Tuesday, 13th May 2025

ಲಂಕೆಗೆ ’ಎನ್‌ಜಿಡಿ’ ಕಡಿವಾಣ, ಹರಿಣರಿಗೆ ಟೆಸ್ಟ್ ಸರಣಿ

ಜೋಹಾನ್ಸ್‌ಬರ್ಗ್: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು.

ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ 2-0 ಯಿಂದ ವಶಪಡಿಸಿಕೊಂಡಿತು. ವಾಂಡರರ್ಸ್‌ ಸ್ಟೇಡಿಯಂನಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 67 ರನ್ ಗೆಲುವಿನ ಗುರಿ ಬೆನ್ನಟ್ಟಿದ ದ.ಆಫ್ರಿಕಾ ವಿಕೆಟ್ ನಷ್ಟ ವಿಲ್ಲದೆ ತಲುಪಿ ವಿಜಯಿಯಾಯಿತು.

ಆರಂಭಿಕರಾದ ಏಡನ್ ಮಾರ್ಕ್ರಮ್ (36*ರನ್) ಹಾಗೂ ಡೀನ್ ಎಲ್ಗರ್ (31*ರನ್)ಜೋಡಿ ಅಜೇಯ ಸಾಧನೆ ಮಾಡಿತು.

4 ವಿಕೆಟ್‌ಗೆ 150 ರನ್‌ಗಳಿಂದ ದಿನದಾಟ ಆರಂಭಿಸಿದ ಶ್ರೀಲಂಕಾ ತಂಡ, ಲುಂಗಿ ಎನ್‌ಗಿಡಿ ಹಾಗೂ ಲುಥೋ ಸಿಪಾಂಮ್ಲ ಜೋಡಿ ಮಾರಕ ದಾಳಿಗೆ ನಲುಗಿ 211 ರನ್‌ಗಳಿಗೆ ಸರ್ವಪತನ ಕಂಡಿತು. 91 ರನ್‌ಗಳಿಂದ ಇನಿಂಗ್ಸ್ ಮುಂದುವರಿಸಿದ ದಿಮುತ್ ಕರುಣರತ್ನೆ (103) ಶತಕ ಸಾಧನೆ ಮಾಡಿದರು. ಶ್ರೀಲಂಕಾ ಮೊದಲ ಇನಿಂಗ್ಸ್ 157 ರನ್‌ಗಳಿಸಿದರೆ, ದಕ್ಷಿಣ ಆಫ್ರಿಕಾ 302 ರನ್‌ಗಳಿಸಿತ್ತು. ಡೀನ್ ಎಲ್ಗರ್ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದರು.

 

Leave a Reply

Your email address will not be published. Required fields are marked *