ಅನಂತ ಪದ್ಮನಾಭ ರಾವ್ ಎಸ್. ಎನ್.
ಕೆಂಡ ತುಳಿಯುವುದನ್ನು ಕೇಳಿದ್ದೇವೆ. ಆದರೆ ಕೆಂಡವೇ ನೈವೇದ್ಯದ ರೀತಿಯಲ್ಲಿ ದೇವರಿಗೆ ಅರ್ಪಣೆಗೊಳ್ಳುವುದನ್ನು ಕೇಳಿದ್ದೀರಾ? ರಾಶಿ ರಾಶಿ ಕೆಂಡವನ್ನು ಭಕ್ತರ ಮೈಮೇಲೆ ತೂರುವುದನ್ನು ನೋಡಿದ್ದೀರಾ!
ಇಂತಹದೊಂದು ಧಾರ್ಮಿಕ ಆಚರಣೆ ನಮ್ಮ ರಾಜ್ಯದಲ್ಲಿದೆ. ಕೂಡ್ಲಿಗಿ ತಾಲೂಕಿನ ಕುಗ್ರಾಮ ಹೊಸಹಟ್ಟಿಯ ‘ಬೊಗ್ಗುಲು
ಓಬಳೇಶ್ವರ ಸ್ವಾಮಿ’ ಜಾತ್ರೆಯಲ್ಲಿ ನಿಗಿ ನಿಗಿ ಕೆಂಡವನ್ನು ಎರಚಾಡಿಕೊಳ್ಳುವ ವಿಶಿಷ್ಟ ಪದ್ಧತಿಯು ಭಕ್ತಿಯ ಆಚರಣೆಯ ಹೊಸದೊಂದು ಮಗ್ಗುಲನ್ನು ಪರಿಚಯಿಸುತ್ತದೆ.
ನೂರಾರು ವರ್ಷಗಳಿಂದ ಆಚರಣೆಯಲ್ಲಿರುವ ಈ ಹಬ್ಬಕ್ಕೆ ಒಂದು ಸ್ಥಳೀಯ ನಂಬಿಕೆಯೇ ಮೂಲ. ಹೊಸಹಟ್ಟಿಯಲ್ಲಿರುವ ನಿವಾಸಿಗಳಲ್ಲಿ ಮ್ಯಾಸ ಬೇಡ ಜನಾಂಗದವರು ಜಾಸ್ತಿ. ಬಹು ಹಿಂದೆ, ಈ ಜನಾಂಗದ ಹಿರಿಯರೊಬ್ಬರ ವೃತ್ತಿ ಎಂದರೆ ಮರವನ್ನು ಸುಟ್ಟು ಇದ್ದಿಲನ್ನು ತಯಾರಿಸುವುದು.
ರಾತ್ರಿ ಹೊತ್ತು ಇದ್ದಿಲನ್ನು ಸುಡುವ ಕೈಂಕರ್ಯ. ಆ ಹಿರಿಯ ವ್ಯಕ್ತಿಯು ಬೆಂಕಿಯ ಕೆಂಡವನ್ನೇ ಪೂಜಿಸುತ್ತಾ, ಅದರಲ್ಲೇ ದೈವತ್ವವನ್ನ ಕಂಡುಕೊಂಡರು. ಅವರ ನೆನಪಿನಲ್ಲಿ ಕೆಂಡವನ್ನು ಪೂಜಿಸುವ ಪದ್ಧತಿ ಇಂದಿಗೂ ನಡೆದುಬಂದಿದೆ. ತೆಲುಗಿನಲ್ಲಿ ಬೊಗ್ಗುಲು ಎಂದರೆ ಇದ್ದಿಲು ಎಂಬರ್ಥ. ಇದ್ದಿಲನ್ನೇ ದೇವರು ಎಂದು ಭಕ್ತಿಯಿಂದ ಪೂಜಿಸುವ ಈ ಜನರು, ಮೂರು ವರ್ಷ ಕ್ಕೊಮ್ಮೆ ‘ಬೊಗ್ಗುಲು ಓಬಳೇಶ್ವರ ಸ್ವಾಮಿ’ ಜಾತ್ರೆಯನ್ನು ಆಚರಿಸುತ್ತಾರೆ ಮತ್ತು ಕೆಂಡವನ್ನು ಎರಚುವ ಮೂಲಕ ಹರಕೆಯನ್ನು ಪೂರೈಸುವ ಪರಿಪಾಠ.
ಶಿವರಾತ್ರಿಗೆ ಮುಂಚಿನ ದಿನಗಳಲ್ಲಿ ಆರಂಭವಾಗುವ ಈ ಜಾತ್ರೆಯು ಸುಮಾರು ನಾಲ್ಕು ದಿನಗಳ ಕಾಲ ನಡೆಯುತ್ತದೆ. ಈ ವರ್ಷ ಮಾರ್ಚ್ 4 ರಿಂದ 7ರ ತನಕ ನಡೆಯಲಿರುವ ಈ ಜಾತ್ರೆಯ ಅಂಗವಾಗಿ, ಮಾರ್ಚ್ 7 ರಂದು ಕೆಂಡವನ್ನು ಎರಚುವ ಆಚರಣೆ ನಡೆಯಲಿದೆ.
ಕೆಂಡದ ರಾಶಿ
ಈ ಆಚರಣೆ ನಡೆಸಲು ಸ್ಥಳೀಯರು ಸಿದ್ಧತೆಯನ್ನು ನಡೆಸುವ ಪರಿ ವಿಶಿಷ್ಟ. ದೇವಾಲಯದ ಮುಂಭಾಗದಲ್ಲಿರುವ ಮಟ್ಟಸವಾದ ಜಾಗದಲ್ಲಿ ಸುಮಾರು ನಾಲ್ಕು ಗಾಡಿಗಳಷ್ಟು ಒಣ ಕಟ್ಟಿಗೆಯನ್ನು ಒಟ್ಟಲಾಗುತ್ತದೆ. ಅದಕ್ಕೆ ಬೆಂಕಿ ಹಚ್ಚಿ, ಹದವಾಗಿ ಉರಿಯುವ ನಿಗಿ ನಿಗಿ ಕೆಂಡವನ್ನು ತಯಾರಿಸಲು ಸುಮಾರು ನಾಲ್ಕು ಗಂಟೆಗಳ ಕಾಲವಕಾಶ ಅಗತ್ಯ.
ಕೆಂಡದ ರಾಶಿ ಸಿದ್ಧಗೊಂಡ ನಂತರ, ಪೂಜಾರಿಯು ದೇವರ ಪೂಜೆ ಮಾಡಿ, ಪುಟ್ಟ ಕುಡಿಕೆಯಲ್ಲಿ ಬೆಂಕಿಯ ಕೆಂಡಗಳನ್ನು ಇಟ್ಟು ಗರ್ಭಗುಡಿಯಿಂದ ಹೊರಬರುತ್ತಾರೆ. ಯಾರೆಲ್ಲಾ ಭಕ್ತರು ಕೆಂಡ ತೂರುವ ಹರಕೆ ಹೊತ್ತಿರುವರೋ ಅವರೆಲ್ಲರೂ, ದೇಗುಲದ ಮುಂಭಾಗದಲ್ಲಿರುವ ಕೆಂಡದ ರಾಶಿಗೆ ಧುಮುಕಿ, ಕೆಂಡವನ್ನು ಎಲ್ಲೆಡೆ ಎರಚುವುದನ್ನು ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಭಕ್ತರಿಗೆ ಯಾವುದೇ ಗಾಯಗಳಾಗದೇ ಇರುವುದು ಸಹ ವಿಶೇಷ.
ಕೆಂಡ ತೂರುವ ಹಬ್ಬ ಮುಗಿಯುವ ಸಮಯದಲ್ಲಿ, ಗರ್ಭಗುಡಿಯಲ್ಲಿ ಸಹ ಕೆಂಡಗಳು ಹರಡಿರುವುದು ವಿಶೇಷ ಅನಿಸುತ್ತದೆ.
ಕರ್ನಾಟಕದ ಬಹು ವಿಶಿಷ್ಟ ಜಾತ್ರಾ ಆಚರಣೆಗಳಲ್ಲಿ ಕೂಡ್ಲಿಗಿ ಹೊಸಹಟ್ಟಿಯ ಕೆಂಡ ತೂರುವ ಸಂಪ್ರದಾಯವೂ ಸೇರಿರುವು ದಂತೂ ನಿಜ.