ಚಿಕ್ಕಬಳ್ಳಾಪುರ : “ಇನ್ನೇನು ೧೫ ದಿನಗಳಲ್ಲಿ ಕಟಾವಿಗೆ ಬರಲಿದ್ದ ಸೇವಂತಿ ಹೂದೋಟಕ್ಕೆ ಯಾರೋ ದುಷ್ಕರ್ಮಿ ಗಳು ಕಳೆನಾಶಕ ಸಿಂಪಡಿಸಿದ ಪರಿಣಾಮ ಕೈಗೆ ಬಂದಿದ್ದ ತುತ್ತು ಬಾಯಿಗೆ ಬರದಂತಾಗಿದೆ. ಅನಿರೀಕ್ಷಿತ ಆಘಾತಕ್ಕೆ ಒಳಗಾಗಿರುವ ತೋಟದ ಮಾಲಿಕನಿಗೆ ಈ ಪರಿಸ್ಥಿತಿ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದ್ದು ತೋಟಗಾರಿಕೆ ಇಲಾಖೆ ರೈತರ ನೆರವಿಗೆ ನಿಲ್ಲಬೇಕಿದೆ.
ಹೌದು ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದ ರೈತ ಸತೀಶ್ ಬಾಬು ಎಂಬುವರ ತೋಟದಲ್ಲಿಯೇ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು ಶನಿವಾರ ತೋಟಕ್ಕೆ ಭೇಟಿ ನೀಡಿದ್ದ ಮಾಧ್ಯಮದವರ ಮುಂದೆ ರೈತ ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಾಲೂಕಿನ ಹೊಸಹುಡ್ಯ ಗ್ರಾಮದ ರೈತ ಸತೀಶ್ ಬಾಬು ಬಿನ್ ವೆಂಕಟೇಶಪ್ಪ ಎಂಬುವರು ಅರ್ಧ ಎಕರೆಯಲ್ಲಿ ಬೆಳೆದಿದ್ದ ಸುಮಾರು ೩ ಸಾವಿರ ಸೇವಂತಿಗೆ ಗಿಡಗಳಿಗೆ ಕಳೆದ ಸೋಮವಾರ ಔಷಧಿ ಸಿಂಪಡಣೆ ಮಾಡಿದ್ದರು. ಇದಾದ ಬಳಿಕ, ಕಳೆದ ಎರಡ್ಮೂರು ದಿನಗಳ ಹಿಂದೆ ಯಾರೋ ದುಷ್ಕರ್ಮಿಗಳು ಹೂವಿನ ಗಿಡಗಳಿಗೆ ಕಳೆನಾಶಕ ಸಿಂಪಡಣೆ ಮಾಡಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತ ಸತೀಶ್ ಬಾಬು ಕಂಗಾಲಾಗಿದ್ದಾರೆ.
ಕಳೆನಾಶಕ ಸಿಂಪಡಣೆಯಿAದ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಕೆಲ ಗಿಡಗಳು ಸಂಪೂರ್ಣ ಒಣಗಿ ಹೋಗಿವೆ. ಇನ್ನೇನು ೧೫ ದಿನಗಳಲ್ಲಿ ಹೂವು ಬಿಡಬೇಕಿದ್ದ ಗಿಡಗಳು ಒಣಗುವ ಹಂತಕ್ಕೆ ತಲುಪಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಬೆಳೆ ಬೆಳೆದಿದ್ದ ರೈತರು ಆತಂಕದಲ್ಲಿದ್ದಾರೆ.
ಈ ಕುರಿತು ಮಾತನಾಡಿದ ರೈತ ಸತೀಶ್ ಬಾಬು, ಕಳೆದ ಬಾರಿ 1 ಎಕರೆಯಲ್ಲಿ ಇದೇ ಸೇವಂತಿ ಬೆಳೆ ಬೆಳೆದಿದ್ದೆ. ಸುಮಾರು ೧ ಲಕ್ಷ ಆದಾಯ ಬಂದಿತ್ತು. ಆದರೆ, ಈ ಬಾರಿ ಯಾರೋ ದುಷ್ಕರ್ಮಿಗಳು ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಇದರಿಂದ ಬೆಳೆ ಹಾಳಾಗಿದೆ. ಗಿಡಗಳು ಬಾಡುತ್ತಿವೆ. ಕಳೆನಾಶಕ ಸಿಂಪಡಣೆಯಾದರೆ ಗಿಡಗಳು ಹೂ ಬಿಡುವುದಿಲ್ಲ. ಇದರಿಂದಾಗಿ ನಾವು ನಷ್ಟದ ಭೀತಿಯಲ್ಲಿದ್ದೇವೆ. ರೈತರಿಗೆ ರೈತರೇ ವಿರೋಧಿಗಳಾಗುತ್ತಿರುವುದು ನೋವಿನ ಸಂಗತಿಯಾಗಿದೆ.ಹೊಟ್ಟೆ ಬಟ್ಟೆ ಕಟ್ಟಿ ಕೃಷಿಯಲ್ಲಿ ತೊಡಗುವ ನಮ್ಮಂತಹ ಬಡಪಾಯಿಗಳಿಗೆ ಇದು ಆಘಾತ ತರುವ ವಿಚಾರ. ಇಂತಹವರ ವಿರುದ್ಧ ಪೊಲೀಸರು, ತೋಟಗಾರಿಕೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಸಂಕಷ್ಟಕ್ಕೆ ಸಿಲುಕುವ ನೊಂದ ರೈತಾಪಿಗಳಿಗೆ ಕೃಷಿ ಇಲಾಖೆ ಸೂಕ್ತ ಪರಿಹಾರ ಕೊಡಬೇಕು ಎಂದು ಅಳಲು ತೋಡಿಕೊಂಡರು.
ಏನೇ ಆಗಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ಮೇಲೆ ಸೇಡು ತೀರಿಸಿಕೊಳ್ಳುವ ಸಂಗತಿಗಳು ಹೆಚ್ಚಾಗಿಯೇ ನಡೆಯು ತ್ತಿದ್ದು, ಇದು ನಿಲ್ಲಬೇಕಿದೆ. ಬೆವರು ಹರಿಸಿ ದುಡಿಯುವ ರೈತರ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಮತ್ತು ಬೆಲೆ ದೊರೆಯಬೇಕಿದೆ, ಇಂತಹ ಅನಿರೀಕ್ಷಿತ ಘಟನೆಗಳಿಗೆ ಸಿಕ್ಕಿ ತೊಳಲಾಡುವ ರೈತರ ನೆರವಿಗೆ ಕೂಡಲೇ ಜಿಲ್ಲಾಡಳಿತ ಬರಬೇಕಿದೆ ಎನ್ನುವುದು ಪತ್ರಿಕೆಯ ಕಳಕಳಿಯಾಗಿದೆ.
ಇದನ್ನೂ ಓದಿ: chikkaballapurnews