಸುತ್ತಿದ್ದೇವೆ ಎಂದು ಖುದ್ದು ವಾಟ್ಸಾಪ್ ಸಂಸ್ಥೆ ಹೇಳಿಕೊಂಡಿತು. ಒಂದಷ್ಟು ಪ್ರತಿರೋಧಗಳು, ಬಾಯ್ ಕಾಟ್ ವಾಟ್ಸಾಪ್ ಅನ್ನೋ ಅಣ್ಣ ಅಭಿಯಾನ ಬಿಟ್ಟರೆ, ಇಂದಿಗೂ ಒಬ್ಬರಿಗೆ ಸಂದೇಶಗಳನ್ನು ಕಳುಹಿಸಲು ನಮಗೆ ವಾಟ್ಸಾಪೇ ಆಧಾರ. ಈಗ ಪುನಃ, 31.5.2021ರಿಂದ ವಾಟ್ಸಾಪ್ ಬಳಕೆದಾರರ ಪಾಲಿಸಿ ಬದಲಾವಣೆಗೆ
ಒಳಗಾಗುತ್ತಿದೆ.

ಎಲ್ಲಾ ಬಳಕೆದಾರರಿಗೂ ವಾಟ್ಸಾಪ್‌ನ ಹೊಸ ಪಾಲಿಸಿಯ ವಿವರಗಳನ್ನು ಈಗಾಗಲೇ ಕಳಿಸಲಾಗಿದ್ದು ಒಪ್ಪಿಗೆಯನ್ನು ಕೇಳಲಾಗುತ್ತಿದೆ. ಒಪ್ಪಿಗೆ ಕೊಡದೇ ಇದ್ದರೆ ವಾಟ್ಸಾಪ್‌ನ ಹಲವು ಫೀಚರ್‌ಗಳನ್ನು ಅಥವಾ ಎಲ್ಲಾ ಫೀಚರ್‌ಗಳನ್ನೂ ವಾಟ್ಸಾಪ್ ತಡೆ ಹಿಡಿಯಲೂ ಬಹುದು. ಇಂತಹ ಮಾಹಿತಿಯನ್ನು ಆದಾಯ ಮೂಲವಾಗಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಒಪ್ಪಿಗೆಯನ್ನು ಕೇಳಲಾಗುತ್ತಿದೆ.

ಖಾಸಗಿ ಮಾಹಿತಿ ಅಮೂಲ್ಯವೆ?
ಡಿಜಿಟಲ್ ಯುಗದಲ್ಲಿ ಬಾಳುತ್ತಿರುವ ನಮಗೆ ಇನ್ನೂ ನಮ್ಮ ಖಾಸಗೀ ಮಾಹಿತಿಗಳು ಎಷ್ಟೊಂದು ಮೌಲ್ಯಯುತ ಎಂದು
ಅರಿವಾಗಲಿಲ್ಲ. ನನ್ನ ಬಗ್ಗೆ ತಿಳಿದುಕೊಂಡು ಅವರಿಗೇನು ಲಾಭ ಎಂದು ಇಂದು ನಾವು ಅಸಡ್ಡೆ ತೋರಬಹುದು. ಆದರೆ ಮುಂದಿನ ದಿನಗಳಲ್ಲಿ ಇದು ಎಷ್ಟೊಂದು ವಿಸ್ತಾರವಾದ ವಿಚಾರ ಎಂದು ನಮಗೆಲ್ಲರಿಗೂ ಮನವರಿಕೆಯಾದೀತು.

ಪಾಶ್ಚಾತ್ಯ ದೇಶಗಳಲ್ಲಿ ಖಾಸಗಿ ಮಾಹಿತಿಗೆ ಬಹಳಷ್ಟು ಬೆಲೆ, ಮೌಲ್ಯ ಇದೆ. ಆದರೆ ನಮ್ಮಂತಹ ದೇಶದಲ್ಲಿ ಹೆಚ್ಚಿನವರು ತಮ್ಮ
ಖಾಸಗಿ ಮಾಹಿತಿಯನ್ನು ಬಹಳ ಮೌಲ್ಯಯುತ ಎಂದು ತಿಳಿಯುತ್ತಲೇ ಇಲ್ಲ. ಆದ್ದರಿಂದ ಈ ನಿರ್ಲಕ್ಷ್ಯ. ಜತೆಗೆ ವಾಟ್ಸಾಪ್‌ನಂತಹ ಬಹುರಾಷ್ಟ್ರೀಯ ಸಂಸ್ಥೆಯು ಬಳಕೆದಾರರ ಮಾಹಿತಿಯನ್ನು ದುರುಪಯೋಗ ಮಾಡಿಕೊಳ್ಳಲಾರದು ಎಂಬ ಸರಳ ನಂಬಿಕೆಯೂ ನಮ್ಮಲ್ಲಿದೆ.

ಈ ಆ್ಯಪ್ ಮೇಲೆ ನಮಗೆ ಈಗಲೂ ನಂಬಿಕೆಯಿದ್ದು, ಈ ನಂಬಿಕೆಯನ್ನು ಮುಂದೆಯೂ ವಾಟ್ಸಾಪ್ ಸಂಸ್ಥೆ ಉಳಿಸಿಕೊಳ್ಳಲಿ ಎಂಬುದೊಂದೇ ನಮ್ಮ ದೇಶದ ಜನರ ಸದಾಶಯ.

ಕೋಟ್ಯಂತರ ಬಳಕೆದಾರರು
ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಈ ಆ್ಯಪ್ ಅನ್ನು ಒಂದಿಬ್ಬರು ಜನ ನಡೆಸಿಕೊಂಡು ಹೋಗಲಾಗುವುದಿಲ್ಲ. 35 ಇಂಜಿನಿಯರ್‌ಗಳ ಮೂಲಕ ಆರಂಭಗೊಂಡ ಕಂಪನಿಯಲ್ಲಿ, ಪ್ರಸ್ತುತ ಈ ಸಂಖ್ಯೆ 50ಕ್ಕೆ ಏರಿದೆ. ಅತ್ಯಂತ ಕಡಿಮೆ ಸಂಖ್ಯೆಯ
ಉದ್ಯೋಗಿಗಳನ್ನು ಇಟ್ಟುಕೊಂಡು ಇಷ್ಟೊಂದು ದೊಡ್ಡ ಕಂಪೆನಿ ಹೇಗೆ ನಡೆಯುತ್ತಿದೆ ಎಂದರೆ ನೀವು ನಿಬ್ಬೆರಗಾದರೂ ಆಶ್ಚರ್ಯವಿಲ್ಲ

ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಎಷ್ಟು ಸತ್ಯ?
ವಾಟ್ಸಾಪ್ ಸಂಸ್ಥೆ ತಾವೇ ಹೇಳಿಕೊಳ್ಳುವಂತೆ ನಾವು ಕಳುಹಿಸುವ ಸಂದೇಶಗಳು ನಮಗೆ ಮತ್ತು ಅದನ್ನು ಪಡೆದವರಿಗೆ ಬಿಟ್ಟರೆ, ವಾಟ್ಸಾಪ್ ಸಂಸ್ಥೆಗೂ ಸೇರಿದಂತೆ ಯಾವುದೇ ಮೂರನೇ ವ್ಯಕ್ತಿಗೆ ಅದು ಗೊತ್ತಾಗುವುದಿಲ್ಲ. ಈ ಮಾಹಿತಿಯನ್ನು ಹಲವು ಬಾರಿ ಪತ್ರಿಕಾ ಪ್ರಕಟಣೆಯಲ್ಲೂ ವಾಟ್ಸಾಪ್ ಹೇಳಿಕೊಂಡಿದ್ದರೂ ಸಹ, ಅವೆಲ್ಲವೂ ಹೇಗೆ ಬ್ಯಾಕ್‌ಅಪ್ ಆಗುತ್ತೆ ಇತ್ಯಾದಿ ತಾಂತ್ರಿಕ
ಮಾಹಿತಿಗಳನ್ನು ವಾಟ್ಸಾಪ್ ಸಂಸ್ಥೆಯು ಇದುವರೆಗೂ ಬಿಟ್ಟುಕೊಟ್ಟಿಲ್ಲ.

ಸಂಸ್ಥೆಯ ಮೇಲೆ ನಂಬಿಕೆ ಇಟ್ಟು, ಅವರು ಹೇಳಿರುವುದು ಸತ್ಯ ಎಂದು ನಂಬಬಹುದು, ಒಂದು ಮಟ್ಟದ ತನಕ ನಾವೆಲ್ಲಾ ನಂಬಬೇಕು. ಆದರೆ, ಯಾವಾಗ ನಾವು ಸಂದೇಶಗಳನ್ನು ಗೂಗಲ್ ಡ್ರೈವ್ ಅಥವಾ ಇತರ ಬಾಹ್ಯ ಡ್ರೈವ್ ಗಳಿಗೆ ಅಪ್ರೋಡ್ ಮಾಡುತ್ತೇವೋ, ಆಗ ಆ ಎನ್ಕ್ರಿಪ್ಷನ್ ನಿಷ್ಕ್ರಿಯಗೊಳ್ಳುತ್ತದೆ. ನಾವು ಬ್ಯಾಕ್ ಅಪ್ ಮಾಡುವ ಡ್ರೈವ್‌ನ ಮಾತೃ ಕಂಪೆನಿಯು ನಮ್ಮೆಲ್ಲಾ ಮಾಹಿತಿಯನ್ನು ಪಡೆಯುತ್ತದೆ.

Leave a Reply

Your email address will not be published. Required fields are marked *