ಬೇಲೂರು ರಾಮಮೂರ್ತಿ
ಕುರುಕ್ಷೇತ್ರವಾಸಿಗಳಾಗಿದ್ದ ಮುದ್ಗಲ ಮಹರ್ಷಿಗಳು ತಮ್ಮ ಪತ್ನಿ ನಾರಾಯಣಿಯ ಪಾತಿವ್ರತ್ಯವನ್ನು ಪರೀಕ್ಷಿಸಲು ತಮಗೆ ಕುಷ್ಠ ರೋಗವನ್ನು ಅಂಟಿಸಿಕೊಂಡರು. ಆದರೂ ನಾರಾಯಣಿಯು ಪತಿಸೇವೆಯನ್ನು ಬಿಡಲಿಲ್ಲ. ಪ್ರತಿನಿತ್ಯ ಯಾವುದೇ ಬೇಜಾರಿಲ್ಲದೇ ಪತಿಯ ಆರೈಕೆಯನ್ನು ಮಾಡುತ್ತಾ ಅವರು ಏನು ಕೇಳಿದರೂ ಒದಗಿಸಿಕೊಡುತ್ತಿದ್ದಳು.
ಪತಿಯ ಕುಷ್ಠರೋಗ ಅವಳಿಗೆ ಒಂದಿಷ್ಟೂ ಬೇಜಾರು ತಂದಿರಲಿಲ್ಲ. ದಿನೇ ದಿನೇ ಮೌದ್ಗಲ್ಯರು ಪತಿಯ ಸಹನೆಯನ್ನು ಪರೀಕ್ಷಿಸು
ತ್ತಿದ್ದರು. ಒಮ್ಮೆ ಮುದ್ಗಲರು ನನ್ನನ್ನು ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗು ಎಂದರು. ಯಾವ ಸತಿಯಾದರೂ ತಾನೇ ಪತಿ ಯನ್ನು ವೇಶ್ಯಾಗೃಹಕ್ಕೆ ಕರೆದೊಯ್ಯುವಳೇ! ಸತಿ ಏನು ಮಾಡುವಳೆಂಬ ಕುತೂಹಲ ಮುದ್ಗಲರಿಗೆ.
ನಾರಾಯಣಿಯು ಪತಿಯ ಮಾತಿಂದ ಒಂದಿಷ್ಟೂ ವಿಚಲಿತಳಾಗದೇ ಮುದ್ಗಲರನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ವೇಶ್ಯಾಗೃಹಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಮುದ್ಗಲರ ಕಾಲು ಒಬ್ಬ ಋಷಿಮುನಿಗೆ ತಗುಲಿತು. ಕೂಡಲೇ ಕೋಪಗೊಂಡ ಆ ಋಷಿಗಳು ‘ನನಗೆ ಕಾಲು ತಗುಲಿಸಿದವನು ನಾಳೆ ಸೂರ್ಯೋದಯದ ಒಳಗೆ ಸಾಯಲಿ’ ಎಂದು ಶಾಪವಿತ್ತು ನಡೆದರು. ಪತಿವ್ರತ ಯಾದ ನಾರಾಯಣಿಯು ಈ ಶಾಪವನ್ನು ಸಹಿಸಲಾರದೇ ತಾನೂ ನಾಳೆ ಸೂರ್ಯೋದಯವಾಗದಿರಲಿ ಎಂಬ ನುಡಿಯನ್ನು ಹೇಳಿ, ಪತಿಯು ಅಪೇಕ್ಷೆಪಟ್ಟಿದ್ದ ಸ್ಥಳವನ್ನು ಸೇರಿಸಿದಳು. ಇತ್ತ ನಾರಾಯಣಿಯ ನುಡಿಯು ನಿಜವಾಯಿತು.
ಅನೇಕ ದಿನಗಳವರೆಗೆ ಸೂರ್ಯೋದಯವೇ ಆಗದಿರಲು ಜಗತ್ತು ಛಳಿಯಿಂದ ತಲ್ಲಣಿಸತೊಡಗಿತು. ಜನರು ಕಷ್ಟಪಟ್ಟರು, ಎಲ್ಲೆಡೆ ಹಾಹಾಕಾರ ತಲೆ ದೋರಿತು. ಸೂರ್ಯೋದಯ ಏಕೆ ಆಗಲಿಲ್ಲ ಎಂದು ಪರಿಶೀಲಿಸಲು, ಋಷಿಯ ಶಾಪ ಮತ್ತು ಪತಿವ್ರತೆಯಾದ ನಾರಾಯಣಿಯ ನುಡಿಗಳು ಕಾರಣ ಎಂದು ದೇವತೆಗಳಿಗೆ ಅರಿವಾಯಿತು. ಆಗ ದೇವಾನುದೇವತೆಗಳು ನಾರಾಯಣಿಯ ಬಳಿ ಬಂದು, ಆಕೆಯ ಸಂಕಷ್ಟಗಳನ್ನು ಚರ್ಚಿಸಿ, ಅವಳು ಆಡಿದ ಮಾತನ್ನು ಹಿಂಪಡೆಯುವಂತೆ ಬೇಡಿ ಮತ್ತೆ ಸೂರ್ಯೋದಯ ವಾಗುವಂತೆ ಮಾಡಿದರು.
ಆಗ ಮುದ್ಗಲರು ಪತ್ನಿಯ ಪಾತಿವ್ರತ್ಯದ ಶಕ್ತಿಗೆ ಮೆಚ್ಚಿ ತಮ್ಮ ತಪಃಶಕ್ತಿಯಿಂದ ಐದು ಸುಂದರ ದೇಹಗಳನ್ನು ಪಡೆದು ಅವಳನ್ನು ಸಂತೋಷಪಡಿಸುತ್ತಿದ್ದರು. ಈ ನಾರಾಯಣಿಯೇ ಮುಂದೆ ಮಹಾಭಾರತದಲ್ಲಿ ದ್ರೌಪದಿಯಾಗಿ ಜನಿಸಿದಳು, ಐವರು ಮಹಾವ್ಯಕ್ತಿ ಗಳಾದ ಪಾಂಡವರನ್ನು ಪಡೆದಳು ಎಂದು ವ್ಯಾಸರು ದ್ರುಪದನಿಗೆ ಹೇಳಿದರು.