Saturday, 10th May 2025

Rishabh Shetty: ರಿಷಬ್‌ ಶೆಟ್ಟಿಯ ಆಂಜನೇಯ ಪಾತ್ರದ ವಿರುದ್ಧ ಆಕ್ರೋಶ; ಪೋಸ್ಟರ್‌ ಡಿಲೀಟ್‌ ಮಾಡಲು ಆಗ್ರಹ

Rishabh Shetty

ಹೈದರಾಬಾದ್‌: ʼಕಾಂತಾರʼ (Kantara) ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಅವರಿಗೆ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿವಾದ ಸುತ್ತಿಕೊಳ್ಳುತ್ತಲೇ ಇದೆ. ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಘೋಷಿಸಿದಾಗ ಒಂದಷ್ಟು ಮಂದಿ ದೈವಾರಾಧನೆಯ ಹೆಸರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ತಿಂಗಳ ಹಿಂದೆ ರಿಷಬ್‌ ಹಿಂದಿಯ ʼಛತ್ರಪತಿ ಶಿವಾಜಿ ಮಹಾರಾಜ್ʼ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವಾಗಲೂ ಹಲವರು ವಿರೋಧಿಸಿದ್ದರು. ಇದೀಗ ಡಿವೈನ್‌ ಸ್ಟಾರ್‌ ನಟಿಸುತ್ತಿರುವ ತೆಲುಗು ಚಿತ್ರ ʼಜೈ ಹನುಮಾನ್‌ʼ ಕೂಡ ವಿವಾದದ ಕಿಡಿ ಹೊತ್ತಿಸಿದೆ. ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್‌ ವರ್ಮಾ (Prasanth Varma) ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಬಹು ನಿರೀಕ್ಷಿತ ಚಿತ್ರದಲ್ಲಿ ರಿಷಬ್‌ ಹನುಮಂತನ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೀಗ ಈ ಬಗ್ಗೆ ಹೈದರಾಬಾದ್‌ನ ವಕೀಲ ತಿರುಮಲ್ ರಾವ್ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಏನಿದು ವಿವಾದ?

ಇತ್ತೀಚೆಗೆ ಚಿತ್ರದ ಪೋಸ್ಟರ್‌, ಟೀಸರ್‌ ರಿಲೀಸ್‌ ಆಗಿತ್ತು. ಅದರಲ್ಲಿ ಹನುಮಂತನ ಪಾತ್ರಧಾರಿ ರಿಷಬ್‌ ರಾಮನ ಮೂರ್ತಿ ಹಿಡಿದು ಭಕ್ತಿ ಪರವಶವಾಗಿರುವುದು ಕಂಡು ಬಂದಿತ್ತು. ಸದ್ಯ ಈ ದೃಶ್ಯಕ್ಕೆ ತಿರುಮಲ ರಾವ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಂಜನೇಯನ ದೇಹದಲ್ಲಿ ರಿಷಬ್‌ ಶೆಟ್ಟಿಯ ಮುಖ ಕಂಡು ಬಂದಿದೆ ಎಂದು ಅವರು ದೂರು ನೀಡಿದ್ದಾರೆ.

ಈ ಚಿತ್ರದಲ್ಲಿ ಆಂಜನೇಯನ ಪಾತ್ರ ಪೋಷಣೆ ಆಕ್ಷೇಪಾರ್ಹವಾಗಿದೆ ಎನ್ನುವುದು ಅವರ ವಾದ. ರಿಷಬ್ ಶೆಟ್ಟಿ ಅವರ ಮುಖವನ್ನೇ ಹನುಮಂತನ ಮುಖವೆನ್ನುವಂತೆ ಚಿತ್ರದಲ್ಲಿ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಂಬಿಕೆಯ ಪ್ರಕಾರ ಹನುಮಂತನ ಮುಖ ವಾನರನನ್ನು ಹೋಲುತ್ತದೆ. ಆದರೆ ʼಜೈ ಹನುಮಾನ್ʼ ಚಿತ್ರದ ಪೋಸ್ಟರ್‌ನಲ್ಲಿ ಹನುಮಂತ ಪಾತ್ರಧಾರಿ ರಿಷಬ್ ಶೆಟ್ಟಿಯ ಮುಖವನ್ನು ಸಾಮಾನ್ಯ ಮನುಷ್ಯನ ಮುಖದಂತೆ ತೋರಿಸಲಾಗಿದೆ. ಈ ಮೂಲಕ ಚಿತ್ರತಂಡದವರು ಮುಂಬರುವ ಪೀಳಿಗೆಯ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ. ಈ ವಿಚಾರವಾಗಿ ನಟ ರಿಷಬ್ ಶೆಟ್ಟಿ, ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ವಿರುದ್ದ ನಾಂಪಲ್ಲಿ ಕ್ರಿಮಿನಲ್‌ ಕೋರ್ಟ್‌ನಲ್ಲಿ ಕೇಸ್ ದಾಖಲಾಗಿದೆ.

ʼʼಎಲ್ಲ ಪೌರಾಣಿಕ ಸಿನಿಮಾ, ಧಾರಾವಾಹಿಗಳಲ್ಲಿ ಹನುಮಂತನ ಪಾತ್ರವನ್ನು ತೋರಿಸಿದ್ದಕ್ಕಿಂತಲೂ ಭಿನ್ನವಾಗಿ ʼಜೈ ಹನುಮಾನ್ʼ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಹನುಮಂತನ ಪಾತ್ರವನ್ನು ತಿದ್ದುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಲಾಗಿದೆ. ರಿಷಬ್‌ ಶೆಟ್ಟಿ ರಾಷ್ಟ್ರ ಪ್ರಶಸ್ತಿ ವಿಜೇತ ನಟನಾಗಿರುವುದರಿಂದ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಬಿಡುಗಡೆ ಮಾಡಲಾದ ಟೀಸರ್ ಮತ್ತು ಪೋಸ್ಟರ್‌ಗಳನ್ನು ಚಿತ್ರತಂಡ ಕೂಡಲೇ ಡಿಲೀಟ್ ಮಾಡಬೇಕುʼʼ ಎಂದು ತಿರುಮಲ ರಾವ್‌ ತಿಳಿಸಿದ್ದಾರೆ.

2024ರಲ್ಲಿ ತೆರೆಕಂಡ ʼಹನುಮಾನ್‌ʼ ಚಿತ್ರದ ಸೀಕ್ವೆಲ್‌ ʼಜೈ ಹನುಮಾನ್‌ʼ. ಈ ಚಿತ್ರದಲ್ಲಿ ತೇಜ್ ಸಜ್ಜಾ, ರಾಣಾ ದಗ್ಗುಬಾಟಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: Rishab Shetty: ಮತ್ತೊಂದು ಮೈಲಿಗಲ್ಲು ನೆಡಲು ಡಿವೈನ್ ಸ್ಟಾರ್ ರೆಡಿ; ಹನುಮಾನ್ ಪಾತ್ರದಲ್ಲಿ ರಿಷಬ್ ಮೋಡಿ

Leave a Reply

Your email address will not be published. Required fields are marked *