Wednesday, 14th May 2025

Toyota Kirloskar: ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರದ ಜೊತೆಗೆ ಎಂಓಯುಗೆ ಸಹಿ ಹಾಕಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಬೆಂಗಳೂರು: ಕೌಶಲ್ಯಾಭಿವೃದ್ಧಿ ಮಾಡುವ ಉದ್ದೇಶದಿಂದ ಮತ್ತು ಸಮುದಾಯ ಸಬಲೀಕರಣ ಮಾಡುವ ಆಶಯದಿಂದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಕರ್ನಾಟಕ ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದ ಜೊತೆಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ. ಶೈಕ್ಷಣಿಕ ಮತ್ತು ಔದ್ಯಮಿಕ ಕ್ಷೇತ್ರಗಳ ಮಧ್ಯೆ ಸೇತುವೆ ನಿರ್ಮಿಸುವ ಮೂಲಕ ಟ್ರೈನಿಗಳು ಈ ಕಾಲಕ್ಕೆ ಅವಶ್ಯ ಇರುವ ಕೌಶಲ್ಯ ಮತ್ತು ತರಬೇತಿ ಪಡೆಯುವಂತೆ ಮಾಡುವ ಟಿಕೆಎಂನ ಉದ್ದೇಶದ ಭಾಗವಾಗಿ ಈ ಒಪ್ಪಂದ ಮಾಡಲಾಗಿದೆ.

2025ರ ಜನವರಿಯಲ್ಲಿ ಈ ಎಂಓಯು ಜಾರಿಗೆ ಬರಲಿದ್ದು, ಈ ಸಹಯೋಗದ ಮೂಲಕ ಅತ್ಯಾಧುನಿಕ ಉದ್ಯಮ ಸಂಸ್ಕೃತಿ, ಅಧ್ಯಾಪಕರ ತರಬೇತಿ ಕಾರ್ಯಕ್ರಮಗಳು ಮತ್ತು ಆಧುನಿಕ ತರಬೇತಿ ಸಾಮಗ್ರಿಗಳನ್ನು ಪರಿಚಯಿಸುವ ಮೂಲಕ ಜಿಟಿಟಿಸಿ ಕೇಂದ್ರಗಳು ಮತ್ತು ಮಲ್ಟಿ-ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ಗಳಲ್ಲಿ (ಎಂಎಸ್‌ಡಿಸಿಗಳು) ತರಬೇತಿಯ ಗುಣಮಟ್ಟವನ್ನು ಹೆಚ್ಚಿಸಲಾಗುತ್ತದೆ.

ಟಿಕೆಎಂ ಈಗಾಗಲೇ 16 ಜಿಟಿಟಿಸಿ ಕೇಂದ್ರಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದು, ಇದೀಗ ಹೆಚ್ಚುವರಿ 16 ಜಿಟಿಟಿಸಿಗಳನ್ನು ಬದಲಿಸಲು ಟೊಯೋಟಾದ ಪರಿಣತಿಯನ್ನು ಬಳಸಿಕೊಳ್ಳಲಿದೆ. ಕರ್ನಾಟಕದಾದ್ಯಂತ ತಾಂತ್ರಿಕ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಪಡಿಸುವ ಟಿಕೆಎಂ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಪ್ರಸ್ತುತ ಮಾಗಡಿ ಜಿಟಿಟಿಸಿ ಕ್ಯಾಂಪಸ್‌ ಅನ್ನು ಕೈಗಾರಿಕಾ ಸಂಸ್ಕೃತಿ ಮತ್ತು ಉತ್ಕೃಷ್ಟ ತರಬೇತಿ ವಿಚಾರದಲ್ಲಿ “ರೋಲ್ ಮಾಡೆಲ್” ಸಂಸ್ಥೆಯಾಗಿ ರೂಪಿಸ ಲಾಗುತ್ತಿದ್ದು, ಮುಂದೆ ಎಲ್ಲಾ ಜಿಟಿಟಿಸಿಗಳನ್ನು ಈ ಸಂಸ್ಥೆಯನ್ನು ಮಾದರಿಯಾಗಿಟ್ಟುಕೊಂಡು ರೂಪಿಸಲಾಗುತ್ತದೆ. ಈ ಸಹಯೋಗದ ಮೂಲಕ ಮೈಸೂರಿನಲ್ಲಿರುವ ಮಲ್ಟಿ-ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (ಎಂಎಸ್‌ಡಿಸಿ) ಅನ್ನು ಅಪ್‌ಗ್ರೇಡ್ ಮಾಡಲಾಗುತ್ತಿದ್ದು, ಅತ್ಯಾಧುನಿಕ ತರಬೇತಿ ಯೋಜನೆಗಳಿಗೆ ನೆರವಾಗುವ ಸಾಮರ್ಥ್ಯವನ್ನು ಒದಗಿಸಲಾಗುತ್ತದೆ.

ತಿಳಿವಳಿಕಾ ಒಪ್ಪಂದದ ಪ್ರಮುಖ ಅಂಶಗಳು:

• ಬೋಧಕ ವರ್ಗದ ತರಬೇತಿ ಮತ್ತು ಅಭಿವೃದ್ಧಿ: ಜಿಟಿಟಿಸಿ ಅಧ್ಯಾಪಕರು ಬಿಡದಿಯಲ್ಲಿರುವ ಟಿಕೆಎಂನ ಅತ್ಯಾಧು ನಿಕ ಘಟಕಗಳಲ್ಲಿ ತರಬೇತಿ ಪಡೆಯುತ್ತಾರೆ ಮತ್ತು ಟೊಯೋಟಾ ತಯಾರಿಕಾ ವ್ಯವಸ್ಥೆ ಮತ್ತು ಟೊಯೋಟಾ ವೇ ಅನ್ನು ಹತ್ತಿರದಿಂದ ತಿಳಿದುಕೊಳ್ಳಲಿದ್ದಾರೆ.
• “ರೋಲ್ ಮಾಡೆಲ್” ಸಂಸ್ಥೆ ಅಭಿವೃದ್ಧಿ: ಮಾಗಡಿ ಜಿಟಿಟಿಸಿ ಅನ್ನು ಪ್ರಮುಖ ತರಬೇತಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಸಂಸ್ಥೆಯು ಕೈಗಾರಿಕಾ ತರಬೇತಿ ಮತ್ತು ಉತ್ಕೃಷ್ಟತೆಯ ಮಾನದಂಡವಾಗಿ ಕಾರ್ಯ ನಿರ್ವಹಿಸಲಿದೆ.
• ಎಂಎಸ್‌ಡಿಸಿ ಮೈಸೂರು ಉನ್ನತೀಕರಣ: ಉದ್ಯಮದ ಅಗತ್ಯಗಳಿಗೆ ತಕ್ಕಂತೆ ಅತ್ಯಾಧುನಿಕ ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒದಗಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿರುವ ಮಲ್ಟಿ-ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (ಎಂಎಸ್‌ಡಿಸಿ) ಅನ್ನು ಅತ್ಯುತ್ತಮ ರೀತಿಯಲ್ಲಿ ಉನ್ನತೀಕರಣ ಮಾಡಲಾಗುತ್ತದೆ.
• ಕೈಗಾರಿಕಾ ಸಂಸ್ಕೃತಿ ಅಭಿವೃದ್ಧಿ: ಟಿಕೆಎಂ ಸಂಸ್ಥೆಯು ಜಿಟಿಟಿಸಿ ಕೇಂದ್ರಗಳು ಮತ್ತು ಎಂಎಸ್‌ಡಿಸಿ ಗಳಲ್ಲಿ ಕೈಗಾರಿಕಾ ಸಂಸ್ಕೃತಿಯನ್ನು ಹರಡುವ ಉದ್ದೇಶದಿಂದ ತರಬೇತಿ ಸಾಮಗ್ರಿಗಳು ಮತ್ತು ಆನ್-ಸೈಟ್ ಸಹಯೋಗದ ಮೂಲಕ ಸಂಸ್ಥೆಗಳಿಗೆ ನೆರವು ಒದಗಿಸಲಿವೆಯ
• ಸುಸ್ಥಿರ ಯೋಜನೆಗಳು: ಡಾ. ಮಿಯಾವಾಕಿ ಅರಣ್ಯೀಕರಣ ವಿಧಾನದ ಕುರಿತು ಜಿಟಿಟಿಸಿ ಅಧ್ಯಾಪಕರಿಗೆ ತರಬೇತಿ ಯನ್ನು ಒದಗಿಸಲಾಗುವುದು, ಆ ಮೂಲಕ ಜಾಗತಿಕ ಮಟ್ಟದಲ್ಲಿ ಪಾಲಿಸಲಾಗುವ ಹಸಿರು ಪದ್ಧತಿಗಳನ್ನು ಪಾಲಿಸಲು ಪ್ರೇರೇಪಿಸಲಾಗುವುದು.
• ಅತ್ಯಾಧುನಿಕ ತರಬೇತಿ ವ್ಯವಸ್ಥೆ: ಉತ್ಪಾದನಾ ವಲಯಕ್ಕೆ ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಮನಸ್ಥಿತಿಯನ್ನು ಒದಗಿಸಲು ಟಿಕೆಎಂ ಸಂಸ್ಥೆಯು ಸೂಕ್ತವಾದ ತರಬೇತಿ ಮಾಡ್ಯೂಲ್‌ ಗಳು ಮತ್ತು ಸಾಮಗ್ರಿಗಳನ್ನು ಒದಗಿಸುತ್ತದೆ.
ಈ ಎಂಓಯು 24 ತಿಂಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ. ತನ್ನ ಉದ್ದೇಶಗಳು ಯಶಸ್ವಿಯಾಗಿ ಅನುಷ್ಠಾನ ಗೊಂಡುವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾಲಕಾಲಕ್ಕೆ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿವೆ. ಇದು ಕರ್ನಾಟಕದಲ್ಲಿ ತಾಂತ್ರಿಕ ಶಿಕ್ಷಣ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಸೂಕ್ತ ವಾತಾವರಣ ನಿರ್ಮಿಸುವ ಟಿಕೆಎಂ ಮತ್ತು ಜಿಟಿಟಿಸಿಯ ಉದ್ದೇಶಕ್ಕೆ ಉತ್ತಮ ಪುರಾವೆ ಆಗಿದೆ.

ಈ ಕುರಿತು ಮಾತನಾಡಿರುವ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ. ದಿನೇಶ್ ಕುಮಾರ್ ವೈ.ಕೆ. (ಐಎಫ್‌ಎಸ್) ಅವರು, “ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಜೊತೆಗಿನ ಈ ಸಹಯೋಗವು ಕರ್ನಾಟಕದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ವ್ಯವಸ್ಥೆಯನ್ನು ಉತ್ತಮಗೊಳಿಸುವ ನಮ್ಮ ಬದ್ಧತೆಗೆ ಉತ್ತಮ ಉದಾಹರಣೆಯಾಗಿದೆ. ಜಿಟಿಟಿಸಿಯಲ್ಲಿ ಸದಾ ಅಭಿವೃದ್ಧಿ ಹೊಂದುತ್ತಿರುವ ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯ ಗಳನ್ನು ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಮತ್ತು ಅಧ್ಯಾಪಕರಿಗೆ ಒದಗಿಸಿ ಅವರನ್ನು ಸಜ್ಜುಗೊಳಿಸುವ ಕೆಲಸ ಮಾಡಲಾಗುತ್ತದೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನಂತಹ ಉದ್ಯಮ ನಾಯಕರ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ನಮ್ಮ ಕೇಂದ್ರಗಳಿಗೆ ಜಾಗತಿಕ ಮಟ್ಟದ ಉತ್ತಮ ಪದ್ಧತಿಗಳು, ಅತ್ಯಾಧುನಿಕ ತರಬೇತಿ ವಿಧಾನಗಳು ಮತ್ತು ಕೈಗಾರಿಕಾ ಸಂಸ್ಕೃತಿಯನ್ನು ಪರಿಚಯಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಒಟ್ಟಾರೆ ಯಾಗಿ ನಾವು ಔದ್ಯಮಿಕ ಮತ್ತು ಶೈಕ್ಷಮಿಕ ಸಹಯೋಗದಲ್ಲಿ ಹೊಸ ಮಾನದಂಡವನ್ನು ಹಾಕುವ ಗುರಿಯನ್ನು ಹೊಂದಿದ್ದೇವೆ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಅತ್ಯುತ್ತಮ ವಾತಾವಾರಣವನ್ನು ರಚಿಸಲಿದ್ದೇವೆ” ಎಂದು ಹೇಳಿದರು.

ಎಂಓಯು ಸಹಿ ಕುರಿತು ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ರಾಜ್ಯ ವ್ಯವಹಾರಗಳ ಮುಖ್ಯಸ್ಥ, ಹಿರಿಯ ಉಪಾಧ್ಯಕ್ಷ, ಮುಖ್ಯ ಸಂವಹನ ಅಧಿಕಾರಿ ಶ್ರೀ ಸುದೀಪ್ ಎಸ್. ದಳವಿ ಅವರು, “ಅತ್ಯುತ್ತಮ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆಗಳ ಮೂಲಕ ಸುಸ್ಥಿರತೆ ಶ್ರೇಷ್ಠತೆ ಮತ್ತು ಸುರಕ್ಷತೆಯ ಸಂಸ್ಕೃತಿಯನ್ನು ಬೆಳೆಸುವ ವಿಚಾರದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಬದ್ಧವಾಗಿದೆ. ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರದಜೊತೆಗಿನ ನಮ್ಮ ಸಹಯೋಗವು ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಉದ್ಯಮ ಪರಿಣತಿಯ ಮಧ್ಯೆ ಸೇತುವೆ ನಿರ್ಮಿಸುವ ಮೂಲಕ ಈ ಕ್ಷೇತ್ರದ ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.

ಜಿಟಿಟಿಸಿ ಮಾಗಡಿ ಕ್ಯಾಂಪಸ್ “ರೋಲ್ ಮಾಡೆಲ್” ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದರ ಮೂಲಕ ಕೈಗಾರಿಕಾ ತರಬೇತಿ ಮತ್ತು ನಾವೀನ್ಯತೆಯಲ್ಲಿ ಹೊಸ ಮಾನದಂಡಗಳನ್ನು ಹಾಕಿಕೊಡಲಿದೆ. ಮುಂದೆ ಎಲ್ಲಾ ಕೇಂದ್ರಗಳನ್ನು ಇದೇ ಮಾರ್ಗ ದಲ್ಲಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಕರ್ನಾಟಕದಾದ್ಯಂತ ಈಗಾಗಲೇ 16 ಕೇಂದ್ರ ಗಳನ್ನು ಯಶಸ್ವಿ ಯಾಗಿ ಅಭಿವೃದ್ಧಿಗೊಳಿಸಿರುವುದರ ಆಧಾರದ ಮೇಲೆ ಹೆಚ್ಚುವರಿ 16 ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ನಡೆಯಲಿದೆ. ಈ ಮೂಲಕ ರಾಜ್ಯದ ಯುವಜನತೆಯನ್ನು ಸಬಲೀಕರಣಗೊಳಿಸುವ ಮತ್ತು ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವ ಬದ್ಧತೆಯನ್ನು ತೋರಲಿದೆ” ಎಂದು ಹೇಳಿದರು.

ಅರ್ಥಪೂರ್ಣ ಸಹಭಾಗಿತ್ವ ಮತ್ತು ಪರಿಣಾಮಕಾರಿ ಯೋಜನೆಗಳ ಮೂಲಕ ಸಮಾಜದ ಅಭಿವೃದ್ಧಿ ಮಾಡುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನ ಬದ್ಧತೆಯನ್ನು ಈ ಎಂಓಯು ದೃಢಪಡಿಸುತ್ತದೆ. ಔದ್ಯಮಿಕ ಮತ್ತು ಶೈಕ್ಷಣಿಕ ಪಾಲುದಾರಿಕೆಗಳನ್ನು ಸಾಧ್ಯವಾಗಿಸುವ ಮೂಲಕ ಟಿಕೆಎಂ ಸಂಸ್ಥೆಯು ಅತ್ಯಾಧುನಿಕ ಕೌಶಲ್ಯ ಮತ್ತು ಸುಸ್ಥಿರತೆಯ ಅಡಿಪಾಯ ಹೊಂದಿರುವ ಭವಿಷ್ಯಕ್ಕೆ ಸಿದ್ಧಗೊಂಡ ಉದ್ಯೋಗಿಗಳ ಸಮೂಹವನ್ನು ರಚಿಸುವ ಗುರಿಯನ್ನು ಹೊಂದಿದೆ. ಜಿಟಿಟಿಸಿ ಜೊತೆಗಿನ ಈ ಯೋಜನೆಯು ಕರ್ನಾಟಕದ ಕೈಗಾರಿಕಾ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಲು ಸಿದ್ಧವಾಗಿದ್ದು, ಜನ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮತ್ತು ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸುವ ಉದ್ದೇಶವನ್ನು ಬಲಪಡಿಸಲಿದೆ.

Leave a Reply

Your email address will not be published. Required fields are marked *