ಜಯಶ್ರೀ ಅಬ್ಬಿಗೇರಿ
ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ’ ಎಂಬ ಆಶಯ ತುಂಬಿದ ಕವನ ಬರೆದವರು ಕವಿ ಈಶ್ವರ ಸಣಕಲ್ಲರವರು. ನಾವು ಸುಖವನ್ನು ಬಯಸುತ್ತೇವೆ. ಅದು ತಪ್ಪಲ್ಲ. ಆದರೆ ಅದಕ್ಕಾಗಿ ವಾಮ ಮಾರ್ಗಗಳನ್ನು ಅನುಸರಿಸುವುದು ತಪ್ಪು.
ಕ್ಷಣಿಕ ಸುಖದ ಬೆನ್ನು ಹತ್ತಿದರೆ, ಮುಂದೆ ದುಃಖದ ಕಡಲಲ್ಲಿ ಮುಳುಗುವದು ನಿಶ್ಚಿತ. ಸುಖ ಗಳಿಸಲು ದೂರದೃಷ್ಟಿಯನ್ನಿಟ್ಟು ಕೊಂಡು ಸೂಕ್ತ ಯೋಜನೆಗಳನ್ನು ರೂಪಿಸಿ ಕಾರ್ಯ ಪ್ರವೃತ್ತರಾಗುವದು ಒಳಿತು. ಆಂಗ್ಲ ಭಾಷೆಯ ಉಕ್ತಿಯಂತೆ ‘ಈ ಜಗದಲ್ಲಿ ಯಾರೂ ದಡ್ಡರಿಲ್ಲ. ಮನಸ್ಸು ಮಾಡಿದರೆ ಯಾರು ಬೇಕಾದರೂ ತಮಗೆ ಬೇಕಾದ್ದನ್ನು ಸಾಧಿಸಬಹುದು’.
ಸರ್ವಜ್ಞ ತನ್ನ ವಚನದಲ್ಲಿ ‘ಸರ್ವರೊಳಗೊಂದೊಂದು ನುಡಿಗಲಿತು ಸರ್ವಜ್ಞನಾದೆ’ ಎಂದು ಹೇಳಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯು ಅವನ ಪರಿಸರ, ಕುಟುಂಬದ ಸಂಸ್ಕಾರ, ಸಂಸ್ಕೃತಿ, ಪಡೆಯುವ ಶಿಕ್ಷಣದ ಮೇಲೆ ಅವಲಂಬಿತ. ವ್ಯಕ್ತಿತ್ವ ವಿಕಸನ ದಲ್ಲಿ ಪರಿಸರದ ಪಾತ್ರ ಮಹತ್ತರ. ಪರಿಸರವು ನಮ್ಮ ನಡೆ ನುಡಿಯಲ್ಲಿ ಅಗಾಧವಾದ ಬದಲಾವಣೆ ತರುವ ಶಕ್ತಿ ಹೊಂದಿದೆ.
ತಪ್ಪು ಮಾಡಿಲ್ಲ ಎಂದರೆ ಪ್ರಯತ್ನವನ್ನೇ ಮಾಡಿಲ್ಲ ಎಂದರ್ಥ. ತಪ್ಪು ಮಾಡುವುದು ತಪ್ಪಲ್ಲ. ಪದೇ ಪದೇ ಅದೇ ತಪ್ಪನ್ನು
ಮಾಡುವದು ತಪ್ಪು. ‘ಸಮಸ್ಯೆಗಳು ಮನುಷ್ಯನಿಗಲ್ಲದೆ ಮರಗಳಿಗೆ ಬರುತ್ತವೆಯೆ?’ ಸಮಸ್ಯೆಗಳು ಮಾನವ ಜೀವನದ ಅವಿಭಾಜ್ಯ ಅಂಗಗಳು. ಸಮಸ್ಯೆಗಳಿಗೆ ಹೆದರಿ ಫಲಾಯನಗೈಯದೇ, ಎದುರಿಸುವ ಛಲ ಬೆಳೆಸಿಕೊಳ್ಳಬೇಕಿದೆ. ಕೆಲವು ವಿದ್ಯಾರ್ಥಿಗಳು ಮತ್ತು ಯುವ ಜನತೆ ಸಣ್ಣ ಪುಟ್ಟ ಸಮಸ್ಯೆಗಳ ವಿಫಲತೆಯನ್ನು ದೊಡ್ಡ ವೈಫಲ್ಯತೆಯೆಂದು ಪರಿಗಣಿಸಿ, ತನ್ನಿಂದ ಏನನ್ನೂ ಸಾಧಿಸ ಲಾಗುವದಿಲ್ಲ ಎಂದು ಹತಾಶರಾಗಿ ತಮ್ಮ ಅಮೂಲ್ಯವಾದ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ.
ಇದು ಅರ್ಥಹೀನ. ‘ಕುಳಿತವನು ಎಡವಲಾರ, ನಡೆಯುವವನೇ ಎಡುವುತ್ತಾನೆ.’ ಎದುರಿಸುವ ಧೈರ್ಯವಂತರಿಗೆ ಮಾತ್ರ ಸಮಸ್ಯೆ ಗಳು ಎದುರಾಗುತ್ತವೆ. ಸೋಮಾರಿಗಳಿಗೆ, ಹೇಡಿಗಳಿಗೆ ಸಮಸ್ಯೆಗಳು ಎದುರಾಗುವದಿಲ್ಲ. ಏಕೆಂದರೆ ಸಮಸ್ಯೆ ಎದುರಿಸುವ ಛಾತಿ ಅವರಲ್ಲಿಲ್ಲ. ಸಮಸ್ಯೆಗಳನ್ನು ಸವಾಲೆಂದು ಸ್ವೀಕರಿಸಿ ದಿಟ್ಟ ಹೆಜ್ಜೆ ಇಡುವಲ್ಲಿ ಬದುಕಿನ ಸಾಫಲ್ಯತೆಯಿದೆ.
ಘಟಿಸಿ ಹೋದ ಕಹಿ ಘಟನೆಗಳನ್ನು ಮೆಲಕು ಹಾಕುತ್ತ, ಅಮುಖ್ಯ ಘಟನೆಗಳಿಗೆ ಪ್ರಾಮುಖ್ಯತೆ ನೀಡಿ ಕೊರಗುತ್ತಾ ಕೂಡುವದು ವ್ಯರ್ಥ. ಭವಿಷ್ಯದ ಬಗ್ಗೆೆ ಸುಂದರ ಕನಸುಗಳನ್ನು ಕಾಣುತ್ತ ಅವುಗಳನ್ನು ನನಸಾಗಿಸಲು, ದೃಢಸಂಕಲ್ಪ ಮಾಡಿ. ಆತ್ಮವಿಶ್ವಾಸ ವನ್ನು ಹೆಚ್ಚಿಸಿಕೊಂಡು ಶ್ರದ್ಧಾ ಮನೋಭಾವದೊಂದಿಗೆ ಪ್ರಾಮಾಣಿಕವಾಗಿ ದಕ್ಷತೆಯಿಂದ ಕೆಲಸ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.
‘ನೀನು ಈ ದಿನವನ್ನು ನೋಡಿಕೊ ಅದು ನಿನ್ನ ನಾಳೆಯನ್ನು ನೋಡಿಕೊಳ್ಳುತ್ತದೆ.’ ಭೂತ ಭವಿಷ್ಯತ್ತುಗಳ ಕುರಿತು ಚಿಂತಿಸದೆ ಈ ದಿನ, ಈ ಕ್ಷಣ ಮಾತ್ರ ನನ್ನದು ಎನ್ನುವ ಭಾವ ತುಂಬಿಕೊಂಡು, ತೊಡಕುಗಳು ಎದುರಾದಾಗ ಕುಗ್ಗದೇ, ನಿರಂತರವಾಗಿ ಪರಿಶ್ರಮ ಪಟ್ಟರೆ ಸುಖದ ಊರಿನತ್ತ ಬಾಳಿನ ಬಂಡಿ ಸಾಗುತ್ತದೆ.