ಲಖನೌ: ತಾನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಹಾಗೂ ಆತನ ತಂದೆಯ ಹತ್ಯೆಗೆ ವಕೀಲನೊಬ್ಬ ಕೊಟ್ಟ ಸುಪಾರಿ ಭಾರೀ ಯಡವಟ್ಟಿಗೆ ಕಾರಣವಾಗಿದೆ. ಉತ್ತರ ಪ್ರದೇಶದ (Uttar Pradesh) ಪೊಲೀಸರು ಒಂದು ವಿಚಿತ್ರ ಕೊಲೆ ಪ್ರಕರಣವನ್ನು (Crime News) ಭೇದಿಸಿದ್ದಾರೆ. ಕಳೆದ ಡಿ.30ರಂದು ಲಕ್ನೋದಲ್ಲಿ (Lucknow) ನಡೆದಿದ್ದ ಟ್ಯಾಕ್ಸಿ ಚಾಲಕನ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಈ ಪ್ರಕರಣದಲ್ಲಿ ಸುಪಾರಿ ಕೊಲೆಗಾರರು ಮಹಿಳೆಯೊಬ್ಬಳ ಪತಿ ಕುಟುಂಬವನ್ನು ಕೊಲೆ ಮಾಡುವ ಬದಲು ‘ರಾಂಗ್ ಟಾರ್ಗೆಟ್’ (Wrong Target) ಕೊಲೆ ಮಾಡಿ ಸಿಕ್ಕಿಹಾಕಿಕೊಂಡ ಬಳಿಕ ಈ ಖತರ್ನಾಕ್ ಕಹಾನಿ ಹೊರ ಬಿದ್ದಿದೆ, ಮಾತ್ರವಲ್ಲದೇ ಈ ಸುಪಾರಿ ಕೊಲೆಯ ಸೂತ್ರದಾರ ಓರ್ವ ವಕೀಲ ಎಬ ಆಘಾತಕಾರಿ ಮಾಹಿತಿಯೂ ಇದೀಗ ಪೊಲೀಸ್ ತನಿಖೆಯಲ್ಲಿ ಹೊರಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ಪೊಲೀಸರು, ವಕೀಲ ಅಫ್ತಾಬ್ ಅಹಮ್ಮದ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಕುರಿತಾಗಿ ಮಾಹಿತಿ ಲಭಿಸಿದೆ. ಈ ಕೊಲೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ವೃತ್ತಿಯಲ್ಲಿ ವಕೀಲನಾಗಿರುವ ಅಫ್ತಾಬ್ ಮಹಿಳೆಯೊಬ್ಬಳ ಮನೆಯ ಸದಸ್ಯರನ್ನು ಕೊಲೆ ಮಾಡಲೆಂದು ಗ್ಯಾಂಗ್ ಒಂದಕ್ಕೆ ಸುಪಾರಿ ನೀಡಿದ್ದ. ಆದರೆ ಈ ಸುಪಾರಿ ಕೊಲೆಗಾರರು ಎಡವಟ್ಟು ಮಾಡ್ಕೊಂಡು, ರಿಯಲ್ ಟಾರ್ಗೆಟ್ ಅನ್ನು ಹೊಡೆದು ಹಾಕುವ ಬದಲಿಗೆ ಟ್ಯಾಕ್ಸಿ ಚಾಲಕ ಮಹಮ್ಮದ್ ರಿಜ್ವಾನ್‌ನನ್ನು ಕೊಲೆ ಮಾಡುವ ಮೂಲಕ ರಾಂಗ್ ಟಾರ್ಗೆಟ್ ಗೆ ‘ಹಿಟ್’ ಮಾಡಿದ್ದರು.
ಈ ಕೊಲೆ ಡಿ.30ರಂದು ಇಲ್ಲಿನ ಮಾದೆರ್ ಗಂಜ್ ಪ್ರದೇಶದಲ್ಲಿ ನಡೆದಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಸುಪಾರಿ ನೀಡಿದ್ದ ಪ್ರಮುಖ ಆರೋಪಿಯಾಗಿರುವ ಈ ವಕೀಲ ತನ್ನ ಜೊತೆ ಸಂಬಂಧವನ್ನು ಹೊಂದಿದ್ದ ಮಹಿಳೆಯೊಬ್ಬಳ ಪತಿ ಮತ್ತು ಆತನ ತಂದೆಯನ್ನು ಕೊಲೆ ಮಾಡಲೆಂದು ಈ ಸುಪಾರಿ ನೀಡಿದ್ದ ಎಂದು ತಿಳಿದುಬಂದಿದೆ.
‘ಈ ಆರೋಪಿಯು ಡಿ.30ರಂದು ಮಾದೆರ್ ಗಂಜ್ ಗೆ ಬಂದು ಕೊಲೆ ಮಾಡಿದ್ದ, ಆದರೆ ಆ ಕೊಲೆಗಾರ ತಾನು ಸುಪಾರಿ ಪಡೆದುಕೊಂಡಿದ್ದ ವ್ಯಕ್ತಿಯನ್ನು ಕೊಲ್ಲುವ ಬದಲಿಗೆ ‘ತಪ್ಪು ವ್ಯಕ್ತಿ’ಯನ್ನು ಕೊಲೆ ಮಾಡಿದ್ದ. ಕೊಲೆಗೆ ಬಳಸಿದ್ದ ಆಯುಧ, ಬೈಕ್ ಮತ್ತು ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಸೆಂಟ್ರಲ್) ರವಿನ್ ತ್ಯಾಗಿ ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.
ಆರೋಪಿ ವಕೀಲನಿಂದ ಸುಪಾರಿ ಪಡೆದುಕೊಂಡಿದ್ದ ಈ ಗ್ಯಾಂಗ್ ಸದಸ್ಯ ಯಾಸಿರ್‌ಗೆ ಈ ಕೊಲೆ ಮಾಡುವ ಜವಾಬ್ದಾರಿ ನೀಡಿದ್ದ. ಯಾಸಿರ್ ಕೃಷ್ಣಕಾಂತ್ ಎಂಬುವವನ ಜೊತೆ ಸೇರಿ ಈ ಕೊಲೆ ಮಾಡಲು ನಿರ್ಧರಿಸುತ್ತಾನೆ. ಕೊಲೆ ಮಾಡುವ ಸಂದರ್ಭದಲ್ಲಿ ಉಂಟಾದ ಗೊಂದಲದ ಕಾರಣದಿಂದ ಇವರು ತಮ್ಮ ಟಾರ್ಗೆಟ್ ಆಗಿರದ ‘ರಾಂಗ್ ಪರ್ಸನ್’ಗೆ ಗುಂಡು ಹಾರಿಸಿದ್ದಾರೆ. ಈ ವಿಚಾರದಲ್ಲಿ ಅಫ್ತಾಬ್ ಮತ್ತು ಗ್ಯಾಂಗ್ ಲೀಡರ್ ಗೆ ಭಿನ್ನಾಬಿಪ್ರಾಯ ಉಂಟಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಮೋಜಿಗಾಗಿ ಕಾಡಾನೆಗೆ ಕಿರಿಕಿರಿ ಮಾಡಿದ ಯುವಕ; ಆಮೇಲೆ ಆಗಿದ್ದೇನು? ವಿಡಿಯೊ ಇದೆ
ವಕೀಲ ಅಫ್ತಾಬ್ ಈ ಕೊಲೆಗಾಗಿ ಗ್ಯಾಂಗ್ ಗೆ 2 ಲಕ್ಷ ರೂಪಾಯಿ ಅಡ್ವಾನ್ಸ್ ಸಹ ನೀಡಿದ್ದ. ಕೊಲೆ ಮಾಡಿದ ಬಳಿಕ ಉಳಿದ ಹಣವನ್ನು ನೀಡಲು ಅಫ್ತಾಬ್ ನಿರಾಕರಿಸಿದ್ದ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂದು ಅನಧಿಕೃತ ಪಿಸ್ತೂಲ್, 14 ಜಿವಂತ ಕ್ಯಾಟ್ರಿಡ್ಜ್ ಗಳು, ಒಂದು ಬೈಕು ಹಾಗೂ ಮೂರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದು, ಇವನ್ನೆಲ್ಲಾ ಆರೊಪಿಗಳು ಕೊಲೆ ಕೃತ್ಯಕ್ಕೆ ಬಳಸಿದ್ದರು ಎಂದು ತಿಳಿದುಬಂದಿದೆ.