Saturday, 10th May 2025

UGC-NET: ಗಮನಿಸಿ; ಜ. 15ರಂದು ನಡೆಯಬೇಕಿದ್ದ UGC-NET ಪರೀಕ್ಷೆ ಮುಂದೂಡಿಕೆ

UGC-NET

ನವದೆಹಲಿ: ಬುಧವಾರ (ಜ.15) ನಡೆಯಬೇಕಿದ್ದ ಯುಜಿಸಿ-ಎನ್​​ಇಟಿ (UGC-NET) ಪರೀಕ್ಷೆಯನ್ನು ಮುಂದೂಡಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (National Testing Agency) ಆದೇಶ ಹೊರಡಿಸಿದೆ. ಮಕರ ಸಂಕ್ರಾಂತಿ, ಪೊಂಗಲ್ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದ್ದು, ಮುಂದಿನ ಪರೀಕ್ಷೆ ದಿನಾಂಕ ಶೀಘ್ರದಲ್ಲೇ ಘೋಷಣೆಯಾಗಲಿದೆ.

ʼʼಹೊಸ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಜ. 16ರಂದು ನಿಗದಿಯಾಗಿರುವ ಯುಜಿಸಿ-ನೆಟ್ ಪರೀಕ್ಷೆಯನ್ನು ಯಥಾ ಪ್ರಕಾರ ನಡೆಸಲಾಗುವುದುʼʼ ಎಂದು ಎನ್‌ಟಿಎ ತಿಳಿಸಿದೆ. ವಿವಿಧ ರಾಜ್ಯಗಳಲ್ಲಿ ಪೊಂಗಲ್ ಮತ್ತು ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂವಂತೆ ಮನವಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

“ಅಭ್ಯರ್ಥಿಗಳ ಹಿತದೃಷ್ಟಿಯಿಂದ ಜ. 15ರಂದು ನಿಗದಿಯಾಗಿದ್ದ ಯುಜಿಸಿ-ಎನ್​​ಇಟಿ ಪರೀಕ್ಷೆಯನ್ನು ಮುಂದೂಡಲು ಎನ್‌ಟಿಎ ನಿರ್ಧರಿಸಿದೆ. ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಜನವರಿ 16ರ ಪರೀಕ್ಷೆಯನ್ನು ಹಿಂದಿನ ವೇಳಾಪಟ್ಟಿಯ ಪ್ರಕಾರ ನಡೆಸಲಾಗುವುದು” ಎಂದು ಅಧಿಕೃತರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮಿಳುನಾಡಿನ ಡಿಎಂಕೆ ಸಂಸದೆ ಕನಿಮೋಳಿ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಬರೆದ ಪತ್ರದಲ್ಲಿ, ಪೊಂಗಲ್‌ ಹಬ್ಬದ ವೇಳೆ ಯುಜಿಸಿ-ನೆಟ್ ಪರೀಕ್ಷೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಮೂಲಕ ಕೇಂದ್ರ ಸರ್ಕಾರ ತಮಿಳುನಾಡಿನ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೊಂದಿದೆ ಎಂದು ಆರೋಪಿಸಿದ್ದರು.

“ಪೊಂಗಲ್ ತಮಿಳರ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಆ ದಿನ ಯುಜಿಸಿ-ನೆಟ್ ಪರೀಕ್ಷೆಗಳನ್ನು ನಡೆಸುವುದು ಪೊಂಗಲ್ ಆಚರಣೆಗಳು ಮತ್ತು ತಮಿಳುನಾಡಿನ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಕನಿಮೋಳಿ ಅವರು ಧರ್ಮೇಂದ್ರ ಪ್ರಧಾನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಜ. 15ರಂದು ಬೆಳಗ್ಗೆ ಸಂಸ್ಕೃತ, ಪತ್ರಿಕೋದ್ಯಮ, ಜಪಾನೀಸ್, ಪರ್ಫಾರ್ಮಿಂಗ್ ಆರ್ಟ್ಸ್, ಎಲೆಕ್ಟ್ರಾನಿಕ್ ಸೈನ್ಸ್, ಕಾನೂನು ಮುಂತಾದ ವಿಷಯಗಳಲ್ಲಿ ಮತ್ತು ಸಂಜೆ ಮಲಯಾಳಂ, ಉರ್ದು, ಕ್ರಿಮಿನಾಲಜಿ, ಕೊಂಕಣಿ, ಪರಿಸರ ವಿಜ್ಞಾನ ಮುಂತಾದ ವಿಷಯಗಳ ಪರೀಕ್ಷೆ ನಡೆಯಬೇಕಿತ್ತು.

ಪಿಎಚ್‌ಡಿ ಪ್ರವೇಶಾತಿ, ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಯುಜಿಸಿ ಪರವಾಗಿ ಎನ್‌ಟಿಎ ವರ್ಷಕ್ಕೆ 2 ಬಾರಿ ಯುಜಿಸಿ-ನೆಟ್ (University Grants Commission-National Eligibility Test) ನಡೆಸುತ್ತದೆ. ಒಟ್ಟು 85 ವಿಷಯಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Scholarships for Students: ವಿದ್ಯಾರ್ಥಿಗಳೇ ಗಮನಿಸಿ; ನೀವು ಅಪ್ಲೈ ಮಾಡಬಹುದಾದ ಸ್ಕಾಲರ್‌ಶಿಪ್‌ಗಳ ಪಟ್ಟಿ ಇಲ್ಲಿದೆ

Leave a Reply

Your email address will not be published. Required fields are marked *