ನವದೆಹಲಿ: ಸತತ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಬಗ್ಗೆ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಭಾರತ ತಂಡದ ಆಟಗಾರರು ತಮ್ಮ ಹೆಡ್ ಕೋಚ್ ಗಂಭೀರ್ ಅವರನ್ನು ಗಭೀರವಾಗಿ ಪರಿಗಣಿಸಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ದ ತವರು ಟೆಸ್ಟ್ ಸರಣಿಯನ್ನು 0-3 ಅಂತರದಲ್ಲಿ ಸೋತಿದ್ದ ಭಾರತ, ನಂತರ ಆಸ್ಟ್ರೇಲಿಯಾದಲ್ಲಿ 1-3 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯನ್ನು ಕೂಡ ಸೋತಿತ್ತು. ಆ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಮೂರನೇ ಆವೃತ್ತಿಯ ವಿಶ್ವ ಟಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಇದೀಗ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಸರಣಿ ಹಾಗೂ ಪಾಕಿಸ್ತಾನ ಆತಿಥ್ಯದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಎದುರು ನೋಡುತ್ತಿದೆ.
ಇತ್ತೀಚಿನ ಸತತ ಸೋಲುಗಳಿಗೆ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಮೇಲೆ ಸಾಕಷ್ಟು ಒತ್ತಡವಿದೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಗೌತಮ್ ಗಂಭೀರ್ ಅವರು ಅತ್ಯಂತ ಕಳಪೆ ಟೆಸ್ಟ್ ಅಂಕಿಅಂಶಗಳನ್ನು ಹೊಂದಿದ್ದಾರೆ. ಈ ಕಾರಣದಿಂದ ಅವರು ಆಟಗಾರರಿಂದ ಒಳ್ಳೆಯ ಗೌರವ ಪಡೆಯಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Gautam Gambhir:ಕೋಚ್ ಗಂಭೀರ್ ಪ್ರಕಟಿಸಿದ ಸಾರ್ವಕಾಲಿಕ ಭಾರತ ತಂಡದಲ್ಲಿ ರೋಹಿತ್‌ಗಿಲ್ಲ ಅವಕಾಶ
ಗಂಭೀರ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಪನೇಸರ್
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಮಾಂಟಿ ಪನೇಸರ್, “ಗೌತಮ್ ಗಂಭೀರ್ ಅವರ ಮೇಲೆ ಸದ್ಯ ಸಾಕಷ್ಟು ಒತ್ತಡವಿದೆ. ಅವರು ಈಗಷ್ಟೇ ಕೋಚ್ ಆಗಿ ಪರಿವರ್ತನೆಯಾಗಿದ್ದಾರೆ. ಇದು ಕೆಲ ಹಿರಿಯ ಆಟಗಾರರಿಗೆ ಕಠಿಣವಾಗಿರುತ್ತದೆ. ʻಕಳೆದ ಹಲವು ವರ್ಷಗಳ ಹಿಂದೆ ಅವರು (ಗಂಭೀರ್) ನಮಗೆ ಸಹ ಆಟಗಾರರಾಗಿದ್ದರು, ಇದೀಗ ಅವರು ನಮಗೆ ಕ್ರಿಕೆಟ್ ಹೇಗೆ ಆಡಬೇಕೆಂದು ಹೇಳಿಕೊಡುತ್ತಿದ್ದಾರೆʼ ಎಂಬ ಭಾವನೆ ಕೆಲ ಹಿರಿಯ ಆಟಗಾರರಲ್ಲಿ ಮೂಡಬಹುದು. ಇದು ಅತ್ಯಂತ ಕಠಿಣವಾಗಿರುತ್ತದೆ. ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಗಂಭೀರ್ ಅವರ ದಾಖಲೆಗಳು ಕೂಡ ಉತ್ತಮವಾಗಿಲ್ಲ,” ಎಂದು ಅವರು ಹೇಳಿದ್ದಾರೆ.
ಭಾರತ ಟೆಸ್ಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಹೆಡ್ ಕೋಚ್ ಆಗಬೇಕು
ಭಾರತ ಟೆಸ್ಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಹೆಡ್ ಕೋಚ್ ಆಗಬೇಕು ಹಾಗೂ ಸೀಮಿತ ಓವರ್‌ಗಳ ತಂಡಕ್ಕೆ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಮುಂದುವರಿಯಬೇಕೆಂದು ಇದೇ ವೇಳೆ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಆಸ್ಟ್ರೇಲಿಯಾದಲ್ಲಿ ಗಂಭೀರ್ ಅವರ ಸರಾಸರಿ ಕೇವಲ 23 ಅಷ್ಟೆ. ಇಂಗ್ಲೆಂಡ್‌ನಲ್ಲಿಯೂ ಅವರ ಸರಾಸರಿ ಉತ್ತಮವಾಗಿಲ್ಲ. ಚಲಿಸುವ ಚೆಂಡನ್ನು ಅವರು ಸರಿಯಾಗಿ ಆಡುವುದಿಲ್ಲ. ಗೌತಮ್ ಗಂಭೀರ್ ಕೋಚ್ ಹುದ್ದೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರಾ? ಅಥವಾ ಒಡಿಐ ಮತ್ತು ಟಿ20ಐಗೆ ಮಾತ್ರ ಕೋಚ್ ಆಗಿ ಅವರನ್ನು ಮುಂದುವರಿಸಿಬೇಕು ಮತ್ತು ಟೆಸ್ಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಅವರಂಥ ಬೇರೆ ಯಾರಾದರೂ ಸೂಕ್ತ ವ್ಯಕ್ತಿಯನ್ನು ಕೋಚ್ ಆಗಿ ನೇಮಿಸಬೇಕಾ? ಅಥವಾ ಗೌತಮ್ ಗಂಭೀರ್‌ಗೆ ಸಹಾಯ ಮಾಡಲು ಬ್ಯಾಟಿಂಗ್ ಕೋಚ್ ಆಗಿ ಅವರನ್ನು (ಲಕ್ಷ್ಮಣ್) ನೇಮಿಸಬೇಕಾ? ಎಂಬ ಬಗ್ಗೆ ಏನಾದರೂ ಸೆಲೆಕ್ಟರ್‌ಗಳು ಯೋಚನೆ ಮಾಡುತ್ತಿರಬಹುದು. ಏಕೆಂದರೆ ರಾಹುಲ್ ದ್ರಾವಿಡ್ ರೀತಿ ವಿವಿಎಸ್ ಲಕ್ಷ್ಮಣ್ ಕೂಡ ಎಲ್ಲಾ ಕಂಡೀಷನ್ಸ್‌ನಲ್ಲಿ ಯಶಸ್ವಿಯಾಗಿದ್ದಾರೆ,” ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Champions Trophy: ʻಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಿದ್ದʼ-ಶ್ರೇಯಸ್ ಅಯ್ಯರ್!