ನವದೆಹಲಿ: ಭಾರತ ತಂಡದ ದಿಗ್ಗಜರಾದ ರೋಹಿತ್ ಶರ್ಮಾ (Rohit Sharma)ಹಾಗೂ ವಿರಾಟ್ ಕೊಹ್ಲಿ (Virat Kohli) ಅವರು ಟೀಕೆಗಳಿಂದ ಹೊರಬರಬೇಕಾದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಮೊತ್ತದ ರನ್ ಕಲೆ ಹಾಕಬೇಕೆಂದು ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ (Harbhajan Singh) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಅಂತ್ಯವಾಗಿದ್ದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅನುಭವಕ್ಕೆ ತಕ್ಕಂತೆ ರನ್ ಗಳಿಸುವಲ್ಲಿ ವಿಫಲರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು.
ಪಿತೃತ್ವ ರಜೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಮುಂದಿನ ಮೂರು ಪಂದ್ಯಗಳಲ್ಲಿ ಕೇವಲ 31 ರನ್ ಗಳಿಸಿ ಟೀಕೆಗಳಿಗೆ ಗುರಿಯದ ನಂತರ ಸಿಡ್ನಿಯಲ್ಲಿ ನಡೆದ ಅಂತಿಮ ಪಂದ್ಯದಿಂದ ಹೊರಗುಳಿದಿದ್ದರು. ಮತ್ತೊಂದೆಡೆ ವಿರಾಟ್ ಕೊಹ್ಲಿ ಪರ್ತ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದರೂ, ಉಳಿದ 4 ಪಂದ್ಯಗಳಲ್ಲಿ ಕೇವಲ 85 ರನ್ ಗಳಿಸಲಷ್ಟೇ ಶಕ್ತವಾಗಿ ಟೀಕೆಗಳಿಗಳನ್ನು ಎದುರಿಸುತ್ತಿದ್ದಾರೆ.
ಶಕ್ತಿಯುತವಾಗಿ ಕಮ್‌ಬ್ಯಾಕ್ ಮಾಡಬೇಕು
ಸ್ಪೋರ್ಟ್ಸ್ ತಕ್ ಜೊತೆ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ವೈಫಲ್ಯ ಕುರಿತು ವಿಶ್ವಕಪ್ ವಿಜೇತ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಆಧುನಿಕ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ದಿಗ್ಗಜ ಆಟಗಾರರಾಗಿದ್ದಾರೆ. ಆದರೆ ಈ ಆಟಗಾರರು ತಮ್ಮ ಭವಿಷ್ಯ ನಿರ್ಧರಿಸಲು ಸಾಧ್ಯವಿಲ್ಲ. ಅದು ಆಯ್ಕೆ ಮಂಡಳಿಯ ವಿವೇಚನೆಗೆ ಬಿಟ್ಟ ಸಂಗತಿಯಾಗಿದೆ. ಒಬ್ಬ ಆಟಗಾರ ರನ್ ಗಳಿಸದಿದ್ದಾಗ ಜನರು ಅವರ ಕುರಿತು ನಕಾರಾತ್ಮಕ ಹೇಳಿಕೆ ನೀಡುವುದು ಸಹಜ,” ಎಂದು ಮಾಜಿ ಸ್ಪಿನ್ನರ್ ಹೇಳಿದ್ದಾರೆ.
“ಆದರೆ, ಜನರು ತಮ್ಮ ಬಗ್ಗೆ ಹೊಂದಿರುವ ಅಭಿಪ್ರಾಯಗಳು ತಪ್ಪು ಎಂಬುದನ್ನು ರನ್ ಗಳಿಸುವ ಮೂಲಕ ಸಾಬೀತುಪಡಿಸಬೇಕು. ಒಬ್ಬ ಆಟಗಾರನಿಗೆ ಇದಕ್ಕಿಂತ ಬೇರೆ ಉತ್ತಮ ದಾರಿಯಿಲ್ಲ. ಆಟಗಾರರು ತಮ್ಮ ಕ್ರಿಕೆಟ್ ವೃತ್ತಿ ಜೀವನವನ್ನು ಸುದೀರ್ಘ ಕಾಲದವರೆಗೆ ತೆಗೆದುಕೊಂಡು ಹೋಗಬೇಕಾದರೆ ರನ್ ಗಳಿಸುವುದು ಅತ್ಯವಶ್ಯಕವಾಗಿರುತ್ತದೆ,” ಎಂದು ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.
ಫಿಟ್ನೆಸ್ ಕಡೆಗೆ ಗಮನ ಕೊಡಿ
“ಒಬ್ಬ ಆಟಗಾರ ತಾನು ಪಂದ್ಯವಾಡಲು ಎಷ್ಟರ ಮಟ್ಟಿಗೆ ಫಿಟ್ನೆಸ್ ಹೊಂದಿದ್ದೇನೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ತಮ್ಮ ಆಲೋಚನೆಯಲ್ಲಿ ಇದರ ಕಡೆಗೆ ಕೊಡಬೇಕು. ನಾನು ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಹೇಳುತ್ತಿಲ್ಲ. ಎಲ್ಲಾ ಆಟಗಾರರು ಇದರ ಬಗ್ಗೆ ಆಲೋಚಿಸಿದರೆ ಆಗ ಸಹಜವಾಗಿಯೇ ಉತ್ತಮ ಆಟ ಹೊರಬರುತ್ತದೆ. ಆದರೆ ಯಾವಾಗ ಆಯ್ಕೆಯ ವಿಷಯ ಬರುತ್ತದೋ, ಆಗ ಅದು ಆಯ್ಕೆಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ,” ಎಂದು ಸ್ಪಿನ್ ದಿಗ್ಗಜ ಹೇಳಿದ್ದಾರೆ.
ಇತ್ತೀಚೆಗೆ ಬಿಸಿಸಿಐ ಹಮ್ಮಿಕೊಂಡಿದ್ದ ಸಭೆಯಲ್ಲಿ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಔಟ್ ಆಫ್ ಫಾರ್ಮ್ ಬಗ್ಗೆ ಚರ್ಚೆ ನಡೆಸಲಾಗಿತ್ತು. ಮುಂಬರುವ ಇಂಗ್ಲೆಂಡ್ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ದೊಡ್ಡ ಮೊತ್ತ ಕಲೆಹಾಕುವತ್ತ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೆಜ್ಜೆ ಇಡುವ ಅವಶ್ಯಕತೆ ಇದೆ.
ಈ ಸುದ್ದಿಯನ್ನು ಓದಿ: Champions Trophy: ʻಭಾರತ ತಂಡಕ್ಕಿಂತ ಪಾಕಿಸ್ತಾನ ಬಲಿಷ್ಠವಾಗಿದೆʼ-ಮೊಹಮ್ಮದ್ ಆಮಿರ್!