Monday, 12th May 2025

ಅನುದಿನವೂ ಆನಂದಾನುಭವ

ಮಹಾದೇವ ಬಸರಕೋಡ

ಪ್ರತಿ ದಿನದಲ್ಲೂ ಹೊಸತನವಿದೆ. ಪ್ರತಿ ಕ್ಷಣದಲ್ಲೂ ಸಂತಸ ಬೆರೆತಿದೆ. ಅದನ್ನು ಗುರುತಿಸಿ, ಆನಂದಪಡಲು ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು. ಆಗ ನಮ್ಮ ಬದುಕಿನ ಪ್ರತಿದಿನವೂ ಸಾರ್ಥಕ ಎನಿಸುತ್ತದೆ.

ಕೆಲವು ಬಾರಿ ನಮ್ಮ ಮನಸ್ಸೆಲ್ಲವೂ ಖಾಲಿಯಾದಂತೆ ಅನಿಸುತ್ತದೆ. ಏನನ್ನೋೋ ಕಳೆದುಕೊಂಡಾಗ, ಬಯಸಿದ್ದು ಇನ್ನೇನು
ಸಿಕ್ಕೇ ಬಿಟ್ಟಿತು ಎಂದುಕೊಳ್ಳುತ್ತಿರುವಾಗಲೇ ಅದು ಕೈಜಾರಿ ಹೋದಾಗ, ಗರಿಗೆದರಿದ ಕನಸುಗಳ ರೆಕ್ಕೆೆಗಳು ಜಡಗೊಂಡಾಗ, ನಮ್ಮ
ನಿರೀಕ್ಷೆಯಂತೆ ಇತರರು ನಡೆದುಕೊಳ್ಳದಿದ್ದಾಗ, ಒಟ್ಟಿನಲ್ಲಿ ನಮ್ಮ ಜೀವನ ನಾವು ಬಯಸಿದಂತೆ ಸಾಗುತ್ತಿಲ್ಲ ಎಂಬ ಭಾವ ಪರವಶತೆಗೆ ಒಳಗಾದಾಗ ನಮ್ಮತನವನ್ನು ನಾವು ಕಳೆದುಕೊಳ್ಳುತ್ತೇವೆ.

ನಮ್ಮ ಭಾವನೆಗಳು ತೀವ್ರವಾಗಿ ಕೆರಳುತ್ತವೆ. ಅಂತಹ ಸಮಯದಲ್ಲಿ ಯಾರನ್ನೂ ಕಂಡರೂ ಕಿರಿಕಿರಿಯೆನಿಸುತ್ತದೆ. ನಮ್ಮದೇ ಕೆಲಸದ ಕುರಿತು ಅಸಡ್ಡೆಯು ಆವರಿಸುತ್ತದೆ. ಇಲ್ಲದ ನೂರೆಂಟು ಗೊಂದಲಗಳು ಸೃಷ್ಟಿಗೊಳ್ಳುತ್ತವೆ. ಮನಸ್ಸಿನ ತಲಾತಲದಲ್ಲಿ ಕ್ಷೋಭೆಯ ತರಂಗಗಳು ಏರ್ಪಡುತ್ತವೆ. ಇಂತಹ ಸಂಕಟದ ಸನ್ನಿವೇಶಗಳಲ್ಲಿ ಬದುಕು ತುಂಬ ಅಸಹನೀಯವೆನಿಸತೊಡಗುತ್ತದೆ.
ನಮಗೆ ಸಿಕ್ಕಿರುವುದನ್ನು ನಾವು ಸಹಜವಾಗಿ ಸ್ವೀಕರಿಸಲು ಸಿದ್ಧರಾಗದಿರುವುದು ಇವೆಲ್ಲ ಅವಾಂತರಗಳಿಗೆ ಕಾರಣವಾಗುತ್ತದೆ.

ತಮ್ಮ ಶಿಬಿರದಲ್ಲಿ ಹತ್ತು ದಿನಗಳ ಕಾಲ ತರಬೇತಿ ಪಡೆದು ಮನೆಗೆ ಮರಳುತ್ತಿದ್ದ ಶಿಬಿರಾರ್ಥಿಗಳಿಬ್ಬರಿಗೆ ಕೊನೆಯ ದಿನದಲ್ಲಿ ಗುರುಗಳು ಚಿಕ್ಕ ಪರೀಕ್ಷೆಯೊಂದನ್ನು ಹಮ್ಮಿಕೊಂಡರು. ನಾಳೆ ಬೆಳಿಗ್ಗೆ ಇಲ್ಲಿಂದ ಸ್ವಲ್ಪವೇ ದೂರದಲ್ಲಿರುವ ಬೆಟ್ಟಕ್ಕೆ ತೆರಳಿ ಅಲ್ಲಿ ಸಂಭವಿಸುವ ಅತ್ಯತ್ಭುತವಾದ ಸುರ್ಯೋದಯದ ಸವಿಯನ್ನು ಮನಸಾರೆ ಆನಂದಿಸಿ ಅದರ ಅನುಭವವನ್ನು ಕುರಿತು ಬಂದು ತಮಗೆ ತಿಳಿಸಬೇಕೆಂದು ಸೂಚನೆ ಕೊಟ್ಟರು.

ಇಬ್ಬರೂ ಏಕಾಂಗಿಯಾಗಿಯೇ ತೆರಳಬೇಕು. ಮತ್ತು ಹಾಗೆಯೇ ಮರಳಬೇಕು ಎನ್ನುವುದು ಅವರ ನಿಬಂಧನೆಯಾಗಿತ್ತು. ಇಬ್ಬರೂ ಶಿಬಿರಾರ್ಥಿಗಳು ಗುರುಗಳ ಸೂಚನೆಯಂತೆಯೇ ಮರುದಿನ ಅವರು ಹೇಳಿದ ತಾಣಕ್ಕೆ ತೆರಳಿ, ಮರಳಿ ಬಂದು ಗುರುಗಳನ್ನು ಭೇಟಿಯಾದರು. ಒಬ್ಬನು ‘ಗುರುಗಳೇ ಇಂದು ಬರೀ ಮೋಡ ಕವಿದ ವಾತಾವರಣವೇ ಇತ್ತು. ಜಿಟಿ ಜಿಟಿ ಮಳೆ ಬೇರೆ ಸುರಿಯುತ್ತಿತ್ತು.

ಮೋಡದ ಮರೆಯಿಂದ ಸೂರ‍್ಯ ಒಂದಷ್ಟು ಆಗಾಗ ಇಣುಕಿದ್ದನ್ನು ಬಿಟ್ಟರೆ ಇನ್ನಾವುದೂ ಸಾಧ್ಯವಾಗಲಿಲ್ಲ.  ರ್ಯೋದಯ ಸೌಂದರ‍್ಯವನ್ನು ಸವಿಯುವ ಅವಕಾಶವೇ ಸಿಗಲಿಲ್ಲ. ತುಂಬ ನಿರಾಸೆಯಾಯಿತು’ ಎಂದ. ಮತ್ತೊಬ್ಬ ಶಿಷ್ಯನನ್ನು ಕುರಿತು ಕೇಳಿ ದಾಗ ಅವನು ಗುರುಗಳೇ ‘ಇಂದಿನದು ನಿಜಕ್ಕೂ ದಿವ್ಯಾನುಭವವಾಯಿತು. ಆಗಸದಲ್ಲೆಲ್ಲ ದಟ್ಟ ಮೋಡದ ನೂರೆಂಟು ಚಿತ್ತಾರ ಗಳು ತುಂಬ ಮನಮೋಹಕವಾಗಿದ್ದವು. ಆಗಾಗ ಮೋಡಗಳ ಮಧ್ಯೆ ಸೂರ್ಯನ ಇಣುಕಿವಿಕೆಯಿಂದಾಗಿ ಆಗಸದಲ್ಲೆಲ್ಲ ಆಗಾಗ ಬೆಳ್ಳನೆಯ ಬೆಳಗು ಧುತ್ತೆಂದು ಹೊಮ್ಮಿದ ಅನುಭವ.

ತುಂತುರ ಮಳೆ ಹನಿಸುವಿಕೆ, ಆಕಾಶದ ಮತ್ತೊಂದು ಬದಿಯಲ್ಲಿ ಮಳೆ ಹನಿಗಳ ಸಿಂಚನಲ್ಲಿ ಪ್ರತಿಫಲಿಸಿ ಕಟ್ಟಿದ ರಂಗುರಂಗಿನ ಕಾಮನ ಬಿಲ್ಲಿನ ಚಿತ್ತಾರ ಮನ ಸೆಳೆಯುವಂತಿತ್ತು. ನಿಜಕ್ಕೂ ಪ್ರಕೃತಿಯ ಇಂತಹ ರಮ್ಯತೆ ಆನಂದದ ಅನುಭೂತಿಯನ್ನು
ನೂರ್ಮಡಿಗೊಳಿಸಿತು’ ಎಂದ. ಗುರುಗಳು ಅವನ ಮಾತಿಗೆ ತಲೆದೂಗಿದರು. ನಮ್ಮ ನಿರಾಸೆಗಳು ನಮ್ಮ ಅನಗತ್ಯ ನಿರೀಕ್ಷೆ ಗಳಿಂದಲೇ ಚಿಗುರೊಡೆದವು ಎಂಬ ವಾಸ್ತವ ಅರಿಯಬೇಕು.

ಇನ್ನೊಂದು ಅರ್ಥದಲ್ಲಿ ನಾವು ಬಯಸಿದಂತೆ ಜಗತ್ತು ಬದಲಾಗುವುದು ಸಾಧ್ಯವಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ನಾವು ಸಿದ್ಧರಾ ಗಬೇಕು ಎಂಬ ಸಣ್ಣ ಸತ್ಯವನ್ನು ನಾವು ದರ್ಶಿಸಬೇಕು. ಸೃಷ್ಟಿಯಲ್ಲಿನ ಯಾವ ಶಕ್ತಿಯೂ ನಮ್ಮ ವಿರುದ್ಧವಾಗಿಲ್ಲ ಎಂಬ ಅರಿವು ನಮ್ಮಲ್ಲಿ ಮೂಡಬೇಕು. ಅದನ್ನು ನಮಗೆ ಪೂರಕವಾಗುವಂತೆ ನಾವು ಬಳಸಿಕೊಳ್ಳುವಲ್ಲಿ, ವಾಸ್ತವವನ್ನು ಸಮರ್ಥವಾಗಿ ನಿರ್ವಹಿಸುವುದರಲ್ಲಿನ ವಿಫಲತೆಯಿಂದಾಗಿ ಉಂಟಾಗುವ ಆಂತರಿಕ ಗೊಂದಲಗಳಿಂದ ಸ್ವತಂತ್ರವಾಗಬೇಕು.

ನಮ್ಮ ಹತೋಟಿ ಮೀರಿದ ಸಂದರ್ಭಗಳಲ್ಲಿ ನಾವು ಅಂದುಕೊಂಡದ್ದನ್ನು ಮಾಡಲು ಸಾಧ್ಯವಾಗದಿದ್ದಾಗ, ನಮ್ಮ ಕೈಲಾಗುವು ದನ್ನು ನಿಷ್ಠೆಯಿಂದ ಮಾಡುವುದು ನಿಜವಾದ ಜಾಣತನ. ಬದುಕು ತಂದೊಡ್ಡುವುದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವುದು ಮತ್ತು ಅದನ್ನು ಎದುರಿಸುವುದು ನಮ್ಮ ನಿಲುವಾಗಬೇಕು. ಬಂದಿರುವ ಪ್ರಸಂಗಗಳನ್ನು ಪಳಗಿಸುವ ಮತ್ತು ಅದರ ಮೇಲೆ ಪ್ರಭುತ್ವ ಸಾಧಿಸುವ ಜಾಣತನ ನಮ್ಮದಾಗಬೇಕು. ಅನುದಿನವೂ ಆನಂದ ನಮ್ಮದಾಗಬಲ್ಲದು. ಇದು ನಮ್ಮ ಸಂತೃಪ್ತ ಬದುಕಿಗೆ ತಳಹದಿಯಾಗಬಲ್ಲದು.

Leave a Reply

Your email address will not be published. Required fields are marked *