ಬೆಂಗಳೂರು: ಇದು ಸಂಕ್ರಾಂತಿಯ(Sankranti) ಸಮಯ. ಸೂರ್ಯನ ರಾಶಿಯಲ್ಲಿ ಆಗುವ ಬದಲಾವಣೆ ಮಾತ್ರವೇ ಈ ಹೊತ್ತಿನ ವಿಶೇಷವಲ್ಲ. ಹವಾಮಾನದಲ್ಲಿ, ವಾತಾವರಣದಲ್ಲೂ ಸೂಕ್ಷ್ಮ ಬದಲಾವಣೆಗಳು ಉಂಟಾಗುತ್ತವೆ. ಇದಕ್ಕೆ ನಮ್ಮ ಶರೀರ ಸ್ಪಂದಿಸಬೇಕು. ಈ ಪ್ರಾಕೃತಿಕ ಬದಲಾವಣೆಗಳು ಸಹಜ ಎನ್ನುವುದು ನಿಜವಾದರೂ ಇದಕ್ಕೆ ನಮ್ಮ ಆಹಾರದಲ್ಲೂ ಕೆಲವು ಬದಲಾವಣೆಗಳು ಅಗತ್ಯ ಎಂಬುದನ್ನು ನಮ್ಮ ಪೂರ್ವಜರು ತಮ್ಮ ಅನುಭವದಿಂದ ಕಂಡುಕೊಂಡಿದ್ದಾರೆ. ಋತುಮಾನದಲ್ಲಿ ದೊರೆಯುವ ಗಡ್ಡೆ-ಗೆಣಸುಗಳು, ಶೇಂಗಾ, ತೊಗರಿ, ಬಟಾಣಿ, ಅವರೆಯಂಥ ತರಹೇವಾರಿ ಪದಾರ್ಥಗಳನ್ನು ಸೇವಿಸುವುದರಿಂದ ಈ ಋತುವಿನಲ್ಲಿ ದೇಹಕ್ಕೆ ಬೇಕಾದ ಪೋಷಣೆ ದೊರೆಯುತ್ತದೆ. ಕಬ್ಬು, ಹುಣಸೆಹಣ್ಣಿನಂಥ ಕೆಲವು ಹೊಸ ಫಲಗಳು ಬರುವ ದಿನಗಳೂ ಹೌದಾದ್ದರಿಂದ, ಅವುಗಳನ್ನೂ ವಾಡಿಕೆಯಂತೆ ಸೇವಿಸಲಾಗುತ್ತದೆ. ಹಾಗಾದರೆ, ಇದೇ ಸಮಯದಲ್ಲಿ ಸೇವಿಸುವ ಸಂಕ್ರಾಂತಿ ಕಾಳಿಗೂ ಆರೋಗ್ಯಕ್ಕೂ ಏನು ನಂಟು?
ಎಳ್ಳು-ಬೆಲ್ಲ: ಸಂಕ್ರಾಂತಿ ಕಾಳು ಎನ್ನುವ ಹೆಸರಿನಲ್ಲಿ ಸಾಮಾನ್ಯವಾಗಿ ತಿನ್ನುವುದು ಎಳ್ಳು, ಬೆಲ್ಲ, ಒಣಕೊಬ್ಬರಿ, ಶೇಂಗಾ ಮತ್ತು ಹುರಿಗಡಲೆಯ ರುಚಿಕಟ್ಟಾದ ಮಿಶ್ರಣವನ್ನು. ಆದರೆ ಎಲ್ಲ ಕಡೆಗೂ ಈ ವಾಡಿಕೆಯಿಲ್ಲ. ನಸುಕಿನ ಚಳಿಯಲ್ಲಿ ಬೆಲ್ಲ ಅಥವಾ ಸಕ್ಕರೆಯ ಎಳೆ ಪಾಕವನ್ನು ಬಿಸಿ ಬಾಣಲೆಯ ಮೇಲೆ ಹನಿಸುತ್ತಾ ತಯಾರಿಸುವ ಕುಸುರೆಳ್ಳನ್ನೂ ಸಂಕ್ರಾಂತಿ ಕಾಳೆಂದು ಕರೆಯಲಾಗುತ್ತದೆ. ಆದರೆ ಇಂದು ನಾವು ತಿಳಿಯುತ್ತಿರುವುದು ಎಳ್ಳು, ಬೆಲ್ಲ, ಶೇಂಗಾ, ಕೊಬ್ಬರಿಗಳ ಮಿಶ್ರಣದ ಆರೋಗ್ಯಕರ ಲಾಭಗಳ ಬಗ್ಗೆ. ಏನು ಪ್ರಯೋಜನ ಇವುಗಳನ್ನು ತಿನ್ನುವುದರಿಂದ?
ಎಳ್ಳು ಮತ್ತು ಬೆಲ್ಲಗಳೆರಡೂ ಹಲವು ರೀತಿಯ ಖನಿಜಗಳಿಂದ ಭರಿತವಾದವು. ಇವೆರಡರ ಮಿಶ್ರಣವು ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಶಾಖವನ್ನು ಉತ್ಪಾದಿಸುತ್ತದೆ ಎನ್ನುವುದು ಭಾರತೀಯ ಪರಂಪರಾಗತ ಆಹಾರ ಶೈಲಿಯ ನಂಬಿಕೆ. ಹಾಗೆಂದೇ ಎಳ್ಳಿನ ಚಿಕ್ಕಿ, ಉಂಡೆ ಮುಂತಾದವನ್ನು ಬೆಲ್ಲದಲ್ಲಿ ತಯಾರಿಸುವುದು ಸೂಕ್ತ ಎನ್ನಲಾಗುತ್ತದೆ. ಈ ಎಲ್ಲ ವಸ್ತುಗಳ ಸದ್ಗುಣಗಳು ಏನೇನು ಎಂಬುದನ್ನು ಒಂದೊಂದಾಗಿ ನೋಡೋಣ.
ಎಳ್ಳು: ಪ್ರೊಟೀನ್, ನಾರು, ವಿಟಮಿನ್ ಬಿ ಮತ್ತು ಕ್ಯಾಲ್ಶಿಯಂ, ಮೆಗ್ನೀಶಿಯಂ, ಸತುವಿನಂಥ ಖನಿಜಗಳು ಇದರಲ್ಲಿವೆ. ಇವೆಲ್ಲ ನಮ್ಮ ದೇಹದ ಮೂಳೆಗಳನ್ನು ಬಲಪಡಿಸಲು, ಸ್ನಾಯುಗಳನ್ನು ಸಬಲಗೊಳಿಸಲು ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸಲು ಅಗತ್ಯ. ಇದರಲ್ಲಿರುವ ಉತ್ತಮ ಕೊಬ್ಬು ಹೃದಯದ ಆರೋಗ್ಯವನ್ನು ಕಾಪಾಡಿದರೆ, ಇದರ ಉತ್ಕರ್ಷಣ ನಿರೋಧಕಗಳು ದೇಹವನ್ನು ಹಲವು ರೋಗಗಳಿಂದ ರಕ್ಷಿಸುತ್ತವೆ. ನಾರಿನಂಶವು ಜೀರ್ಣಾಂಗಗಳನ್ನು ಆರೋಗ್ಯಪೂರ್ಣವಾಗಿ ಇರಿಸಿ, ತೂಕವನ್ನೂ ನಿಯಂತ್ರಿಸಲು ನೆರವು ನೀಡುತ್ತದೆ.
ಬೆಲ್ಲ: ಹೊಸ ಬೆಲ್ಲ ಮಾಡುವುದಕ್ಕಾಗಿ ಆಲೆಮನೆಗಳು ತಲೆ ಎತ್ತುವ ದಿನಗಳಿವು. ಇದನ್ನು ಶಕ್ತಿವರ್ಧಕವಾಗಿ ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಉಪಯೋಗಿಸಲಾಗುತ್ತದೆ. ಆದರೆ ಬೆಲ್ಲಕ್ಕೆ ಇನ್ನೂ ಬಹಳಷ್ಟು ಸದ್ಗುಣಗಳಿವೆ. ಕಬ್ಬಿಣದಂಶ ಸಾಂದ್ರವಾಗಿದ್ದು, ರಕ್ತಹೀನತೆಯ ನಿವಾರಣೆಗೆ ನೆರವಾಗುತ್ತದೆ. ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಿ, ದೇಹದ ಡಿಟಾಕ್ಸ್‌ಗೆ ಸಹಾಯ ಮಾಡುತ್ತದೆ.

ಕೊಬ್ಬರಿ: ಹಲವು ಬಗೆಯ ಸಿಹಿ ತಿನಿಸುಗಳಲ್ಲಿ ಉಪಯೋಗಿಸಲಾಗುವ ಒಣಕೊಬ್ಬರಿಯಲ್ಲಿ ಖನಿಜಗಳು ಭರಪೂರ ಇವೆ. ಕ್ಯಾಲ್ಶಿಯಂ, ವಿಟಮಿನ್ ಬಿ6, ಕಬ್ಬಿಣ, ಮೆಗ್ನೀಶಿಯಂ, ತಾಮ್ರ, ರಂಜಕ, ಪೊಟಾಶಿಯಂ ಮುಂತಾದವು ಕೊಬ್ಬರಿಯಲ್ಲಿ ಹೇರಳವಾಗಿದೆ. ಇದರಲ್ಲಿರುವ ಉತ್ತಮ ಕೊಬ್ಬು ಹೃದಯಕ್ಕೆ ಪೂರಕ ಎನಿಸಿದರೆ, ನಾರಿನಂಶವು ಜೀರ್ಣಾಂಗವನ್ನು ಕಾಪಾಡುತ್ತದೆ. ಮೂಳೆಗಳ ದೃಢತೆಗೆ ಸಹಾಯ ಮಾಡುವುದೇ ಅಲ್ಲದೆ, ತರಹೇವಾರಿ ಉತ್ಕರ್ಷಣ ನಿರೋಧಕಗಳಿಂದ ದೇಹದಲ್ಲಿನ ಉರಿಯೂತವನ್ನು ನಿಯಂತ್ರಿಸುತ್ತದೆ. ಆದರೆ ಕೊಬ್ಬರಿಯ ಸೇವನೆ ಮಿತವಾಗಿದ್ದರೆ ಕ್ಷೇಮ.

ಶೇಂಗಾ: ಬಡವರ ಬಾದಾಮಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕಡಲೆಬೀಜಗಳು ಅತ್ಯಂತ ಸತ್ವಯುತವಾದವು. ಸಾಂದ್ರವಾದ ಪ್ರೊಟೀನ್, ನಾರು, ಉತ್ತಮ ಕೊಬ್ಬು, ರಂಜಕ, ತಾಮ್ರ, ಮೆಗ್ನೀಶಿಯಂನಂಥ ತರಹೇವಾರಿ ಖನಿಜಗಳು, ಹಲವು ಬಗೆಯ ವಿಟಮಿನ್‌ಗಳು ಇದರಲ್ಲಿವೆ. ಮಾತ್ರವಲ್ಲ, ಫ್ಲೆವನಾಯ್ಡ್‌ಗಳು, ಫೈಟೊಸ್ಟೆರಾಲ್‌ಗಳಂಥ ಸಂಯುಕ್ತಗಳು ದೇಹದಲ್ಲಿ ಉರಿಯೂತ ಶಮನ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬಲ್ಲವು.

ಹುರಿಗಡಲೆ: ಇದರಲ್ಲೂ ಉತ್ತಮ ಪ್ರಮಾಣದ ಪ್ರೊಟೀನ್ ದೊರೆಯುತ್ತದೆ. ಜೊತೆಗೆ ನಾರಿನಂಶವು ಮಲಬದ್ಧತೆ ನಿವಾರಣೆಯಲ್ಲಿ ನೆರವಾಗುತ್ತದೆ. ಇದರ ಗ್ಲೈಸೆಮಿಕ್ ಸೂಚಿ ಕಡಿಮೆಯಿದ್ದು, ಮಧುಮೇಹಿಗಳಿಗೆ ಸಹ ಮಿತ ಪ್ರಮಾಣದಲ್ಲಿ ಸೇವಿಸಿದರೆ ಹಿತ ನೀಡಬಲ್ಲದು. ಪೊಟಾಶಿಯಂ, ಮೆಗ್ನೀಶಿಯಂ, ಕಬ್ಬಿಣ, ರಂಜಕದಂಥ ಖನಿಜಗಳು ಮತ್ತು ಹಲವು ರೀತಿಯ ಜೀವಸತ್ವಗಳು ಇದರಲ್ಲಿದ್ದು, ದೇಹಕ್ಕೆ ಹತ್ತಾರು ರೀತಿಯಲ್ಲಿ ನೆರವಾಗಬಲ್ಲವು.

ಈ ಸುದ್ದಿಯನ್ನೂ ಓದಿ:Health Benfit: ಸೆಕ್ಸ್ ಮಾಡೋದರಿಂದ ಮಹಿಳೆಯರಿಗೆ ಸಿಗುವ ಆರೋಗ್ಯ ಲಾಭಗಳೇನು?