Saturday, 10th May 2025

Bengaluru News: ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ ಅದ್ವಿಕಾ ಕೇರ್ ಫೌಂಡೇಶನ್‌ನಿಂದ ಬೈಕಥಾನ್

Bengaluru News

ಬೆಂಗಳೂರು: ಅದ್ವಿಕಾ ಕೇರ್ ಫೌಂಡೇಶನ್ ವತಿಯಿಂದ ಪ್ರಕ್ರಿಯ ಆಸ್ಪತ್ರೆಯ ಸಹಯೋಗದಲ್ಲಿ ಕ್ಯಾನ್ಸರ್‌ (Cancer) ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ (Bengaluru News) ಬೈಕಥಾನ್‌ ಹಮ್ಮಿಕೊಳ್ಳಲಾಗಿತ್ತು. ಪ್ರಕ್ರಿಯ ಆಸ್ಪತ್ರೆಯ ಸಿಇಒ ಡಾ. ಶ್ರೀನಿವಾಸ್‌ ಚಿರುಕುರಿ, ಬೈಕಥಾನ್‌ಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ʼಕ್ಯಾನ್ಸರ್‌ ವಿರುದ್ಧ ಸವಾರಿʼ ಎಂಬ ವಿಷಯದೊಂದಿಗೆ ಬೈಕಥಾನ್‌ ಆಯೋಜಿಸಿದ್ದೇವೆ. ಕ್ಯಾನ್ಸರ್‌ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಮುಖ್ಯ, ಹೀಗಾಗಿ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಸುಮಾರು 100 ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರ‍್ಯಾಲಿ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದೇವೆ. ರ‍್ಯಾಲಿಯಲ್ಲಿ 60ಕ್ಕೂ ಹೆಚ್ಚು ಬೈಕರ್ಸ್‌ಗಳು ಪಾಲ್ಗೊಂಡಿದ್ದು, 8ನೇ ಮೈಲಿಯಿಂದ ಸೋಲೂರಿನವರೆಗೆ ಬೈಕಥಾನ್‌ ಕೈಗೊಳ್ಳಲಾಯಿತು. ಅಲ್ಲದೆ ಕ್ಯಾನ್ಸರ್‌ ಗೆದ್ದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕ್ಯಾನ್ಸರ್‌ ವಿರುದ್ಧ ಜಯಗಳಿಸಿದ ಸ್ಫೂರ್ತಿದಾಯಕ ಅನುಭವಗಳನ್ನು ಹಂಚಿಕೊಂಡರು ಎಂದು ಅವರು ತಿಳಿಸಿದರು.

ಅದ್ವಿಕಾ ಕೇರ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಬಾಲಾ ವಾರಿಯರ್ ಮಾತನಾಡಿ, ಕ್ಯಾನ್ಸರ್ ಎಲ್ಲೆಡೆ ತಲೆ ಎತ್ತಿ ನಿಲ್ಲುತ್ತಿದೆ. ಕ್ಯಾನರ್‌ ವಿರುದ್ಧದ ಹೋರಾಟದಲ್ಲಿ ಅನೇಕರು ಜೀವ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಆರ್ಥಿಕವಾಗಿ ತೊಂದರೆ ಇರುವವರು ಚಿಕಿತ್ಸೆಗೆ ಹಣ ಭರಿಸುವುದು ತುಂಬಾ ಕಷ್ಟ. ಈ ನಿಟ್ಟಿನಲ್ಲಿ ಅದ್ವಿಕಾ ಕೇರ್‌ ಫೌಂಡೇಶನ್‌ ನೆರವಾಗಲಿದೆ. ಈಗಾಗಲೆ ಕ್ಯಾನ್ಸರ್‌ ಗೆದ್ದ ಕುಟುಂಬಗಳೊಂದಿಗೆ ಈ ಬೈಕಥಾನ್‌ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಅದ್ವಿಕಾ ಕೇರ್ ಫೌಂಡೇಶನ್‌ನ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ವಾರಿಯರ್ ಮಾತನಾಡಿ, ಈ ಕಾರ್ಯಕ್ರಮವು ಪ್ರಾಣಾಪಾಯ ಇರುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವುದನ್ನು ಗುರಿಯಾಗಿಸಿಕೊಂಡಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru Traffic: ವಿಶ್ವದಲ್ಲೇ ಅತಿ ನಿಧಾನ ಟ್ರಾಫಿಕ್‌ ನಗರಗಳಲ್ಲಿ ಬೆಂಗಳೂರಿಗೆ 3ನೇ ಸ್ಥಾನ!

ಅದ್ವಿಕಾ ಕೇರ್‌ ಫೌಂಡೇಶನ್‌, ಪ್ರಕ್ರಿಯ ಆಸ್ಪತ್ರೆಯ ಸಹಯೋಗದೊಂದಿಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇತ್ತೀಚೆಗೆ ʼಸ್ವಚ್ಛ ದಾಸರಹಳ್ಳಿʼ ಎಂಬ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿತ್ತು. ಅದರ ಬೆನ್ನಲ್ಲೇ ಕ್ಯಾನ್ಸರ್‌ ಜಾಗೃತಿಗಾಗಿ ಬೈಕಥಾನ್‌ ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಈ ರೀತಿಯ ಜಾಗೃತಿ ಅಭಿಯಾನಗಳ ಕುರಿತಂತೆ ಮಾತನಾಡಿದ ಪ್ರಕ್ರಿಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸೋಮನಾಥ್ ಅವರು, ಇದೇ ಫೆ.2ರಂದು ಅದ್ವಿಕಾ ಕೇರ್ ಫೌಂಡೇಶನ್, ಪ್ರಕ್ರಿಯಾ ಆಸ್ಪತ್ರೆಯ ಸಹಯೋಗದೊಂದಿಗೆ ಕ್ಯಾನ್ಸರ್‌ ವಿರುದ್ಧ ಬೃಹತ್‌ ವಾಕಥಾನ್‌ ಹಮ್ಮಿಕೊಳ್ಳುತ್ತಿದೆ. ಸುಮಾರು 5 ಕಿ.ಮೀ ವಾಕಥಾನ್‌ ಅನ್ನು ವಿಧಾನಸೌಧದಿಂದ ಕೈಗೊಳ್ಳಲು ಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *