Monday, 12th May 2025

ವಿಪಕ್ಷ ನಡೆ ದುರಂತದ ಸಂಗತಿ

ಅಭಿವ್ಯಕ್ತಿ

ಸುಜಯ ಆರ್‌.ಕೊಣ್ಣೂರ್‌

ದೇಶದಲ್ಲಿ ಎರಡು ಪಕ್ಷ ಇರಬೇಕು. ಒಂದು ಆಳುವ ಪಕ್ಷ. ಇನ್ನೊಂದು ಅಳೆಯುವ (ಕಾಲೆಳೆಯುವ) ಪಕ್ಷ. ಈ ಅಳೆಯುವ ಪಕ್ಷದ ಕೆಲಸ ಏನಪ್ಪಾ ಅಂತಂದ್ರೆ, ಆಳುವ ಪಕ್ಷ ಮಾಡಿದ ಕೆಲಸವನ್ನು ಅಳೆದು, ತೂಗಿ, ಪರಾಮರ್ಶೆ ಮಾಡಿ, ಸರಿಯೋ ತಪ್ಪೋ ಹೇಳೋದು… ಆದ್ರೆ ನಮ್ಮ ದೇಶದಲ್ಲಿ ಅವರದ್ದು ಬರೀ ಕಾಲೆಳೆಯೋ ಕೆಲಸವೇ ಆಗಿದ್ದು ದೊಡ್ಡ ದುರಂತ.

ಅವರಲ್ಲಿ ದೇಶಾಭಿಮಾನ ಇಲ್ಲವೇ ಇಲ್ಲ. ಅಲ್ಲಿ ಬರೀ ಕೆಟ್ಟ ದುರಭಿಮಾನ. ಒಳ್ಳೆಯ ಕೆಲಸ ಮಾಡಿದರೂ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು. ೭೦ ವರ್ಷಗಳ ಕಾಲ ತಿಂದುಂಡು ಹಾಯಾಗಿದ್ದು, ಈಗ ನಾ ಖಾವುಂಗ, ಔರ್ ಖಾನೇ ಕೋ ಭಿ ನಹೀ ದುಂಗಾ ಈ ಸಾಲು ಜೀರ್ಣ ಮಾಡಿಕೊಳ್ಳೋದೇ ಕಷ್ಟ ಆಗ್ತಿದೆ.

ಎಲ್ಲಾ ವ್ಯವಹಾರ ಪಾರದರ್ಶಕ ಆಗ್ಬಿಟ್ಟು ಅವರಿಗೆ ಉಸಿರಾಡಲೂ ಕಷ್ಟ ಆಗ್ತಿದೆ. ಎಲ್ಲಿ ಯಾವ ಕಾರಣ ಹುಡುಕಲಿ ಅಂತ ಇದ್ದೋರಿಗೆ, ಈ ರೈತರ ಮುಷ್ಕರ ಒಂದು ವರವಾಗಿ ಪರಿಣಮಿಸಿತು. ಅವರಿಗೆ ಇದ್ದ ಎಲ್ಲಾ ಸೌಕರ್ಯ ಒದಗಿಸಿ, ನೀವು ಮುಷ್ಕರ ನಿಲ್ಲಿಸಬೇಡಿ, ನಿಮ್ಮ ಜತೆ ನಾವಿದ್ದೇವೆ ಎಂಬ ಅಭಯ ಹಸ್ತ ನೀಡಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಶತಾಯಗತಾಯ ನಿಮ್ಮ ಪ್ರಯತ್ನ ಬಿಡಬೇಡಿ, ಅದು ಕಾನೂನು ಬಾಹಿರ ಆಗಿದ್ರೂ ಪರವಾಗಿಲ್ಲ ಅಂತ ಮೊಂಡು ಹಠ ಮಾಡಲು ಸಂಪೂರ್ಣ ಸಹಕಾರ ಕೊಡ್ತಿದ್ದಾರೆ.

ಇವರಿಗೆ ದೇಶ ಉದ್ಧಾರ ಆಗ್ಬೇಕು, ಪ್ರಪಂಚದಲ್ಲಿ ಭಾರತದ ಸ್ಥಾನ ಎತ್ತರಕ್ಕೆ ಏರಬೇಕು ಎಂಬಿತ್ಯಾದಿ ಯಾವ ಅಭಿಮಾನವೂ ಇಲ್ಲ. ಸ್ವಾರ್ಥ ರಾಜಕಾರಣ ಮಾಡಿ, ತಂತಮ್ಮ ಏಳಿಗೆಗಾಗಿ ದೇಶವನ್ನು ಅಡವಿಡಲೂ ಅವರು ಸೈ. ಒಂದು ದೇಶ ಎಲ್ಲಾ ರೀತಿಯಲ್ಲೂ ಪ್ರಗತಿ ಹೊಂದಬೇಕೆಂದರೆ, ಎಲ್ಲರೂ ಒಂದಾಗಬೇಕು. ಪಕ್ಷ, ಚುನಾವಣೆ ಎಲ್ಲ ಬರೀ ಒಬ್ಬ ಮುಂದಾಳು ಆರಿಸುವ ಸಲುವಾಗಿ ಮಾತ್ರ. ಆ ಮುಂದಾಳು, ಜನ ಸೇವಕ ಎಲ್ಲರ ಪರವಾಗಿ ಕೆಲಸ ಮಾಡಬೇಕು.

ದೇಶದ ಉನ್ನತಿಗೆ ತನ್ನ ಯೋಜನೆ, ಯೋಚನೆಗಳಿಗೆ ರೂಪು ಕೊಡಲು ಒಬ್ಬ ಸಾರಥಿಯ ರೀತಿಯಲ್ಲಿ ಕೆಲಸ ಮಾಡಬೇಕು. ಉಳಿದವರು ಅದಕ್ಕೆ ಸಾಥ್ ಕೊಡಬೇಕು. ಅದು ಬಿಟ್ಟು, ಸುಖಾ ಸುಮ್ಮನೆ ದ್ವೇಷ ಮಾಡುವುದು, ಎಲುಬಿಲ್ಲದ ನಾಲಿಗೆಯನ್ನು ಹರಿಬಿಡುವುದು, ಹಣದ ಆಮಿಷವೊಡ್ಡಿ ಜನರನ್ನು ಹಾದಿ ತಪ್ಪಿಸುವುದು, ಬೇಕಂತಲೇ ಯೋಜನೆಗಳಿಗೆ ಅಡ್ಡ ಹಾಕುವುದು ಮಾಡುತ್ತಿದ್ದರೆ, ಸಾರಥಿಯಾದವನು ದೇಶವೆಂಬ ರಥವನ್ನು ಮುನ್ನಡೆಸುವುದಾದರೂ ಹೇಗೆ? ನಮ್ಮ ಸಂಸ್ಕೃತಿ ಅಷ್ಟೇಕೆ ಮಾನವ
ಧರ್ಮದ ಎಲ್ಲೂ ಕೂಡ ಅಪ್ಪಿತಪ್ಪಿಯೂ ನಾವು ಒಬ್ಬ ವ್ಯಕ್ತಿಯನ್ನು ಅವನು ಸಾಯಲಿ ಎಂದು ಎಂದೂ ಹೇಳುವುದಿಲ್ಲ.

ಆದರೆ, ಮೊನ್ನೆ ಪಂಜಾಬ್ ಗಡಿಯಲ್ಲಿ ನಡೆಯುತ್ತಿರುವ ರೈತರ (ಅವರ‍್ಯಾರೂ  ನಿಜವಾದ ರೈತರಲ್ಲ ಬಿಡಿ) ಚಳುವಳಿಯಲ್ಲಿ ಅವರು ಕೂಗುತ್ತಿದ್ದಿದ್ದು ಕೇಳಿದೀರಾ? ಮೋದಿ ಸಾಯಬೇಕೆಂದು ಹಾರೈಸುತ್ತೇವೆ ಎಂದು ಆಕ್ರೋಶದಲ್ಲಿ ಒಕ್ಕೊರಲಿನಿಂದ ಕೂಗುತ್ತಿದ್ದಾರೆ.

ಇದು ಮಾನವ ಸಂಸ್ಕೃತಿಗೆ ವಿರುದ್ಧವಾದದ್ದು. ಎಷ್ಟೋ ಬಾರಿ ನಮಗೂ ಅನ್ನಿಸಿದ್ದಿದೆ, ಈ ಸೋನಿಯಾ, ರಾಹುಲ್ ದೇಶಬಿಟ್ಟು ಹೋಗಲಿ ಎಂದು. ಆದರೆ ಎಂದೂ ಅವರು ಸಾಯಲಿ ಎಂದು ಬಯಸುವುದಿಲ್ಲ. ಹಾಗೆ ಯೋಚಿಸುವುದು ನಮ್ಮ ಧರ್ಮವೂ ಅಲ್ಲ. ಹೊರಗಿನಿಂದ ಬಂದ ರೋಹಿಂಗ್ಯಾದ ಗುಂಪನ್ನು, ತಮ್ಮ ಮತ ಬ್ಯಾಂಕ್ ಹೆಚ್ಚಿಸಿಕೊಳ್ಳುವ ಸಲುವಾಗಿ, ಅವರಿಗೆ ಆಶ್ರಯ ಕೊಟ್ಟು ನಮ್ಮವರೇ ನಮಗೆ ಶತ್ರುಗಳಾಗುತ್ತಿದ್ದಾರೆ.

ಪ್ರತೀ ರಾಜ್ಯಗಳು ತಾವು ಬೇರೆಯಾಗಬೇಕು, ಆಡಳಿತ ನಮ್ಮ ಕೈಯಲ್ಲಿ ಇರಬೇಕು ಎಂಬ ಹಪಹಪಿ. ಕುಡಿಯುವ ನೀರು, ಗಾಳಿ, ಆಹಾರ, ಐಷಾರಾಮಿ ಜೀವನ ಎಲ್ಲಕ್ಕೂ ನಮ್ಮ ದೇಶ, ಬೆಂಬಲ ನೀಡುವುದು ನಮ್ಮ ಶತ್ರು ದೇಶಗಳಿಗೆ. ಅವರು ಅಲ್ಪಸಂಖ್ಯಾತ ರೆಂದು ಅವರ ಚಿಂತನೆ ಮಾಡುತ್ತಾ, ಅವರಿಗಾಗಿ ಎಲ್ಲಾ ರೀತಿಯ ಸವಲತ್ತುಗಳನ್ನು ಕೊಡುತ್ತಾ, ನಮ್ಮ ಮನೆಯ ಬೀಗದ ಕೀಯನ್ನು ಅವರ ಕೈಗೆ ಕೊಟ್ಟು, ಹೊರಗೆ ನಾವು ಕಾಯುವಂತಾಗಬಾರದು.

ಬನ್ನಿ, ನಿದ್ದೆಯ ಸೋಗಿನಲ್ಲಿರುವ ನಮ್ಮ ಜನತೆಯನ್ನು ಎಚ್ಚರಿಸೋಣ. ನಾವು ಈ ದೇಶದ ನಾಗರಿಕರಾಗಿ ನಮ್ಮ ಜವಾಬ್ದಾರಿ ಯನ್ನು ಹೆಗಲ ಮೇಲೆ ಏರಿಸಿಕೊಳ್ಳೋಣ.

Leave a Reply

Your email address will not be published. Required fields are marked *