ಕೇಶವ ಪ್ರಸಾದ್ ಬಿ.
ವೇದೋಪನಿಷತ್ತುಗಳ ಸ್ವಾರಸ್ಯಗಳ ಜತೆಯಲ್ಲೇ, ನಮ್ಮ ದೇಶದ ಜ್ಞಾನ, ಪರಂಪರೆಯ ಕುರಿತು ಇಲ್ಲಿನ
ಬರಹಗಳು ಬೆಳಕು ಚೆಲ್ಲುತ್ತವೆ.
ಅಂಕಣಕಾರ ನಾರಾಯಣ ಯಾಜಿಯವರು ಬಹು ಮೂಲಗಳಿಂದ ಜ್ಞಾನವನ್ನು ಪಡೆಯುತ್ತಾ, ಅದನ್ನು ಓದುಗರಿಗೆ ಸಕಾಲಿಕವಾಗಿ ರಸವತ್ತಾಗಿ ನೀಡುತ್ತಾರೆ. ಬ್ಯಾಂಕಿಂಗ್, ಷೇರು, ಮ್ಯೂಚುವಲ್ ಫಂಡ್‌ಗಳಿಂದ ವೇದೋಪನಿಷತ್ತು, ಪುರಾಣಾದಿಗಳ ತನಕ ಅವರ ಲೇಖನಗಳು ವೈವಿಧ್ಯಮಯ. ಹಣಕಾಸು ಜಗತ್ತಿನಲ್ಲೊಂದು ಮಾತು ಹೀಗಿದೆ- ಎಲ್ಲ ಹಣ್ಣುಗಳನ್ನು ಒಂದೇ ಬುಟ್ಟಿಯಲ್ಲಿಡಬೇಡಿ, ಒಳ್ಳೆಯ ರಿಟನ್ ಸಿಗುವುದಿಲ್ಲ. ಅದೇ ರೀತಿ ನಾರಾಯಣ ಯಾಜಿಯವರ ಸಾಹಿತ್ಯ ಕೃಷಿ ಒಂದೇ ವಿಷಯಕ್ಕೆ ಸೀಮಿತವಾಗಿಲ್ಲ. ಅವರ ಜತೆಗಿನ ಮಾತುಕತೆಯೂ ಸ್ವಾರಸ್ಯಗಳ ಹೂರಣ.
ನಾರಾಯಣ ಯಾಜಿಯವರ ಅಂಕಣಗಳನ್ನು ಒಳಗೊಂಡಿರುವ ನೂತನ ಕೃತಿಯ ಹೆಸರು ‘ಧವಳ ಧಾರಿಣಿ’. ಇದಕ್ಕೆ ಹರೀಶ್ ಕೇರ ಅವರ ಸೊಗಸಾದ ಮುನ್ನುಡಿಯಿದೆ. ಇದು ಅಂಕಣ ಬರಹಗಳಾದರೂ ಇದಕ್ಕೆ ಸಾಹಿತ್ಯದ ಸ್ಪರ್ಶವಿದೆ. ಇಲ್ಲಿ ಸಮಕಾಲೀನತೆಯನ್ನು ಮೀರಿ ನಿಲ್ಲಬಲ್ಲ ಸಾರ್ವತ್ರಿಕತೆಯನ್ನು ಗಮನಿಸಬಹುದು.
‘ವೇದ, ಉಪನಿಷತ್ತು, ಪುರಾಣ, ಇತಿಹಾಸಗಳು ನನ್ನ ಪಾಲಿಗೆ ಹೊತ್ತು ಕಳೆಯುವ ಸಾಧನವಲ್ಲ. ಅದರಲ್ಲಿರುವ
ತತ್ತ್ವಗಳು ಮನುಷ್ಯನ ಬದುಕಿಗೆ ತೋರುವ ದಾರಿ ದೀವಿಗೆಗಳು’ ಎಂದು ನಂಬಿದವ ನಾನು ಎಂದು ನಾರಾಯಣ ಯಾಜಿಯವರು ವಿನಮ್ರತೆಯಿಂದ ಪ್ರಸ್ತಾಪಿಸುತ್ತಾರೆ. ಭಗವದ್ಗೀತೆ, ಉಪನಿಷತ್ತು, ಭಾಗವತಗಳನ್ನು ಓದಿದರೆ, ಅದರಲ್ಲಿ ಅಡಕವಾಗಿರುವ ಸಂದೇಶಗಳು ಎಂಥ ಮಾನವನನ್ನೂ ಉದ್ಧರಿಸಬಲ್ಲುದು. ಚೈತನ್ಯಶಾಲಿ, ಕ್ರಿಯಾಶೀಲ ಮತ್ತು ಸಮಗ್ರ ವ್ಯಕ್ತಿತ್ವವನ್ನೇ ಕಡೆದು ನಿಲ್ಲಿಸಬಲ್ಲುದು. ಅಂಥ ಪ್ರೇರಣೆಯನ್ನು ಸನಾತನ ಸಾಹಿತ್ಯ ನೀಡುವು ದರಿಂದಲೇ ಅವುಗಳು ಸಾರ್ವಕಾಲಿಕವಾಗಿವೆ.
ನಿರ್ವಿಕಲ್ಪ ಉಪಾಸನೆಯ ಮಾರ್ಗ: ಗಣಪತಿ, ಅಳುವ ಇಳೆಯ ಉಳಿಸಿದ ಕೃಷ್ಣಾವತರಣ, ಜಗದ್ವಂದ್ವನನ್ನು ಹೆತ್ತೂ ತಬ್ಬಲಿಯಾದ ಮಹಾತಾಯಿ ದೇವಕಿ, ವೇದಾಂತ ಆಧಾರಿತ ಸಮಾಜವಾದವನ್ನು ಕೊಟ್ಟ ದಾರ್ಶನಿಕ, ದುಷ್ಟ
ವಿನಾಶಿನಿ ದುರ್ಗೆ, ಮಾಗಿ ಮುಸುಕಿದ ಇಳೆಯ ಬೆಳಗುವ ನೀರಾಜನ: ದೀಪಾವಳಿ..ಹೀಗೆ ಇಪ್ಪತ್ತೈದು ಲೇಖನಗಳು ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುತ್ತವೆ.
ಶಂಕರಾಚಾರ್ಯರ ಜೀವನ ಮತ್ತು ಗಹನ ವಿಚಾರಗಳ ಬಗ್ಗೆ ಸರಳವಾಗಿ ಯಾಜಿಯವರು ವಿವರಿಸುತ್ತಾರೆ-
ಸನಾತನ ಧರ್ಮವನ್ನು ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಯ ತಳಹದಿಯ ಮೇಲೆ ಪುನಃ
ಸ್ಥಾಪಿಸಿ ದವರು ಶಂಕರಾಚಾರ್ಯರು. ರಾಜಾಶ್ರಯ ತಪ್ಪಿದ ಧರ್ಮ ರಕ್ಷಣೆಯ ಹೊಣೆಯನ್ನು ನಾಲ್ಕು
ಆಮ್ನಾಯಗಳ ಮೂಲಕ ಮಠಗಳಿಗೆ ನೀಡಿದರು.ಧರ್ಮಕ್ಕೆ ಒಂದು ಸಾಂಕ ರೂಪವನ್ನು ಕೊಟ್ಟಿರುವುದು ಶಂಕರರ
ಹಿರಿಮೆ. ಬ್ರಹ್ಮವು ಸತ್ಯ, ಜಗತ್ತು ಮಿಥ್ಯಾ, ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ ಎಂಬುದನ್ನು ತೋರಿಸಿಕೊಟ್ಟವರು.
ಮಾನವ ಪಾಪದ ಕೂಸು ಎನ್ನುವ ಕಲ್ಪನೆಯು ಗಾಢವಾಗಿದ್ದ ಪಾಶ್ಚಾತ್ಯ ಸಿದ್ಧಾಂತಿಗಳಿಗೆ ಅದ್ವೈತದ ತುರೀಯವಾದ ಜೀವವೇ ಬ್ರಹ್ಮ ಎಂಬುದು ಅರ್ಥವಾಗದ ಸಂಗತಿ ಎಂದು ಮನೋಜ್ಞವಾಗಿ ವಿವರಿಸಿದ್ದಾರೆ ನಾರಾಯಣ ಯಾಜಿ. ಪುಸ್ತಕದುದ್ದಕ್ಕೂ ಭಾರತದ ಭವ್ಯ ಇತಿಹಾಸ, ಸಂಸ್ಕೃತಿ, ಜ್ಞಾನ ಪರಂಪರೆ, ರಾಷ್ಟ್ರೀಯತೆಯ ಬಗ್ಗೆ ಲೇಖನಗಳು ಬೆಳಕು ಚೆಲ್ಲುತ್ತವೆ. ಅದನ್ನು ಓದಿಕೊಳ್ಳುವುದೇ ಸ್ಪೂರ್ತಿಯ ಸೆಲೆ.
ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ