Monday, 12th May 2025

ಸಾಧನೆಯಿಂದ ಸಫಲತೆ

ವೇದ ದರ್ಶನ

ಹೇಮಂತ್‌ ಕುಮಾರ್‌ ಜಿ

ಯತ್ ಸಾನೋಃ ಸಾನುಮಾರುಹದ್ ಭೂರ್ಯಸ್ಪಷ್ಟ ಕರ್ತ್ವಮ್
ತದಿಂದ್ರೋ ಅರ್ಥಂ ಚೇತತಿ ಯೂಥೇನ ವೃಷ್ಣಿರೇಜತಿ ॥
ಋಗ್ವೇದ 1-10-2

ಯಾವಾಗ (ಸಾಧಕರು) ಸಾಧನೆಯ ಒಂದು ಶಿಖರದಿಂದ ಇನ್ನೊಂದನ್ನು ಆರೋಹಿಸುತ್ತಾ ಸಾಗುತ್ತಿರುತ್ತಾರೋ ಹಾಗೂ ಸತ್ಕರ್ಮಗಳನ್ನು ಆಚರಿಸುತ್ತಿರುತ್ತಾರೋ, ಆಗ ಅವರ ಇಂಗಿತವನ್ನು ಚೆನ್ನಾಗಿ ಬಲ್ಲವರೂ, ಸುಖದ ವರ್ಷಧಾರೆಯನ್ನೇ ಮಾಡುವವರೂ ಆದ ದೇವರು ಕ್ಲಪ್ತ ಸಮಯಕ್ಕೆ ತಮ್ಮ ಸಮೂಹದೊಂದಿಗೆ ಧಾವಿಸಿ ಅನುಗ್ರಹಿಸುತ್ತಾ ಮುಂದಿನ ಮಾರ್ಗಾ ರೋಹಣಕ್ಕೆ ಪೂರಕತೆಗಳನ್ನು ಒದಗಿಸುತ್ತಿರುತ್ತಾರೆ.

ಸಾಧನೆ ಒಂದು ಗಹನವಾದ ಪ್ರಕ್ರಿಯೆ. ಸಾಧನೆಯೇ ಇಲ್ಲದೆ ಜೀವನದ ವಿಕಾಸ ಹಾಗೂ ಪ್ರಗತಿಯು ಅಸಂಭವ. ಸಾಧನೆಯು ಸಣ್ಣದೋ ದೊಡ್ಡದೋ ಎಂಬುದು ಮುಖ್ಯವಲ್ಲ, ಅದು ನಿಷ್ಠೆ ಹಾಗೂ ತನ್ಮಯತೆಗಳ ಪ್ರತೀಕ. ಸಾಧನೆಯಲ್ಲಿ ಸೋಲು-ಗೆಲುವು
ಸಹಜ. ಅಸಫಲತೆ ಎಂಬ ವಿಘ್ನಗಳನ್ನು ಆಗಾಗ್ಗೇ ಓಡಿಸಿಕೊಳ್ಳುತ್ತಾ ಮುನ್ನುಗ್ಗುತ್ತಿಬೇಕು.

ಕಠಿಣ ಸಾಧನೆಯಿಂದ ಲಕ್ಷ್ಮೀರೂಪೀ ಪ್ರಕಾಶದ ದರ್ಶನವಾಗುತ್ತದೆ. ವೇದದ ಸಮಾನಾಂತರದಲ್ಲಿ ಬೆಳೆದು ಬಂದ ವೇದದ
ಪ್ರಾಯೋಗಿಕ ಭಾಗವಾದ ಆಗಮಗಳು ತರಂಗವು ಕಿರಣವಾಗಿ ಪರಿವರ್ತನೆಯಾಗುವುದನ್ನು ಸಿದ್ಧಪಡಿಸುತ್ತದೆ. ಆ ಮೂಲದಿಂದ ನೋಡಿದರೆ ಇಲ್ಲಿ ಲಕ್ಷ್ಮೀ ಎಂದರೆ ಭೂಮೂಲವಾದ ‘ಲಂ’ಕಾರವೆಂಬ ಬೀಜತರಂಗವು ‘ಕ್ಷ್ಮಾಯತೇ’ ಎಂದರೆ ಕಂಪಿಸಿದಾಗ  ‘ಈಂಕೃತಿ’ಯೆಂಬ ಕಿರಣ ರೂಪೀ ಆಕೃತಿಯನ್ನು ಪಡೆಯುತ್ತದೆ. ಈ ರೀತಿಯಾದ ಲಕ್ಷ್ಮೀ ಪ್ರಕಾಶವೂ ಮಂದದಿಂದಾರಂಭಿಸಿ ತೀವ್ರತಮದವರೆಗೆ ಅನೇಕ ರೂಪಗಳಲ್ಲಿ ದರ್ಶನೀಯ. ಸಾಧನೆಯ ಸಫಲತೆಗೆ ಯಾವುದೇ ಒಂದು ಲಕ್ಷ್ಯವು ನಿರ್ಣೀತವಲ್ಲ.

ಸಾಧಕರು ಹೇಗೇಗೆ ಮುಂದಕೆ ಸಾಗುತ್ತಾರೋ, ಹಾಗಾಗೆ ಸಫಲತೆಯ ಉತ್ತುಂಗ ಶಿಖರಗಳು ಪ್ರಕಟವಾಗುತ್ತವೆ. ಒಂದು ಶಿಖರದ ಚಾರಣವು ಒಂದು ಸಣ್ಣ ಗುರಿ ಅಥವಾ ಮೆಟ್ಟಿಲು. ಅದನ್ನು ದಾಟಿದೊಡನೆ ಇನ್ನೂಂದು ಶಿಖರ ಕಾಣುತ್ತದೆ. ಹೀಗೆ ಒಂದಾದ
ಮೇಲೊಂದರಂತೆ ಪರ್ವತ ಶ್ರೇಣಿಯೇ ಇರುತ್ತದೆ. ಶ್ರದ್ಧಾ-ಭಕ್ತಿಯಿಂದ ಚಾರಣ ಮಾತ್ರ ಸಾಧಕರ ಕೆಲಸ. ಈ ರೀತಿ ಸಾಧನೆಯು ನಿರಂತರ. ಸಾಧನೆಯಲ್ಲಿಯೂ ಒಂದು ಸಫಲತೆಯ ನಂತರ ಇನ್ನೊಂದು ಹಾಗೂ ಒಂದು ಸಿದ್ಧಿಯ ನಂತರ ಮತ್ತೊಂದು ಸಿದ್ಧಿಯು ಪ್ರಾಪ್ತವಾಗುತ್ತದೆ.

ಸಾಧನೆಯಲ್ಲಿ ಧೈರ್ಯಗೆಡದೆ ಇರುವುದೇ ಸಫಲತೆಯ ಕೀಲಿಕೈ. ಸಾಧನೆಗೆ ಒಂದು ಅತ್ಯುನ್ನತ ಲೌಕಿಕ ಉದಾಹರಣೆ ಎಂದರೆ
ತಾಯಿ-ಮಗು. ತಾಯಿಯು ಮಗುವಿನ ಪ್ರಯತ್ನಗಳನ್ನು ಗಮನಿಸುತ್ತಿರುತ್ತಾರೆ. ಅವಕಾಶ ಸಿಕ್ಕಾಗ ಅದನ್ನು ಎತ್ತಿಕೊಂಡು
ತಕ್ಕಸುತ್ತಾರೆ. ಮತ್ತೊಮ್ಮೆ ಮಡಿಲಿಗೆ ಹಾಕಿಕೊಂಡು ಜೋಗುಳವಾಡುತ್ತಾರೆ.

ಮಗದೊಮ್ಮೆ ಮಗುವಿಗೆ ಬೇಕಾದ ಇನ್ನೇನೋ ಸಹಾಯ ಮಾಡುತ್ತಿರುತ್ತಾರೆ. ತಾಯಿಯ ಜೀವನವೇ ಸಾಧನೆಗೆ ಹಿಡಿದ ಕನ್ನಡಿ. ಮಮತೆಯೆಂಬ ಒಂದು ಸೂಕ್ಷ್ಮ ತರಂಗ ಬಂಧದ ಕಾರಣ ತಾಯಿಯು ಮಗುವನ್ನು ಬೆಳೆಸುವಾಗ ಪಡುವ ಕಷ್ಟಗಳೇ ಕಠೋರ ತಪಸ್ಸು. ಮಗುವೂ ತಾಯಿಯ ಆದೇಶ ಪಾಲಿಸುತ್ತಾ ನಡೆದರೆ ಸಾಕು; ಅದೇ ದೊಡ್ಡ ಸಾಧನೆ. ಏನಾದರೂ ಬಿಡೆನೆಂಬ ತಾಯಿಯ ಛಲವೇ ಕಲ್ಲಿನಂತಹಾ ಕೂಸನ್ನು ತಿದ್ದುತ್ತಾ ಆಕೃತಿವೆತ್ತ ಆದಿಮಶಿಲ್ಪವಾಗಿಸುತ್ತದೆ.

ಹಾಗೆಯೇ ಪರಮಾತ್ಮನು ಸಾಧಕರ ಕಠಿಣ ಪ್ರಯತ್ನಗಳನ್ನು ಗಮನಿಸುತ್ತಿದ್ದು, ಸರಿಯಾದ ಕಾಲ ಬಂದಾಗ ತನ್ನ ಪೂರ್ಣ ಕೃಪಾ ದೃಷ್ಟಿಯಿಂದ ಅವರ ಸಮಸ್ತ ಸದಿಚ್ಛೆಗಳನ್ನು ಪೂರೈಸುತ್ತಾನೆ. ಪ್ರಸಕ್ತ ಮಂತ್ರವು ಇದೇ ಸಫಲತೆಯತ್ತ ಬೊಟ್ಟು ಮಾಡುತ್ತಿದೆ.
ಇದು ಪ್ರತಿಯೊಬ್ಬರ ಜೀವನದ ಪ್ರತಿಯೊಂದು ಅಂಶಕ್ಕೂ ಅನ್ವಯವಾಗುತ್ತದೆ.

ಛಲಗಾರರಿಗೆ ಮಾತ್ರ ಈ ಭಾರತದಲ್ಲಿ ಜಯ. ಅದೇ ಮಹಾಭಾರತದ ಮೂಲವಾದ ಜಯಭಾರತ. ಇಲ್ಲಿ ಇಂದ್ರವೆಂದರೆ ಬಲಗಳ ಅಧಿಪತ್ಯ. ಜೀವನಕ್ಕೆ ಬೇಕಾದ ವಿವಿಧ ಬಲಗಳನ್ನು ಆ ಚಿತ್ ಶಕ್ತಿಯು ಸೂಕ್ತ ಕಾಲಕ್ಕೆ ವಿವಿಧ ನಾದ ತರಂಗಗಳ ಪ್ರವಹನೆಯ ಮುಖೇನ ಪೂರೈಸುತ್ತದೆ. ವೇದವು ನಾದಾತ್ಮಕ; ಸೂಕ್ಷ್ಮ ಛಂದೋರಶ್ಮಿಗಳಿಂದ ವ್ಯವಹರಿಸುವ ಜೀವಜೀವರ ಮೂಲ ಶಕ್ತಿ.

ನಮ್ಮ ಗುರುಗಳು ಯಾವಾಗಲೂ ಸಾಧನೆ ಮಾಡಿ ಎಂದು ಹೇಳುತ್ತಿದ್ದರು. ಆಗ ನನಗೆ ಬರುತ್ತಿದ್ದ ಪ್ರಶ್ನೆ ಎಂದರೆ ಸಾಧನೆ
ಎಂದರೇನು? ಪುರಾತನರು ಹಾಕಿಕೊಟ್ಟ ಪ್ರಾಚ್ಯ ಪಠ್ಯಕ್ರಮದಲ್ಲಿ ಶಿಕ್ಷಣ ಪಡೆಯುತ್ತಾ ಸಮಾಜವನ್ನು ಸನ್ಮಾರ್ಗದಲ್ಲಿ
ಮುನ್ನಡೆಯುವುದೇ ದೊಡ್ಡ ಸಾಧನೆ ಎಂಬ ಉತ್ತರ ಬರುತ್ತಿತ್ತು.

ಇಲ್ಲಿ ಸಮಾಜಮುಖಿ ಚಿಂತನೆ ಎಂಬ ವಿಶಾಲ ಆಲದ ಮರದ ನೆರಳಿನಲ್ಲಿ ವೈಯಕ್ತಿಕ ಹಿತವೂ ಅಡಗಿದೆ. ಸ್ವಾರ್ಥಕ್ಕಾಗಿ ಸಾಧನೆಗೆ ಇಳಿದರೆ ಸಿದ್ಧಿಸುವುದು ಕಷ್ಟಸಾಧ್ಯ. ಅದೇ ದೇಶಕ್ಕಾಗಿ ಅಥವಾ ಪ್ರಪಂಚ ಕ್ಷೇಮಕ್ಕಾಗಿ ಮಾಡುವ ಸಾಧನೆಗಳು ಫಲಕಾರಿಯಾಗು ತ್ತವೆ ಎಂಬುದು ಋಷಿವಾಕ್ಯ.

ಅದಕ್ಕಾಗಿಯೇ ಸಮಾಜಮುಖಿಯಾದ ಹಲವು ಯಾಗ- ಯಜ್ಞಗಳು ರೂಢಿಗೆ ಬಂದಿವೆ. ಬಂದುಬಂದಂತಹಾ ಗತಿ ಯೊಂದಿಗೆ ಸಾಗುವ ಘಟನಾವಳಿಗಳೆಲ್ಲವೂ ಯಾಗಗಳೇ. ಪುರಾತನ ಐತಿಹ್ಯದ ಚೌಕಟ್ಟಿನಲ್ಲಿ ತಿಳಿದು ಮಾಡುವ ಪ್ರಕ್ರಿಯೆಗಳೇ ಯಜ್ಞ. ಜೀವನವೇ ಈ ರೀತಿಯ ಯಜ್ಞ-ಯಾಗಗಳ ಮೇಳ. ಯಾವುದೇ ಸಾಧನೆಯು ದಯೆ, ಸತ್ಯ, ನ್ಯಾಯ, ಧರ್ಮದ ಚೌಕಟ್ಟಿನಲ್ಲಿರಬೇಕು. ಈ ಮಂತ್ರವು ಯೋಗಿರಾಜ ಶ್ರೀ ಅರವಿಂದ ಘೋಷರಿಗೆ ಅತ್ಯಂತ ಪ್ರಿಯವಾಗಿತ್ತು. ಅವರು ಇದರಲ್ಲಿ ಸಾಧನೆಯ ರಹಸ್ಯದ ದರ್ಶನ ಮಾಡಿದ್ದರಂತೆ.

Leave a Reply

Your email address will not be published. Required fields are marked *