Saturday, 10th May 2025

Japan Earthquake: ಜಪಾನ್‌ನಲ್ಲಿ 6.9 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

Japan Earthquake

ಟೋಕೊಯೊ: ಸೋಮವಾರ (ಜ. 13) ಸಂಜೆಯ ವೇಳೆಗೆ ಜಪಾನ್‌ನ ದಕ್ಷಿಣ ಭಾಗದಲ್ಲಿರುವ ಕ್ವೆಶು (Kyushu) ಪ್ರಾಂತ್ಯದಲ್ಲಿರುವ ಸಮುದ್ರದೊಳಗೆ ಪ್ರಬಲವಾದ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪರಿಣಾಮವಾಗಿ ಜಪಾನ್ ಹಾಗೂ ಹಿಂದೂ ಮಹಾಸಾಗರದ ದಡದಲ್ಲಿರುವ ಎಲ್ಲ ದೇಶಗಳಿಗೆ ಸುನಾಮಿ (Tsunami) ಅಲರ್ಟ್ ಘೋಷಿಸಲಾಗಿದೆ (Japan Earthquake).

ಸಮುದ್ರದಲ್ಲಿ ಆರಂಭಿಕ ಹಂತದಲ್ಲಿ 3.2 ಅಡಿಗಳವರೆಗೆ ಅಲೆಗಳು ಏಳಲಾರಂಭಿಸಿವೆ. ಭೂಕಂಪದ ತೀವ್ರತೆ ಹೆಚ್ಚಿರುವುದರಿಂದ ಸಮುದ್ರದಲ್ಲಿ ಸುನಾಮಿ ಏಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಜಪಾನ್ ಭೂಗರ್ಭ ಅಧ್ಯಯನ ಸಂಸ್ಥೆ (Japan Meteorological Agency)ಯು ಸಮುದ್ರಕ್ಕೆ ಮತ್ತು ಸಮುದ್ರ ದಡಕ್ಕೆ ತೆರಳದಂತೆ ಸೂಚನೆ ನೀಡಿದೆ. ಸದ್ಯ ಭೂಕಂಪದಿಂದ ಹಾನಿ ಸಂಭವಿಸಿದ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಇಕಾಟಾ ಪರಮಾಣು ವಿದ್ಯುತ್ ಸ್ಥಾವರಕ್ಕೂ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಮೂಲಗಳು ತಿಳಿಸಿವೆ.

2024ರ ಆಗಸ್ಟ್ ಆರಂಭದಲ್ಲಿ ಜಪಾನ್‌ ನೈಋತ್ಯ ಭಾಗದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದ ಕೆಲವು ತಿಂಗಳ ನಂತರ ಮತ್ತೆ ಭೂಮಿ ಕಂಪಿಸಿದೆ. ಕಳೆದ ವರ್ಷ ಜ.1ರಂದು ಸುಜು, ವಾಜಿಮಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಇನ್ನು ಕಳೆದ ತಿಂಗಳು ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಶಕ್ತವಾದ ಭೂಕಂಪ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ ಅದೃಷ್ಟವಶಾತ್‌ ಸುನಾಮಿ ಎದ್ದಿರಲಿಲ್ಲ. ಸುನಾಮಿ ಎಚ್ಚರಿಕೆ ಸುಮಾರು ಒಂದು ಗಂಟೆ ಕಾಲ ಜಾರಿಯಲ್ಲಿತ್ತು. ಭೂಕಂಪ ಸಂಭವಿಸಿದ ಕೆಲವೇ ಹೊತ್ತಲ್ಲಿ ಕ್ಯಾಲಿಫೋರ್ನಿಯಾದ ಮಾಂಟೆರೆ ಕೊಲ್ಲಿಯ ಉತ್ತರದಿಂದ ಒರೆಗಾನ್‌ವರೆಗೆ ಸುಮಾರು 500 ಮೈಲಿ (805 ಕಿ.ಮೀ.) ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿತ್ತು.

ಈ ವರ್ಷಾರಂಭದಲ್ಲಿ ಟಿಬೆಟ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಸಂಭವಿಸಿ 120ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ದಾಖಲಾಗಿದ್ದು,ಹಲವು ಮನೆಗಳಿಗೆ, ಕಟ್ಟಡಗಳಿಗೆ ಹಾನಿಯಾಗಿತ್ತು. ನೇಪಾಳದ ರಾಜಧಾನಿ ಕಠ್ಮಂಡು, ಭೂತಾನ್ ಮತ್ತು ಉತ್ತರ ಭಾರತದ ಬಿಹಾರ ಸೇರಿದಂತೆ ಕೆಲವು ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿತ್ತು.

ಈ ಸುದ್ದಿಯನ್ನೂ ಓದಿ: Tibet Earthquake: ಟಿಬೆಟ್‌ನ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 126ಕ್ಕೆ ಏರಿಕೆ

Leave a Reply

Your email address will not be published. Required fields are marked *