ಸುರೇಶ ಗುದಗನವರ
ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಎನ್ನುತ್ತಾರೆ ಪ್ರಾಜ್ಞರು. ಮಾಧ್ಯಮ ಕ್ಷೇತ್ರದಲ್ಲಿ, ಚಲನಚಿತ್ರ ರಂಗದಲ್ಲಿ ತೊಡಗಿಸಿ ಕೊಂಡಿದ್ದ ಮಹಿಳೆಯೊಬ್ಬರು, ಬುಡಕಟ್ಟು ಜನಾಂಗದ ಮಕ್ಕಳಿಗೆ ಶಾಲೆ ತೆರೆದು, ಅವರಿಗೊಂದು ಗೌರವಯುತವಾದ ಜೀವನ ಕಟ್ಟಿಕೊಡಲು ನಡೆಸಿದ ಪ್ರಯತ್ನ ಎಲ್ಲರ ಮೆಚ್ಚುಗೆ ಗಳಿಸಿದೆ.
ಬುಡಕಟ್ಟು ಸಮುದಾಯಗಳು ಸಾಂಸ್ಕೃತಿಕವಾಗಿ ಇತರ ಸಮುದಾಯಗಳಿಗಿಂತ ಭಿನ್ನ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿವೆ. ಶಿಕ್ಷಣವು ವ್ಯಕ್ತಿಯನ್ನು ವೈಜ್ಞಾನಿಕ ಚಿಂತನೆಗೆ ಹಚ್ಚುವದರ ಮೂಲಕ ಸರ್ವತೋಮುಖ ಬೆಳವಣಿಗೆ, ಸಂಸ್ಕೃತಿಯ ಸಂರಕ್ಷಣೆಗೆ ಅತ್ಯವಶ್ಯಕವಾಗಿದೆ.
ಹಾಗೆಯೇ ಬುಡಕಟ್ಟು ಸಮುದಾಯದವರ ಶಿಕ್ಷಣವನ್ನು ಬಲಪಡಿಸಲು ಮತ್ತು ಭಿಕ್ಷಾಟನೆಯಿಂದ ಹೊರಬರಲು ಮಹಿಳೆ ಯೊಬ್ಬರು ಶಾಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಅವರೇ ನಾಗಪಟ್ಟಣಂ ಆರ್.ರೇವತಿಯವರು. ಮೂಲತಃ ರೇವತಿ ಯವರು ತಮಿಳುನಾಡಿನ ವೆಲ್ಲೂರ ಜಿಲ್ಲೆಯ ಅರಕ್ಕೋಣಂನವರು. ಚೆನೈನ ಸೈದಾಪೇಟೆಯ ಸರ್ಕಾರಿ ಶಾಲೆಯಲ್ಲಿ ಕಲಿತ
ಅವರು ನಂತರ ಭಾರತಿ ಮಹಿಳಾ ಕಾಲೇಜಿನಿಂದ ಗಣಿತಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು.
ಅವರು ಪತ್ರಿಕೋದ್ಯಮದಲ್ಲಿ ಆಸಕ್ತಿಯನ್ನು ಹೊಂದಿದ್ದರಿಂದ ಸನ್ ನ್ಯೂಸ್, ಜಿ ನ್ಯೂಸ್, ಈ ನಾಡು ಮುಂತಾದ ಅನೇಕ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದರು. ರೇವತಿಯವರು ತಮಿಳು ಚಲನಚಿತ್ರ ನಿರ್ದೇಶಕ ಗೌತಮ್ ಮೆನನ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು.
ಸುನಾಮಿ ಸಮಯದಲ್ಲಿ ಸಹಾಯ
2004ರಲ್ಲಿ ಸುನಾಮಿ ಎರಗಿತು. ತಮಿಳುನಾಡಿನ ಕರಾವಳಿ ಪ್ರದೇಶದ ಹಲವು ಹಳ್ಳಿಗಳು ಸುನಾಮಿಯ ಸಂಕಟಕ್ಕೆ ಸಿಲುಕಿದವು.
ಹಿಂದೂ ಮಹಾಸಾಗರದ ಅಲೆಗಳು ಅಪ್ಪಳಿಸಿ ಎಂಟು ಸಾವಿರಕ್ಕೂ ಹೆಚ್ಚು ಜನರು ಪ್ರಾಣವನ್ನು ಕಳೆದುಕೊಂಡರು. ಇಂತಹ ಪರಿಸ್ಥಿತಿಯಲ್ಲಿ ಆರ್.ರೇವತಿಯವರು ಸುನಾಮಿಯಿಂದ ಹಾನಿಗೊಳಗಾದ ಕರಾವಳಿ ಪ್ರದೇಶ ನಾಗಪಟ್ಟಣಂನ ಪರಿಹಾರ ಶಿಬಿರ ದಲ್ಲಿ ಸ್ವಯಂ ಸೇವಕರಾಗಿ ಸೇರಿದರು. ಆಗ ಅವರಿಗೆ ಇಪ್ಪತ್ತೇಳು ವರ್ಷ. ವಿಪತ್ತಿನಲ್ಲಿ ಸಿಲುಕಿರುವವರಿಗೆ ಸಹಾಯ ಮಾಡಲು
ಸಹಾಯಕ ನಿರ್ದೇಶಕ ಕೆಲಸವನ್ನು ತೊರೆದು ಪರಿಹಾರ ಶಿಬಿರದಲ್ಲಿ ತೊಡಗಿಕೊಂಡರು.
ಮಾಧ್ಯಮ ಮತ್ತು ಚಲನಚಿತ್ರ ಕ್ಷೇತ್ರದ ವೃತ್ತಿಯನ್ನು ತೊರೆದು, ಕಷ್ಟದಲ್ಲಿರುವವರಿಗಾಗಿ ಸಹಾಯ ಹಸ್ತ ಚಾಚಿದ ಇವರ ಅಂದಿನ ನಡೆ, ಅವರ ಜೀವನಕ್ಕೆ ಹೊಸ ದಿಕ್ಕನ್ನು ತೋರಿತು. ನಾಗಪಟ್ಟಣಂನಲ್ಲಿ ಜನರಿಗೆ ಸಹಾಯ ಮಾಡುವ ಕೆಲಸ ಮುಗಿಸಿ ಹೊರಡುವ
ಸಮಯದಲ್ಲಿ ಅಲ್ಲಿ ವಾಸಿಸುತ್ತಿರುವ ಅಲೆಮಾರಿ ಬುಡಕಟ್ಟು ಗುಂಪುಗಳನ್ನು ಭೇಟಿಯಾದರು. ಅವರ ಮಕ್ಕಳು ತೀವ್ರ ಅಪೌಷ್ಟಿ ಕತೆ, ಬಡತನ ಮತ್ತು ಶಿಕ್ಷಣ ಮಹತ್ವ ಅರಿಯದೇ ಸಂಪೂರ್ಣ ಅಜ್ಞಾನದಲ್ಲಿ ವಾಸಿಸುತ್ತಿದ್ದರು.
ರೇವತಿಯವರು ಆ ಅಮಾಯಕ ಮಕ್ಕಳ ಸ್ಥಿತಿಯನ್ನು ನೋಡಿ ಮರಗಿದರು. ಈ ಅನುಭವವು ರೇವತಿಯವರ ಜೀವನವನ್ನು ಶಾಶ್ವತವಾಗಿ ಬದಲಾಯಿಸಿತ್ತು. ಅವರು ಮಕ್ಕಳಿಗಾಗಿ ಶಾಲೆ ತೆಗೆಯಲು ನಿರ್ಧರಿಸಿದರು. ಹಾಗೆಯೇ 2005ರಲ್ಲಿ ರೇವತಿಯವರು
20 ಬುಡಕಟ್ಟು ವಿದ್ಯಾರ್ಥಿಗಳೊಂದಿಗೆ ನಾಗಪಟ್ಟಣಂ ಜಿಲ್ಲೆಯ ಕೀಖಕರೈರುಪ್ಪು ಹಳ್ಳಿಯ ಸಣ್ಣ ಕೋಣೆಯಲ್ಲಿ ವಾನವಿಲ ಶಾಲೆಯನ್ನು ಸ್ಥಾಪಿಸಿದರು. ಇದಕ್ಕಾಗಿ ಅವರು ತಮ್ಮ ಬಳಿ ಇದ್ದ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ತೊಡಗಿಸಿದರು. ಸಹೃದಯರು ಸಣ್ಣ ಮಟ್ಟದ ಸಹಾಯ ಮಾಡಿದರು.
ಮಕ್ಕಳಿಗೆ ಊಟ
ಪ್ರಾರಂಭದ ಎರಡು ವರ್ಷಗಳಲ್ಲಿ ಬಹಳ ಕಷ್ಟಗಳನ್ನು ಎದುರಿಸಿದರು. ಶಾಲೆಗೆ ಬರುವ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ
ಬಳಲುತ್ತಿದ್ದರು. ಮಕ್ಕಳಿಗೆ ಅಡುಗೆಯನ್ನು ಮಾಡಿ, ಉಣಿಸಿ ನಂತರ, ಅದೇ ಮಕ್ಕಳಿಗೆ ಅಕ್ಷರ ಕಲಿಸುವ ಜವಾಬ್ದಾರಿಯನ್ನು ರೇವತಿಯವರೇ ನಿರ್ವಹಿಸುತ್ತಿದ್ದರು. ಆದರೂ ಕೆಲವು ಮಕ್ಕಳು ತರಗತಿಗೆ ಚಕ್ಕರ್ ಹೊಡೆದು ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸುತ್ತಿದ್ದರು. ಅವರನ್ನು ಹಿಂಬಾಲಿಸಿ, ಭಿಕ್ಷಾಟನೆಯನ್ನು ಬಿಡಿಸಿ ಮರಳಿ ಶಾಲೆಗೆ ಕರೆತರುವಲ್ಲಿ ರೇವತಿಯವರಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ರೇವತಿಯವರ ಪ್ರಯತ್ನದಿಂದ ಆದಿಯನ್ ಹಾಗೂ ನಾರಿಕುವರ ಬುಡಕಟ್ಟು ಮಕ್ಕಳು ಶಾಲೆಗೆ ಬರತೊಡಗಿದರು. ಕೆಲವು ವರ್ಷಗಳ ನಂತರ ಶಾಲೆಯನ್ನು ಪೂರ್ಣ ಪ್ರಮಾಣದ ಶೈಕ್ಷಣಿಕ ವಸತಿ ಸಂಸ್ಥೆಯಾಗಿ ಮಾರ್ಪಾಡಿಸಿ ದರು.
ಪ್ರಾಯೋಗಿಕ ಕಲಿಕೆ
ವಾನವಿಲ ಶೈಕ್ಷಣಿಕ ವಸತಿ ಕೇಂದ್ರದಲ್ಲಿ ಪಠ್ಯಕ್ರಮವನ್ನು ಪ್ರಾಯೋಗಿಕ ಕಲಿಕೆಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದರಿಂದ ಮಕ್ಕಳು ಮನೋರಂಜನೆಯ ಮೂಲಕ ಪಾಠವನ್ನು ಕಲಿಯುತ್ತಿದ್ದಾರೆ. ಉದಾಹರಣೆಗೆ ಮಕ್ಕಳನ್ನು ತರಕಾರಿಯನ್ನು ಬೆಳೆದು, ಅವರೇ ಮಾರುಕಟ್ಟೆಗೆ ಕರೆದೊಯ್ದು ವೆಚ್ಚ ಹಾಗೂ ಮಾರಾಟದ ಕುರಿತಾಗಿ, ಬೆಲೆಯ ಕುರಿತಾಗಿ ತಿಳಿಸುತ್ತಾರೆ. ಕೃಷಿ
ಜಮೀನುಗಳಿಗೆ ಮಕ್ಕಳನ್ನು ಕರೆದೊಯ್ದು ಕೃಷಿಯ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲದೇ ಚಲನಚಿತ್ರ ವೀಕ್ಷಣೆ, ಕತೆ ಹೇಳುವಿಕೆ ಹಾಗೂ ಕಲೆಗಳ ಪ್ರದರ್ಶನ ಚಟುವಟಿಕೆಗಳನ್ನು ಮಾಡಿಸುತ್ತಾರೆ. ಕಳೆದ ಹದಿನೈದು ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬುಡಕಟ್ಟು ಮಕ್ಕಳು ಇವರಿಂದ ಶಿಕ್ಷಣ ಮತ್ತು ಪ್ರಾಯೋಗಿಕ ಕಲಿಕೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
ಸದ್ಯ ರೇವತಿಯವರ ಸಂಸ್ಥೆಯಲ್ಲಿ ಎಂಟು ಜನ ಪೂರ್ಣವಧಿ ಶಿಕ್ಷಕರು ಮತ್ತು ಹದಿನಾಲ್ಕು ಜನ ಸಹಾಯಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ನೂರಾಎಂಬತ್ತು ವಿದ್ಯಾರ್ಥಿಗಳೊಂದಿಗೆ ವಸತಿ ಶಾಲೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅಲ್ಲದೇ ಬುಡಕಟ್ಟು ಸಮುದಾಯದವರ ಶಿಕ್ಷಣವನ್ನು ಬಲಪಡಿಸಲು ಮತ್ತು ಆ ಸಮುದಾಯದ ಮಕ್ಕಳು ಭಿಕ್ಷಾಟನೆಯಿಂದ
ಹೊರಬರಲು ರೇವತಿಯವರು ಎರಡು ಜಿಲ್ಲೆಗಳ ಹತ್ತು ಗ್ರಾಮಗಳಲ್ಲಿ ಪೂರಕ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.
‘ನನ್ನ ಪ್ರಯತ್ನಗಳ ಫಲಿತಾಂಶವನ್ನು ನೋಡುತ್ತಿದ್ದರೇ ನನಗೆ ಮಕ್ಕಳೀಗೆ ಶಿಕ್ಷಣ ನೀಡುವ ಗುರಿಯಲ್ಲಿ ಸ್ವಲ್ಪ ಮಟ್ಟಿಗಾದರೂ ಸಾಧಿಸಿದ್ದೇನೆಂದು ವಿಶ್ವಾಸದಿಂದ ಹೇಳಬಲ್ಲೆ’ ಎಂದು ರೇವತಿ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. ರೇವತಿಯವರ ಪಯಣದುದ್ದಕ್ಕೂ ಹಲವು ಸಂಸ್ಥೆಗಳು ಕೈ ಜೋಡಿಸಿವೆ. ಇವರ ಸಕಾರಾತ್ಮಕ ಕೆಲಸವನ್ನು ಕಂಡ ಕೆಲವರು ವೈಯಕ್ತಿಕವಾಗಿಯೂ
ಸಹಾಯ ಮಾಡಿದ್ದಾರೆ. ಮಿಲಾಪ್‌ನಂತಹ ಕ್ಲೌಡ್ ಸೋರ್ಸಿಂಗ್ ಪ್ಲಾಟ್ ಫಾರ್ಮಗಳು ಮತ್ತು ಹಲವು ದೇವಣಿಗೆಗಳು ಸಹಕಾರಿಯಾಗಿವೆ.
ಅವರು ನಾಗಪಟ್ಟಣಂ ಜಿಲ್ಲಾಧಿಕಾರಿಗಳ ಸಹಾಯದೊಂದಿಗೆ ಬುಡಕಟ್ಟು ಸಮುದಾಯದವರಿಗಾಗಿ ಜೀವನೋಪಾಯ ಯೋಜನೆ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ರೇವತಿಯವರು ಆದಿಯನ್ನರು ಮತ್ತು ನಾರಿಕುರವರ ಬುಡಕಟ್ಟು ಗುಂಪುಗಳಲ್ಲಿ ಪರಿವರ್ತನೆಯ ಅಲೆಯನ್ನು ಸೃಷ್ಟಿಸುತ್ತಿದ್ದಾರೆ. ರೇವತಿಯವರ ಪ್ರಯತ್ನ ಅನುಕರಣಾರ್ಹ.