ನವದೆಹಲಿ: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ (Champions Trophy) ಭಾರತ ತಂಡಕ್ಕಿಂತ ಪಾಕಿಸ್ತಾನ ತಂಡ ಅತ್ಯಂತ ಬಲಿಷ್ಠವಾಗಿದೆ ಎಂದು ಪಾಕ್ ಮಾಜಿ ವೇಗಿ ಮೊಹಮ್ಮದ್ ಆಮಿರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಟೂರ್ನಿ ಆರಂಭವಾಗಲಿದ್ದು, ಭಾರತ ತಂಡ ತನ್ನ ಪಂದ್ಯಗಳನ್ನು ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ಆಡಲಿದೆ.
ಫೆಬ್ರವರಿ 23 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಲಿ ಪಾಕಿಸ್ತಾನದ ವಿರುದ್ದ ಪ್ರಾಬಲ್ಯ ಸಾಧಿಸಿದೆ. ಕೇವಲ ಒಂದು ಬಾರಿ ಮಾತ್ರ ಪಾಕಿಸ್ತಾನ ತಂಡ ಗೆಲುವು ಪಡೆದಿರುವುದು ಬಿಟ್ಟರೆ, ಇನ್ನುಳಿದ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಆದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ಎದುರು ಪಾಕಿಸ್ತಾನ ಮುನ್ನಡೆಯಲ್ಲಿದೆ. ಈ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಮೂರು ಬಾರಿ ಭಾರತವನ್ನು ಪಾಕಿಸ್ತಾನ ಸೋಲಿಸಿದೆ. ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದ ಮೊಹಮ್ಮದ್ ಆಮಿರ್, ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇತ್ತೀಚಿನ ಪ್ರದರ್ಶನಗಳನ್ನು ಗಮನಿಸಿದರೆ, ಭಾರತಕ್ಕಿಂತ ಪಾಕಿಸ್ತಾನ ಮೇಲುಗೈ ಸಾಧಿಸಿದೆ ಎಂದು ಹೇಳಿದ್ದಾರೆ.
“ಪಾಕಿಸ್ತಾನ ತಂಡ, ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ ಸೋಲಿಸಿದೆ, ದಕ್ಷಿಣ ಆಫ್ರಿಕಾ ತಂಡವನ್ನು ಕೂಡ ಸೋಲಿಸಿದೆ. ವಿದೇಶಿ ನೆಲದಲ್ಲಿನ ಪ್ರದರ್ಶನದ ಅತ್ಯುತ್ತಮವಾಗಿದೆ. ಇದರ ಆಧಾರದ ಮೇಲೆ ಹೇಳುವುದಾದರೆ ಭಾರತ ತಂಡಕ್ಕಿಂತ ಪಾಕಿಸ್ತಾನ ತಂಡ ಒಂದು ಕೈ ಮೇಲುಗೈ ಸಾಧಿಸಿದೆ. ಐಸಿಸಿಯ ದೊಡ್ಡ ಟೂರ್ನಿಗಳಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಇತ್ತೀಚಿನ ಸಾಲು-ಸಾಲು ಸೋಲುಗಳಿಂದ ಭಾರತ ತಂಡ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ,” ಎಂದು ಮೊಹಮ್ಮದ್ ಆಮಿರ್ ತಿಳಿಸಿದ್ದಾರೆ.
ಬುಮ್ರಾ ಅಲಭ್ಯತೆ ತಂಡದ ಮೇಲೆ ಪರಿಣಾಮ ಬೀರಲಿದೆ: ಆಮಿರ್
ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಜಸ್ಪ್ರೀತ್ ಬುಮ್ರಾ ಗಾಯಕ್ಕೆ ತುತ್ತಾಗಿದ್ದರು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಜಸ್ಪ್ರೀತ್ ಬುಮ್ರಾ ಲಭ್ಯತೆ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಒಂದು ವೇಳೆ ಬುಮ್ರಾ ಆಡಿಲ್ಲವಾದರೆ ಭಾರತ ತಂಡದ ಗೆಲುವಿನ ಸರಾಸರಿ 40 ರಿಂದ 50ರಷ್ಟು ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಜಸ್ಪ್ರೀತ್ ಬುಮ್ರಾ ಆಡಿಲ್ಲವಾದರೆ ಭಾರತ ತಂಡಕ್ಕೆ ದೊಡ್ಡ ನಷ್ಟ ಉಂಟಾಗಲಿದೆ. ಭಾರತ ತಂಡದ ಪರ ಅವರ ಅಗ್ರ ದರ್ಜೆಯ ಬೌಲರ್ ಆಗಿದ್ದಾರೆ ಹಾಗೂ ವಿಕೆಟ್ ಪಡೆಯುವ ಮುಂಚೂಣಿ ಬೌಲರ್. ಬುಮ್ರಾ ಇಲ್ಲದೆ ಭಾರತ ತಂಡದ ಬೌಲಿಂಗ್ ಸಾಮರ್ಥ್ಯ 40 ರಿಂದ 50 ರಷ್ಟು ಕಡಿಮೆಯಾಗಲಿದೆ,” ಎಂದು ಮೊಹಮ್ಮದ್ ಆಮಿರ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: England Squad: ಐಸಿಸಿ ಚಾಂಪಿಯನ್ಸ್ ಟ್ರೋಫಿ, ಭಾರತದ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ!